ಸೋಮವಾರ, ನವೆಂಬರ್ 29, 2010

ಅಚ್ಚರಿ

ಅಚ್ಚರಿ
ಕೆ. ಆರ್. ಎಸ್. ಮೂರ್ತಿ

ಹುಲಿಗಿಂತ ಹುಲಿಯ ಬಾಲ, ಬಾಲಕ್ಕಿಂತ ಬಾಲದ ಕೂದಲು;
ಕೂದಲಿಗಿಂತ ಅದರ ಮೇಲೆ ಜಿಗಿದಾಡುವ ನೊಣದ ಕಾಲು

ಸಿಂಹಾಸನವನ್ನು ಏರಿ ಮೀಸೆ ತಿರುಗುವ ಭೂಪನ ಅಣುಕಿಸಿತ್ತು
ಮೂಗಿನ ಹೊಳ್ಳೆಯೊಳಗೆ ಫಕ್ಕನೆ ತೂರಿದ ಸೊಳ್ಳೆಯ ಕಸರತ್ತು

ಡೊಳ್ಳು ಹೊಟ್ಟೆಯ ಆನೆಯ ಹೊತ್ತು ತಿರುಗುವ ಪುಟ್ಟಿಲಿಯ ಗಮ್ಮತ್ತು
ಜಗಕೇ ಜೀವವ ಕೊಟ್ಟ ಬೆಂಕಿಯ ಉಂಡೆಯ ಕಬಳಿಸುವ ರಾಹು ಕೇತು

ನೂರು ಸೂರ್ಯರ ನುಂಗಿತ್ತು ದಿಟ್ಟ ಪುಟ್ಟ ಕಪ್ಪು ಬಕಾಸುರನ ಬಾಯಿ
ಎಲ್ಲ ಅಚ್ಚರಿಯನೂ ಮೀರಿಸಿದೆ ಆದಿ ಬಿಂದು ಉಗಿದಂಥ ಭವದ ಮಾಯೆ

ಶನಿವಾರ, ನವೆಂಬರ್ 27, 2010

ಆಸೆ; ಅಪೇಕ್ಷೆ; ಆಗಮನ, ಭೂತ ಗಮನ

ಆಸೆ; ಅಪೇಕ್ಷೆ; ಆಗಮನ, ಭೂತ ಗಮನ
ಕೆ. ಆರ್.ಎಸ್. ಮೂರ್ತಿ

ಬಂದರೆ ಚೆನ್ನ; ಬರಬಹುದು; ಬರುವುದು;
ಇನ್ನೇನು ಬರಲಿದೆ; ಬಂದೇ ಬಿಡುವುದು;
ಇನ್ನೇನು ಬಂತು; ಬಂದೇ ಬಿಟ್ಟಿತು;
ಇಂದೇ; ಇನ್ನೇನು ಆಗಿ ಹೋಯಿತು;

ನಿನ್ನೆಯೇ ಆಯಿತು; ಮೊನ್ನೆಯೇ ಆಯಿತು;
ಕೆಲವು ದಿನಗಳಾಯಿತು; ವಾರವಾಯಿತು;
ಹಲವು ದಿನಗಳಾಯಿತು; ವಾರಗಳಾಯಿತು;
ತಿಂಗಳಾಯಿತು; ಕೆಲವು ತಿಂಗಳಾಯಿತು;
ಹಲವು ತಿಂಗಳಾಯಿತು; ವರುಶವಾಯಿತು;

ಕೆಲವು ವರುಶಗಳಾಯಿತು;
ಹಲವು ವರುಶಗಳೇ ಆಯಿತು;

ದಶಕಗಳಾಯಿತಂತೆ;
ಶತಮಾನಗಳಾಗಿ ಹೋಯಿತಂತೆ;

ಯಾವಾಗಲೋ ಆಯಿತಂತೆ;
ಯಾವಾಗಲೋ ಆಗಿರಬಹುದು;

ಯಾರಿಗೂ ಗೊತ್ತಿಲ್ಲ

ಬರಲಿದೆ; ಬಂತು; ಹೋಯಿತು; ಮಾಯ

ಬುಧವಾರ, ನವೆಂಬರ್ 24, 2010

ನೀವೊಂದು ಹೇಳಿದರೆ....

ನೀವೊಂದು ಹೇಳಿದರೆ....
ಕೆ. ಆರ್. ಎಸ್. ಮೂರ್ತಿ

ನೀವು ಹೇಳಿದ್ದೆ ಒಂದು; ಅವರ ಕಿವಿಗೆ ಬಿದ್ದಿದ್ದೇ ಇನ್ನೊಂದು;
ಅವರ ಮನಸ್ಸಿಗೆ ತಾಟಿದ್ದೇ ಮತ್ತೊಂದು; ಹೃದಯಕ್ಕೆ ಇನ್ನೇನೋ ಒಂದು

ಸ್ನೇಹಿತರೊಬ್ಬರು ನಿನ್ನೆ ನನ್ನ ಮುಂದೆ ಬಂದ ತಕ್ಷಣ
ನಾನಂದೆ "ಏನ್ರೀ ಹೊಸಬಟ್ಟೆ ಕೊಂಡು ಕೊಂಡ್ರ?"
ಅವರ ಮುಖದಲ್ಲಿ ಹೆಮ್ಮೆಯ ನಗೆ.
"ಬಹಳ ಚೆನ್ನಾಗಿದೆ ರೀ. ಒಳ್ಳೆ ಕಲರ್ರು; ಒಳ್ಳೆ ದಿಸೈನೂ...."

ನಾನಂದದ್ದು ಅಷ್ಟೇ; ಅವರ ಕಿವಿಗೆ ಬಿದ್ದಿದ್ದೇ ಬೇರೆ.
ಅವರ ಮುಖ ಹಿಗ್ಗಿ, ಅವರ ಹೃದಯ ಬಲೂನಿನ ತರಹ ಊದಿ ಬಿಟ್ಟಿತು.
ಅವರ ಕಿವಿಗೆ ಕೇಳಿದ್ದು: "ನೀವು ಆ ಹೊಸ ಬಟ್ಟೆಯಲ್ಲಿ ಬಹಳಾ ಸುಂದರವಾಗಿ ಕಾಣ್ತೀರ"
ಅವರ ಹೃದಯ ಬಡಿದು ಕೊಂಡಿದ್ದು: "ನಾನು ಈ ಭೂಲೋಕದಲ್ಲೇ ಬಹಳ ಸುಂದರ"

ಹೊಸ ಬಟ್ಟೆ ಒಂದೇ ಅಲ್ಲ; ಅವರ ಮೈಮೇಲೆ, ಅವರ ಮನೆಯಲ್ಲಿ ಇರುವುದೆಲ್ಲ,
ಅವರಿಗೆ ಸೇರಿದ್ದೆಲ್ಲಾದ್ದಕ್ಕೂ ಅದೇ ರೀತಿ ಹೆಮ್ಮೆ, ಭಾವನೆ, ಹೆಚ್ಚುಗಾರಿಕೆ....

ಬಟ್ಟೆ, ಬರೆ, ಮನೆ, ಮನೆಯಲ್ಲಿರುವ ಸುಂದರ ವಸ್ತುಗಳನ್ನೆಲ್ಲಾ
ತಾವೇ ಅಂದು ಕೊಂಡಿರುತ್ತಾರೆ; ಮೆಚ್ಚುಗೆಯೆಲ್ಲಾ ಅವರಿಗೆ ಸೇರತಕ್ಕದ್ದು.

ಬಟ್ಟೆ ಹೊಲಿದವರು ಯಾರೋ; ಮಗ್ಗ ನೇಯ್ದವರು ಯಾರೋ,
ಬಟ್ಟೆಯ ವಿನ್ಯಾಸ ಯಾರ ತಲೆಯಿಂದ ಹೊರ ಬಿತ್ತೋ,
ಯಾರೂ ಯೋಚಿಸುವುದಿಲ್ಲ; ಯಾರೇಕೆ ಮಾತ್ರವಲ್ಲ,
ಯಾವ ಯಂತ್ರ, ಯಾವ ಕಂಪ್ಯೂಟರ್.........
ಎಂದೆಲ್ಲಾ ಯೋಚಿಸ ಬೇಕು ಈಗಿನ, ಹಿಂದಿನ, ಮುಂದಿನ ಶತಮಾನದಲ್ಲಿ.

ನಿಮ್ಮ ಬಟ್ಟೆಯನ್ನು, ನಿಮ್ಮದನ್ನು ನೋಡಿ, ನಿಮ್ಮ ಮನೆಯನ್ನು ನೋಡಿ,
ಯಾರಾದರೂ ಸ್ವಲ್ಪವೋ, ಬಹಳವೋ ಒಳ್ಳೆಯ ಮಾತನಾಡಿದರೆ,
ಏನು ಹೇಳಿ ನೋಡೋಣ? ನಿಜವಾಗಿ ಯಾರಿಗೆ ಸೇರಬೇಕು ಆ ಸಕ್ಕರೆ ಮಾತು?
ಯಾವ ಯಂತ್ರಕ್ಕೆ ಸೇರಬೇಕು? ಅದು ಇನ್ಯಾವ ದೇಶದಲ್ಲಿ ಇರಬಹುದು?
ಆತುರದಲ್ಲಿ ಹಿಗ್ಗುವ ಮುಂಚೆ, ಯೋಚಿಸುವ ತಂತ್ರ ಅಂತರ್ಗತ ಆಯಿತು ತಾನೇ?

ಗೊತ್ತಾಯಿತೇ ನಿಮಗೆ?

ಗೊತ್ತಾಯಿತೇ ನಿಮಗೆ?
ಕೆ. ಆರ್. ಎಸ್. ಮೂರ್ತಿ

ಗೊತ್ತು. ಗೊತ್ತಿಲ್ಲ
ಗೊತ್ತೆಂದು ಗೊತ್ತಿಲ್ಲ
ಗೊತ್ತಿರಬಹುದೆಂದೂ ಗೊತ್ತಿಲ್ಲ
ಗೊತ್ತಿಲ್ಲವೆಂದು ಗೊತ್ತಿಲ್ಲ
ಗೊತ್ತಿಲ್ಲವೆಂದು ಒಪ್ಪಿಕೊಳ್ಳುವುದಿಲ್ಲ
ಗೊತ್ತಿಲ್ಲವೆಂದರೆ ತಲೆ ಬಾಗಿಸ ಬೇಕಲ್ಲ
ಮುಖ ತಗ್ಗಿಸಬೇಕಲ್ಲ

ಕೆಲವೋ, ಬಹಳವೋ ಗೊತ್ತು
ಬಹಳ ಬಹಳ ಬಹಳ ಗೊತ್ತಿಲ್ಲ
ಭಾರಿ ಬಹಳ ಗೊತ್ತಿಲ್ಲವೆಂದು ಗೊತ್ತಿಲ್ಲ
ಇನ್ನೊಬ್ಬರ ಮುಂದೆ ಗೊತ್ತಿಲ್ಲ ಎನ್ನುವುದುಂಟೇ!
"ಗೊತ್ತಿಲ್ಲ" ಎಂದು ಬಿಟ್ಟರೆ ಮೀಸೆ ಬೋಳಿಸಿದ ಹಾಗೆ;
ಮಣ್ಣು ಮುಕ್ಕಿದ ಹಾಗೆ; ಬೆತ್ತಲೆಯಾಗಿ ಬಿಟ್ಟ ಹಾಗೆ;
ಹೆಂಗಸಾದರೆ ತಲೆ ಬೋಳಿಸಿಕೊಂಡ ಹಾಗೆ;
ಗಂಡಸಾದರೆ ಇದ್ದಿಕಿದ್ದಂತೆಯೇ ನಪುಂಸಕನಾದ ಹಾಗೆ.

ಏನಂತೀರಿ ನೀವು?
ನಿಮ್ಮಗೆ ಏನೆಲ್ಲಾ ಗೊತ್ತು?
ಏನೇನು ಗೊತ್ತಿಲ್ಲ?

ನಿಮಗೆ ಸಿಕ್ಕವರನ್ನೆಲ್ಲಾ, ನಿಮ್ಮ ಸ್ನೇಹಿತರನ್ನೆಲ್ಲಾ,
ನಿಮ್ಮ ಸಂಸಾರದಲ್ಲಿ ಇರುವವರನ್ನೆಲ್ಲಾ,
ನಿಮ್ಮ ಗುರುಗಳನ್ನೆಲ್ಲಾ, ನಿಮ್ಮ ಮಠದ ಸ್ವಾಮಿಗಳನ್ನೆಲ್ಲಾ,
ಈ ಪ್ರಶ್ನೆಗಳ್ಳನ್ನು ಕೇಳಿ ನೋಡಿ.

ಯಾರಾದರೂ ಮುನಿಸಿಕೊಂಡರೆ,
ಯಾರಾದರೂ ಏನೂ ಹೇಳದೆ ಹೋದರೆ,
ಯಾರಾದರೂ ನಿಮ್ಮ ಜೊತೆ ಮಾತಾಡುವುದನ್ನೇ
ಬಿಟ್ಟುಬಿಟ್ಟರೆ........

ಗೊತ್ತಾಯಿತಲ್ಲ? ಗೊತ್ತಾಯಿತೇ ನಿಮಗೆ?

ಗೊತ್ತಾಯಿತೇ ನಿಮಗೆ?

ಗೊತ್ತಾಯಿತೇ ನಿಮಗೆ?
ಕೆ. ಆರ್. ಎಸ್. ಮೂರ್ತಿ


ಗೊತ್ತು. ಗೊತ್ತಿಲ್ಲ
ಗೊತ್ತೆಂದು ಗೊತ್ತಿಲ್ಲ
ಗೊತ್ತಿರಬಹುದೆಂದೂ ಗೊತ್ತಿಲ್ಲ
ಗೊತ್ತಿಲ್ಲವೆಂದು ಗೊತ್ತಿಲ್ಲ
ಗೊತ್ತಿಲ್ಲವೆಂದು ಒಪ್ಪಿಕೊಳ್ಳುವುದಿಲ್ಲ
ಗೊತ್ತಿಲ್ಲವೆಂದರೆ ತಲೆ ಬಾಗಿಸ ಬೇಕಲ್ಲ
ಮುಖ ತಗ್ಗಿಸಬೇಕಲ್ಲ

ಕೆಲವೋ, ಬಹಳವೋ ಗೊತ್ತು
ಬಹಳ ಬಹಳ ಬಹಳ ಗೊತ್ತಿಲ್ಲ
ಭಾರಿ ಬಹಳ ಗೊತ್ತಿಲ್ಲವೆಂದು ಗೊತ್ತಿಲ್ಲ
ಇನ್ನೊಬ್ಬರ ಮುಂದೆ ಗೊತ್ತಿಲ್ಲ ಎನ್ನುವುದುಂಟೇ!
"ಗೊತ್ತಿಲ್ಲ" ಎಂದು ಬಿಟ್ಟರೆ ಮೀಸೆ ಬೋಳಿಸಿದ ಹಾಗೆ;
ಮಣ್ಣು ಮುಕ್ಕಿದ ಹಾಗೆ; ಬೆತ್ತಲೆಯಾಗಿ ಬಿಟ್ಟ ಹಾಗೆ;
ಹೆಂಗಸಾದರೆ ತಲೆ ಬೋಳಿಸಿಕೊಂಡ ಹಾಗೆ;
ಗಂಡಸಾದರೆ ಇದ್ದಿಕಿದ್ದಂತೆಯೇ ನಪುಂಸ್ಕನಾದ ಹಾಗೆ.

ಏನಂತೀರಿ ನೀವು?
ನಿಮ್ಮಗೆ ಏನೆಲ್ಲಾ ಗೊತ್ತು?
ಏನೇನು ಗೊತ್ತಿಲ್ಲ?

ನಿಮಗೆ ಸಿಕ್ಕವರನ್ನೆಲ್ಲಾ, ನಿಮ್ಮ ಸ್ಣೇಹಿತರನ್ನೇಲ್ಲಾ,
ನಿಮ್ಮ ಸಂಸಾರದಲ್ಲಿ ಇರುವವರನ್ನೆಲ್ಲಾ,
ನಿಮ್ಮ ಗುರುಗಳನ್ನೆಲ್ಲಾ, ನಿಮ್ಮ ಮಠದ ಸ್ವಾಮಿಗಳನ್ನೆಲ್ಲಾ,
ಈ ಪ್ರಶ್ನೆಗಳ್ಳನ್ನು ಕೇಳಿ ನೋಡಿ.

ಯಾರಾದರೂ ಮುನಿಸಿಕೊಂಡರೆ,
ಯಾರಾದರೂ ಏನೂ ಹೇಳದೆ ಹೋದರೆ,
ಯಾರಾದರೂ ನಿಮ್ಮ ಜೊತೆ ಮಾತಾಡುವುದನ್ನೇ
ಬಿಟ್ಟುಬೆಟ್ಟರೆ........

ಗೊತ್ತಾಯಿತಲ್ಲ? ಗೊತ್ತಾಯಿತೇ ನಿಮಗೆ?

ಶುಕ್ರವಾರ, ನವೆಂಬರ್ 12, 2010

ಕಿವಿ ಕೊಟ್ಟು ಕೇಳಿ

ಕಿವಿ ಕೊಟ್ಟು ಕೇಳಿ
ಕೆ. ಆರ್. ಎಸ್. ಮೂರ್ತಿ

ಡಂಗುರ ಢಂ, ಡಂಗುರ ಢಂ, ಕೇಳಿರೀ! ಕೇಳಿರೀi! ಕಿವಿ ಕೊಟ್ಟು ಕೇಳಿರೀ!
ಬಿಸಿ, ಬಿಸಿ, ಸುದ್ದಿ. ಗಾಳಿಯಲಿ ತೇಲಿ ಬಂದಿರುವ ನಂಬಲಾಗದ ಆಲಿಸಿರಿ

ನಾಗ ಮುಂಗಸಿಯರ ಸುಮಹೂರ್ತ ಲಗ್ನ; ರಾಮ ರಾವಣರ ಮಿತ್ರೋತ್ಸವ
ಹಿರಣ್ಯ ಕಷ್ಯಪು ನಡೆಸುವನು ಇಡೀ ರಾತ್ರಿ ಹರಿ ಭಜನೆಯ ಜಾಗರಣೆ ಸೇವೆ

ಬೀಮ ಧುರ್ಯೋಧನರ ಸಂಧಾನ, ಬೀಷ್ಮ ಶಿಖಂಡಿಯರ ಯುಗಳಗಾನ
ಹನುಮಂತ ಚೆಂದೊಳ್ಳಿ ಹಿಡಂಬಿಯರ ಪ್ರೇಮಾಲಾಪ, ನಾಟ್ಯ ಪ್ರದರ್ಶನ

ಕಾಗೆ ಕೋಗಿಲೆಗೆ ಕಲಿಸಿದ ಸುಮಧುರ ರಾಗಗಳ ಸಂಗೀತ ಕಲೆಯ ಮೇಳ
ಉಪ್ಪಿನ ಬಿಸಿ, ಬಿಸಿ, ಪಾಯಸ, ಕಬ್ಬಿಣದ ಕಾಳುಗಳ ಹೂರಣದ ಹೋಳಿಗೆ

ಕಳ್ಳನ ಭುಜದ ಮೇಲೆ ಪೊಲೀಸನ ಕೈ, ಕಳ್ಳನ ಕೈ ಪೊಲೀಸನ ಜೇಬೊಳಗೆ
ಅರ್ಧ-ಅರ್ಧ ಮಸಾಲೆ ದೋಸೆ, ಜಾಮೂನು, ಬೈಟೂ ಕಾಫಿ, ಬಿಲ್ಲು ಯಾರಿಗೆ?

ಏನ್ರೀ? ನಂಬುವುದಿಲ್ಲವೋ ನೀವು? ಅಸಂಬಧ್ಧ ಪ್ರಲಾಪ ಅಂತೀರಾ ನೀವೆಲ್ಲಾ?
ಯಾರಿಗೆ ಗೊತ್ತು? ಅಂತಹ ಕಾಲಾನೂ ಬರಬಹುದು! ಸಾಧ್ಯ ಸ್ವಾಮಿ ಎಲ್ಲ.

ತೆರಿಗೆ, ಕಂದಾಯ ಅಧಿಕಾರಿ ತನ್ನ ಮಗಳನ್ನು ಮೋಸಗಾರ ವ್ಯಾಪಾರಿಗೆ ಕೊಟ್ಟ
ಪೊಲೀಸನ ಮಗನಿಗೆ ಕಳ್ಳನಾಗುವ ಅತಿ ಅಸ್ಸೆ ಅಂತ ಅವನ ತಾಯಿಗೆ ಹೇಳಿ ಬಿಟ್ಟ

ಅಪ್ಪ ವೆಂಕಟರಮಣನ ಗುಡಿಯಲ್ಲಿ ಪೂಜಾರಿ, ಮಗ ಕುಡಿಯೋದು ವೈನು, ಬೀರು
ಅವನಿಗೆ ಬೇಕು ಚಿಕ್ಕನ್ನು, ಮಟನ್ನು, ದಿನ್ನಕ್ಕೆ ಎರಡು ಸಲ; ಅವನದು ಕದ್ದ ಕಾರು

ಬೇಜಾರು ಮಾತ್ರ ಮಾಡಿಕೋ ಬೇಡಿ; ನನಗೆ ಗೊತ್ತಿರಲಿಲ್ಲ ನೀವು ಸತ್ಯಾನೆ ಹೇಳೋದು
ಇದ್ದದ್ದು ಹೇಳಿದೆ ಅಷ್ಟೇ; ನನ್ನ ಖಯಾಲಿ ಡಂಗುರ ಹೊಡೆಯೋದು, ಕವನ ಬರೆಯೋದು

ಸುಮ್ಮನೆ ತಲೆ ಆಡಿಸಿ ಸಾಕು

ಸುಮ್ಮನೆ ತಲೆ ಆಡಿಸಿ ಸಾಕು
ಕೆ. ಆರ್. ಎಸ್. ಮೂರ್ತಿ

ಹೂಂ? ಉಹೂಂ?
ಹೌದು, ಅದೂ ಹೌದು, ಇನ್ನೊಂದೂ ಹೌದು. ಆಹಾಂ!

ಹುಟ್ಟು, ಹುಟ್ಟಿದ್ದು, ಹುಟ್ಟುವುದು, ಹುಟ್ಟಿಸುವುದು ಒಂದೇ:
ಹೂಂ? ಉಹೂಂ?

ತಿಂಡಿ, ತಿಂದಿದ್ದು, ತಿನ್ನುವುದು, ತಿನ್ನಿಸುವುದು ಒಂದೇ:
ಹೂಂ? ಉಹೂಂ?

ನಾಗ, ಮುಂಗುಸಿ; ಹುಲಿ, ಹುಲ್ಲೆ; ಹುಲ್ಲು, ಹಸು ಒಂದೇ:
ಹೂಂ? ಉಹೂಂ?

ಕಣ್ಣು ಮುಚ್ಚುವುದು, ಬಿಚ್ಚುವುದು, ಮಿಟುಕಿಸುವುದು ಒಂದೇ:
ಹೂಂ? ಉಹೂಂ?

ಶಂಕರ, ಚಾಂಡಾಲ, ಪುರಂದರ, ವಿಠಲ; ಆಕ್ಕಮ, ಮಹಾದೇವ ಒಂದೇ:
ಹೂಂ? ಉಹೂಂ?

ನಿನ್ನೆ, ಇಂದು, ನಾಳೆ; ನೀರು, ಮಂಜು, ಆವಿ; ಹುಲ್ಲು, ಹಾಲು, ಮೊಸರು ಒಂದೇ:
ಹೂಂ? ಉಹೂಂ?

ಹೇಳಿ! ಹೌದೋ? ಅಲ್ಲವೋ? ಸುಮ್ಮನೆ ತಲೆ ಆಡಿಸಿ ಸಾಕು: ಹೂಂ? ಉಹೂಂ?

ಸೋಮವಾರ, ನವೆಂಬರ್ 8, 2010

ಆಲದ, ಆಳದ ಬೇರು ಹಾರಿ ಹೋದಂತೆ

ಆಲದ, ಆಳದ ಬೇರು ಹಾರಿ ಹೋದಂತೆ
ಕೆ. ಆರ್. ಎಸ್. ಮೂರ್ತಿ

ಎಲ್ಲಿಂದಲೋ ಬಂದವರು
ಇವರೆಲ್ಲಾ ಎಲ್ಲಿದ್ದಂದಲೋ ಬಂದರಂತೆ
ಇಲ್ಲಿದ್ದವರು ಎಲ್ಲೋ ಹೋದರಂತೆ

ಅಲ್ಲಿಂದ ಇಲ್ಲಿಗೆ ಬಂದವರು; ಬಂದು ಇಲ್ಲಿಯೇ ಇದ್ದು ಬಿಟ್ಟವರು
ಇಲ್ಲಿಯೇ, ಹತ್ತಿರದಲ್ಲಿಯೇ ಇದ್ದವರು ಅದೆಲ್ಲಿಗೋ ಹೋಗಿಬಿಟ್ಟವರು
ಮತ್ತೆ ಇಲ್ಲಿಗೆ ಬರದೇ ಇದ್ದವರು; ಯಾರು ಯಾವಾಗ ಎಲ್ಲಿರಬೇಕು?
ಎಂಬುದೆಲ್ಲಾ ಅವರವ ಹಣೆಯ ಬರಹವೇನೋ!

ಊರು ಬಿಟ್ಟು, ಕೇರಿ ಬಿಟ್ಟು, ಪ್ರಾಂತ್ಯ, ಪ್ರದೇಶ ಬಿಟ್ಟು,
ದೇಶವನ್ನೇ ಬಿಟ್ಟು ಹೊರಟು ಹೋದವರು; ಹೊರತು ಆದವರು.
ಹೊಸಬರು ಹಳಬರಾದವರು, ಬಳಗವಾದವರು

ಸುಡುವ ಬಿಸಿಲಿನಲ್ಲಿ ನಡೆದು, ತಲೆಯ ಮೇಲೆ,
ಹೊಟ್ಟೆಯ ಮೇಲೆ ತಣ್ಣಗಿನ ಬಟ್ಟೆ ಹಾಕಿಕೊಂಡು ಹೋದವರು;
ರಾತ್ರೋ, ರಾತ್ರಿ ಯಾರಿಗೋ ಹೆದರಿ ಓಡಿ ಹೋದವರು,
ತುರುಕರುಗಳಿಗೆ ಹೆದರಿ, ತುರುಕರುಗಳನ್ನು ನಡೆಸಿಕೊಂಡು,
ಕುದುರೆಯನು ಏರಿ ಸವಾರಿ ಹೋದವರು,
ಗಾಡಿಯಲ್ಲಿ ಹೆಂಡಿರು, ಹುಡುಗರ ಜೊತೆ ಕೂತು ಹೋದವರು.

ಹುಲ್ಲಿನ ಮೈದಾನವನ್ನು ಬಿಟ್ಟು, ಬೆಟ್ಟದ ಮೇಲೆ ಅಡಗಿದವರು
ನದಿಯಲ್ಲಿ, ಸಾಗರದಲ್ಲಿ, ಸಮುದ್ರದಲ್ಲಿ ದೋಣಿಯಲ್ಲಿ ತೇಲಿ ಹೋದವರು
ಹಕ್ಕಿಗಳಂತೆ ಹಾರಿ ವಲಸೆ ಹೋದವರು, ಮತ್ತೆ ಬರದೆಯೇ ಇರುವವರು

ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಪೂರ್ವಜರ ಹಣೆಬರಹ, ನೆಲದ ಋಣ,
ಆನು, ನೀನು, ತಾನು, ಅವನು, ಅವಳು, ಅವರುಗಲಿಗೆಲ್ಲಾ
ಅವರದೇ ಋಣ; ಬೇರೆ, ಬೇರೆ ಬರಹ;
ನೆಲಸುವಿಕೆ; ಹೊಸ, ಹೊಸ ಕನಸಿನಲಿ ಕನವರಿಸುವಿಕೆ.
ಪೂರ್ವಜರ ಕನಸೇ ಬೇರೆ, ಇವರ ಅಪೂರ್ವ ಭೂತ ನನಸೆ ಬೇರೆ.

ಮೊಗ್ಗುಗಳು, ಅರಳುವ ಕುಸುಮಗಳು, ಭಾರದಿಂದ ತೂಗುವ ಹಣ್ಣುಗಳು.
ಒಳಗಿನ ಬೀಜಗಳು, ಜೀನುಗಳು ಬೇರೆ, ಬೇರೆ, ಕೊಂಬೆಗಳು ಬೇರೆ;
ಕಾಂಡ ಮಾತ್ರ ಅದೇ, ತಾಯಿ, ತಂದೆ, ಮಿಕ್ಕ ಮಂದಿ ಬೇರು ಮಾತ್ರ ಒಂದೇ;
ಬೇರನ್ನೇ ಕಿತ್ತು ಒಗೆದು ಹೋಗಿ ಬಿಟ್ಟು, ಇನ್ನೆಲ್ಲೋ ಬೇರು ಬಿಟ್ಟಂತೆ
ಆಲದ ಮರವನ್ನು ಬುಡದಿಂದ ಕಿತ್ತು ನೆಡವೋರು ಉಂಟೆ? ಇರಬೇಕು, ಹೀಗಿರಬೇಕು

ಭಾನುವಾರ, ನವೆಂಬರ್ 7, 2010

ಅಂಟಿದ ನೆಂಟು

ಅಂಟಿದ ನೆಂಟು
ಕೆ. ಆರ್. ಎಸ್. ಮೂರ್ತಿ

ಹುಟ್ಟಿನಿಂದಲೇ ಅಂಟಿಕೊಳ್ಳುವುದಯ್ಯಾ ನೆಂಟರಿಷ್ಟರ ಅಂಟು
ಹುಟ್ಟಿಗೆ ಮುಂಚೆಯೇ ಜೀವ ಕೊಟ್ಟವಳ ಹೊಟ್ಟೆಯಲಿ ಗಂಟು

ಅವಳ ಧಮನಿಯ ಧರ, ಧರ ರಕ್ತದ ಧಾರೆ ರಾಗದ ಸೆರೆ ಹಾಕಿ
ಹೊಕ್ಕಳ ಬಳ್ಳಿಯ ಜೊತೆಯೇ ಹೊರಬಿದ್ದು, ಅತ್ತು ಬಿಕ್ಕಿ, ಬಿಕ್ಕಿ

ತುಂಬು ನಿತಂಬದ ಅಂಬನು ಹೀರಿ, ಉಂಡಿದ್ದು ರುಚಿಯಲ್ಲವೇ?
ಪ್ರತಿ ಗುಟುಕನ್ನೂ, ಗಟ, ಗಟ ಕುಡಿದು, ತೇಗಿದ್ದು ನೆನಪಿದೆಯೇ?

ಅವಳ ಅಪ್ಪುಗೆ, ಬೆಪ್ಪು ನಿನಗೆ ತಿಳಿಯದಿರದು ಅಬಲೆಯ ದೊಡ್ಡ ಬಲೆ
ಒಂದೊಂದರಂತೆ ಇಹದ ಪ್ರತಿ ಸೆಳೆತವೂ ಹಿಡಿದು ಹಾಕಿತ್ತು ಜಾಲೇ

ಅನುಜ, ಅನುಯಾಯಿ, ಒಡನಾಟಿ, ಮನವ ಅಪಹರಿಸಿದ ಕೊಮಲೆಯರೆಲ್ಲ
ಹೊಸ, ಹೊಸ, ಬಂಧನಗಳ ಹೊಸೆದಾಯ್ತು, ಕಳಚಿ ಹೊರ ಬರುವ ಬಗೆಯಿಲ್ಲ

ಉಸಿರು, ಉಸಿರಿಗೂ, ಬಸಿರಿನಿಂದಲೇ ನಿನ್ನ ಹಿಂಬಾಲಿಸಿತು ಭವದ ಬೇತಾಳ
ವಾಸನೆಯು ಬಿಗಿಯಾಗಿ ನೀ ಸಿಕ್ಕಿಯಾಯ್ತು ತೀರಿಸು ಜೀವ ಸವೆಸುತಾ ಸಾಲ

ಆನೇ

ಆನೇ
ಕೆ. ಆರ್. ಎಸ್. ಮೂರ್ತಿ

ಆನೇ ಕಿವಿ, ಆನೇ ಕಣ್ಣು, ಆನೇ ತಲೆ, ಆನೇ ಚರಣ, ಆನೇ ಕರಣ.
ಆನೇ ಹಲ್ಲು, ಆನೇ ಜೊಲ್ಲು, ಆನೇ ಲಂಬೋದರ, ಲಂಬ ನಾಸಿಕ

ಆನೇ ತದೇಕ ಚಿತ್ತವು, ಅತ್ತಿತ್ತ ಸುತ್ತಾಡುವ ಕೋತಿ ಮನವೂ ಆನೇ
ಆನೇ ಅತಿ ಉದಾರ ದಾನಿಯು, ಕೈ ಪಿಡಿದು ಬೇಡುವವನೂ ಆನೇ

ಆನೇ ಕತ್ತಲು, ಬೆಳಕೂ ಆನೇ; ಆನೇ ಮಳೆಯೂ, ಬೆಳೆಯೂ ಆನೇ
ಆನೇ ನದಿ, ಸಾಗರಗಳು; ಬೀಸುವ ಗಾಳಿ, ಮಾರುತಗಳೂ ಆನೇ

ಆನೇ ಭವನ, ಭುವನವೂ ಆನೇ; ಆನೇ ಬಾನು, ಭಾನುವೂ ಆನೇ
ಸಕಲ ಗ್ರಹಗಳೂ ಆನೇ; ಅನೇಕಾನೇಕ ನೋವ, ತಾರೆಗಳೂ ಆನೇ

ಆನೇ ಸರಸ, ವಿರಸವೂ ಆನೇ; ಸಕಲ ರಸ, ಭಾವ, ಅನುಭವವೂ ಆನೇ
ಆನೇ ನೀರಸ ವಿರಕ್ತಿಯೂ; ರಾಗ ರಹಿತ, ಸುಖ, ದುಖ ನಿರ್ವಿಭಾವ ಆನೇ

ಹುಟ್ಟಿಸುವನು ಆನೇ, ಸುಡುವವನೂ ಆನೇ; ಪೊರೆಯುವವನು ಆನೇ
ಬೆಳೆಸುವವನೂ ಆನೇ, ಉಳಿಸುವವನೂ ಆನೇ, ಅಳಿಸುವನೂ ಆನೇ

ಆನೇ ಸತ್ಯ, ಅಸತ್ಯವೂ ಆನೇ; ಆನೇ ಮಿಥ್ಯ, ನಿತ್ಯ ಸತ್ಯವೂ ಆನೇ
ಆನೇ ಭಯ, ಭಕ್ತಿಯಲಿ ಭಜಿಪನೂ, ಪೂಜಿಸಿಕೊಳ್ಳುವವನೂ ಆನೇ

ಆನೇ ಹೊರಗೂ, ಆನೇ ಒಳಗೂ; ಇಳೆಯಲೆಲ್ಲ, ಇಹದಲ್ಲೆಲ್ಲೆಲ್ಲಾ ಆನೇ
ಆನೇ ಅಣು; ಎಲಕ್ಟ್ರಾಣುವೂ, ಪ್ರೋಟಾನೂ, ನ್ಯೂಟ್ರಾನುಗಳೂ ಆನೇ

ಆನಿಲ್ಲದಿಲ್ಲ, ಆನೇ ಎಲ್ಲ, ಹಿಂದು, ಮುಂದು, ಎಂದೂ ಇರುವುದೂ ಆನೇ
ಆನೆಲ್ಲೂ ಇಲ್ಲ, ಆನೆಲ್ಲೂ ಇರಬಲ್ಲ, ಅನೇಕಾನೇಕ ಅನುಮಾನವೂ ಆನೇ

ಶನಿವಾರ, ನವೆಂಬರ್ 6, 2010

ಕೇಳಿ: ನನ್ನ ಅದೃಷ್ಟ

ಕೇಳಿ: ನನ್ನ ಅದೃಷ್ಟ
ಕೆ. ಆರ್. ಎಸ್. ಮೂರ್ತಿ

ನನ್ನ ಅದೃಷ್ಟಕ್ಕೆ ನನಗೆ ಒಬ್ಬಳು ಸುಂದರ ಮಡದಿ
ನಡೆಸಿದಾಗಲೆಲ್ಲ ಕೆಡವಿದಳು ಹೆಣ್ಣು ಮಕ್ಕಳ ಆತರದಿ

ನನ್ನ ನೂರಾರು ಕಂದಗಳಿಗೆ ಹೆಸರಿಟ್ಟೆ ಹಲವಾರು
ಹೆಸರಿನಂತೆಯೇ ಇರಲೆಂದು ಅವರ ಪ್ರತಿ ಉಸಿರಿರು

ಆಶಾ, ಉಷಾ, ನಿಶಾ, ಯಶ, ಭಾಷಾ, ಅನೇಕ ಷ ಶ
ನೀತ, ಗೀತ, ಕಥಾ, ಕವಿತಾ, ಮಾತಾ, ಎಲ್ಲಥರದ ಹೃತಿ, ತ

ಪದ್ಮ, ಮಲ್ಲಿಕಾ, ಸುಗಂಧ, ಎಲ್ಲ ಬಣ್ಣದ, ಅಂದದ ಕುಸುಮ
ಅರ್ಚನ, ಪೂಜಾ, ಶ್ರುತಿ, ವ್ರತ, ಯಾವಾಗಲೂ ದೇವರ ನಾಮ

ಪ್ರೇಮ, ಪ್ರೀತಿ, ರತಿ, ಮಿಲನ ಅವರಿಗೆ ಬೇಕಾದ ಒಲವಿರಲಿ ಅಂದೇ
ಸರಸ್ವತಿ, ಲಕ್ಷ್ಮಿ, ಪಾರ್ವತಿ, ಸೀತಾ, ಗಾಯತ್ರಿ ದೇವತೆಯರೆಂದೇ

ಬೆಳೆಯುತ್ತಾ ಅವರೆಲ್ಲ ಏನಾದರು ಎಂದು ಮಾತ್ರ ನನ್ನನ್ನು ಕೇಳಬೇಡಿ
ಉಳಿದದ್ದು ನೀವೇ ಬೇಕಾದ ಹಾಗೆ ಊಹಿಸಿ ಕೊಳ್ಳಿ, ಆದರೆ ಅಳಬೇಡಿ

ನಿಷೆಯಲ್ಲಿಯೂ ಒಂದು ಕಿರಣ

ನಿಷೆಯಲ್ಲಿಯೂ ಒಂದು ಕಿರಣ
ಕೆ. ಆರ್. ಎಸ್. ಮೂರ್ತಿ


ಅತ್ತ, ಇತ್ತ, ಸುತ್ತ ಮುತ್ತ, ಎತ್ತೆತ್ತಲೂ ಸುತ್ತಿಕೊಂಡಿದೆ ಕತ್ತಲೆಯ ಕಾಟ
ಬಟ್ಟ ಬಯಲಲ್ಲಿ, ಬಿಟ್ಟ ಕಣ್ಣಲ್ಲಿ, ಅಟ್ಟೂ, ಇಟ್ಟೂ, ತಡಕಾಡುವ ಹುಚ್ಚಾಟ

ಕಿಡಿಯೊಂದ ಕಂಡರೆ ಸಾಕು, ಎಲ್ಲೆಲ್ಲೂ ಬೆಳಕ ಚೆಲಾಡುವ ತವಕದಲಿ
ಅಡಿಯಿಂದ ಅಡಿಗೆ ಸಾಗಿ, ಇಡೀ ಬಯಲ ಹುಡುಕಿ, ಕೊನೆಗೆ ಬರಿಗೈಲಿ

ಹಿಡಿಯಷ್ಟು ಇಂಧನ ಸಾಕು, ಹುಲ್ಲಿನ ಮೈದಾನದಲಿ ಮತ್ತೆ, ಮತ್ತೆ ಕೈಹಾಕಿ
ಬರಿ ಖಾಲಿ ಮನದಲ್ಲಿ, ಬಡ ಬಡ ಬಡಿಯುವ ಎದೆಯಲ್ಲಿ ಕುಸಿದು ಸುಸ್ತಾಗಿ

ಹತಾಶೆ; ಮುಂದಿನ ಗತಿಯೇನು, ಇಂದಿನ ವತಿಯೇನು, ಹಿಂದನು ಮರೆವೆನೇನು?
ಕಿರು ಆಶೆ, ಕಿರಣವೊಂದಾದರೂ ಉಳಿದಿದೆಯೋ, ಅದಾದರೂ ಬೆಳಗುವುದೇನು?

ಕತ್ತಲೆಯಲಿ ಅಡಗಿದೆ ಬೆಳಕು

ಕತ್ತಲೆಯಲಿ ಅಡಗಿದೆ ಬೆಳಕು
ಕೆ. ಆರ್. ಎಸ್. ಮೂರ್ತಿ

ಕತ್ತಲೆಯಿಂದ ಬೆಳಕಿಗೆ ಸಾಗಲು ಕಾತರ; ಮಬ್ಬಿನಿಂದ ಎದ್ದೇಳುವ ಥರ
ಅರಿ: ಇರುವುದು ಕತ್ತಲೆಯ ಒಳಗೆ, ಎಂದೂ ಉರಿಯುತಿಹ ಬೆಳಕಿನ ದೀವಿಗೆ
ರಾಗ ವಿರಕ್ತಿಯೂ ಸಾಕು ಮುಕ್ತಿ ಸಾಧಿಸಲು; ಯುಕ್ತಿ ಬೇಕು ಶಕ್ತಿಯ ಎದ್ದೆಬ್ಬಿಸಲು
ಕೆಂಡದ ಅಂದ ಕಾದ ಇದ್ದಿಲಿಗೆ ಗೊತ್ತು; ಕಪ್ಪು ಕೆಂಪಾದಾಗ ಸುಪ್ತವು ಚೇತನ ಆಯ್ತು
ಕತ್ತಲೆಯಲಿ ಅಡಗಿದೆ ಬೆಳಕಿನ ಚೇತನ; ಮತ್ತೇಕೆ ಹುಡುಕುವೆ ಎತ್ತೆತ್ತಲಿನ ತಾಣ