ಬುಧವಾರ, ಮೇ 12, 2010

ಪೇಳಮ್ಮಯ್ಯ ನಮ್ಮ ಕಾಡುವ ಶಾಪ

ಪೇಳಮ್ಮಯ್ಯ ನಮ್ಮ ಕಾಡುವ ಶಾಪ
ಕೆ.ಆರ್.ಎಸ್. ಮೂರ್ತಿ

ಒಂದೇ ಹೊಕ್ಕಳ ಬಳ್ಳಿಗಳು
ಉಂಡದ್ದು ಒಂದೇ ಎಲೆಯಲ್ಲಿ,
ನಾವು ನಿನ್ನ ಮಕ್ಕಳು

ಅದೇ ಮೊಲೆಗಳ ಅಪ್ಪಿಕೊಂಡು ಹೀರಿದ್ದು
ಅದೇ ಕೈಯಿನ ತುತ್ತು, ಮೊಸರನ್ನ, ಉಪ್ಪಿನಕಾಯಿ
ಅದೇ ಅಮ್ಮನ ತೊಡೆಯ ಮೆತ್ತನೆಯ ಹಾಸಿಗೆ

ಅಂದು ಅಂದದ್ದು ಅದೇ ಅಮ್ಮನ ಹೆಸರು
ಮಿಂದದ್ದು ಮುಂಜಾನೆ ಒಂದೇ ಕೊಳದಲ್ಲಿ

ನುಡಿದ ಸ್ವರಗಳು ಒಂದೇ
ಆಡಿದ, ಕುಣಿದು ಕುಪ್ಪಳಿಸಿದ
ಅಂಗಳವೂ ಒಂದೇ
ಮುಡಿದ ಹೂಮಾಲೆ ಒಂದೇ
ಹಾಡಿದ ರಾಗ ಒಂದೇ
ಕಡಿದ ಗುಂಡು ಕೋಡುಬಳೆಯ
ಹಿತಖಾರವೊಂದೇ
ಗರಿಗರಿ ಚಕ್ಕುಲಿಯ
ಘಮಘಮ ರುಚಿಯೂ ಒಂದೇ
ಕಡೆದ ಗಟ್ಟಿ ಮೊಸರಿನಲಿ ತೇಲಿಬಂದ
ಅಪ್ಪಟ ಬೆಣ್ಣೆಯನು ಮೆದ್ದಾಗ
ನಾಲಿಗೆಗೆ ಆದ ಆನಂದವೂ ಒಂದೇ

ಹಿಡಿದು ಮುಡಿಯಲ್ಲಿ, ಕೊಬ್ಬರಿ-ಕಲ್ಲು ಸಕ್ಕರೆ
ಸವಿಯ ಚೆಂದವೊಂದೇ
ಓಡಿದ್ದು ಒಬ್ಬರನ್ನೊಬ್ಬರು ಸೋಲಿಸುತ
ನಮ್ಮ ಗಲ್ಲಿಯು ಒಂದೇ
ಒಡೆದ ದೊಡ್ಡ ಎಳೆ ತೆಂಗಿನ ನೀರು
ಸರಸರನೆ ಕೊಳವೆಯಲಿ ಹೀರಿ
ಕುಡಿದಾಗ ಬಂದ ತೃಪ್ತಿಯ ತೇಗು ಒಂದೇ
ಕುಂಡೆ ಕೊಳೆಯಾದಾಗ
ತೊಳೆದು ಒರೆಸಿದ ಕೈ ಒಂದೇ
ಮೊಂಡು ಹಿಡಿದು ಬೋರಲು ಬಿದ್ದು ಅತ್ತಾಗ,
ನಗೆಮುಖದಿ ಹುಸಿಗೋಪದಿಂದ
ಹುಸಿಯೇಟು ಕೊಟ್ಟವಳ ಹೆಸರು ಒಂದೇ
ಚೆಂಡು ಬುಗುರಿಯಲಿ ಮನ ಮರೆತು ಮುಳುಗಿದ್ದಾಗ
ಕಿವಿ ಹಿಂಡಿ ಮನೆಯೊಳಗೆ ಎಳೆದು ತಂದವಳ
ಎಂದಿನಂತೆಯೇ ಕಿಂಚಿತ್ತೂ ಕುಂದುಹೋಗದ ಒಲವು ಒಂದೇ

ಮಿಂದು ಮಡಿಯಲ್ಲಿ ಹೊರ ಬಂದವಳ
ತಬ್ಬಿಗೊಳ್ಳಲು ಹೋದಾಗ ದೂರ ಸರಿದವಳ
ಮನೆದೇವರು ನಾವೆಲ್ಲ ಒಂದೇ
ಒಡೆದು ಗಾಜಿನ ಬಳೆಯ ಗುಂಡು ಕಲ್ಲಾಟದ ಭರದಲ್ಲಿ
ಜೋರಾಗಿ ಅತ್ತು ಕಣ್ಣೀರು ಸುರಿದಾಗ
ಸಮಾಧಾನ ನುಡಿದು ಅಪ್ಪಿಕೊಂಡವಳ
ಮೆತ್ತನೆಯ ಎದೆಯು ಒಂದೇ

ದೊಡ್ಡ ತಪ್ಪಲೆ ತುಂಬ
ಅಪ್ಪಟ ಹಸುವಿನ ತುಪ್ಪ,
ಅದಕ್ಕೆ ಸಮ, ಸಮ ಸಕ್ಕರೆ,
ಹದ ಪಾಕಕ್ಕೆ ತಂದು
ಕಡಲೆಯ ಹಿಟ್ಟು ಬೆರೆಸಿ
ಏಕಮಾತ್ರ ಸ್ವರ್ಗ ಮೈಸೂರಿನ ಭಕ್ಷ್ಯವನು
ಬಲು ದೊಡ್ಡ ಅಚ್ಚನ್ನೇ ಬಿಸಿಬಿಸಿ ಬಾಯಲ್ಲಿಟ್ಟಾಗ
ಆದ ಅಮಿತ ಆನಂದಕೆ
ಅಮ್ಮನ ಮಕ್ಕಳೆಲ್ಲ ನಾವು
ಒಬ್ಬರನ್ನೊಬ್ಬರು ನೋಡಿ ಮೆರೆದಾಗ
ಅಮ್ಮನ ಮುಖದಲ್ಲಿ ಕಂಡ ತೃಪ್ತಿ ಮರೆತುಹೋಯಿತೆ!

ಮುಂಜಾನೆಯೆ ಎದ್ದು
ನಮಗೆಲ್ಲ ಅಭ್ಯಂಜನ ಮಾಡಿಸಿದ,
ಹಬ್ಬದ ಒಬ್ಬಟ್ಟು,
ಹೂರಣದ ಹೋಳಿಗೆ ತಟ್ಟಿ ಕೊಟ್ಟವಳು,
ಗಸಗಸೆಯ ಪಾಯಸ,
ಮಾವಿನ ಕಾಯಿಯ ಚಿತ್ರಾನ್ನ,
ತಿಳಿಸಾರಿಗೆ ತುಪ್ಪದ ಒಗ್ಗರಣೆ,
ಅಮ್ಮನ ಕೈಚಳಕ್ಕೆ ಮಾರುಹೋದ
ಹುಡುಗರು ನಾವೇ ಅಲ್ಲವೆ!

ಹೊತ್ತಾಗ ಹೊಟ್ಟೆಯಲಿ,
ಒಂಬತ್ತು ತಿಂಗಳ ವಾಸ,
ಹುಟ್ಟಾಗ ಪುಟ್ಟುಕಂದಗಳು ನಾವೆಲ್ಲ ಒಂದೇ.

ತೆವಳಿ, ಚಿಮ್ಮಿ, ಅಂಬೆಗಾಲಿಟ್ಟು,
ಎದ್ದು ನಿಂತು ನಡೆದವರು
ಓಡನಾಡಿ, ಆಟವಾಡಿ,
ಸೋತುಗೆದ್ದವರು ನಾವೆಲ್ಲ ಒಂದೇ.

ಬೆಳೆಯುತ್ತ ಹದಿವರುಷದಲಿ
ಎದೆಯಾಕೆ ಬದಲಾಯ್ತು
ಒಲವು ಕಲಹಕ್ಕೆ ಮೊರೆಯಾಯ್ತು,
ಮೈಕೊಬ್ಬು, ಮನಕೊಬ್ಬು ದಿನದಿನಕೆ
ಬೆಳೆದು ಹೊಟ್ಟೆಕಿಚ್ಚಾಯ್ತು

ಅಕ್ಕ ತಂಗಿಯರು, ಅಣ್ಣ ತಮ್ಮಂದಿರು
ದೂರು ದೂರಾಗಿ ದಾಯಾದಿತನ ಹೆಚ್ಚಾಯ್ತು.

ಇದೇನು ಶಾಪ!
ಇಡೀ ವಂಶಕ್ಕೆ ಯಾಕೆ ಈ ಖಾಯಿಲೆ?
ಒಂದು ಅಮ್ಮನ ಸಂಸಾರ
ಎರಡಾಯ್ತು, ಮೂರಾಯ್ತು.
ಚೂರು ಚೂರಾಯ್ತು
ಒಂದೇ ಚಕ್ಕುಲಿಯ ಚೂರು ಮಾಡಿ
ಹಂಚಿತಿಂದವರು ನಾವೇ ಅಲ್ಲವೇ!

ಪುಡಿಪುಡಿಯಾದೀತು ಅಮ್ಮ ನಿನ್ನ ಸಂಸಾರ
ಕಂಡೂ, ಕೇಳಿ ಮೌನವ್ರತ ಹಿಡಿದು,
ನಮ್ಮ ಜಗಳವ ಬಿಡಿಸುವ ಕರುಣೆಯ ಮನಸಿಲ್ಲದ,
ಅಮ್ಮ ನಿನಗೇನು ಕೇಡುಗಾಲ ಬಂದಿಹುದು,
ನನಗಂತೂ ಅನಿಸುತಿದೆ
ನಮ್ಮ ಸಂಸಾರದ ಕಡೆಗಾಲ ಇಂದೋ, ನಾಳೆಯೋ
ಬರುತಿಹುದು ನಿಜ.

ಅಕ್ಕ ತಂಗಿಯರ ಜಗಳ ಮನೆಯಿಂದ ಬೀದಿ,
ಬೀದಿಯಿಂದ ಬಯಲು,
ಸಾವಿರಾರು ಮೈಲುಗಳು ಓಡಿ ಹೋಗಿದೆ.

ಅಕ್ಕ ಪಕ್ಕದ ಊರಿನ
ಅಕ್ಕ ತಂಗಿಯರ ಸೆಣೆದಾಟಕ್ಕೆ ಕಡಿಮೆಯೇನಿಲ್ಲ.

ನಿನ್ನ ತವರೂರಿನ ನಿನ್ನಕ್ಕ ತಂಗಿಯರು
ಮಣ್ಣಿಗೆ, ಹೊನ್ನಿಗೆ, ತಂತಾನೆ ಹರಿವ ಗಂಗೆಗೆ
ಕಚ್ಚಾಡಿದುದು ನೆನಪಿದೆಯೇ

ಅಮ್ಮ! ನಿನಗೆ ನಿನಪಿಲ್ಲವೇ,
ನಿನ್ನಮ್ಮನ ಆಸ್ತಿ ಚೂರು ಚೂರಾಗಿ,
ವಸುಧೆ ಮುತ್ತಜ್ಜಿಯ ನೆಲವೂ ನೂರಾರು ಪಾಲಾಗಿ,
ಮುಳ್ಳು ಬೇಲಿಗಳು ಕೋಟಿ ಮೈಲುಗಳು ಬೆಳೆದು
ವಂಶದ ನಾಶದ ಕಗ್ಗತ್ತಲೆಯು
ಹತ್ತಿರ ಹತ್ತಿರ ಬರುತಿದೆ ಬಲ್ಲೆ ನೀ
ಇದಕೆ ನಿನ್ನ ರಕ್ತದ ಕಣ್ಣೀರೇ ಸಾಕ್ಷಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ