ಬುಧವಾರ, ಮೇ 12, 2010

ದಿಟದ ಭ್ರಮೆಯ ಕನಸು ಕಂಡೆ

ದಿಟದ ಭ್ರಮೆಯ ಕನಸು ಕಂಡೆ

ಕೆ ಆರ್ ಎಸ್ ಮೂರ್ತಿ

ಕತ್ತಲೆಯಲಿ ನನ್ನ ಪ್ರತಿಬಿಂಬವ ಕಂಡೆ
ಕಿವುಡ ತಲೆದೂಡಿ ಸಂಗೀತವ ಕೇಳಿದಂತೆ

ನಿನ್ನೆಯನು ಕಾತರದಿ ಎದುರು ಕಾಣುವವನಂತೆ
ನಾಳಿನ ಸವಿನೆನಪು ಇಂದೆ ಆಗಿಹೋದಂತೆ

ಕನಸಿನಲಿ ಕಂಡ ಠೊಳ್ಳನೇ ನಿಜವೆಂಬಂತೆ
ನನ್ನ ಶವದ ಮೇಲ್ಬಿದ್ದು ನಾನೆ ಅತ್ತಂತೆ

ಭೂಮಿಯೆಡೆ ಬೀಳುವ ಕಲ್ಲು ಠಟ್ಟನೆ ದಿಗಂತಕ್ಕೇರಿದಂತೆ
ಮಳೆಹನಿಗಳು ನೆಲದಿಂದ ಆಗಸಕ್ಕೇರಿದಂತೆ

ನನ್ನ ಅಪ್ಪಿಗೆಯಲಿ ನನ್ನನು ನಾನೆ ಸುಖ ಪಟ್ಟಂತೆ
ನನ್ನ ಪ್ರಿಯೆಯನ್ನು ತೊರೆವ ಆತರ ಆವರಿಸಿಕೊಂಡಂತೆ

ನನ್ನ ಗರ್ಭದಿಂದ ನಾನೇ ಹುಟ್ಟಿಬಂದಂತೆ
ನನ್ನ ಸಾವಿಗೆ ನಾನೇ ಕುಣಿದಾಡಿದಂತೆ

ಹಸಿದ ಹೊಟ್ಟೆಯವನು ಧಿಡೀರ್ ತೇಗಿಬಿಟ್ಟಂತೆ
ಶೂನ್ಯದಲಿ ಸರ್ವ ಸಂಪತ್ತಿನ ತೃಪ್ತನಾದಂತೆ

ವಿಶ್ವದಲಿ ಎಲ್ಲೆಲ್ಲಿ ಹುಡುಕಿದರೂ ನಾನೊಬ್ಬನೇ ಇರುವನಂತೆ
ಏಕಾಂತದಲಿ ಎನ್ನಾತ್ಮವನು ಪರಮಾತ್ಮ ಭ್ರಮಿಸಿದನಂತೆ

ಎರಡು ಕನ್ನಡಿ ಮಧ್ಯೆ ನಾನಿಂತು, ನನ್ನ ಕಣ್ಣಿಂದೇ
ಸಾವಿರ ಸಾವಿರ ಸಾವಿರ ಬಿಂಬಗಳ ನೋಡಿ ದುರುಕಿಸಿದಂತೆ

ನಂಬಲಾರದನು ನಾ ಕಂಡೆ, ನನ್ನನ್ನೇ ನನ್ನ ಬಿಂಬವು ನೋಡಿದಂತೆ
ಸತ್ಯ ಮಿಥ್ಯೆಗಳು, ಸಕಲ ಸೃಷ್ಟಿಯು ಬಿಂದುವಿನಲಿ ವಿಲೀನವಾದಂತೆ

ಇದ್ಯಾತರ ಲೆಕ್ಕವೋ, ಸರಿ ಬೆಸಗಳು ಬೆರೆಸಿಹೋದಂತೆ
ಕತ್ತಲೆ ಬೆಳಕುಗಳು, ಸಿಹಿ, ಕಹಿಗಳು ಬೇರೆಯಲ್ಲವಂತೆ

ಕಾಲ ಮಾಯೆ, ದಿಕ್ಕೆಲ್ಲ ಮಾಯೆ, ಭ್ರಮಿಸುವವ ನಾನೆ ಮಾಯೆ
ಭ್ರಮಿಸುವುದೇ ಮಾಯೆ, ಭ್ರಮಣ ಕಾರಣ, ಕರ್ತ, ಕ್ರಿಯೆಯೂ ಮಾಯೆ

ಅದೇನಿತ್ತೋ, ಇಲ್ಲವೋ; ಅದೇನಿದೆಯೋ, ಇಲ್ಲವೋ; ಅದೆನಹುದೋ, ಇಲ್ಲವೋ
ಎಲ್ಲವೂ ಇಲ್ಲ; ಇಲ್ಲ-ಇಹುದು-ಇದ್ದೀತೂ ಎಲ್ಲವೂ ಒಂದರಲ್ಲೊಂದು ವಿಲೀನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ