ಸೋಮವಾರ, ಆಗಸ್ಟ್ 30, 2010

ಹೇ ದೇವರೇ! ನಿನ್ನ ಗುಟ್ಟೇನು?

ಹೇ ದೇವರೇ! ನಿನ್ನ ಗುಟ್ಟೇನು?
ಕೆ. ಆರ್. ಎಸ್. ಮೂರ್ತಿ

ಮನುಷ್ಯನಿಗೆ ನಿನ್ನ ಹುಚ್ಚು ಹೇಗೆ ಹಿಡಿಯಿತು? ಏಕೆ ಹಿಡಿಯಿತು? ಯಾವಾಗ ಹಿಡಿಯಿತು?

ಇದು ಸಾಮಾನ್ಯ ಹುಚ್ಚಲ್ಲ. ವಿಪರೀತ ಹುಚ್ಚು. ಔಷಧಿಯೇ ಇಲ್ಲದ ಹುಚ್ಚು.

ಅವತಾರ ಎತ್ತುವನು ನೀನಲ್ಲ, ದೇವರೇ! ಆಚಾರದ ಅವತಾರಗಳು ಅನೇಕ. ಕೆಲವು ದೇಶಗಳು ದೇವರನ್ನು ಹುಟ್ಟಿಸಿದರೆ, ಇನ್ನು ಕೆಲವು ದೇಶದವರು ತಮ್ಮ ದೇಶದ ಮೇಲೆ ಇನ್ನೊಂದು ದೇಶದಲ್ಲಿ ಅವತಾರ ಮಾಡಿ ತಮ್ಮ ಮೇಲೆ ದಾಳಿ ಮಾಡುವವರೆಗೂ, ಸುಮ್ಮನಿರುತ್ತಾರೆ. ನಮ್ಮ ದೇಶದಲ್ಲಿ ಮಾತ್ರ ದೇವರುಗಳನ್ನು ಅವತರಿಸಲು ಅನೇಕ ದೊಡ್ಡ ಕಾರ್ಖಾನೆಗಳನ್ನೇ ನಿರ್ಮಿಸಿಬಿಟ್ಟರು. ಮೊದಲಿಗರು ಋಷಿಗಳಾದರೆ ಅವರು ಮೂವತ್ತು ಮೂರು ಕೋಟಿ ದೇವರುಗಳನ್ನು ಹುಟ್ಟಿಸಿಬಿಟ್ಟರು. ಜೊತೆಗೆ ಕೋಟಿ, ಕೋಟಿ ಗುರುಗಳೂ, ಸಾಧುಗಳೂ, ಸ್ವಾಮಿಗಳೂ, ಕಳ್ಳ ಸನ್ಯಾಸಿಗಳೂ, ಜಗದ್ಗುರುಗಳೂ ಹುಟ್ಟಿಬಿಟ್ಟರು, ಇನ್ನೂ ಹುಟ್ಟುತ್ತಲೇ ಇದ್ದಾರೆ. ಜಗಕ್ಕೆ ಒಬ್ಬರು ಸಾಲದಂತೆ ಅನೇಕ ಜಗದ್ಗುರುಗಳು ಸಿಂಹಾಸನವನ್ನು ಏರಿದರು.
,
ಭೂಮಿಯಮೇಲೆ ಮಾತ್ರ ದೇವರುಗಳು ಯಾಕೆ? ಕೋಟಿ, ಕೋಟಿ ಸೂರ್ಯನ ತರಹದ ತಾರೆಗಳು, ಗ್ರಹ, ಉಪಗ್ರಹಗಳು, ತಾರಾಮಂಡಲಗಳು, ಗ್ಯಾಲಾಕ್ಸಿಗಳೂ ಇರುವಾಗ, ನೀನು, ಅಥವಾ ನಿನ್ನಂತೆ ಕೋಟಿ, ಕೋಟಿ ದೇವರುಗಳು ಬ್ರಹ್ಮಾಂಡದಲ್ಲೆಲ್ಲಾ ಇದ್ದಾರೆಯೇ?

ಭೂಮಿಯ ಮೇಲೆ, ಇತರ ಪ್ರಾಣಿಗಳೂ, ಹಕ್ಕಿ, ಪಕ್ಷಿಗಳೂ, ಕ್ರಿಮಿ, ಕೀಟಗಳೂ, ಜಲಚರಗಳೂ, ಗಿಡ ಮರಗಳೂ ಸುಮ್ಮನೆ ತಮ್ಮ ಪಾಡಿಗೆ ತಾವು ಇರಬೇಕಾದರೆ, ಮನುಷ್ಯನೇಕೆ ನಿನಗೆ ಪೂಜೆ ಮಾಡುತ್ತಾನೆ? ಜಪ ಮಾಡುತ್ತಾನೆ? ವ್ರತ ಮಾಡುತ್ತಾನೆ, ಭಜನೆಗಳನ್ನು ಮಾಡುತ್ತಾನೆ?

ಓಹೋ! ಇದಕ್ಕೆಲ್ಲಾ ಒಂದೇ ಪದದ ಉತ್ತರವಿದೆಯೋ? ಕಕಲಾತಿ, ಪೆದ್ದುತನ, ಮೂರ್ಖತನ. ಇದೆಲ್ಲಾ ಹುಚ್ಚಿನ ಬೇರೆ, ಬೇರೆ ಪರಿಣಾಮಗಳೋ? ನಮ್ಮ ಭೂಮಿಯು ಒಂದು ದೊಡ್ಡ ಹುಚ್ಚಾಸ್ಪತ್ರೆಯೋ? ಡಾಕ್ಟರು ಮಾತ್ರ ಇಲ್ಲವೋ?

ಹಾಗಾದರೆ, ನೀನೇಕೆ ಇವರಿಗೆಲ್ಲಾ ಈ ರೀತಿ ಹುಚ್ಚು ಹಿಡಿಸಿ, ಸುಮ್ಮನೆ ಯಾಕೆ ಮೂಕನಾಗಿದ್ದೀಯೇ?

ಈ ತಮಾಷೆಯನ್ನೆಲ್ಲಾ ನೋಡಿಕೊಂಡು ನೀವೆಲ್ಲಾ ನಗುತ್ತೀರೆ? ನಿನಗೆ ಮತ್ತು ನಿನ್ನ ಮೂವತ್ತು ಮೂರು ಕೋಟಿ ಸಂಸಾರಕ್ಕೆ ಇದು ಮನೋರಂಜನೆಯೇ?

ಸರಿ ದೇವರೇ! ಈ ಗುಟ್ಟು ನಮ್ಮಲ್ಲೇ ಇರಲಿ. ಬಿಟ್ಟಿ ಮನೋರಂಜನೆಗಳು ನಡೆದು ಕೊಂಡು ಹೋಗುತ್ತಿರಲಿ.

ಬೈ, ಬೈ - ಅಥವಾ ಜೈ, ಜೈ!

ಅನ್ವರ್ಥ ನಾಮ

ಅನ್ವರ್ಥ ನಾಮ
ಕೆ. ಆರ್. ಎಸ್. ಮೂರ್ತಿ

ರಾಮನಿಗೆ ಹೆಸರಿತ್ತವರು ಯಾರಿರಬೇಕು?
ತಂದೆ ದಶರಥನೇ? ತಾಯಿ ಕೌಸಲ್ಯೆಯೇ?
ರಾಜ ಪುರೋಹಿತನೆ? ಇನ್ಯಾರಾದರೂ ಋಷಿಯೇ?

ಉತ್ತರ ಅತಿ ಸುಲಭ: ಒಬ್ಬ ಋಷಿ, ಮಹಾ ಋಷಿ
ಆ ಋಷಿಯ ಹೆಸರೂ ಅನ್ವರ್ಥ ನಾಮವೇ?
ಅವನು ದಶರಥನ ಕುಮಾರನಿಗಿಟ್ಟ ಹೆಸರೂ ಅಷ್ಟೇ!

ವಲ್ಮಿಕದಿಂದ ಪುನರ್ಜನ್ಮ ಪಡೆದವನು ವಾಲ್ಮೀಕಿ
ರಾಮನಿಗೆ ಜನ್ಮ ಕೊಟ್ಟವನೂ ಕೂಡ ವಾಲ್ಮೀಕಿಯೇ!
ರಾಮನ ಕಥೆಗೆ ತನ್ನ ಹೃದಯದಲ್ಲಿ ಜನ್ಮ ಕೊಟ್ಟ ಮಹಾಕವಿ;
ನಾವು, ನೀವೆಲ್ಲಾ ಇವನ ಕಥೆಯನ್ನು ಸಂಪೂರ್ಣ ನಂಬಿ,
ದೇಗುಲಗಳಲ್ಲಿ ಕಥೆಯ ನಾಯಕನನ್ನು ಕಲ್ಲಿನಲ್ಲಿ ಕೆತ್ತಿ,
ಮನೆಯಲ್ಲಿ ಪುಟ್ಟ ವಿಗ್ರಹಗಳನ್ನು ಇಟ್ಟು ಪೂಜಿಸುವಂತೆ
ಮಾಡಿದ ಮಾಂತ್ರಿಕ ಮಹಾ ಕವಿಯಲ್ಲದೆ ಇನ್ನೇನು?

'ರಾಮ' ನಮ್ಮೆಲ್ಲರನ್ನೂ ರಂಜಿಸುವ ಅನ್ವರ್ಥ ನಾಮ
ಮಹಾ ಕವಿಗಳೆಲ್ಲ ಅನ್ವರ್ಥ ನಾಮಗಳಿಗೆ ಅನುರೂಪವಾಗಿ
ತಮ್ಮ ನಾಯಕರನ್ನೂ, ಎಲ್ಲಾ ಪಾತ್ರಗಳನ್ನೂ ತಮ್ಮ ಕಥೆಯನ್ನು ಹೆಣೆದರು
ರಾಮನಿಗೆ "ದಾಶರಥಿ", ಆದಿಯಾಗಿ ಅನೇಕ ಅನ್ವರ್ಥ ನಾಮಗಳನ್ನು
ತಮ್ಮ ಕಥೆಯಲ್ಲಿ ಸಂದರ್ಭಕ್ಕೆ ಸೂಕ್ತವಾಗಿ ಅನೇಕ ಕಡೆ ಉಪಯೋಗಿಸಿದ್ದಾರೆ.

ನಮಗೆ ನಾವೇ ಅನ್ವರ್ಥ ನಾಮಗಳನ್ನು ಕೊಟ್ಟು ಕೊಳ್ಳಬಹುದೇ?
ನಿಮಗೆ ನೀವೇ ಕೆಲವು ನಾಮಗಳನ್ನು ಹಾಕಿಕೊಳ್ಳಿ. ಇತರರಿಗೆ ಪಂಗನಾಮಗಳನ್ನು ಹಾಕಿದ್ದೀರೋ?
ಹಾಗಾದರೆ, ನಿಮ್ಮ ಹೆಸರು "ಪಂಗನಾಮ ಕುಶಲ" ಅಥವಾ ಪಂಗನಾಮ ಕಲಾಕಾರ".

ನೀವೇ ಯೋಚಿಸಿ ನೋಡಿ: ನಿಮಗೆ ಅಷ್ಟೋತ್ತರ (ಅಂದರೆ ನೂರೆಂಟು) ಬೇಕೋ? ಸಹಸ್ರ ನಾಮಗಳು ಬೇಕೋ?

ದಾನಿ ದೀನರ ಋಣಾನುಬಂಧ

ದಾನಿ ದೀನರ ಋಣಾನುಬಂಧ
ಕೆ. ಆರ್. ಎಸ್. ಮೂರ್ತಿ

ಸಾಲ ಸೋಲ ಕೊಟ್ಟೊಡನೆ ಅಂಟುವುದು ತಲೆ ಶೂಲೆ;
ಕೊಟ್ಟದ್ದು ಕೈ ಬಿಟ್ಟು ಹೋಯಿತಲ್ಲಾ ಎಂದು ವ್ಯಥೆ;
ಬಡ್ಡಿಯ ಆಸೆ ಒಂದು ಕಡೆ, ಬಡ್ಡಿಯು ದೊಡ್ಡ ಗುಡ್ದೆಯಾದೀತೆಂದು;
ಅಸಲೇ ಪಲಾಯನವಾದೀತೆಂದು ಭಯದ ಚಳಿಯ ನಡುಕ.

ಸಾಲಕ್ಕೆ ನೀಡಿದ ಕೈಗೆ ತಗುಲುವುದು ಋಣ ಭಾರದ ಕಬ್ಬಿಣದ ಬೇಡಿ;
ಬಡ್ಡಿಗೆ ಬಡ್ಡಿಗಳ ಸಂತಾನ ಬೆಳೆದು ನೊಗವು ಬಿಗಿಯಾಗುತ್ತಾ,
ನೇಣಾಗಿ ಹೋಗಿ ಗಂಟಲಿನಲ್ಲಿ ಉಸಿರೇ ಕಟ್ಟಿ ಹೋಗುವ ಹೆದರಿಕೆ.

ಕೊಟ್ಟರೆ ಮನಸಾರೆ ಕೊಟ್ಟುಬಿಡು ಕೈ ನೀಡಿ ದಾನವನು;
ನಿನ್ನ ಬೆನ್ನು ಹತ್ತುವಳು ಪುಣ್ಯದ ಲಾವಣ್ಯ ಸುಂದರಿ!

ದೀನನಾಗಿ ಬಳಲುತಿರುವಾಗ, ಪಡೆ ದಾನದ ಪುಣ್ಯವನು;
ಈ ತರಹದ ಪುಣ್ಯದ ಋಣವನ್ನು ಅತಿ ಬೇಗ ತೀರಿಸಿಕೊ;
ನಿಜ ಪುಣ್ಯದ ಕಾಲ ಬಂದೊಡನೆ ಕಾತರದಿ ಕೈ ಬಿಚ್ಚಿ ಕೊಟ್ಟುಬಿಡು,
ಬಡ್ಡಿಗೆ ಬಡ್ಡಿ ಕೂಡಿಸಿ ದೀನನೋರ್ವನ ಕಂಡೊಡನೆ.

ದಾನಿ ದೀನನ ಹುಡುಕಿ ಮಾಡುವುದೇ ತೀರ್ಥಯಾತ್ರೆ;
ಕೊಡುವುದೂ, ಬೇಡುವುದೂ ಒಂದು ರೀತಿಯ ಹಸ್ತ ಲಾಘವೇ!
ಬೇಡುವ ಕೈ ಕೊಡುವ ಕೈಯಾಗುವ ಕಂಕಣ ಧಾರಣ;
ಋಣವು ಪುಣ್ಯವಾಗುವ, ಕಬ್ಬಿಣವು ಸುವರ್ಣವಾಗುವ ರಸಾನುವರ್ತನೆ;
ದಾನಿ, ದೀನರದು ವಿಭಿನ್ನ ತರಹದ ಪೂರ್ವ ಜನ್ಮದ ಸಂಬಧ!

ಬದಲೇ ಚೆನ್ನ

ಬದಲೇ ಚೆನ್ನ
ಕೆ. ಆರ್. ಎಸ್. ಮೂರ್ತಿ

ಇದ್ದುದನು ಹಿಂದೆ, ಇರುವುದನು ಇಂದು, ಉಳಿಯದನು ಮುಂದೆ ಕಂಡುಕೊ
ಬದಲದನು ಎಂದೆಂದೂ ಕಣ್ಣಲ್ಲಿ, ಕಣ್ಣಿಕಿ, ಕಾಣುವುದನು ಚೆನ್ನಾಗಿ ನೆನೆದುಕೊ

ಇದ್ದುದನು, ಇರುವುದನು, ಉಳಿಯದನು ಒಂದೂ ಬಿಡದಂತೆ ತಿಳಿಯಬಹುದೇ?
ಆಗುವುದೇ ಇಲ್ಲ; ಅಲ್ಲಿ, ಇಲ್ಲಿ, ಎಲ್ಲೆಲ್ಲೂ ಅಲೆದು ಸರಿಯಾಗಿ ಅರಿಯಬಲ್ಲುದೇ?

ಬದಲಿದನು, ಬದಲಿಪುದೆಲ್ಲನು ತಿಳಿಯುವುದು ಬದಲಿಪ ನಿನಗಂತೂ ಆಗಬಲ್ಲುದೇ?
ಬದಲದು ಆವುದೋ ಅದಕೂ ಬದಲಿಪುದನು ಕಂಡುಕೊಳ್ಳುವ ಪರಿಯಾಗುವುದೇ?

ಬದಲದು ಎಲ್ಲಕೂ ಅಂಟದೇ ಇರುವುದಲ್ಲವೇ? ಅಂಟದೆಯೇ ಕಾಣುವುದೆಂತು!
ಬದಲದು ಬದಲಿಪದಾದರೆ ಕಂಡೀತೋ ಮಾಡಿಕೊಂಡು ಬದಲಿಪದೆಲ್ಲದರ ನಂಟು!

ಎಲ್ಲೆಲ್ಲೂ ಬದಲೇ ಹಿಂದೆ, ಇಂದು, ಮುಂದೂ; ಎಲ್ಲೆಲ್ಲೂ ಬದಲದು ಎಂದಾದರಿತ್ತೇ?
ಬದಲದು ಬದಲೇ ಇಲ್ಲದೆ ಬಲು ಬರಡಾಗಿದ್ದು ಬೇಸತ್ತು, ಬದಲಿಪ ಪರಿಗೆ ತಿರುಗಿತೇ?

ಬದಲಿಪುದಾಟ; ಬದಲಿ, ಬದಲಿ ಹೊಸತಾಗುವುದು ಚೆಲ್ಲಾಟ; ಚೆಂದದ ಮುಗಿಯದಾಟ
ಅಂತಿದ್ದು, ಇಂತಾಗಿ, ಎಂತೆಂತೋ ಆಟಗಳನಾಡುವ ಚಟದ ಅನಂತ ಪರಿಪರಿಯಾಟ

ಗುರುವಾರ, ಆಗಸ್ಟ್ 26, 2010

ಪಾಪದ ಜನ ನೀವು; ಪಾಪಕರ್ಮದ ಫಲ

ಪಾಪದ ಜನ ನೀವು; ಪಾಪಕರ್ಮದ ಫಲ
ಕೆ. ಆರ್. ಎಸ್. ಮೂರ್ತಿ

ಸುಳ್ಳರೋ? ಕಳ್ಳರೋ? ಮಳ್ಳರೋ? ಜೊಳ್ಳರೋ; ಗೆದ್ದವರೋ? ಪೆದ್ದರೋ? ಕದ್ದವರೋ? ಮಂದ ಬುದ್ದಿಯವರೋ?
ಮೊಸಗಾರರೋ? ಹೇಸಿಗೆಯ ಮನದವರೋ? ಹಾಸಿಗೆಯ ವೀರರೋ? ಇತರರ ಕಾಸಿಗೆ ಕೈ ಚಾಚುವರೋ?

ಲಿಂಗ ವಿಕಲರೋ? ಮಂಗನ ಮನದವರೋ? ಅಂಗನೆಯರ ಆಸೆ ಬುರುಕರೋ? ಮೋಸದ ಬಲೆ ಎಸೆಯುವರೋ?
ಸಾಸಿವೆಯ ಕಾಳಿನ ಮೆದುಳಿನವರೋ? ಎಲ್ಲರ ತಲೆಗಳನು ಬೋಳಿಸುವರೋ? ಟೋಪಿಯ ಮಾರಾಟಗಾರರೋ?

ನೀವಲ್ಲತಾನೆ? ನಾನಂತೂ ಅಲ್ಲ, ನಿಮಗೆ ಗೊತ್ತೇ ಯಾರಾದರೂ? ಹಾಗೋ? ನನಗೂ ಗೊತ್ತಪ್ಪ ನೂರಾರು ಜನ.
ನೂರು ಜನರಲಿ ಅವರೇ ಹೆಚ್ಚು; ನರಿ, ಕುನ್ನಿ, ಹುಚ್ಚು ನಾಯಿಯ ಗೋತ್ರದವರು; ಅವರದಂತೂ ಬಲು ಗಿಲೀಟು ತನ

ನಿಮಗೆ ಗೊತ್ತಿಲ್ಲವೇನೋ, ನಿಮ್ಮ ಮುಖದ ಮೇಲೆ, ನೀವು ಪಾಪದ ಜನರೆಂದು ಬರೆದು ಕೊಂಡಿರಬಹುದು ಅಲ್ಲವೇ?
ಅವರಿಗೆ ಕಾಣಿಸಿಬಿಡುವುದು, ನೀವು ಆರು ಮೈಲು ದೂರದಲ್ಲಿ ಬರುವಾಗಲೇ; ಅವರೆಲ್ಲ ದೂರ ದೃಷ್ಟಿಯ ಓದುಗರಲ್ಲವೇ!

ಹಾವಿನ ನಾಲಿಗೆಯಲ್ಲಿ ಹೊರಡುವುದು ದೊಡ್ಡತನದ ಅಡ್ಡ ಹೆಸರುಗಳೇ, ಮೈ ಮೇಲೆಲ್ಲಾ ಬಿರುದು ಬಾವಲಿಗಳುಗಳ ಆಭರಣ
ನಿಮಗೆ ಮಾತ್ರ ಹುಟ್ಟು ಕುರುಡು; ಪರಮ ಸಾಧುಗಳಾರು, ಕೊರಮ ಖೈದಿಗಳಾರು ಒಬ್ಬರಿಂದೊಬ್ಬರನು ಹೇಳಿ ನೋಡೋಣ

ನೋಡಿದರೆ ಮಾತ್ರ ನಮ್ಮ, ನಿಮ್ಮ ಹಾಗೆಯೇ ಕಾಣುವರು; ಬಾಯಿ ಬಿಟ್ಟು ಹಾಡಿದರೆ ಆಗ ಚೆನ್ನಾಗಿ ಕೇಳುವುದು ಕರ್ಕಶ ನಾದ
ಬಲೆಗೆ ಬಿದ್ದವರ ಮುಖಕ್ಕೆ ಮಂಕು ವಿಭೂತಿ ಲೇಪನ; ಜೊತೆಗೆ ಏಳೆಯುವರು ದೊಡ್ಡ ಪಂಗನಾಮ; ನಿಮಗೆ ಆಗ ಅದೇ ಆನಂದ

ಕೈ ಬಿಚ್ಚಿ ಸ್ವಲ್ಪ; ನಿಮ್ಮ ಅಂಗೈ ಬರಹವನು ಬಿಡಿಸಿ ನೋಡುವೆನು. ನಿಮಗೆ ಈ ಜನ್ಮದಲ್ಲೇ ಸ್ವಲ್ಪವಾದರೂ ಬರಬಹುದೇ ಬುಧ್ಧಿ?
ಶನಿ, ರಾಹು, ಕೇತುಗಳು ಹಾಕಿರುವರು ಠಿಕಾಣಿ, ಟೆಂಟು, ಇನ್ನೂ ಎಂಟು ಜನಮಕೂ. ಬೇಗ ಗಂಗೆಯಲಿ ನಿಮ್ಮ ಮೈಯನ್ನು ಅದ್ದಿ!

ಆಗ

ಆಗ
ಕೆ, ಆರ್. ಎಸ್. ಮೂರ್ತಿ

ನಾನಿರಲಿಲ್ಲ, ನೀವೂ ಇರಲಿಲ್ಲ, ಅವರಿವರಲ್ಲದೆ, ಯಾರೂ ಇರಲೇ ಇಲ್ಲ;
ಅದಿರಲಿಲ್ಲ, ಇದಿರಲಿಲ್ಲ, ಈಗಿರುವುದಾವುದೂ, ಮತ್ಯಾವುದೂ ಇರಲಿಲ್ಲ;
'ಆಗ', 'ಈಗ', 'ಬೇಗ', 'ಯಾವಾಗ', 'ಗಳಿಗೆ' ಗಳಿಗೆ ಏನೂ ಅರ್ಥವೇ ಇರಲಿಲ್ಲ;

ಚುಕ್ಕೆ ಮಾತ್ರ, ಚಿಕ್ಕದಕ್ಕಿಂತ ಚಿಕ್ಕದು; ಅಕ್ಕ, ಪಕ್ಕ; ಎತ್ತರ, ವಿಸ್ತಾರ: ಆವುದಿರಲಿಲ್ಲ
ಉದ್ದ, ಅಗಲ, ಆಚೆ, ಈಚೆ, ಅಲ್ಲಿ, ಇಲ್ಲಿ, ಕಡೆಗಳೂ, ಖ, ಮೃ, ಭ ಗಳೂ ಇರಲೇ ಇಲ್ಲ.
ಬಿಂದುವೊಳಡಗಿತ್ತು ಅಜ ಬ್ರಹ್ಮ; ಆದರೂ, ಚಿಕ್ಕ ಚುಕ್ಕೆಯಾದರೂ ಇರಬೇಕಲ್ಲ!

ಕಾಲದ ಹಕ್ಕಿಗೆ ರೆಕ್ಕೆ, ಪುಕ್ಕ ಗಳು ಬೆಳೆದಿರಲಿಲ್ಲ; ಕಾಲವೆಂಬುದೇ ಇರಲಿಲ್ಲವಲ್ಲ!
ದಿಕ್ಕೇ ಇಲ್ಲದ ಹಕ್ಕಿಯಲ್ಲವೇ! ಕಾಲವು ಬಂಧನದಲ್ಲಿ ಚುಕ್ಕೆಗೆ ಅಧೀನವಾಗಿತ್ತಲ್ಲ!
ಹಾರಾಟವೆಂಬುದೇ ಗೊತ್ತಿಲ್ಲದಿದ್ದರೆ, ಚುಕ್ಕೆಯೊಳಗಿನದು ಎಂತಹ ಹಕ್ಕಿಯೂ ಅಲ್ಲವಲ್ಲ!

ಸೊನ್ನೆಯಿಂದ ಏನೂ ಬರುವ ಸಾಧ್ಯತೆ ಇಲ್ಲವಲ್ಲ! ಒಳಗೆ ಅನಂತ ಅಡಗುವುದು ಹೇಗೆ?
ಸೊನ್ನೆಯೊಳಗಿಂದ ಪೂರ್ಣತೆಯು ಹುಟ್ಟಿ, ಆಗಲೇ ಪೂರ್ಣವಾದುದು ಹಿಗ್ಗುವುದು ಹೇಗೆ?
ಏನಂತೀರಿ ನೀವೆಲ್ಲ? ಇಲ್ಲದ್ದರಿಂದ ಇರುವುದೆಲ್ಲ, ಬರುವುದೆಲ್ಲವೂ ಆಗುವುದು ಹೇಗೆ?

ಮಂಗಳವಾರ, ಆಗಸ್ಟ್ 24, 2010

ತುಂಟ ತುಟಿಯೇ ಅಟ್ಟಕ್ಕೆ ಬಾಗಿಲು

ತುಂಟ ತುಟಿಯೇ ಅಟ್ಟಕ್ಕೆ ಬಾಗಿಲು
ಕೆ. ಆರ್. ಎಸ್. ಮೂರ್ತಿ

ನಿನ್ನ ಅಂದದ ಕಣ್ಣುಗಳು ಬಲು ಚೊಕ್ಕವಿಹುದು; ಅದರ ಚೆನ್ನ ನನಗೊಬ್ಬನಿಗೇ ಗೊತ್ತು ಚೆನ್ನಿ
ಮುದ್ದು ತುಟಿ ನಿನ್ನದು ಚಿಕ್ಕದಿರಬಹುದು; ಅದನ್ನು ಬಿರಿಸುವುದು, ಬಿಡಿಸುವುದೇ ಬಲು ಚೆನ್ನ

ಮುದ್ದು ತುಟಿಗೆ ಬೇಕು ಮುತ್ತು ಕೋಟಿ; ಬಿಡ ಬಿಡದೆ ಬಿಡಿಸಬೇಕು, ತಡ ಮಾಡ ಬೇಡ ಚಿನ್ನ
ನಾಲಗೆಯೇ ಸಕಲ ಕುಸುಮಾಸ್ತ್ರ, ಮೂಳೆಯಿಲ್ಲದ ಬಾಣ, ಹೂಡುವೆನು ನಿನ್ನ ತುಟಿಗೆ ಅದನ್ನ

ತುಟಿಯು ಎಲ್ಲೇ ಇರಲಿ, ಗುರಿಯ ತಾಣವನು ತಬ್ಬದ ಬಾಣ; ಬಗ್ಗಿ, ಹಿಗ್ಗಿ ನುಸುಳುವ ಪರಿಯನ್ನ
ನಿನ್ನ ಬಾಗಿಲನು ತೆರೆದು ಕರೆದುಕೊಂಡರೆ ಮಾತ್ರವೇ ಸಗ್ಗದ ಬಾಗಿಲೂ ತೆರೆದೀತು ಕರೆದೆಮ್ಮನ್ನ

ನಿನ್ನ ಧಮನಿಗಳು ಬಿರಿದು, ಹರಿದೀತು ಜೊನ್ನ ಪ್ರವಾಹ; ಅಲ್ಲಿ, ಇಲ್ಲಿ, ಎಲ್ಲೆಲ್ಲೂ ಎಲ್ಲೇ ಮೀರೀತು
ಆಣೆಕಟ್ಟುಗಳೆಲ್ಲಾ ಒಡೆದು ನುಗ್ಗೀತು ಅಮೃತದ ಧಾರೆ; ಇದಕೆ ಬೇಕೆ ಆಣೆ, ಪ್ರಮಾಣಗಳ ಮಾತು

ಕಳಕಳಿಯ ಮಾತಿದು: ಕಳೆಯ ಬೇಡ, ಗಳಿಗೆಗಳ ಉರುಳಿಸಬೇಡ; ಸಲಿಗೆ ಇರಲಿ, ಬಲು ಹತ್ತಿರಕೆ
ಕಳೆಯೋಣ, ನಲಿಯೋಣ, ಕುಣಿಯೋಣ, ತಣಿಯೋಣ; ತನುವೇ ಏಣಿಯು ಜೇನಿನ ತಾಣದ ಸಗ್ಗಕೆ

ಮಧು ಮಂಥನ

ಮಧು ಮಂಥನ
ಕೆ. ಆರ್. ಎಸ್. ಮೂರ್ತಿ

ನನ್ನ ತುಟಿಯು ನಿನ್ನ ತುಟಿಯನು ಬೆರೆತು ಮಧುವನು ಹೀರುತಿರುವುದನು ಕಂಡು
ತನ್ನ ತುಟಿಯನೇ ಬಿಲ್ಲಾಗಿಸಿದನಲ್ಲೇ ನಲ್ಲೆ ನಗುಮೊಗದ ಚಂದಿರನು ಬಲು ತುಂಟು

ಚಕೋರ ಹಕ್ಕಿಯು ಚಂದ್ರಿಕೆಯ ಅಮೃತವನು ಉಣ್ಣುವುದನೇ ಮರೆತು ಹೋದಂತೆ
ನೋಡುತಿದೆ ಅಚ್ಚರಿಯ ಆನಂದ ರಾಗದಾಲಾಪನೆಯಲ್ಲಿ ಬಾಯಿ ಬಿಟ್ಟು ಕೊಂಡಂತೆ

ದುಂಬಿಯ ದೊಡ್ಡ ಹಿಂಡೇ ಸುತ್ತಾಡುತಿದೆ ಝುಂಯ್, ಝುಂಯ್ ಝಾಂಕಾರದಲಿ
ಜೇನು ತುಪ್ಪವು ತೊಟ್ಟಿಕ್ಕುತಿರಲು ನಾಲ್ಕು ತುಟಿಗಳೂ ಮಗ್ನ ಮಂಥನದಾಟದಲಿ

ಕಾಮದೇವ ಮದನರಾಯನಿಗೆ ಚುಚ್ಚಿ ಚುಚ್ಚಿ ತೋರಿಸುತಿಹಳು ರತಿಯು ಅತಿ ಬೆರಗಿನಲಿ
ಮದನ ರತಿಯರು ರತಿಯಾಟದ ದಿಟ ಪಾಠವನು ಕಲಿಯುವ ಅತೀವ ಆಸೆಯಿಂದದಲಿ

ಜಾಣನಾರೇ?

ಜಾಣನಾರೇ?
ಕೆ. ಆರ್. ಎಸ್. ಮೂರ್ತಿ

ಆಗಸದ ಕಾಗಜದಲ್ಲೆಲ್ಲಾ ಅಂದದ ಚಿತ್ತಿರವ ಬಿಡಿಸಿಹ ಜಾಣನಾರೆ?
ಕೋಟಿ ಕೋಟಿ ಮಿನುಗುವ ಚುಕ್ಕೆಗಳನು ನಾನಂತೂ ಎಣಿಸಾಲಾರೆ

ದೂರ ದೃಷ್ಟಿಯಲಿ ವೀಕ್ಷಿಸಿದ ವಿಜ್ಞಾನಿ ವಿವರಿಸಿಹ ಚೆಂದವನು ನಮಗೆಲ್ಲಾ
ಸೂಕ್ಶ್ಮದಲಿ ಕಾಣಲು ಬಲ್ಲವರಿಗೆ ಗೊತ್ತೀ ಗುಟ್ಟು ಚುಕ್ಕೆ ಬರೀ ಚುಕ್ಕೆಯಲ್ಲ

ಹಲವು ತಾರಾ ಸಂಸಾರ, ಗ್ರಹ ಕೂಟದ ಆ ಸಂಸಾರದಲಿ ಯಾರಾರಿಹರೋ?
ಸಂಸಾರಿಗರು ನಮ್ಮ ಸೂರ್ಯನ ಕಂಡು ಅವನೊಂದು ತಾರೆಯೇ ಎನಿಪರೋ!

ನಮ್ಮ ಸೂರ್ಯನೂ ತಾರಾ ಗುಛ್ಛದಲಿ ಒಂದಾಗಿ ಓಟದ ಪಂದ್ಯದ ಪಟುವಂತೆ
ಸುತ್ತ, ಸುತ್ತ ಸುತ್ತಿ ಬೇಸತ್ತವರಲ್ಲ; ಯಾರ ಸುತ್ತು ಸುತ್ತುವರೋ ಗೊತ್ತಿಲ್ಲವಂತೆ

ತಾರಾ ಗುಛ್ಛಗಳ ವ್ಯೂಹ ರಚನೆಯ ವೈಖರಿ ಕೋಟಿ ಕೋಟಿ ಎಣಿಸಲಾಗದಂತೆ
ಅದೆಷ್ಟೋ ವ್ಯೂಹಗಳು ಬ್ರಹ್ಮನ ಮೊಟ್ಟೆಯಲಿ ಅಡಗಿಹವೋ ತಿಳಿಯಲಾಗದಂತೆ!

ವಸುಧೆಯೂ ಬೆಂಕಿಯ ಉಂಡೆಯಾಗಿ ಸಿಡಿದು ಸೂರ್ಯನ ಮೈಯಿಂದ ಬಂದಳಂತೆ
ಶಾಂತಳಾದವಳು ಕೊನೆಗೆ ನಮೆಲ್ಲರನೂ ಹಡೆದು ತನ್ನ ಕುಟುಂಬವನು ಪಡೆದಳಂತೆ

ಒಬ್ಬರನೊಬ್ಬರು ಸೊತ್ತಿಗೆ ಕಿತ್ತಾಡಿ, ನಾವೀಗ ಮತ್ತೆ, ಮತ್ತೆ, ಬದುಕಿ ಸತ್ತು ಸೋತವರಲ್ಲ
ವಿಷದ ಬೀಜಗಳ ಬಿತ್ತುವುದರ ವ್ಯರ್ಥದ ವ್ಯವಸಾಯದಲಿ ನಮಗಿಂತಲೂ ಪರಿಣಿತರಿಲ್ಲ

ವಿಷ ಅಮೃತಗಳು ಅವಳಿ ಜವಳಿಯಂತೆ; ಮಧುವ ಕರೆದರೆ ವಧು ವಿಷವೂ ಬರಬಹುದೇ!
ಅಮೃತವನ್ನು ನಮಗುಳಿಸಿ, ವಿಷವನು ಮಾತ್ರ ಹೀರಬಲ್ಲ ವೀರ ವಿಷಕಂಠನೆಲ್ಲಿ ಹೋದ?

ಸೋಮವಾರ, ಆಗಸ್ಟ್ 23, 2010

ಬೇಕೋ? ಬೇಡವೋ?

ಬೇಕೋ? ಬೇಡವೋ?
ಕೆ. ಆರ್. ಎಸ್. ಮೂರ್ತಿ

ಬೇಕೋ? ಬೇಡವೋ? ಏನು? ಯಾವುದು? ಏಕೆ? ಹೇಗೆ? ಎಂದು? ಎಷ್ಟು? ಎಲ್ಲಿ?
ಪಟ್ಟಿ ಮಾಡು ಮೊದಲು ಎಲ್ಲ; ಗಟ್ಟಿ ಮಾಡಿಕೊ; ಬಿಟ್ಟಿಯೋ? ಬರೆದುಕೋ ಚೀಟಿಯಲ್ಲಿ

ಎಲ್ಲವೂ ಸಿಗದು: ಇದು ಮಾತ್ರ ಗಟ್ಟಿ. ಎಲ್ಲವೂ ಬೇಕಿಲ್ಲ ನಿನಗೆ: ಇದು ನಿನಗೆ ಗೊತ್ತೇ
ಆಸೆಯಿದ್ದಾಗ ಕಿಸೆಯೆಲ್ಲಾ ಖಾಲಿ; ಕಿಸೆಯು ತುಂಬಿ ತುಳುಕುವಾಗ ಹಸಿವೆಯೇ ನಾಪತ್ತೆ

ಆಸೆಯಿದ್ದಾಗ ತುಸುವಾದರೂ ಹಸಿವೆ ನೀಗಿಸು; ಕಿಸೆ ಝಾಣ ಝಾಣಿಸುವಾಗ ಬಿಚ್ಚು ಕೈ
ಹೆಚ್ಚಿದ್ದಾಗ ನಾಚದೆ ಬಿಚ್ಚಿದ ಕೈ ಅಚ್ಯುತನನ್ನೂ ಮೆಚ್ಚಿಸುವುದು. ಬಿಡಿಸಿಕೊ ಎರಡೂ ಕೈ

ಏನು? ಯಾವುದು? ಏಕೆ? ಹೇಗೆ? ಎಂದು? ಎಷ್ಟು? ಎಲ್ಲಿ? ಸಿಕ್ಕಿದರೂ ಪ್ರಸಾದವೇ ಅದು
ಏನೂ, ಯಾವುದೂ, ಏಕೋ, ಹೇಗೋ, ಎಂದೂ, ಇಷ್ಟೂ ಸಿಗದಿದ್ದರೆ ತಿಳಿ ನಿನ್ನದಲ್ಲವದು

ಭಾನುವಾರ, ಆಗಸ್ಟ್ 22, 2010

ನೆವ ನಿಮ್ಮ ಗುಟ್ಟು

ನೆವ ನಿಮ್ಮ ಗುಟ್ಟು
ಕೆ. ಆರ್. ಎಸ್. ಮೂರ್ತಿ

ನೆವ, ನೆವ, ನೆವ; ನನ್ನ, ನಿಮ್ಮ, ಎಮ್ಮ, ಅವರವರ ನೆವಗಳೇ ಬೇರೆ
ನಾವು, ನೀವು ಮಾಡಿದ ಯೋಚನೆ, ಹಾಕಿದ ಯೋಜನೆ ಮಾತ್ರ ಬೇರೆ

ನಾವು ಹೇಳಿದ ಭಾವ, ಅದಕ್ಕಂತೆಯೇ ಹೆಣೆದ ನೆವದ ಕಾವ್ಯವೇ ಒಂದು
ನೀವು ಹಾಡುವ ರಾಗ ಸರಾಗ, ತಟ್ಟಿದ ತಾಳಗಳೇ ಬೇರೆ ಇರಬಹುದು

ನಮ್ಮ ನಮ್ಮ ಗುಟ್ಟುಗಳು ನಮ್ಮೊಳಗೇ ಮಾಳಿಗೆಯಲಿ ಹೇಗೇ ಬಚ್ಚಿಟ್ಟಿರಲಿ
ತಂತಮ್ಮ ಗುಟ್ಟು ತಮ್ಮ ಅಟ್ಟದ ಮ್ಯಾಲೆ ಅಡಗಿದಲ್ಲೇ ಬೆಚ್ಚಗೆ ಮಲಗಿರಲಿ

ಅಲ್ಪ ಸ್ವಲ್ಪ ಮಾಡಿದರೆ ನೆವದ ಸಾಲ, ಅಂದಾನು ಜವ ಹೋಗಲಿ ಪರವಾಗಿಲ್ಲ
ಕಲ್ಪನೆಯನ್ನೇ ಮೀರಿ ನಮ್ಮ ನೆವದ ಹವ್ಯಾಸವು, ಅಭ್ಯಾಸವೇ ಆಗಿ ಹೋದಾಗೆಲ್ಲ

ನೆವದ ಗುಟ್ಟು ಮಾತ್ರ, ನಿಮಗೇ ಗೊತ್ತಿಲ್ಲದೆ, ಹಾರಿ ಬೆನ್ನು ಏರಿ ಕುಣಿವ ಬೇತಾಳ
ನಿಮ್ಮ ಬಾಗಿಲು ತಟ್ಟಿ, ಕುಟ್ಟಿ, ಜವರಾಯ ಒಂದಲ್ಲ, ಒಂದು ದಿನ ಹಾಕತಾನ ತಾಳ

ನೆವ ಆಗೊಂದು; ಈಗೊಂದು, ನೆವ ಬೇಕಾದಾಗ ಬೇಕೇ ಬೇಕೆಂದು ಮಾಡಿದ ಸಾಲ
ನೆವಕ್ಕೊಂದು ಕಾಲ; ಕಾಲರಾಯನಿಗೆ ಗೊತ್ತು ಬಂದೇ ಬರುವುದು ತನ್ನದೇ ಆದ ಕಾಲ

ನಿಮ್ಮ ಮನಸ್ಸಿನಲ್ಲಿ ಖರೆ, ಅವನು ನಿಮ್ಮನ್ನು ಮಾತ್ರವೇ ಎಳೆದು ಕೊಂಡು ಹೋಗ್ತಾನ
ಗೊತ್ತಿಲ್ಲ ಮಂಕು ನಿಮಗ ಅದಾವ ಮಾಯದಲ್ಲೋ ಬೇತಾಳ ಹಿಂದೆಯೇ ಸರಿದು ಬರ್ತಾನ

ನಿಮಗೆ ಗೊತ್ತಿರಲಿ, ನರಕದಾಗ ಇದೆ ಒಂದು ದೊಡ್ಡ ಕೋರ್ಟು; ಕೂತಿರ್ತಾರೆ ಮಂದಿ ಎಲ್ಲ
ಇದೂ ಗೊತ್ತಿರಲಿ, ನಿಮ್ಮ ಬೆನ್ನು ಹಿಡಿದ ಬೇತಾಳ ನೆಗೆದು ಕುಣಿದು ಹೇಳತಾನ ಗುಟ್ಟು ರಟ್ಟೆಲ್ಲ

ನಿಮ್ಮ ಮೈಮ್ಯಾಗಿಲ್ಲ, ಅಟ್ಟದಲ್ಲಿ ಬಚ್ಚಿಟ್ಟಿದ್ದ ಗುಟ್ಟಿನ ಕೋಟು; ಬ್ಯಾರೆ ಯಾವ ಹೊದುಕೆಯೂ ಇಲ್ಲ
ಬಾಯಿ ಬಡುಕನವ ಬೇತಾಳ, ಕಿಂಚಿತ್ತೂ ನಾಚಿಕೆಯೇ ಇಲ್ಲದವ, ಬಯಲು ಮಾಡ್ತಾನ ಬದುಕೆಲ್ಲ

ಕಟಕಟಿಯಲ್ಲಿ ನೀವು, ಬಡಿದಿದ್ದಾರೆ ಬಾಯಿಗೆ ಬೀಗ ದೊಡ್ಡದು, ಎಷ್ಟು ಕೂಗಿದರೂ ಉಸಿರೇ ಇಲ್ಲ
ನೀವು ಮಾತ್ರ ಬರೀ ಬೆತ್ತಲೆ; ನಿಮ್ಮದೆಲ್ಲಾ ಚೆನ್ನಾಗಿ ಕಾಣ್ತದ; ನೋಡಿ, ನೋಡಿ ನಗತದ ನರಕವೆಲ್ಲ

ಏನಂತೀರಿ? ನಿಮ್ಮ ಗುಟ್ಟಿನ ವಿಷಯ, ನಿಮ್ಮ ಅಟ್ಟದ ಗಂಟು ನಿಮ್ಮದೇ! ಅದೆಲ್ಲ ನಿಮಗೆ ಬಿಟ್ಟಿದ್ದು.
ಎಲ್ಲರ ಕಿಟಿಕಿ ಒಳಗೆ ಇಣುಕಿ, ಇಣುಕಿ ನೋಡಿ, ಅವರು ಮಾಡುವುದೆಲ್ಲಾ ಹಾಡುವ ಚಟ ನನಗೆ ಇಷ್ಟದ್ದು

ನಿಮ್ಮ ಮಾನದ ಚೆಂದವೆಲ್ಲಾ ನಾನು ದುರ್ಬೀನು ಹಾಕಿ ನೋಡಾಯಿತು, ನೋಡಿ, ನಕ್ಕು ಕುಣಿದಾಯಿತು
ಮತ್ತೆ, ಮತ್ತೆ, ನಾನು ಇಣುಕಿ ನೋಡಿದಾಗ, ಕತ್ತಲೆಯಲ್ಲೂ ನೀವು ಬೆತ್ತಲೆಯಲ್ಲೂ ಬೆಳಗುತ್ತಿದ್ದರೆ ಆಯಿತು!

ಶುಕ್ರವಾರ, ಆಗಸ್ಟ್ 20, 2010

ಕನ್ನಡ ಅಕ್ಷರ ಮಾಲೆಯನ್ನು ಮತ್ತೆ ಪೋಣಿಸಬೇಕೆ?

ಕನ್ನಡ ಅಕ್ಷರ ಮಾಲೆಯನ್ನು ಮತ್ತೆ ಪೋಣಿಸಬೇಕೆ?
ಕೆ. ಆರ್. ಎಸ್. ಮೂರ್ತಿ

ಕನ್ನಡ ಅಕ್ಷರ ಮಾಲೆಯನ್ನು ಮತ್ತೆ ಪೋಣಿಸಬೇಕೆ? ಇದರ ಬಗ್ಗೆ ಬರೆಯುವಂತಹ ಉಧ್ಧಟತನ ನನ್ನಲ್ಲಿ ಏಕೆ ಈಗ ಬಂದಿದೆ? ಬಹಳ ದಶಕಗಳಿಂದ ನನ್ನ ಮನಸ್ಸನ್ನು ಕೊರೆಯುತ್ತಿರುವ ದೊಡ್ಡ ಹುಳು ನನ್ನ ತಲೆಗೆ ದಿನ ರಾತ್ರಿ ಕಿರುಕುಳ ಕೊಡುತ್ತಿದೆ. ಈಗ ಧೈರ್ಯ ಮಾಡಿ ಬರೆದು ನನ್ನ ಹೃದಯದ ಆತಂಕವನ್ನು ನಿಮ್ಮೆಲ್ಲರ ಎದುರು ತೋಡಿಕೊಳ್ಳದಿದ್ದರೆ ನನ್ನ ಕನ್ನಡ ಆತ್ಮಕ್ಕೆ ಪಾಪದ ಹೊರೆ ಹೊರಲಾರದಷ್ಟು ಆಗಿಬಿಟ್ಟೀತು!

ನಾವೆಲ್ಲಾ ಕನ್ನಡ ಅಕ್ಷರ ಮಾಲೆಯನ್ನು ಬಾಲ್ಯದಿಂದಲೇ ಕಲಿತವರಲ್ಲವೇ? ಆದರೆ, ಯಾರು, ಯಾರು, ಯಾವ, ಯಾವ ಕಾಲದಲ್ಲಿ ಕನ್ನಡ ಅಕ್ಷರಗಳ ರೂಪ, ಅಕ್ಷರಗಳನ್ನು ಬರೆಯುವ ವಿಧಾನವನ್ನು ರೂಪಿಸಿ, ಈಗ ಸರಿಯಾಗಿದೆ ಎಂದು ನಿರ್ಧರಿಸಿದರೋ ನನಗೆ ಗೊತ್ತಿಲ್ಲ. ಅದೆಲ್ಲ ತಿಳಿದರೂ ಸುಮ್ಮನೆ ಚಾರಿತ್ರಿಕ ಸಂಶೋಧನೆ ಅಷ್ಟೇ ಅಲ್ಲವೇ? ಆದ್ದರಿಂದ, ನನ್ನ ಈ ಲೇಖನದಲ್ಲಿ ಈಗಿರುವ ಕನ್ನಡ ಅಕ್ಷರಗಳ ಬರಹ ರೂಪದ ಕೊರತೆಗಳನ್ನು ಗುರುತಿಸುತ್ತೇನೆ. ಇನ್ನೊಂದು ಬರಹದಲ್ಲಿ ಹಸ್ತ ಪ್ರತಿಯನ್ನು ತಯಾರಿಸಿ ನನ್ನ ಸಲಹೆಗಳನ್ನು ಬರೆಯುತ್ತೇನೆ.


ಕನ್ನಡದ ಅಕ್ಷರ ಮಾಲೆಯ ಕೊರತೆಗಳು:
ಸ್ವರ ವಿಭಾಗ

೧ ಸ್ವರ ವಿಭಾಗದಲ್ಲಿ ಹ್ರಸ್ವಾಕ್ಷರ ಮತ್ತು ದೀರ್ಘಾಕ್ಷರಗಳು ಕೆಲವು ಮಾತ್ರ ಬರಹ ರೂಪದಲ್ಲಿ ಒಂದನ್ನೊಂದು ಅನುಸರಿಸುತ್ತವೆ.
ಅನುಸರಣಿಕೆಯ ಉದಾಹರಣೆಗಳು: ಅ ಮತ್ತು ಆ; ಉ ಮತ್ತು ಊ; ಋ ಮತ್ತು ಇದರ ದೀರ್ಘ ರೂಪ (ಬಳಕೆಯಲ್ಲಿ ಇಲ್ಲವೇ ಇಲ್ಲ!), ಎ ಮತ್ತು ಎ; ಒ ಮತ್ತು ಓ

೨. ಅನುಸರಣಿಕೆ ಇಲ್ಲದ ಉದಾಹರಣೆ: ಇ ಮತ್ತು ಈ
ಮೂರ್ತಿಯ ಸಲಹೆ: ದೀರ್ಘವಾದ ಈ ಹ್ರಸ್ವವಾದ ಇ ಅನ್ನು ಅನುಸರಿಸುವ ಹಾಗೆ ರೂಪಿಸ ಬೇಕು. ಇ ರೂಪಕ್ಕೆ ದೀರ್ಘವನ್ನು ಸೊನ್ನೆಯ ರೂಪಕ್ಕೆ ಅದರ ಹೊಟ್ಟೆಯಲ್ಲಿ ಅಡ್ಡ ಗೆರೆ ಹಾಕುವುದರ ಬದಲು ಇ ಬರಹ ರೂಪಕ್ಕೇ, ಅದರ ಹೊಟ್ಟೆಯನ್ನು ಸೀಳೋ, ತಲೆಯ ಮೇಲೋ ದೀರ್ಘ ರೂಪವನ್ನು ರೂಪಿಸಬಹುದು. ಹೊಟ್ಟೆಯಲ್ಲಿ ಅಡ್ಡ ಗೆರೆ ಬರೆದಾಗ ಆ ರೂಪಕ್ಕೆ ಜಠರ ಗೆರೆ ಅನ್ನೋಣ

ಅನುಸ್ವರ ಮತ್ತು ವಿಸರ್ಗಗಳು ಅ ಕಾರದ ರೂಪವನ್ನು ಅನುಸರಿಸಿವೆ. ಇದಕ್ಕೆ ನನ್ನ ಸಲಹೆಯೇನೂ ಇಲ್ಲ.

ವ್ಯಂಜನಗಳು

ಡ ಮತ್ತು ಢ; ದ ಮತ್ತು ಧ; ಪ ಮತ್ತು ಫ; ಬ ಮತ್ತು ಭ ವ್ಯಂಜನಾಕ್ಷರಗಳು ಒಂದನ್ನೊಂದನ್ನು ಅನುಸರಿಸುತ್ತವೆ. ಡ ಗೆ ಅದರ ಪೃಷ್ಠದ ಮಧ್ಯೆ ಒಂದು ಗೆರೆಯನ್ನು ಎಳೆದಾಗ ಢ ಆಗುತ್ತದೆ. ಇದನ್ನು ನಾವು ಪೃಷ್ಠ ಗೆರೆ ಅನ್ನೋಣ. ಇದೇ ರೀತಿಯಲ್ಲಿ ಇತರ ವ್ಯಂಜನಾಕ್ಷರಗಳು ಅನುಸರಿಸುವುದಿಲ್ಲ


೧. ಕ ಮತ್ತು ಅದರ ಮಹಾ ಪ್ರಾಣವಾದ ಖ ಒಂದನ್ನೊಂದು ಅನುಸರಿಸುವುದಿಲ್ಲ.
ಮೂರ್ತಿಯ ಸಲಹೆ: ಕ ಅಕ್ಷರ ರೂಪಕ್ಕೆ ಕೆಳಗಿನ ದೊಡ್ಡ ಸೊನ್ನೆಗೆ ಮೇಲಿಂದ ಕೆಳಗೆ ಒಂದು ಪೃಷ್ಠ ಗೆರೆಯನ್ನು ಹಾಕಬಹುದು. ಇನ್ನೊಂದು ಸಲಹೆ: ಖ ವ್ಯಂಜನಾಕ್ಷರವನ್ನೇ ಅಲ್ಪ ಪ್ರಾಣವಾಗಿ ಮಾಡಿ, ಅದ್ಕಕ್ಕೆ ಒಂದು ಪೃಷ್ಠ ಗೆರೆಯನ್ನು ಎಳೆದು ಮಹಾ ಪ್ರಾಣ ರೂಪವನ್ನು ಮಾಡಬಹುದು.

೨. ಗ ಮತ್ತು ಘ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ಗ ವ್ಯಂಜನಕ್ಕೆ ಪೃಷ್ಠ ಇಲ್ಲದಿರುವುದರಿಂದ, ಮಧ್ಯೆ ಮೇಲಿಂದ ಕೆಳಗೆ ಗೆರೆಯನ್ನು ಎಳೆದು ಮಹಾ ಪ್ರಾಣವನ್ನು ರೂಪಿಸಬಹುದು.
ಇನ್ನೊಂದು ಸಲಹೆ: ಮಹಾ ಪ್ರಾಣವಾದ ಘ ವ್ಯಂಜನವನ್ನೇ ಅಲ್ಪ ಪ್ರಾಣವಾಗಿ ಉಪಯೋಗಿಸಿ, ಅದಕ್ಕೆ ಪೃಷ್ಠ ಗೆರೆಯನ್ನು ಎಳೆದು ಅದರ ಮಹಾ ಪ್ರಾಣವನ್ನು ರೂಪಿಸಬಹುದು.

೩. ಚ ಮತ್ತು ಛ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ಚ ವ್ಯಂಜನಕ್ಕೆ ಪೃಷ್ಠ ಗೆರೆ ಹಾಕಿ ಮಹಾ ಪ್ರಾಣವನ್ನು ರೂಪಿಸಿದರೆ ಆಯಿತು.

೪. ಜ ಮತ್ತು ಝಾ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ಜ ವ್ಯಂಜನಕ್ಕೆ ಪೃಷ್ಠ ಗೆರೆ ಹಾಕಿ ಮಹಾ ಪ್ರಾಣವನ್ನು ರೂಪಿಸಿದರೆ ಆಯಿತು.

೫. ಟ ಮತ್ತು ಠ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ಟ ವ್ಯಂಜನಕ್ಕೆ ಪೃಷ್ಠ ಗೆರೆ ಹಾಕಿ ಮಹಾ ಪ್ರಾಣವನ್ನು ರೂಪಿಸಿದರೆ ಆಯಿತು.

೬. ತ ಮತ್ತು ಥ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ತ ವ್ಯಂಜನಕ್ಕೆ ಪೃಷ್ಠ ಗೆರೆ (ಅಥವಾ ಹೊಟ್ಟೆಗೆ ಮೇಲಿಂದ ಕೆಳಗೊಂದು ಗೆರೆ) ಹಾಕಿ ಮಹಾ ಪ್ರಾಣವನ್ನು ರೂಪಿಸಿದರೆ ಆಯಿತು.

೭. ಕ, ಚ, ಟ, ತ, ಪ ಸರಣಿಯಲ್ಲಿನ ಐದನೇ ಅಕ್ಷರಗಳಲ್ಲಿ ಣ, ನ, ಮ ಗಳನ್ನು ಮಾತ್ರ ಈಗ ಕನ್ನಡದಲ್ಲಿ ಬಳಕೆಯಲ್ಲಿದೆ. ಚ ಸರಣಿಯ ಐದನೇ ಅಕ್ಷರವನ್ನು ಜ್ಞ ರೂಪದಲ್ಲಿ ಮಾತ್ರ ಬಳೆಸುತ್ತೇವೆ.
ಆದರೆ, ಕ ಸರಣಿಯ ಐದನೇ ಅಕ್ಷರವನ್ನು ನಾವು ಈಗ ಬಳಸುವುದೇ ಇಲ್ಲ. ಹಿಂದಿನ ಕಾಲದಲ್ಲಿ, ಮಂಗಳ ಎಂದು ಬರೆಯುವಾಗ ಸೊನ್ನೆಯ ಬದಲು ಉಪಯೋಗಿಸುತ್ತಿದ್ದರು.

ಇದಕ್ಕೆ, ನಿಮ್ಮ ಸಲಹೆ ಏನು?

೮. ಈಗ, ಅವರ್ಗೀಯ ವ್ಯಂಜನಗಳಿಗೆ ನನ್ನ ಸಲಹೆಗಳೇನೂ ಇಲ್ಲ. ಆದರೆ, ಹ ಅಕ್ಷರದ ಒಂದು ಕಿರು ರೂಪ ಅಥವಾ ವಿಶೇಷ ರೂಪವನ್ನು ನನ್ನ ಮುಂದಿನ ಲೇಖನದಲ್ಲಿ ಬರೆದು ವಿವರಿಸುತ್ತೇನೆ. ಸಲಹೆಯ ಸೂಕ್ಷ್ಮ ಗುಟ್ಟು ಹೀಗಿದೆ:

ಇಂಗ್ಲೀಷಿನಲ್ಲಿ h ಆಕ್ಷರವನ್ನು k, g, j, t, d, c, p, b ಅಕ್ಷರಗಳನ್ನು h ಬೆರೆಸಿ ಮಹಾಪ್ರಾಣದ ಧ್ವನಿ ಬರುವ ಹಾಗೆ, ಕನ್ನಡದಲ್ಲೂ, ಹ ಅಕ್ಷರದ ಇನ್ನೊಂದು ಕಿರು ರೂಪವನ್ನು ಉಪಯೋಗಿಸಿ, ಅಲ್ಪದಿಂದ ಮಹಾ ಪ್ರಾಣಗಳನ್ನು ಮಾಡಿ ಬಿಡಬಹುದು. ಈ ರೀತಿಯಲ್ಲಿ ಮಾಡಿದಾಗ, ಕನ್ನಡದಲ್ಲಿ ಹತ್ತು ಮಹಾ ಪ್ರಾಣ ವ್ಯಂಜನಗಳನ್ನು ಕಡಿಮೆ ಮಾಡಬಹುದು.


ನನ್ನ ಕೋರಿಕೆ: ನಾವೆಲ್ಲರೂ ನಮ್ಮ ಮಡಿವಂತಿಕೆಯನ್ನು ಸ್ವಲ್ಪ ಹದದಲ್ಲಿ ಇಟ್ಟುಕೊಂಡರೆ, ಕನ್ನಡ ಅಕ್ಷರ ಮಾಲೆಯು ನಮ್ಮ ಮುಂದಿನ ಪೀಳಿಗೆಗಳಿಗೆ ಬಹಳ ಸುಲಭವಾಗುತ್ತದೆ. ಕನ್ನಡ ಅಕ್ಷರ ಮಾಲೆಯು ಹಿಂದೆಯೂ ಬದಲಾವಣೆಯಾಗಿದೆ. ಈಗ ಸ್ವಲ್ಪ ಪರಿವರ್ತನೆ ಮಾಡುವುದರಲ್ಲಿ ತಪ್ಪಿಲ್ಲ.

ಗುರುವಾರ, ಆಗಸ್ಟ್ 19, 2010

ಯಾವುದು ಸರಿ?

ಯಾವುದು ಸರಿ?
ಕೆ. ಆರ್. ಎಸ್. ಮೂರ್ತಿ

ಅದಕ್ಕೆ ಇದರ ಕೀರ್ತಿ; ಇದಕ್ಕೆ ಬರೀ ಮಂಗಳಾರಾತಿ
ಅದಕ್ಕೆ ಅಲಂಕಾರದ ನಾಮ; ಇದಕ್ಕೆ ದೊಡ್ಡ ಪಂಗನಾಮ

ಅದೂ, ಇದೂ ಅದಲು ಬದಲು; ಅದಲ ಲಾಭ ಬದಲಿನ ಪಾಲು
ನಿಮಗ್ಯಾಕರೀ ಇಲ್ಲದ ವ್ಯಥೆ? ಯಾರಿಗೆ ಏನು ಕೊಟ್ಟರೆ ಏನಾತು?

ಕತ್ತೆಗಳು ಕುದುರೆಗಳಾದುವು, ಕುದುರೆಗಳಿಗೆ ಕತ್ತೆಯ ನಾಮಧ್ಯೇಯ ದೊರಕಿತು
ಇರೋದೇ ಹಾಗರೀ ಪ್ರಪಂಚದ ಪರಿ; ಅದಕ್ಕೆ, ನಿಮ್ಮ ತಲೆಯೊಳಗ್ಯಾಕರೀ ಕಿರಿ ಕಿರಿ?

ಇದ್ಯಾವ ನ್ಯಾಯ ನೀವು ಹೇಳೋದು? ಬೀದಿ ನಾಯೀನೂ ಒಂದೆ; ಅಂಬಾರಿ ಆನೆನೂ ಒಂದೆ!
ಬೊಗಳೋರು ಯಾರು? ಗಂಭೀರ ಯಾರದು? ಬೊಗಳೀ, ಬೊಗಳೀ ಸುಸ್ತು ಯಾರಿಗೆ?

ನೋಡೀ, ನೋಡೀ ಸುಮ್ಮನೆ ಕೂತಿರೋಕ್ಕೆ ಸರಿಯಾ? ಇದು ಸರಿಯಲ್ಲ, ಅದೂ ಅಲ್ಲಾಂತ ಹೇಳಲೇ ಬೇಕು
ನೋಡೊದಲ್ಲದೆ ಕೋತೀ ತರಹ ಎಗರೋದೆ! ಅದೂ ಸರಿಯಿಲ್ಲ, ಇದಂತೂ ಇಲ್ಲಾಂತ ನಿಮಗ್ಯಾಕೆ ಬೇಕು?

ಇಂತದೆಲ್ಲ ನೋಡಿ ಕೊಂಡು ಕಣ್ಣು ಬಿಚ್ಚಿ ಸುಮ್ಮನಿರೋದು ಯಾತರ ನಾಯ? ಇದೊಂದೂ ಅರ್ಥ ಆಗ್ತಾ ಇಲ್ಲ
ಇದೆಲ್ಲಾ ಒಂದು ತರಹ ಕಾಡು; ಯಾರನ್ನು ಯಾರು ತಿಂತಾರೆ, ಯಾರಿಗೆ ಯಾರು ಆಗ್ತಾರೆ ಅನ್ನೋದೇ ಇಲ್ಲ.

ಸೋಮವಾರ, ಆಗಸ್ಟ್ 16, 2010

ಇದೆಂತಹ ಆಟ!

ಇದೆಂತಹ ಆಟ!
ಕೆ. ಆರ್. ಎಸ್. ಮೂರ್ತಿ

ಕಣ್ಣು ಮುಚ್ಚಾಲೆಯ ಗುಟ್ಟಿನ ಆಟವಿದ್ಯಾಕೋ
ಬಚ್ಚಿ ಕೊಂಡವನ ಹುಡುಕುವುದಿನ್ನು ಸಾಕೋ

ಆಡುವ ಮಕ್ಕಳು ನಮಗಂತೂ ಗೊತ್ತೇ ಇಲ್ಲ
ಅಜ್ಜಿಗಂತೂ ಕಿಂಚಿತ್ತೂ ಕಣ್ಣು ಕಾಣುವುದಿಲ್ಲ

ಬಚ್ಚಿ ಕಗ್ಗತ್ತಲೆಯಲ್ಲಿ ಎಲ್ಲೆಲ್ಲಿ ಅಡಗುವೆಯೋ
ಹೆಜ್ಜೆ ಗುರುತನ್ನೂ ಅಳಿಸಿ ಹೇಗೆ ಓಡಿದೆಯೋ

ಅತ್ತಿತ್ತ, ಮತ್ತೆ ಮತ್ತೆ ತಡಕಿ ಸಾಕಾಗಿದೆಯೋ
ಅತ್ತು, ಅತ್ತು, ಬಿಕ್ಕರಿಸಿ ಕೂಗಿಯಾಗಿದೆಯೋ

ನಾನೊಬ್ಬನೇನಲ್ಲ, ಎಲ್ಲರೂ ಹುಡುಕಿಯಾಯಿತು
ಕೋಟಿ ಕೋಟಿ ಜನ ಕಾಣದೇ ತೆರಳಿದುದಾಯಿತು

ಎಂತು ಹುಡುಕಿದರೂ ಸಿಗದೇ ಇದ್ದರೆಂತಹ ಆಟ
ನ್ಯಾಯವೆಲ್ಲವೂ ಮರೆತಿರುವ ಅಜ್ಜಿಗೆಂತಹ ಕಾಟ

ಬಾಬೇಗಲೇ! ಕಣ್ಣಲ್ಲಿ ಕಣ್ಣಿಟ್ಟು ಬಿಡುವ ಒಮ್ಮೆಯಾದರೂ
ನೀನು ನಿಜವೋ ನಿನ್ನಾಟ ಸರಿಯೋ ಕಡೆಗೆ ಇಂದಾದರೂ

ನಿನಗೇ ಬೇಕಿದ್ದರೆ ಬಾ; ನೀನೇ ಹುಡುಕಿ ಬಾ ಆತಂಕದಲಿ
ಮರೆಸಿ ಮಾಚಿ ಓಡಿ ಅಡಗುವೆ ಈಗಲೇ ಗುಟ್ಟಿನ ತಾಣದಲಿ

ಶುಕ್ರವಾರ, ಆಗಸ್ಟ್ 13, 2010

ಅದಲು ಬದಲು ಆಗೊಣವೇ?

ಅದಲು ಬದಲು ಆಗೊಣವೇ?
ಕೆ. ಆರ್. ಎಸ್. ಮೂರ್ತಿ

ನಾನು ನೀನಾಗಿ, ನೀನು ನಾನಾಗಿ ಬಾಳಬಹುದೇ?
ನನ್ನ ದೇಹದೊಳು ನೀನು, ನಿನ್ನಲ್ಲಿ ನಾನು ಇರಬಹುದೇ?

ನನ್ನ ಹಣೆಯ ಬರಹವನು ನೀನು ಸಹಿಸಲು ಬಹುದೇ?
ನಿನ್ನ ಪಾಪಕರ್ಮದ ಫಲವಗಳನು ನಾನೀಗ ಬಹುದೇ?

ನಿನ್ನ ಕುಗ್ರಾಮವು ನನಗಿರಲಿ ಸಾಕು, ನಾನಾಳಬಹುದು
ನನ್ನ ರಾಜ್ಯದ ಚಕ್ರವರ್ತಿಯಾಗಿ ನೀನಾಗಿ ಮೆರೆಯಬಹುದು

ನನ್ನ ರಾಣಿಯರೆಲ್ಲ ನಿನ್ನದಾಗುವರು, ಪ್ರೇಮದಿ ನಿನ್ನ ಸೇವಿಪರು
ನನ್ನ ಸಿಂಹಾಸನದಲಿ ನೀನಿರುವಾಗ ರಾಜ ಗಣವೆಲ್ಲ ನಮಿಪರು

ನನಗೆ ಸೈರಂಧ್ರಿಯ ಒಲವು ಒಂದಿದದ್ದರೆ ದಿನ ರಾತ್ರಿ ಮೆರೆವನು
ಅವಳಿಗೆ ನನ್ನ ತೊಡೆಯನೇ ಸಿಂಹಾಸನವಾಗಿ ಮಾಡಿ ಮೆರೆವೆನು

ಜಗದೇಕ ಸುಂದರಿಯು ನನ್ನವಳಾಗಿರುವಾಗ ಇನ್ನೇನು ಬೇಕು?
ನಾವಿಬ್ಬರೂ ಹಗಲಿರುಳು ಒಂದಾಗುತ ಸ್ವರ್ಗದಲೇ ಇರಬೇಕು

ಅತಿಯೂ, ಅತ್ತತ್ತವೂ ನಮದಲ್ಲ

ಅತಿಯೂ, ಅತ್ತತ್ತವೂ ನಮದಲ್ಲ
ಕೆ. ಆರ್. ಎಸ್. ಮೂರ್ತಿ

ಕಲ್ಲಿಲ್ಲ, ಮುಳ್ಳಿಲ್ಲ, ಹೂವಿನಾ ಹಾಸಿಗೆಯು ಹಾಸಿಲ್ಲವೇ ಇಲ್ಲ
ಬರಡಲ್ಲ, ಕೊರಡಲ್ಲ, ಹಾಲಿನಾ ಸಾಗರವಂತೂ ಇಲ್ಲಿ ಹರಿದಿಲ್ಲ

ಗುಡಿಸಲಿದಲ್ಲ, ಕೊಂಪೆಯಿದಲ್ಲ, ಮೆರೆವ ಅರಮನೆಯೂ ಇದಲ್ಲ
ಗಬ್ಬು ಮಲದ ನಾಥವಿಲ್ಲಿಲ್ಲ, ಮರಿಮಳದ ಕಾರಂಜಿಯೂ ಚಿಮ್ಮಿಲ್ಲ

ಖಾಲಿ ಮಡಕೆಯೂ ಇಲ್ಲಿಲ್ಲ, ಭಾರಿ ಭೋಜನವೂ ಇಲ್ಲಿ ಸಿಗುವುದಿಲ್ಲ
ಕುನ್ನಿಗಳ ಕರ್ಕಶವಿಲ್ಲ, ಗಾನ ಗಂಧರ್ವರ ಸಕಲ ವಾದ್ಯಗಳ ಹಾಡಿಲ್ಲ

ಕಡು ಬಡತನದ ಪಾಡಲ್ಲ ನಮ್ಮದು, ಸಿರಿತನದ ಸಂತಸವೂ ಇಲ್ಲ
ಅದಃ ಪಾತಾಳವಿದಲ್ಲ, ಸೂರೆ ಸುರ ಸ್ವರ್ಗವಂತೂ ನಮ್ಮ ಪಾಲಲ್ಲ

ಅತಿ, ಅತಿ, ಯಾವುದೂ ನಮಗೆ ದೊರಕಿಲ್ಲ, ಅದರ ಹಂಬಲ ಬೇಕಿಲ್ಲ
ಸಮತೋಲನ, ಸಮಭಾವನ, ಸಮಜೀವನದ ತಿಳಿಗುಟ್ಟು ನಮದೆಲ್ಲ

ಮೊದಲ ದೇವರು

ಮೊದಲ ದೇವರು
ಕೆ. ಆರ್. ಎಸ್. ಮೂರ್ತಿ

ಎಮ್ಮೆಲ್ಲರ ಕನಸಿನಲಿ ಕಂಡೆ, ಗುಂಡಿಗೆಯಲಿ ಹೊಕ್ಕಿಸಿಕೊಂಡೆ

ಒಂದಲ್ಲ, ಎರಡಲ್ಲ ಒಂಬತ್ತು ತಿಂಗಳು ನಡೆದೆ ಹೊತ್ತುಕೊಂಡೇ


ಹಾಲು, ಪರಮಾನ್ನದ ಅಮೃತದ ಸಮಾರಾಧನೆ ಹೊತ್ತು, ಹೊತ್ತಿಗೆ

ತುಸು ನಿದ್ದೆ ಬಂದೊಡನೆಯೇ ಮಲಗಲು ಸದಾ ಸಿಧ್ಧ ಹಾಯಿ ಹಾಸಿಗೆ


ನಾವು ತುಸು ನಕ್ಕಾಗ ನಿನಗಾದ ಆನಂದಕ್ಕೆ ಕಿಂಚಿತ್ತೂ ಮಿತಿಯಿರಲಿಲ್ಲ

ಕನಿಕರದಿ ಕರಗುತಿತ್ತು ನಿನ್ನ ಗುಂಡಿಗೆ ನಾವು ಸ್ವಲ್ಪವೇ ಅತ್ತಾಗಲೆಲ್ಲ


ದೂರ ದೇಶಕ್ಕೆ ನಾನಂದು ಹೊರಟು ನಿಂತಾಗ ಬಹಳ ಸಂಭ್ರಮದಲ್ಲಿ

ನಿನಗೂ ಆನಂದವಾದರೂ, ಕಂಡೆ ಒಂದೆರಡು ಹನಿ ನಿನ್ನ ಕಣ್ಣಂಚಿನಲ್ಲಿ


ನೀನೀಗ ಹೊರಟು ಬಿಟ್ಟೆ ನಮ್ಮೆಲ್ಲರ ಹಿಂದೆಯೇ ಬಿಟ್ಟು, ಬಹು ದೂರ ದೂರ

ನೀನಿಲ್ಲದೀ ಊರೀಗ ಬಹಳ ಬೇರೆ, ಬೇರೆ; ದುಡುಕು ಮನ ನೊಂದಿದೆ ಅಪಾರ


ಎಮ್ಮ ಹೆತ್ತು, ಹೊತ್ತೆ, ಪೊತ್ತೆ; ನಿನ್ನ ನೆನಪಿನ ಹರಕೆ ಇರಲಿ ನಮಗೆಲ್ಲಾ

ನಿನ್ನ ಬಿಂಬವ ಕಾಣುವೆವು ತಾಯೇ ನಮ್ಮ ಮಕ್ಕಳ, ಮೊಮ್ಮಕ್ಕಳ ಕಣ್ಗಳಲೆಲ್ಲಾ


ನಾವೂ, ನಿನ್ನ ಮೊಮ್ಮಕ್ಕಳೂ ದಿನ ದಿನವೂ ನಡೆದಾ ಹಾದಿಯಲೆಲ್ಲ ಇರಲಿ ಸದಾ

ನಿನ್ನ ನಗೆಯೇ ನಮಗೆ ದಾರಿ ದೀಪ; ಕಾಯುವುದು ಅಭಯ ಹಸ್ತದ ಆಶೀರ್ವಾದ

ಗುರುವಾರ, ಆಗಸ್ಟ್ 12, 2010

ಏನೆಲ್ಲಾ ಬೇಕು?

ಏನೆಲ್ಲಾ ಬೇಕು?
ಕೆ. ಆರ್. ಎಸ್. ಮೂರ್ತಿ

ಪೇಳು ತನುವೇ ನಿನಗೇನೆಲ್ಲ ಬೇಕು,
ನಾಚುವುದೇತಕೆ ಚಾಚು ನಾಲಗೆಯ,
ಅದಗಿಸಿಹ ನಿನ್ನ ಹಂಬಲಗಳನು.
ಹಸಿದ ಹೊಟ್ಟೆಯೋ?
ತುಪ್ಪದಲಿ ಅದ್ದಿದ ರೊಟ್ಟಿಯೋ?
ಹೊಟ್ಟೆಗೆ ಭಾರ ತರಿಸುವ ಭಾರಿ ಔತಣವೋ?

ಕೇಳು ಮನವೇ ಬೇಕಾದುದನೆ, ಸಾಕಷ್ಟು.
ಬಿಚ್ಚಿ ಪೊಗಳು, ಮುಚ್ಚಿಟ್ಟ ಇಷ್ಟಗಳೆಲ್ಲವನು.
ಚಿಂತನೆಯ ಮನೋಭಾವವೋ?
ಕಾಡುವ ಕಾರ್ಪಣ್ಯಗಳ ಹೊಣೆ ಭಾರವೋ?
ಸದಾ ಶಾಂತತೆಯ ವರವನ್ನೋ?
ಇತರರ ಬೈಯುವ ದೆವ್ವವಾಗುವುದೋ?

ಇದ ಕೊಡಿಸಬಲ್ಲೆ ನಿನಗೆ, ಒಮ್ಮೊಮ್ಮೆ ಮಾತ್ರ:
ಗೆಲುವಿನ ಬೆಲ್ಲದುಂಡೆ, ಜಯದ ಕಜ್ಜಾಯ, ಸಾಹಸದ ಪಾಯಸ
ವೀರ್ಯದ ಖೀರು, ಒಗ್ಗಟ್ಟಿನ ಒಬ್ಬಟ್ಟು, ಕಳಕಳಿಯ ಕಡಲೆ ಕಾಯಿ,
ದಾನವನು ಕೊಟ್ಟಾಗ ಹೃದಯಕ್ಕಾಗುವ ಪರಮಾನ್ನ,
ದಯವಿಟ್ಟಾಗ ದೊರೆಯುವ ಧಮ್ರೋಟು, ಚಿರೋಟಿ
ಕೈ ಕೆಸರಾದರೆ ಸಿಗುವ ಗಟ್ಟಿ ಕೆನೆ ಮೊಸರನ್ನ

ಬಲು ಜಾಣ! ಈಗ ನೀನೇ ಹೇಳು:
ಏನು ಮಾಡಿದರೆ, ಯಾವಾಗ ಇವೆಲ್ಲ ದೊರೆಯುತ್ತದೆ?
ಮೈಸೂರು ಪಾಕು, ಬಾದಾಮಿ ಹಲ್ವ, ಸಿಹಿ ಫೇಡ, ಲಾಡು ಉಂಡೆ?
ನಿನಗೆ ಖಾರದ ರುಚಿ ಹೆಚ್ಚಿದ್ದರೆ:
ಬಿಸಿ ಬೇಳೆ ಹುಳಿಯನ್ನ, ಎಳ್ಳು ಪುಡಿ ಚಿತ್ರಾನ್ನ,
ಚಟ್ನಿ ಪುಡಿ, ಉಪ್ಪಿನ ಕಾಯಿ, ಬಾಳಕದ ಮೆಣಸಿನ ಕಾಯಿ,
ವಡೆ, ಅಂಬೋಡೆ, ಬೋಂಡ, ಜೊತೆಗೆ ಬಹು ವಿಧದ ಚಟ್ನಿ
ಇದನರಿತವ ನಿನಗೆ ತನು ಕೇಳಿದ್ದು, ಮನ ಬೇಡಿದ್ದು ಖಂಡಿತ

ಬುಧವಾರ, ಆಗಸ್ಟ್ 11, 2010

ಡಾಕ್ಟರ್ ಮೂರ್ತಿ ನುಡಿದಂತೆ:

ಡಾಕ್ಟರ್ ಮೂರ್ತಿ ನುಡಿದಂತೆ:

ಕನ್ನಡ ನುಡಿಯಾಡಿದೊಡನೆ ಹಾಡಿದಂತೆಯಲ್ಲವೇ

ಕನ್ನಡಿಯಲ್ಲಿ ಕಾಣುವವರು ಬೇರೆ ಬೇರೆ: ಗಾಜಿನ ಹಿಂದೆ ಇರುವ ಬಿಂಬ ಅತಿ ಸುಂದರ ಬೊಂಬೆ; ಮನದೊಳಗಿನ ಬೊಂಬೆಗೆ ಹತ್ತಾರು ಅವತಾರ; ಇತರರಿಗೆ ಇರಬಹುದೇನೋ ಅತ್ತತ್ತ!

ಎದೆಯೊಳಗಿನ ಕೋಗಿಲೆ ಒಡನೆ ಹಾಡಿತು ಗುಪ್ತ ಗಾನ: ನೀನು ನೀನಲ್ಲ; ಆನೇ ಎಲ್ಲ.

ಅವರ ಕಂಡು ಉರಿದು, ಇವರ ಕಂಡು ತುರಿಸಿ, ಅವರಿವರ ಕಂಡು ನಕ್ಕುತ ಇರುವುದ ಬಿಡು; ಸರಿ ಇರುವ ಪರಿ ಕಂಡುಕೊ.

ಅಸಮಾನ ಮಾನಸಿ

ಅಸಮಾನ ಮಾನಸಿ
ಕೆ. ಆರ್. ಎಸ್. ಮೂರ್ತಿ

ನೀನಡೆವಾ ಅಡಿಯಲೆಲ್ಲ ರಂಗೋಲೆ ಪುಡಿ ಹಾಸುವುದು
ನಿನ್ನ ತುಟಿ ಬಿರಿದಾಗ ಕೋಗಿಲೆ ಕುಲವೆಲ್ಲ ಅನಿಕರಿಸಿತು

ನಿನ್ನ ಕೆನ್ನೆ ಕೆಂಪಾದಾಗ ತಾವರೆಯು ಅಂತೆಯೇ ಅರಳಲು
ನಿನ್ನ ಕಣ್ಣು ಹಾಯಿಸಿದೆಡೆಯಲೆಲ್ಲಾ ಕೆಂಗುಲಾಬಿ ಚಿಗುರಲು

ನಿನ್ನ ರೂಪವ ನೋಡಿದೊಡನೆಯೇ ಊರ್ವಶಿಯೂ ದಂಗಾಗಿ
ಮೇನಕೆ, ರಂಭೆಯರು ಮರುಗಿದರು ಬ್ರಹ್ಮನನು ಮೊರೆಹೋಗಿ

ನಿನ್ನ ಹೆಸರೇನು? ನಿನ್ನ ಮೇಲೆನ್ನ ಮನಸಾಗಿದೆ ಸರಸಾಂಗಿ
ಮನಸಿಜಳೆನ್ನಲೇ? ಕನಸಿನಲಿ ಬಂದವಳು ಇರು ನನಸಾಗಿ

ಟಿಪ್ಪೆಲ್ಲಿ ಇಲ್ಲ ನೀವೇ ಹೇಳಿ

ಟಿಪ್ಪೆಲ್ಲಿ ಇಲ್ಲ ನೀವೇ ಹೇಳಿ
ಕೆ. ಆರ್. ಎಸ್. ಮೂರ್ತಿ

ಟಿಪ್ಪಿಲ್ಲಿ, ಟಿಪ್ಪಲ್ಲಿ, ಟಿಪ್ಪು, ಟಿಪ್ಪು, ಟಿಪ್ಪು
ಅಲ್ಪ ಸ್ವಲ್ಪ ನಕ್ಕರೆ, ಸ್ವಲ್ಪ ಹೆಚ್ಚು ಟಿಪ್ಪು

ನಕ್ಕವಳು ಸಕ್ಕರೆಯ ನಗೆ ಬೆರೆಸಿ ಉಪ್ಪು
ತಂದು ಕೊಟ್ಟರೆ ಸಕ್ಕರೆಗಿಂತ ಇನ್ನೂ ಟಿಪ್ಪು

ನಿಮ್ಮ ಕಡೆ ಬಗ್ಗಿ, ಸ್ವರ್ಗ ತೋರಿಸಿದರೆ ಸಾಕು
ಕಣ್ಣಿಗಾನಂದ; ಕನ್ಯೆಗೆ ಇನ್ನಷ್ಟು ಟಿಪ್ಪು ಹಾಕು

ಅತ್ತ ಕಡೆ ಬಗ್ಗಿದರೂ ಅದೇ ಬೇರೆಯ ಆನಂದ
ಸುಂದರ ಕನ್ಯೆಯು ಏನು ಮಾಡಿದರೂ ಅಂದ

ನೋಡಿ, ನೋಡಿ ಬಾಯಾರಿದರೆ ಕೇಳಿ ವೈನು
ವೈಟೋ, ಪಿಂಕೋ, ಅವಳಿಗೆ ಹೊಡೆಯಿರಿ ಲೈನು

ಅವಳ ಉತ್ತರ ಏನೇ ಇರಲಿ ನಿಮ್ಮ ಕೆನ್ನೆ ಕೆಂಪು
ಗೊತ್ತವಳಿಗೆ ನೀವೆಲ್ಲದಿಕ್ಕೂ ಒಡನೆ ಆಗುವಿರಿ ಬೆಪ್ಪು

ಮೈಕಾವೂ, ಟಿಪ್ಪೂ ಏರಿ, ಏರಿ ನಿಮ್ಮ ಜೇಬು ಖಾಲಿ
ಮನೆಗೆ ಕಾಲಿಟ್ಟರೆ ಹೆಂಡತಿ ಕಿವಿ ಹಿಂಡುವಳು ವಾಚಾಳಿ

ಶನಿವಾರ, ಆಗಸ್ಟ್ 7, 2010

ಕಲ್ಪನೆಯೇ ಕಲ್ಪತರು, ಕಾಮಧೇನು

ಕಲ್ಪನೆಯೇ ಕಲ್ಪತರು, ಕಾಮಧೇನು
ಕೆ. ಆರ್. ಎಸ್. ಮೂರ್ತಿ

ಮೇಲಿಂದ ಮೇಲೆ, ಅಲೆಯ ಹಿಂದೊಂದು ಅಲೆ, ಉಬ್ಬಿ, ಹಿಗ್ಗಿ, ಬರುತಲಿದೆ ಸಲಿಲ
ಕಲ್ಪನೆಯ ಮೇಲೆ ಮತ್ತೊಂದು ಮರುಕಲ್ಪನೆ; ಒಂದಕ್ಕಿಂತ ಹಿರಿದು ಲೀಲಾಜಾಲ

ಬಲೆಯಲಿ ಹಿಡಿವುದುಂಟೇ? ಇರುವ ಐವತ್ತೆರಡು ಅಕ್ಷರದ ಬಲೆಯಲ್ಲಿ ಬರೀ ತೂತು
ಕವಿಯ ಕಲೆಯು ಸಾಲದು, ಭುವಿಯ ಕವಿ ಕುಲವೇ ಸಾಲು, ಸಾಲು ಬಂದು ನಿಂತು

ಕುಂಚದ ಕಲೆಗೂ ಕಿಂಚಿತ್ತೂ ಎಟುಕದು; ಕಲ್ಲಿನಲ್ಲಿ ಅಲೆಯಲೆಯ ಸಾಲುಗಳ ಕೆತ್ತಲಾಗದು
ನಾರದ, ಕಿನ್ನರ, ತುಂಬುರ, ಗಾನ ಗಂಧರ್ವರ ಕೊರಳು ಭೋರ್ಗರೆಯ ಪಾಡಲಾಗದು

ಕಲ್ಪನಾ ವಿಲಾಸವು ಒಲಿದು ಇತ್ತ ಹಾಯಿ, ದೇವ ಲೋಕದ ಅನುಭವವನೇ ನಾಚಿಸಿದೆ
ಅಲ್ಪವಾದರೂ ಸಾಕಿದೇ ವರ, ಕಲ್ಪತರು, ಕಾಮಧೇನುಗಳು ಇನ್ನೇಕೆ ಬೇಕು ಎನ್ನಿಸುತಿದೆ

ನಿನ್ನೆಯ ಸೆರೆಮನೆ

ನಿನ್ನೆಯ ಸೆರೆಮನೆ
ಕೆ. ಆರ್. ಎಸ್. ಮೂರ್ತಿ

ನಿನ್ನೆಗೆ ಹೊಗಾಯಿತು; ಮೊನ್ನೆಯ ಹಂಬಲು ಹಂಪಲು ಹಣ್ಣೆಲ್ಲ ತಿಂದಾಯಿತು.
ಹಿಂದಿನ ಹಳಸಿದ ಹುಳಿಯನ್ನವನ್ನು ಕಬಳಿಸುತಲಿ ತಿಂದು ವಾಕರಿಸಿಯಾಯಿತು.

ಭೂತದ ಕನ್ನಡಿಯಲ್ಲಿ ಹುದುಗಿ ಹೋದ ಕಾಂಚನಕ್ಕೆಲ್ಲ ತೀರದಷ್ಟು ಆಶಿಸಿ
ಮೊನ್ನೆಯ ಸೊನ್ನೆಗೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟು, ಕೈಗೆಟುಕದ ಕನ್ನೆಯನ್ನು ಮುದ್ದಿಸಿ

ಕನಸಿನಲಿ ಕಲ್ಪನೆಯ ಅರಮನೆ ಕಟ್ಟಿ, ದಟ್ಟ ಮೀಸೆಯನೇ ಹೊಸೆದು ಜರೆದಾಯ್ತು
ಮೈಮೇಲೆ ನೂರಾರು ನೀರೆಯರ ಕೂರಿಸಿ, ಸಾವಿರ ವೀರ್ಯ ಪಾತದಲಿ ಮೆರೆದಾಯ್ತು

ರಾವಣನ ಸಿಂಹಾಸನದಲಿ ಕೆಲ ವರುಷ, ದುಶ್ಯಾಸನನ ಆಸೆಯಲಿ ಮೆರೆಯುತ ಮಿಕ್ಕೆಲ್ಲ
ನಿಯೋಗಿ ಭೋಗದಲಿ ಭೂಮಿಯನು ಸುತ್ತಲೆದು, ಅಂದಾಯ್ತು "ಆ ಕಂದನು ನನ್ನದಲ್ಲ"

ಕಾವಿಯೊಳಗೆ ಕಳ್ಳ ಸ್ವಾಮಿಯಾಗಿ ನೀನ್ನೆಲ್ಲರ ಹೊನ್ನನು ಹೊತ್ತು, ಹಳ್ಳದಲಿ ಹೂತು
ದೂರಿನ ಬಿರುಗಾಳಿಗೆ ಸಿಕ್ಕಿ, ಕಾವಿಯ ಗುಟ್ಟೆಲ್ಲವೂ ತೂರಿ ಆಗಸಕೆ ಹಾರಿಹೋಗಾಯ್ತು

ಕತ್ತಲೆಯಲಿ ಅತ್ತಾಯ್ತು, ಮತ್ತದಕೆ ಮೊಸಳೆಯ ಕಣ್ಣೀರನು ಧರಧರನೆ ಸುರಿಸಾಯ್ತು
ಜಗವೆಲ್ಲ ನಗುತಿರಲು, ಬೆತ್ತಲೆಯ ವ್ರತವನ್ನೇ ತೊಟ್ಟಿಹೆನೆನ್ನುತ್ತ ಎಲ್ಲೆಲ್ಲೂ ಅಲೆದಾಯ್ತು

ಸಾಲದೇ ಇನ್ನೂ ಕಳೆದ ದಿನಗಳ ಸೆರೆಮನೆಯ ವಾಸ? ಬಾರೆಲೇ ಮನವೆ ಇಂದಿಗೆ ಇದೀಗಲೇ
ಅತ್ತಿತ್ತ ನೋಡದಿರು, ಮತ್ತೆ ಹೊರಳಾಡದಿರು, ಹೊಸ ಉಸಿರಿನಲಿ ಸೊಗಸು ಕಾಣುವುದು ಭಲೆ!

ಶುಕ್ರವಾರ, ಆಗಸ್ಟ್ 6, 2010

ಹೇಡಿಗಳಿಗೊಂದು ಚಾಟಿ

ಹೇಡಿಗಳಿಗೊಂದು ಚಾಟಿ
ಕೆ. ಆರ್. ಎಸ್. ಮೂರ್ತಿ

ಕಣ್ಣು ಬಂದಾಯ್ತೋ ಕುರುಡರಿಗೆಲ್ಲ; ಕಿವುಡರು ಕಿಂಜರಿಯ ಕೇಳುವಂತಾಯ್ತು
ಮೂಕರೆಲ್ಲ ವಾಚಾಳಿಗಳಾದರೋ; ಕುಂಟರೆಲ್ಲಾ ವಾಯುವೇಗದಿ ಓಡಿಯಾಯ್ತು

ನಿಮ್ಮ ಮನಕ್ಕೆ ಮಡಿ ಪೇಟವು ಬಲು ಬಿಗಿಯಾಯ್ತು; ಕಿವಿಗೆ ಹತ್ತಿ ತುಂಬಾಯ್ತು
ಪಿಳಿಪಿಳಿ ಕಣ್ಣಿಗೆ ಕಪ್ಪು ಕನ್ನಡಕದ ಆಭರಣ ನಿಮ್ಮನು ಕುರುಡ ಮಾಡಿಸಿಯಾಯ್ತು

ಎರಡೂ ಕಾಲಿಗೆ ಕಟ್ಟಿದ ದೆಬ್ಬೆ, ಕೈಹಿಂದೆಯಾಗಿ ಕಬ್ಬಿಣದ ಬೇಡಿಯ ಬಳೆ ತೊಟ್ತಾಯ್ತು
ಬಾಯಿಗೆ ಬೀಗವನು ಚಿನ್ನದಲೇ ಮಾಡಿಸಿಕೊಂಡು, ಬೀಗದ ಕೈಯನು ಒಗೆದಾಯ್ತು

ಯಾವ ಜನ್ಮದ ಪಾಪ ಕರ್ಮವೋ! ಈ ಜನ್ಮದ ಸ್ವಕೃತ ಕರ್ಮದ ಫಲವೋ ಗೊತ್ತಿಲ್ಲ
ಅದು ಆಗದು, ಇದಂತೂ ಸಾಗದು, ಆಗದು, ಆಗದು ಎಂದು ಜಪವದೆಕೋ ದಿನವೆಲ್ಲ!

ಇದ್ದಲ್ಲೇ ನರಕವನ್ನು ಭವ್ಯವಾಗಿಯೇ ಕಟ್ಟಿ, ಹೊರಗೆ ಎತ್ತರದ ಕೊಟೆಯೊಂದನು ಕಟ್ಟಿ,
ಆಶೆ, ಆಕಾಂಕ್ಷೆಗಳಿಗೆ ತರ್ಪಣವ ಕೊಟ್ಟು, ಗುರಿ, ಧ್ಯೇಯಗಳನು ಬಲು ದೂರ ಹೊಡೆದಟ್ಟಿ

ನಿಮ್ಮ ಜೈಲಿನಲ್ಲಿ ನೀವೇ ಬಂಧಿಗಳಾಗಿ, ಕಣ್ಣೀರ ಕಾಲುವೆ ಹರಿಸಿ, ಅದರಲ್ಲೇ ಮುಳುಗಿ
ನಿಮ್ಮ ಹಣೆಯ ಬರಹದ ಶಾಸನವ ನೀವೇ ಕಲ್ಲಿನಲ್ಲಿ ಕೆತ್ತಿಸಿ, ದಿನ, ರಾತ್ರಿಎಲ್ಲ ಕೊರಗಿ

ಪರರ ನೋಡಿ, ಹೊಟ್ಟೆಯಲ್ಲಿ ಕಿಚ್ಚನು ಹತ್ತಿಸಿಕೊಂಡು ಸಜೀವ ಚಿತೆಯಲಿ ಬೇಯುವಿರೋ?
ನಿಮ್ಮನ್ನು ನೋಡಿ ಅಳುವವರಾರೂ ಇಲ್ಲವೆಂದು ಅರಿತು ಕೆಟ್ಟ ಕನಸಿನಿಂದ ಏಳುವಿರೋ?

ಅದು ಬೇಕೇ? ಇದು ಬೇಕೇ?

ಅದು ಬೇಕೇ? ಇದು ಬೇಕೇ?
ಕೆ. ಆರ್. ಎಸ್. ಮೂರ್ತಿ

ಮೇಲಿಲ್ಲ, ಕೆಳಗಿಲ್ಲ, ಇತ್ತಕಡೆ, ಅತ್ತಕಡೆಯೂ ಇಲ್ಲವಲ್ಲ
ಒಳಗಿಲ್ಲ , ಹೊರಗಿಲ್ಲ, ಎಲ್ಲೂ ಅಡಗಿ ಕೂಡಂತೂ ಇಲ್ಲ

ಎಲ್ಲಿಯೂ ಇಲ್ಲದನು ಅದು ಹೇಗೆ, ಓರ್ವ ಅದೇನು ಕಂಡೆ
ಬಾಲಕನೇ! ವ್ಯರ್ಥದಲಿ, ನಿನ್ನ ಅಪ್ಪನನು ಕೈಯಾರ ಕೊಂದೆ

ನಿನ್ನ ಹೆತ್ತವರೂ ರಕ್ಕಸರು ಎಂದೆಲ್ಲ ಕಿರಿಚಿ ಕೂಗಿ ನೀನಂದೆ
ನೀ ಹೆತ್ತವರೂ ರಕ್ಕಸರಾದರೇಕೆ? ಅದಕೆ ಕಾರಣ ಏನೆಂಬೆ?

ಅಸುರನ ಗರ್ಭದಲಿ ಸುರ, ಸುರನೊಳಗೆ ಅಸುರ ಅಡಗಿ
ಕಹಿಯೊಳಗೆ ಸಿಹಿ, ಸವಿಯೊಳಗೆ ಬೇವು ಅಡಗಿದಂತಾಗಿ

ಒಂದುಕಡೆ ನೋಡಿದರೆ ಆಹ್ಲಾದ, ಇನ್ನೊಂದು ಕಡೆಯಲ್ಲಿ ವಿಶ್ಲಾದ
ಗಮನವಿರಲಿ ಸಮ ಇದಕ್ಕೂ, ಅದಕ್ಕೂ; ಕ್ಲೇದ ಹಾಗೂ ಆನಂದ

ಕಂಡದ್ದು ಬೇಡವೇ? ಕಣ್ಣು ಮಿಟುಕಿಸಿ ಮತ್ತೆ ಕಾಣು ಬೇಕಾದ್ದು
ಎರಡೂ ಬೇಕೋ? ಒಂದೇ ಸಾಕೋ? ತೆಗೆದುಕೋ ಇಷ್ಟವಾದ್ದು

ಬರೀ ಒರಟು ಹರಟೆಯ ಗುಟ್ಟು

ಬರೀ ಒರಟು ಹರಟೆಯ ಗುಟ್ಟು
ಕೆ. ಆರ್. ಎಸ್. ಮೂರ್ತಿ

ತಲೆ ಹರಟೆ ಕವಿ, ತರಹ, ತರಹ ವಿಕಟ ಹರಟೆ, ಒಗಟು ನನ್ನ ಭಾಷೆ
ತರಾಟೆಯೇ ನನ್ನ ಹಠ; ಕೆಲವು ಮುಖಗಳು, ಹಲವು ಭಂಗಿಯ ಆಶೆ

ಕೇಳಿದರೆ ಅತೀ ಅಸಂಭದ್ದ, ಮತ್ತೆ ಮತ್ತೆ ಕೇಳಿದರೆ ಕುತೂಹಲದ ಬೀಜ
"ಏನೋ ಇರಬೇಕು ಇದರಲ್ಲಿ", ಎಂದವರಿಗೆ ಹೊಳೆದೀತು ಮಿಂಚು ನಿಜ

ಮೊಳಕೆ ಚಿಮ್ಮಿ, ಬೇರು ಬಿಟ್ಟೀತು ಕಲ್ಪನೆಯ ತುಂತುರು ಹನಿ ಅಲ್ಪವಾದರೂ
ಮಿದುಳಿನಾಳದಲಿ ಪಾತಾಳ ಗರಡಿಯಾಟ; ಸುಪ್ತ ಅನುಭಾವ ಎಂದಾದರೂ

ಹರಟೆ ಮಾತು ಒರಟಲ್ಲ ಮಾತ್ರ, ಗಟ್ಟಿಯಾಗಿ ನೆತ್ತಿಯಲಿ ನೆಟ್ಟು ಬಿಟ್ಟೀತು
ದಿಟದ ಪ್ರಕಟಣೆ ಆದಾಗ ಒಂದು ದಿನ ನೀವೂ ಅವಧೂತರೆಂದು ತಿಳಿದೀತು

ಗುರುವಾರ, ಆಗಸ್ಟ್ 5, 2010

ಯಾರು ಸರಿ?

ಯಾರು ಸರಿ?
ಕೆ. ಆರ್. ಎಸ್. ಮೂರ್ತಿ

ಅದು ಸರಿ, ಇದೂ ಸರಿ, ಸಾಗದ ಅಸಾಧ್ಯವನ್ನು ಕೇಳಿದರೂ ಉತ್ತರ ಸರಿಯೇ?
ಸರಿ ಸಾರ್, ಸರಿ ಸಾರ್; ಎಲ್ಲರನ್ನೂ ಸರಿಯೇ ಅಂದು ಬಿಡುವವರು ಸರಿಯೇ?

ಇವರೊಂದು ತರಹ "ವಿಶ್ವಾಮಿತ್ರರು" ಎನ್ನಿ; ಚಂಡಾಳನನ್ನೂ ಮೆಚ್ಚಿಸುವಂಥವರು
ಕೇಳಿದವರಿಗೆಲ್ಲ ಸ್ವರ್ಗದ ಕಡೆಗೆ ದಾರಿಯನ್ನು ತೋರಿಸುವವರು, ತಯಾರಿಸುವವರು

ಕಡ್ಡಿಯನ್ನು ತುಂಡು ಮಾಡಿದ ಹಾಗೆ ಮಾತಾಡಲು ತಾಕತ್ತೇ ಇಲ್ಲದಂತಹ ಶಂಡರು
ಹೆಂಡತಿಯು ರಂಗದ ಮೇಲೆ ಸೀರೆ ಬಿಚ್ಚಿ ಕುಣಿಯುತ್ತಿದ್ದರೂ ಸುಮ್ಮನಿರುವ ಪಾಂಡವರು

ಹೆಂಡತಿಯನ್ನೂ, ತಮ್ಮನನ್ನೂ ಕಾಡಿಗೆ ಕರೆದುಕೊಂಡು ಹೋಗಿ ಅಲೆಸಿದವರು
ಕೇಡಿ ಚಿಕ್ಕಮ್ಮನ ಮಾತು ಕೇಳಿ, ಹೇಡಿತನದಿಂದ ಓಡಿ, ಅಪ್ಪನನು ಕೊಂದವರು

ರಥವನ್ನು ನಡೆಸುವ ಆಳು ಹೇಳಿದ ಹಾಗೆ ಅಣ್ಣ ಕರ್ಣನ ಮೇಲೆ ಬಾಣ ಬಿಟ್ಟವರು
ನ್ಯಾಯವನ್ನೇ ಮರೆತು ವೀರನ ಸೊಂಟದ ಕೆಳಗೆ ಗಧೆಯನ್ನು ಹೊಡೆದು ಮೆರೆದವರು

ಯಾರನ್ನು ನಂಬುವುದೋ, ಮತ್ಯಾರನ್ನು ಮೆಚ್ಚುವುದೋ, ಯಾರು ಸರಿಯೋ ನೋಡಿ
ತೆಗೆದುಕೊಳ್ಳಿ ಈಗ ಈ ಕಡ್ಡಿಯನ್ನು; ಒಂದೇ ಮನಸ್ಸಿನಿಂದ ಎರಡು ತುಂಡು ಮಾಡಿ

ಮಂಗಳವಾರ, ಆಗಸ್ಟ್ 3, 2010

ಕರಿಯೋ, ಬಿಳಿಯೋ?

ಕರಿಯೋ, ಬಿಳಿಯೋ?
ಕೆ. ಆರ್. ಎಸ್. ಮೂರ್ತಿ

ನರೆತ ಕೂದಲು ಒಂದು ಕರಿಯ ಕೂದಲುಗಳ ನಡುವೆ ಎದ್ದು ಕಾಣುತ್ತಿತ್ತು
ಕೀಟಲೆಯ ಕೇಕೆ, ಅಣಗಿಸುವ ಕೊಂಕು ನುಡಿ, ಕೆಣಕಿಸುವ ಖಾರ ಏರುತ್ತಿತ್ತು

ಒಬ್ಬ ಕರಿಯ ಕೂಗಿದ: "ಯಾರೋ ಇದು ಹೊಸಬ; ಇಲ್ಲಿಗೆ ಬಂದನಿವ ಹೇಗೆ?"
"ಬುಡದಿಂದ ಅಗೆದು, ಕಿತ್ತು ಒಗೆಯಿರೋ ಇವನ ಮತ್ತೆ ಬಾರದಂತೆ ಹೊರಗೆ"

ವಾರಗಳೇ ಕಳೆದು, ಕರಿಯರೆಲ್ಲ ಮರೆತು ಬಿಟ್ಟರು, ಇದ್ದರು ತಮ್ಮ, ತಮ್ಮ ಪಾಡಿಗೆ
ಮತ್ತೆ ಕೂಗಿದ ಇನ್ನೊಬ್ಬ ಕರಿಯ: "ಇದೇನಿದು! ಮತ್ತೆ ಬಂದನಲ್ಲ ಬಿಳಿಯ ಹೇಗೆ?"

ಇನ್ನೊಬ್ಬ ಕರಿಯ ಮತ್ತೆತ್ತಲೋ ಎಂಬಂತೆ, "ಇನ್ನೊಬ್ಬ ಬಿಳಿಯ ಇಲ್ಲಿ ನೋಡಿರೋ!"
ಒಬ್ಬನನು ಹೊಡೆದೋಡಿಸಿಯಾಯ್ತು, ಮತ್ತೊಬ್ಬ ಕೂಡ ಬಂದು ಸೇರಿದ ನೋಡಿರೋ"

ತಿಂಗಳು ಉರುಳಿತು, ಒಬ್ಬನಲ್ಲ, ಇಬ್ಬರಲ್ಲ ಎಲ್ಲೆಲ್ಲಿ ನೋಡಿದರೂ ಕಾಣುವರು ಬಿಳಿಯರೇ
ಕರಿಯರನ್ನು ಒಂದೋ, ಎರಡೋ ಕೈ ಬೆರೆಳಲ್ಲಿ ಎಣಿಸಿಬಿಡಬಹುದು, ಗೆದ್ದವರು ಬಿಳಿಯರೇ!

ವರುಷಗಳು ಸವೆದವು, ಅಲ್ಲೊಬ್ಬ, ಇಲ್ಲೊಬ್ಬ ಕಂಡರೆ ಹೆಚ್ಚು, ಕರಿ ಬಿಳಿಯೆಲ್ಲ ಖಾಲಿ, ಖಾಲಿ
ತಲೆಯ ಮೇಲೆ ಎಂದೂ ಬಣ್ಣ ಬದಲಾಗದ ಕರೀ ಕಾರ್ಪೆಟ್ಟು, ಹಜಾಮನ ಜೇಬು ಮಾತ್ರ ಖಾಲಿ

ಸೋಮವಾರ, ಆಗಸ್ಟ್ 2, 2010

ಕಲ್ಲೊಂದು ಕಲ್ಲಿಗೆ ಕೇಳಿತು:

ಕಲ್ಲೊಂದು ಕಲ್ಲಿಗೆ ಕೇಳಿತು:
ಕೆ. ಆರ್. ಎಸ್. ಮೂರ್ತಿ

ಇದೇಕೆ ಮಾನವರು ನಮಗೆಲ್ಲ ಮುಗಿಯುವುದು ಕೈ ಜೋಡಿ?
ತಾಳವನು ತಟ್ಟುವುದು, ಎಲ್ಲರೂ ಜೊತೆಗೆ ಧ್ವನಿಗಳನು ಕೂಡಿ

ಹೋಗಲಿ ಎಂದರೆ, ದಿನವೂ ಹೊಗಳುವುದೇತಕೆ ಹಾಡಿ, ಹಾಡಿ?
ಬಾಗಿದ ತಲೆ, ದೈನ್ಯತೆಯಲಿ ಒಟ್ಟಿಗೆ ಕೈ ಚಾಚುವುದು ಬೇಡಿ

ನೆಲದ ಮೇಲೆ ಮಲಗಿ, ಎದ್ದು ಮತ್ತೆ ಮಲಗಿ ಏಳುವುದು ನೋಡಿ
ಧನ, ಕನಕ, ಬಣ್ಣ, ಬಣ್ಣದ ಹತ್ತಿಯ ವಸ್ತ್ರಗಳೆಲ್ಲವನು ನೀಡಿ, ಹರಡಿ

ಮೂಗಿಲ್ಲದ ನಮಗೆ ಗಂಧ, ಧೂಪ, ಘಮ, ಘಮ ಹೂ ಪೂಜೆ ಮಾಡಿ
ಹಣ್ಣು, ಹಂಪಲು, ಹಾಲು, ಆನ್ನ, ಮೆಲೋಗರಗಳ ಇಟ್ಟ ಹಾಗೆ ಮಾಡಿ

ತಾವೇ ಗಬ, ಗಬ ತಿಂದು ತೇಗಿ, ತೂಕಡಿಸಿ ಕಲ್ಲನೇ ಸುಪ್ಪತಿಗೆ ಮಾಡಿ
ನಗುವುದೋ, ಅಳುವುದೋ ಈ ಮೂಢತನಕೆ ನೀವೇ ಯೋಚನೆ ಮಾಡಿ

ವಿಚಿತ್ರಾಕರ್ಷಣೆ

ವಿಚಿತ್ರಾಕರ್ಷಣೆ
ಕೆ. ಆರ್. ಎಸ್. ಮೂರ್ತಿ

ಎಲೆ ಹೆಣ್ಣೇ! ಪೆದ್ದು ಕನ್ಯೆ! ಅದೆಷ್ಟೋ ಯುಗ ಕಳೆದರೂ ಮತ್ತೆ, ಮತ್ತೆ ನ್ಯೂಕ್ಲಿಯಸ್ಸಿನು ಸುತ್ತಿ, ಸುತ್ತಿ ಸುಸ್ತಾಗಲಿಲ್ಲವೇ?
ಪ್ರೋಟಾನೇನೋ ಪುರುಷ ದಿಟ, ನ್ಯೂಟ್ರಾನಿಗೆ ಅಷ್ಟು ಹತ್ತಿರವಿದ್ದು ನಪುಂಸಕನಾಟ ಆಡುತ್ತಿದ್ದಾನೆಯೇ ನಿನಗೆ ಗೊತ್ತೇ

ಎಲ್ಲಿಂದಲೋ ಬಂದು ಫೋಟಾನು ರಭಸದಿ ನಿನಗೆ ಢಿಕ್ಕಿ ಹೊಡೆದಾಗಲೆಲ್ಲಾ, ಪುಳಕಿತಳಾಗಿ ನೀ ನಿಗರಿ ಎಗರುವೆಯಲ್ಲೇ!
ಒಡನೆಯೇ ಎಗರಿ ಬಿದ್ದು ಮತ್ತೆ ಫೋಟಾನಿನ ಶಕ್ತಿಪಾತವು ಮಾತ್ರ ಖಂಡಿತ; ನನ್ನ ತುಂಟು ಕಲ್ಪನೆಯ ನೀನೇನು ಬಲ್ಲೆ?

ಕಾಲಾತೀತ ಪತಿವ್ರತೆಯೇ ನೀನು? ಮಧ್ಯೆ, ಮಧ್ಯೆ ಇದೇನು ಫೋಟಾನಿನ ಸಂಗ ಅನಂಗ ರತಿ ರಂಗ? ವ್ರತದ ಭಂಗ!
ಶಿಖಂಡಿ - ಗಂಡುಗಳ ಭಂಡ ಒಡನಾಟ ನ್ಯೂಕ್ಲಿಯಸ್ಸಿನ ಬೆಸುಗೆಯ ಅಪ್ಪುಗೆಯಲ್ಲಿ ನಡೆಯುವುದು ಬಲು ಗುಟ್ಟಿನ ಪ್ರಸಂಗ!