ಭಾನುವಾರ, ಮೇ 9, 2010

ಒಲವಿನ ಹೆಸರೇನು?

ಒಲವಿನ ಹೆಸರೇನು?
ಕೆ. ಆರ್. ಎಸ್. ಮೂರ್ತಿ

ಒಲವೇ! ನಿನ್ನ ಹೆಸರೇನು? ನಿನಗೆ ಚೆಲುವ ಹೆಸರಿರಲೇಬೇಕು!

ಹೆಸರಿಲ್ಲ ಎನಗೆ. ಹೆಸರೇಕೆ ಬೇಕು? ಎಲ್ಲಕ್ಕೂ ಎಲ್ಲರಿಗೂ ಹೆಸರುಂಟೆ?

ಹೆಸರಿಲ್ಲದೇ ಗುರುತಿಸುವುದೆಂತು? ನಿನ್ನ ಕರೆದು ಕೂಗುವ ಸಮಯದಲ್ಲಿ ನಾನು ಏನನ್ನಬೇಕು?

ನನ್ನ ಕರೆಯಬೇಕಾದ ಅವಸರವೇ ಇಲ್ಲ.

ಹಾಗೆಂದರೇನು? ನಾನು ನಿನ್ನ ಕರೆಯದೇ ನಿನಗೆ ಹೇಗೆ ತಿಳಿದೀತು? ಮನಸಾದೊಡನೆ ನಿನ್ನ ಕರೆಯಬಹುದಲ್ಲವೇ?

ನೀನು ಯಾವಾಗ ನನ್ನ ನೆನೆದರೆ ಸಾಕು, ನಾನು ಬಂದು ನಿಲ್ಲುವೆನು ನಿನ್ನೆದುರು ಒಡನೆಯೇ!

ಅದು ಹೇಗೆ ಸಾಧ್ಯ? ನಾನು ನನ್ನ ಮನಸಿನಲಿ ನಿನ್ನ ನೆನೆದರೆ ನಿನಗೆ ಅರಿಯುವುದೆಂತು?

ನೀನು ನನ್ನ ತುಸು ನೆನೆದರೆ ಸಾಕು, ನನಗೆ ಚೆನ್ನಾಗಿಯೇ ತಿಳಿಯುವುದು ನೀ ನೀನೆನೆದೆಯೆಂದು.

ನಾನೆನೆದ ಸಮಯದಲಿ ನೀ ಹತ್ತಿರವೇ ಇಲ್ಲದಿದ್ದರೆ, ಅದೇ ಕ್ಷಣದಲಿ ನೀ ಬರುವುದೆಂತು? ನೀ ಬರುವುದಕೆ ಸಾಕಷ್ಟು ಸಮಯ ಬೇಕಲ್ಲವೆ?

ನೀನೆಲ್ಲಿದ್ದರೆ, ನಾನು ಅಲ್ಲಿಯೇ ಇರುವುದು ಖಚಿತ.

ಹಾಗೆಂದರೇನು? ನಾನಿದ್ದಲ್ಲಿಯೇ ನೀನು ಇರುವುದೆಂತು?

ನಾನಿರುವುದು ನಿನ್ನಲ್ಲಿಯೇ. ನಿನ್ನ ಮನದಲ್ಲಿ ನನ್ನ ಮನೆ. ನಿನ್ನ ಉಸಿರಲ್ಲಿ ನನ್ನ ಉಸಿರು, ನಿನ್ನ ಎದೆ ಬಡಿವಾಗ, ಹಾಕುವುದು ತಾಳ ಅದಕೆ.

ಅಚ್ಚರಿಯ ಮಾತಿದು ಒಲವೇ! ಹೇಳು ಮುಂದೆ. ನನಗೆ ಅರಿವಾಗುತಿದೆ ಎಲ್ಲ.

ನೀ ಕಣ್ಮುಚ್ಚಿದಾಗಲೂ, ನಾನು ಎಚ್ಚರವಾಗಿರುವೆ, ನೀ ಕನಸು ಕಾಣುವಾಗಲೂ ನಾನು ಮಾತ್ರ ಎಚ್ಚರವಾಗಿಯೇ ಇರುವೆನು.

ನಾನು ಹಗಲುಗನಸು ಕಾಣುವಾಗಲೂ ನೀನು ಎಚ್ಚರವಾಗಿರುವೆಯಾ?

ಅಹುದು. ಹಗಲುಗನಸನು ನಿನಗೆ ತೋರಿಸುವುದು ಕೂಡ ನಾನೇ

ಕನ್ನಡಿಯಲ್ಲಿ ನಾನನ್ನ ನೋಡಿಕೊಂಡರೆ, ನೀನೇಕೆ ಕಾಣುವುದಿಲ್ಲ?

ನನಗೆ ದೇಹವಿಲ್ಲ, ರೂಪವಿಲ್ಲ, ನಿನ್ನ ಬಿಟ್ಟರೆ ನನಗೆ ಬೇರೆಯ ಇರುವಿಲ್ಲವಲ್ಲ.

ದೇಹ, ರೂಪಗಳಿಲ್ಲದೆ, ನಿನ್ನ ರೂಪ ರೇಷೆಯೇನು?

ಮನದಲ್ಲಿ ಇರುವ ನನಗೆ ದೇಹದ ಅವಶ್ಯಕತೆಯಿಲ್ಲ. ನೀನೆನೆದ ಹಾಗೆ ನನ್ನ ರೂಪ ನಿನ್ನ ಮನದಲ್ಲಿ ಮೂಡುವುದು

ಹಾಗಾದರೆ, ನೀನು ನನ್ನ ಮನದ ಬಿಂಬ ರೂಪದ ಬೊಂಬೆ.

ನಾನಿನ್ನ ಮನದಲ್ಲಿ ಇರುವವನು; ಇನ್ನಾದರೂ ಅರಿವಾಯಿತಲ್ಲ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ