ಬುಧವಾರ, ಮೇ 12, 2010

ಬಣ್ಣಬಣ್ಣದ ಬೊಂಬೆಗಳ ಮನೆ

ಬಣ್ಣಬಣ್ಣದ ಬೊಂಬೆಗಳ ಮನೆ
ಕೆ. ಆರ್. ಎಸ್. ಮೂರ್ತಿ

ಬಣ್ಣಬಣ್ಣದ ಬೊಂಬೆಯ ಮನೆಯಿದು
ಬಲು ದೊಡ್ಡ ಬುಗರಿಯಿದು
ಅತಿ ಬಿಸಿಯ ಬೆಂಕಿಯ ಭಾಸ್ಕರನ
ಸುತ್ತುವ ಇತರ ಬಂಜೆ ಬುಗುರಿಗಳ
ಒಡಗೂಡಿ ಸುತ್ತುತಲಿ ಬದಲಾಯ್ತು,
ಬರಡು ಬುಗರಿ, ಚೆಂದದ ಬೊಂಬೆಯ ಮನೆ.

ಕಾಡಿನಲಿ, ನೀರೊಳಗೆ, ಬೆಟ್ಟ, ಗುಡ್ಡ, ಆಗಸ,
ಗುಹೆ, ಊರೊಳಗೆ, ಗಿಡ ಮರದೊಳಗೆ,
ಮಣ್ಣಿನಲಿ, ಮಣ್ಣಿನ ಹುತ್ತದಲಿ,
ಮರ, ಮಣ್ಣು, ಕಲ್ಲುಗಳೆಲ್ಲವ ಬೆರೆಸಿ,
ಕಟ್ಟಿದ ಭವ್ಯ ಬಂಗಲೆಯೊಳಗೆ.
ವಿವಿದ ಸುಂದರ, ವಿಕಾರ, ಭಯಾನಕ
ರೂಪದ ಬೊಂಬೆಗಳ ಆಗರವಿದು ನಮ್ಮೆಲ್ಲರ ಮನೆ.

ಹುಲ್ಲು ಮೇಯುವ ಬೊಂಬೆ.
ಹಣ್ಣುತಿನ್ನುವ ಬೊಂಬೆ.
ಮಣ್ಣುತಿನ್ನುತ ಮಣ್ಣಲ್ಲಿ ಹೊರಳಿ
ಆನಂದವ ಕಾಣುವ ಬೊಂಬೆ.

ನೆಲದಿ ಹರಿಯುವ ಬೊಂಬೆ.
ಎರಡು, ನಾಲ್ಕು, ನೂರು, ಸಾವಿರ ಕಾಲುಗಳ
ಮೈಯೆಲ್ಲ ಕೂದಲು, ರಂಗುರಂಗಿನ ರೆಕ್ಕೆಗಳ
ವಿವಿಧ ವರ್ಣಗಳ ಬೊಂಬೆಯ ಲೋಕವಿದು

ದಿನವೆಲ್ಲ ಬಚ್ಚಿಟ್ಟು, ತೂಕಡಿಸಿ, ನಿದ್ರಿಸಿ
ರಾತ್ರಿಯಲಿ ಹೊರಬಂದು ಇತರ ಬೊಂಬೆಗಳ
ತಿಂದುಹಾಕುವ ಬೊಂಬೆ

ನೀರಿನಲಿ ಒಂದು ಕಾಲಲಿ ನಿಂತು,
ಕಣ್ಮುಚ್ಚಿ ಧ್ಯಾನಿಸುತ
ನೀರಿನಲಿ ಪಿಳಿಪಿಳಿ ಕಣ್ಣು ಬಿಡುತ
ಈಜುವ ಗಾಜಿನಂತಹ ಪುಟ್ಟ
ಸುಂದರ ಬೊಂಬೆಗಳ
ಗಬಕ್ಕನೆ ನುಂಗುವ ಬೊಂಬೆ.

ನದಿಯಲ್ಲಿ, ಕೆರೆ, ಕೊಳಗಳಲಿ,
ಕಿಂಚಿತ್ತೂ ಅಲ್ಲಾಡದೆ
ಮರದ ಕೊರಡಂತೆ ಕಾಣುತ
ದೊಡ್ಡ ಗುಂಪಿನಲಿ ಬಳಲಿ ಬಾಯಾರಿಕೆಗೆ
ನೀರ ಕುಡಿಯಲು ಬಂದ ಹತಭಾಗ್ಯ
ಕರುವಿನ ಮೇಲೆ ಎಗರಿ ಬಾಯ್ತೆರೆದು
ಕಚ್ಚಿ ಎಳೆದುಕೊಳ್ಳುವ ಭಯಂಕರ ಬೊಂಬೆ.

ಲಾಗವ ಹೊಡೆದು, ಕೇಕೆಯ ಹಾಕಿ
ಬಾಳೆ ಹಣ್ಣನು ಸುಲಿಯುತ
ಪಲ್ಟಿ ಹೊಡೆಯುವ ಬೊಂಬೆ

ದೊಡ್ಡ ಘರ್ಜನೆ ಹಾಕಿ ಕಾಡ ನಡಗಿಸುವ ಬೊಂಬೆ
ಸೊಂಡಿಲ ಮೇಲೆತ್ತಿ ಕಹಳೆಯ ಊದುವ ಬೊಂಬೆ
ಹಿಂಡುಹಿಂಡಾಗಿ ಬೊಗಳುತ ಕಾಡ ಸುತ್ತುವ
ಬೆಟ್ಟದ ತುದಿಯಿಂದ ಗಗನಕ್ಕೆ ಚಿಮ್ಮಿ
ರೆಕ್ಕೆಯ ಬಿಡಿಸಿ ಗಾಳಿಯಲಿ ತೇಲುವ
ಸುಂದರ ಬಣ್ಣದ ಬೊಂಬೆ

ಮಣ್ಣಿನ ಮನೆಯ ಬಿಟ್ಟು
ಕಾಡಲಿ ಹರಿದು, ಮರವನೇರಿ
ಹೆಡೆಯನೆತ್ತಿ, ಬುಸ್ಸೆಂದು ಹೆದರಿಸಿ
ಕಾಲ, ಕಾಲಕೂ ಅಂಗಿಯ ಕಳಚಿ
ಹೊಳೆಯುವ ಹೊಸ ಮೈಯಲ್ಲಿ
ಮರಳಲ್ಲಿ ವಂಕಿ, ವಂಕಿಯ
ಗೆರೆಗಳ ಎಳೆಯುತ ಮಾಯವಾಗುವ
ಹಗ್ಗ ರೂಪದ ನಾಗ ಬೊಂಬೆ

ಮಾತನಾಡುವ ಬೊಂಬೆ,
ಮಿಕ್ಕೆಲ್ಲ ಬೊಂಬೆಗಳ ಕಬಳಿಸುವ ಬೊಂಬೆ
ಜಗಳವಾಡುವ ಬೊಂಬೆ
ಕಪಟದಲಿ ಕೇಡುಗೈಯುವ ಬೊಂಬೆ

ಸಕಲ ಪಾಪವ ಮಾಡಿ,
ಕೊನೆಗೆ ಸಂಕಟ ಬಂದಾಗ,
ಎಲ್ಲೂ ಇಲ್ಲದ, ಯಾರೂ ಕಾಣದ,
ತನ್ನ ರೂಪದ ಬೊಂಬೆಯ ಹುಟ್ಟಿಸಿ,
ಅದಕೊಂದು ಕಲ್ಲಿನ ಗುಡಿಯನು ಕಟ್ಟಿ,
ಅದಕೆ ಮೊರೆ ಹೋಗುವ ಮುಠ್ಠಾಳ ಬೊಂಬೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ