ಶುಕ್ರವಾರ, ಮೇ 28, 2010

ಕಾಲ ರಾಯ ಕುಂಟುತ್ತಾ ಅವ್ನೆ

ಕಾಲ ರಾಯ ಕುಂಟುತ್ತಾ ಅವ್ನೆ
ಕೆ. ಆರ್. ಎಸ್. ಮೂರ್ತಿ

ನೋಡ್ರಪ್ಪಾ ನೋಡ್ರೀ! ಕುಂಟ್ಟುತ್ತ ಬರ್ತವ್ನೆ! ಕಾಲ ರಾಯಾನೋ
ಏನಾಯ್ತಪ್ಪೋ! ಅವನ್ಗೆ? ಯಾವಾಗ್ಲೂ ಓಡ್ತಾ ಇದ್ದೊನೂ!

ನನ್ಯಾಕ್ಲ ಕುಂಟ ಅಂತೀ, ದರಿದ್ರವನು ನೀನು ಕಣ್ಲಾ?
ನಿಮ್ಗೆಲ್ಲಾರ್ಗೆ ಕಣೋ ಬಡಿದಿರೋದು ದರಿದ್ರದ ಶಕುನ!

ದ್ಯಾವಲೋಕದಲ್ಲಿ ಏಲಾರ್ಗೂ ಬಂದ್ಬುಟ್ಟೈಯ್ತೋ,
ಏಳುರಾಟದ ಶನಿ ಕಾಟ, ಪಟ್ಟಾಗಿ ಬಡಿದು ಬಿಟ್ಟೈಯ್ತೋ

ರಾಹು, ಕೇತು ಇಬ್ರೂ ಒಂದೇ ಮನೇಲಿ ಸೇರಿ ಬಿಟ್ಟವ್ರೋ!
ನಮ್ ಸ್ವರ್ಗದ ದ್ಯಾವ್ರಿಗೆಲ್ಲಾ ಡಬ್ಬಲ್ ತಾಪತ್ರಯಾನೋ

ನಾರಣಪ್ಪನ ಹೆಂಡ್ರು ಲಚ್ಮಿ ಕೈಲಿ ಬಿಡಿಗಾಸೂ ಇಲ್ಲದೆ ಆಗಿಹೋಗಿ
ವೈಕುಂಠ ಬಿಟ್ಟು, ಎಲ್ಲಾರ್ನೂ ಕೈ ನೀಡಿ ಬಿಕ್ಷೆ ಬೇಡ್ತಾ ಅವ್ಳೋ

ಬ್ರಮ್ಮನ ಹೆಂಡ್ರು, ವಾಣಿಯಮ್ಮ ಮಾತಿಲ್ಲದೆ ಮೂಕಿ ಆಗಿ ಬಿಟ್ಟವ್ಳೋ
ಅವ್ಳ ವೀಣೆಯ ಬುರುಡೆ ಒಡಕಾಗಿ, ತಂತಿಯೆಲ್ಲಾ ಕಿತ್ತೋಗೈತೋ

ಬ್ರಮ್ಮ ಲೋಕದಲ್ಲಿ ಸಂತಾನವೇ ಇಲ್ಲದೆ ಮಕ್ಕಳೇ ಇಲ್ಲ ಕಣೋ
ಹುಟ್ಟಿಸೋ ಗಂಡಸು, ಬೊಮ್ಮಣ್ಣ ಷಂಡ ಆಗಿ ಹೋಗಿ ಮುದುರಿ ಕೊಂಡವ್ನೋ

ಅನ್ನಪೂರ್ಣಮ್ಮನ ಅಡಿಗೆಯೆಲ್ಲಾ ಹಳಸು ಕೊಂಡು ಹೋಗಿ ಬಿಟ್ಟೈಯ್ತೋ
ಅವ್ಳ ಅಡಿಗೆ ಮನೆಯ ಪಾತ್ರೆಗಳೆಲ್ಲಾ ಖಾಲಿ ಆಗಿ ಒಲೆಯೆಲ್ಲಾ ಒಣಗೈತೋ

ಅವಳ್ಗೆನೇ ಹಸಿವು ಹೆಚ್ಚಾಗಿ, "ಭವತಿ ಭಿಕ್ಷಾಂದೇಹಿ" ಬೇಡ್ತಾಳಂತೆ
ಹೊತ್ತಾರೆಯಿಂದ ರಾತ್ರಿ ವರೆಗೂ ಮನೆ, ಮನೆ ಮುಂದೆ ಬೇಡ್ಕಂಡು ಓಗ್ತಾಳಂತೆ

ನಮೂರ ಸಾಹುಕಾರ ಕುಬೇರನ ಪರಿಸ್ತಿಥಿ ಕೇಳಿದ್ರೇನೆ ಕಣ್ಣೀರಿ ಬರ್ತದೆ ಕಣೋ
ಭಂಡಾರ ಖಾಲಿ ಆಗಿ, ನರಕದಿಂದ ಸಾವಿರಾರು ಕೋಟಿ ಸಾಲ ಮಾಡ್ಕಂಡು ಬಿಟ್ಟವ್ನೋ

ಪಾರ್ವತಮ್ಮ, ನಮ್ಮಪ್ಪ ಶಿವನ ಮನೆ ಬಗ್ಗೆ ಏನು ಆಗೈತೆ ಗೊತ್ತೇನ್ರೋ?
ಇಬ್ರೂ ಹಿಮಾಲಯದಲ್ಲಿದ್ದ ಕೈಲಾಸವನ್ನು ಪರ್ವತವನ್ನು ಭೋಗ್ಯಕ್ಕೆ ಹಾಕವ್ರೋ

ಕೈಲಾಸದ ಹಿಮ ಎಲ್ಲ ಬತ್ತಿಹೋಗಿ, ಮರಳು ಗಾಡು, ಒಣ ಪ್ರದೇಶ ಆಗೈಯ್ತೋ
ಗಂಗಮ್ಮನಿಗೆ ಬಾಯಾರಿ, ಒಂದು ಹನಿ ಕೂಡ ಕುಡಿಯಕ್ಕೆ ನೀರಿಲ್ದೆ, ಬಡವಾಗವ್ಳೊ

ಗುಂಡಪ್ಪ, ಡೊಳ್ಳು ಹೊಟ್ಟೆ ಗಣೇಶನಿಗೆ ಒಂದು ತುತ್ತು ಊಟ ಕೂಡಾನೂ ಇಲ್ದೇ ಉಪಾಸಾನ್ರೋ
ಹೊಟ್ಟೆ ಎಲ್ಲಾ ಕರಗಿ, ಸಣಕಲು ಕಡ್ಡಿ ಆಗಿ, ಅವನ ಹೊಟ್ಟೆ ಸುತ್ತುಕೊಂಡಿದ್ದ ಹಾವು ಓಡೋಯ್ತಂತೋ

ನಮ್ಮ ಕಿಟ್ಟಪ್ಪನ ಕೊಳಲು ಚುಲ್ಟಾ ಆಗಿ ಹೋಗಿ, ಅದಕ್ಕೆ ಸ್ವಲ್ಪಾನೂ ಉಸಿರೇ ಇಲ್ಲಾಂತ
ಸ್ವರ್ಗದ ಹುಡ್ಗೀರ್ಗೆಲ್ಲಾ ಬೇಸರ ಆಗಿ, ಅವನನ್ನು ಬಿಟ್ಟು, ಕಾಡಿನಲ್ಲಿ ಸನ್ಯಾಸಿನಿ ಆಗಿಬಿಟ್ಟವ್ರೆ

ನರಕದೋರು ದೊಡ್ಡ ರಾಕ್ಷಸ ಸೈನ್ಯ ನನ್ನನ್ನು ಹಿಂಬಾಲಿಸಿ ಅಟ್ಟಿಸಿಕೊಂಡು ಬಂದು ಬಿಟ್ಟ್ರು
ನನ್ನ ಎರಡೂ ಕಾಲಿಗೆ ಪಟಪಟಾಂತ ಚೆನ್ನಾಗಿ ಹೊಡೆದು ಚೆಚ್ಚಿ ಕುಂಟನ್ನ ಮಾಡ್ಬಿಟ್ರು

ನಿಮ್ಗೆಲ್ಲಾ ಗೊತ್ತಿರೋ ಹಾಗೆ ಯಾವಾಗಲೂ ಜೋರಾಗಿ ಓಡುತಿದ್ದವ್ನು ಪ್ರಮಾಣ, ನನ್ನ ಆಣೆ
ಕಲಿಗಾಲಾನೇ ಕೆಟ್ಟದ್ದು ಅಂದುಕೊಂಡಿದ್ದೆ ಕಣ್ರೋ, ಈಗ ಇದ್ಯಾವ ಕಾಲ ಬಂದಿದ್ಯೋ ನಾ ಕಾಣೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ