ಬುಧವಾರ, ಮೇ 12, 2010

ತುಂಬು ಬಸುರಿ ನಾನು

ತುಂಬು ಬಸುರಿ ನಾನು
ಕೆ. ಆರ್. ಎಸ್. ಮೂರ್ತಿ

ಒಂಬತ್ತು ತಿಂಗಳ ತುಂಬು ಬಸುರಿ
ಇನ್ನು ಹೊರಲಾರೆ, ನನ್ನ ಕಂದನ
ಗರ್ಭ ವೇದನೆ ಇದುಬೇರೆ.
ಇದರ ವಿಚಿತ್ರ ಅಮಿತ ಆನಂದ
ಕಂದರ ಹೆಡೆದವರಿಗೇ ಗೊತ್ತು.

ಭಾವ ಬೀಜವು ತಂತಾನೆ ಹೂತು,
ನನ್ನ ಹೃದಯದ ಒಲವಿನಾಮೃತ
ಪಾನವನು ಚಪ್ಪರಿಸಿ ಕುಡಿದು,
ನನ್ನ ಮನದಲಿ ಮೊಳಕೆ ಬಿತ್ತಿದೆ.

ಚಿಗುರು ಚಿಮ್ಮಿ, ಹಸಿರು ಬಣ್ಣವ ತೊಟ್ಟು,
ನೆಲದಿಂದ ಸಸಿಯಾಗಲು ಹಾತೊರೆಯುತಿದೆ.
ತಾಳಲಾರೆ ಗರ್ಭವನೇ ಒಡೆದು ಹೊರ ಬರುತಿದೆ.

ಸಸಿಯಾಗಿ, ಗಿಡವಾಗಿ, ಮರವಾಗುವ
ಎಲ್ಲಿಲ್ಲದ ಪರಮಾತುರ.
ಕಾಂಡ, ಕೊಂಬೆ, ಎಲೆ, ಹೂ, ಹಣ್ಣುಗಳ
ದಿಢೀರನೇ ಬಿಡುವ ಹುಮ್ಮಸ್ಸು ನನ್ನ ಪೀಡಿಸುತಿದೆ
ಬೇರು ಭರಭರನೆ ಪಸರಿಸುವ ಹಟ
ಭೂಮಿಯ ಸಾರವನು ಕ್ಷಣಮಾತ್ರದಲಿ ಹೀರಿ
ವೃಕ್ಷದ ನಾಳನಾಳಗಲಿ ಸರ್ರನೆ ನುಗ್ಗಿಸುವ ಛಲ.

ಇಡಿ ಭೂಲೋಕವನೇ ಒಂದೆರಡು ತುತ್ತಲಿ ನುಂಗುವ
ಮನದ ಹಸಿವು ಅತೀವ್ರ; ಹೃದಯದ ದಾಹ ಅಪಾರ.

ನನ್ನ ಬಾಲ್ಯದ ನೆನಪು ತರಿಸುತಿದೆ
ಹದಿವರುಷದಲಿ ದಿಗ್ಗಜರ ಸಂಗ;
ಮೇಧಾವಿಗಳ ಮಗ್ಗುಲಲಿ ಕುಳಿತು,
ಸಾವಿರ ರಸಿಕರ ತಣಿಸುವ ಅಧಿಕ ಪ್ರಸಂಗ.
ನನ್ನನೇ ಹೋತಿದೆ ಎನ್ನುದರ ವಾಸಿ.

ಇದೆಕೋ ರಸಿಕ. ತಾಳಲಾರೆನು ನಾ.
ಎರಡು ಕೈ ಚಾಚು.
ಸೂಕ್ಷ್ಮದಲಿ ಪಡೆ.
ಹಿಡಿದುಕೋ ನನ್ನ ಕಂದನ
ಮುದ್ದಾಡು ಒಮ್ಮೆ, ಆಲಿಸು ಕಂದನ ಕೇಕೆ
ಕೇಳಿಸಿತೇ ಹೇಳು ಇದು ಯಾವ ರಾಗ?
ತಿಳಿಯಿತೇ ಅದರ ಸಾಹಿತ್ಯದ ಸಾರ?

ನಿನ್ನ ಮುಡಿಯಲಿಟ್ಟಿಹೆ,
ಇಂದಿನಿಂದ ನನ್ನದಲ್ಲವೋ ಈ ಕಂದ
ಎನ್ನ ಮನದಲ್ಲಿ ಜನಿಸಿ, ಪೋಷಿಸಿ
ಹೆತ್ತಿರುವೆ ನಾ; ಇತ್ತಿರುವೆ ನಾ
ಪೊತ್ತು, ಮುದ್ದಿಸಿ, ಆನಂದಿಸುವ ಹೊರೆ ನಿನ್ನದೋ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ