ಬುಧವಾರ, ಮೇ 12, 2010

ನಾನೇ?

ನಾನೇ?
ಕೆ. ಆರ್.ಎಸ್ ಮೂರ್ತಿ

ನನ್ನ ನಾನೇ ಹೊಗಳಿ,
ಸುತ್ತು ನಮಸ್ಕಾರ ಸಾವಿರ ಹೊಡೆದು,
ಮಣಿದು ನನ್ನ ಕಾಲಿಗೆ,
ಮಿಂದಾಯಿತು ನನ್ನ ನದಿಯಲ್ಲಿ,
ಶಂಖ ವಿನ್ಯಾಸದಿ ಹರಿದ ಶುಭ್ರ ಗಂಗೆ.
ಮಂಗಳಾರತಿ, ಧೂಪ, ದೀಪಾರತಿ,
ಫಲ, ಪುಷ್ಪ, ಗರಿಕೆ, ಹಸಿರು ಎಲೆ,
ನೈವೇದ್ಯ ನನಗೆ ಪರಿಪರಿ ಭೋಜನ.

ನನಗೆ ಕಟ್ಟುವೆ ತಾಳಿ ನಾನೇ
ಸಪ್ತ ಪದಿ ನನ್ನ ಕೈಹಿಡಿದು
ನಾನೇ ಸುತ್ತಿದ ಅಗ್ನಿಯೂ ನಾನೆ
ಹವ್ಯ, ಹವನ, ಸಮಿತ್ತು, ನನ್ನೊಳಗೇ.
ಹತ್ತಿಸಿದೆ ಹಸಿವೆಯಲಿ, ಹಾತೊರೆದು ಭಗ್ಗನೆ,
ಉದ್ದ ನಾಲಿಗೆ ಚಾಚಿದ ಅನಲನೂ ನಾನೇ ಆಗಿ.
ಹವ್ಯಕನು ನಾನು, ಹವ್ಯಾರ್ಪಿತವು ನನಗೇ ತಾನೇ!

ಶಯನ ಶಾಸ್ತ್ರವೂ ಎನಗೇ;
ನನ್ನ ಶಯ್ಯೆಯಲಿ, ಹಂಸ ರೂಪದ ನಾನು ತೂಲಿಕಾ ಕಲ್ಪದಲಿ,
ಮೋಹಿಸಿದ ರತಿ ಮದನರೂ ನಾನೇ.
ದಿನ, ರಾತ್ರಿ ಸ್ವರ್ಗವನು ಕಲ್ಪಿಸಿದೆ;
ನನ್ನ ತೃಪ್ತಿಯ ತೇಗು ಹರಿಸಿದೆ
ಬ್ರಹ್ಮಾಂಡವನೇ ವ್ಯಾಪಿಸಿಹ
ಕಾಮಧೇನುವಿನ ಮೊಲೆಯ ಅಮೃತ.
ನಾನೇ ಅಲ್ಲವೇ ಅಮೃತ!

ನನ್ನಿಂದಲೇ ಆದೆನಲ್ಲವೇ ನಾನು ನಿತ್ಯ ಬಸುರಿ,
ಕೋಟಿಸಾವಿರ ಹುಟ್ಟು, ಸಾವಿರಕೋಟಿ ಸಾವು.
ನನ್ನಲ್ಲಿ ನಾನೇ ಹುಟ್ಟಿದ ಬ್ರಹ್ಮ ನಾನು;
ನನ್ನ ಕಲ್ಪನಾ ಸರಸ್ವತಿಯ
ಸುರನಾದ ಸಹಸ್ರ ತಂತಿಯ ವೀಣೆಯನು
ಪಿಡಿದ ಗಾನರೂಪಿಯೂ ನಾನೇ ಅಹುದು.

ಸುಭಾಷಿತ ವಾಣಿ, ವಾಗ್ದೇವಿ, ವಾದಿ, ಪ್ರತಿವಾದಿ,
ಸಕಲ ವೇದ, ವೇದಾಂತ, ಪುರಾಣ ಕರ್ತನೂ ನಾನೇ.

ನನ್ನ ವಾದವನು ಅತಿ ಆಸಕ್ತಿಯಲಿ ಆಲಿಸುವ ನಾನು
ನೇತಿ, ನೇತಿ ಪ್ರತಿಯುತ್ತರದ ಮಂತ್ರವನು ಮುಗಿಯದೇ
ಪ್ರತಿಧ್ವನಿಸುವ ಅತಿಸಂಶಯಿಯೂ ನಾನೇ.

ನಾನು ಯಾರು?
ನಾನು ನಾನಲ್ಲ.

ಕಾಂಡವಲ್ಲ, ಕೊಂಬೆಯಲ್ಲ, ಬೇರಲ್ಲ, ಮಣ್ಣಲ್ಲ.
ನೀರಲ್ಲ, ಗೊಬ್ಬರವಲ್ಲ, ಭಾಸ್ಕರನ ಬೆಳಕಲ್ಲ.
ಶ್ವಾಸನೆಯಲ್ಲ, ಭರದಿ ಬೀಸುವ ಗಾಳಿಯಲ್ಲ,
ಬೀಜವಲ್ಲ, ಎಲೆಯಲ್ಲ, ಕಾಯಿಯಲ್ಲವೇ ಅಲ್ಲ.
ಹಣ್ಣಲ್ಲ, ಹಣ್ಣು ತಿನ್ನುವ ಪ್ರಾಣಿಯಂತೂ ಅಲ್ಲವೇ ಅಲ್ಲ.

ಕ್ರಿಮಿಕೀಟ, ಪ್ರಾಣಿ, ಜೀವರಾಶಿಗಳಾವುದೂ ಅಲ್ಲ.
ಅಜೀವ ಪ್ರಕೃತಿಗಳಾವುದೂ ಸಾದ್ಯವಲ್ಲ.
ಕಣ್ಣಿಗೆ ವಿವಿಧ ವರ್ಣ ದೃಷ್ಟಿಯನು ಕೊಡುವ ಬೆಳಕಲ್ಲ,
ಕಾಣದ, ಕೇಳದ ವಿವಿಧ ಶಕ್ತಿ ರೂಪಗಳಲ್ಲ.
ಪ್ರಕಾಶ, ಆಕಾಶ, ಅವಕಾಶ, ದಿಕ್ಕು, ಕಾಲಗಳಲ್ಲ.

ಆದಿ, ಅನಾದಿ, ಅಂತ, ಅನಂತ, ಆನಂದ,
ರೂಪ, ಅರೂಪ, ಗುಣ, ನಿರ್ಗುಣ
ವಾದ, ಪ್ರತಿವಾದ, ವಾಗ್ವಾದಗಳೆಲ್ಲವೂ ಮಾಯೆ.
ವೇದ್ಯ, ಅವೇದ್ಯಗಳೂ ಮಾಯೆ
ಮಾಯೆಯೂ, ಮಯಾವಾದವೂ ಅಸತ್ಯ
ಸಂಶಯವು ಅಸತ್ಯ, ಸಂಶಯಿಯೂ ಅಸತ್ಯ
ಸತ್ಯಾವಾದವೂ ಅಸತ್ಯ, ನಿತ್ಯಾವಾದವೂ ಅಸತ್ಯ
ನೇತಿವಾದಿಗೆ ಸಕಲವೂ ಅಸತ್ಯ

ಕಾಲರಾಯನಿಗೆ ಅಕಾಲ ಮರಣ ಪ್ರಾಪ್ತಿಸುವ
ಉತ್ತರಕೆ ಉತ್ತರವೇನೂ ಇಲ್ಲ
ಅನುಮಾನವೇ ಅನಂತ, ಅನುಮಾನವೇ ಅಮೃತ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ