ಬುಧವಾರ, ಮೇ 12, 2010

ಶಿಲ್ಪಿ ಆಚಾರಿ ಜಕಣ ನಾನು

ಶಿಲ್ಪಿ ಆಚಾರಿ ಜಕಣ ನಾನು
ಕೆ. ಆರ್. ಎಸ್. ಮೂರ್ತಿ

ನಿನ್ನ ಕೆತ್ತುವ ಶಿಲ್ಪಿ ನಾನು.
ಅಮೃತ ಶಿಲೆಯೂ ಕಡಿಮೆ ನಿನ್ನ ಸೌಂದರ್ಯಕೆ.
ನಿನ್ನ ಕೆತ್ತಲು ಕಲ್ಲು ಹುಡುಕುತ್ತ
ಸುತ್ತಿದೆ ದೇಶ, ವಿದೇಶ
ಶಿಲ್ಪಾಚಾರಿ ಜಕಣ ನಾನೇ.
ಕಾಣದಾಯಿತು ಕಲ್ಲು ನಿನ್ನ ಸುರೂಪಕ್ಕೆ
ಸರಿ ಸಮ ಒಪ್ಪುವ ಶಿಲೆಯು

ನಿನ್ನೆ ಹೀರುತ್ತಿದ್ದೆ ನಿನ್ನ ಅಧರ ಜೇನ
ದೀರ್ಘ ಚುಂಬನದಲ್ಲಿ ನೆನಪಿದೆಯೆ ತಾನೆ?
ಇಂದು ಮುಂಜಾನೆ ದೇವರಿಗೆ ನಮಿಸಿ,
ಪೂಜಾರಿ ಕೊಟ್ಟ ಪ್ರಸಾದ ಕಲ್ಲು ಸಕ್ಕರೆಯನು
ಬಾಯ್ಗಿಟ್ಟೊಡನೆ ದೇಗುಲದ ಗಂಟೆ ಬಾರಿಸಿತು
ಗಂಟೆ ಮುಟ್ಟಿತು ನನ್ನ ಮನಕೆ
ಉಲಿಯಿತು, ತಿಳಿಸಿತು ನಿಜವಾದ ಕಲ್ಲು.

ಇಕೋ ನೋಡು ತಂದಿಹೆನು ನನ್ನ ಚೀಲದಲಿ
ಉಳಿ, ಸುತ್ತಿಗೆ, ಸಕಲ ಉಪಕರಣ
ಬರುತಿದೆ ನೋಡು ದೊಡ್ಡ ಗಾಡಿಯಲಿ
ಊರಿನ ಎಲ್ಲ ಅಂಗಡಿಗಳೆಲ್ಲ ಕೋಟ್ಟಿಹವು
ದಾನ ಬಂಡಿ ಕಲ್ಲು ಸಕ್ಕರೆ
ಬಿಳಿ, ಕೆಂಪು, ಹಸಿರು ನೀಲಿ ಮೊದಲಾದ ವಿವಿಧ
ವರ್ಣದ ಕಲ್ಲು ಸಕ್ಕರೆಗಳೆಲ್ಲ.

ಕಾಣುತಿದೆಯೇ ಸರ್ವಾಂಗ ಸುಂದರಿ ನಿನಗೆ
ಊರ ಹೈಕಳು ಮಂದಿ ಸಾವಿರ;
ಪರ ಊರು, ದೂರದೂರು ಮಂದಿ ಬಂದರು ಹಿಂದೆ
ಸಕ್ಕರೆಯ ಸಿಹಿಗೆ ಮುತ್ತಿಹರು ಈ ಎಲ್ಲ ಮಂದಿ.
ನಾಲಗೆಗಳ ಚಾಚಿ ಸುರಿಸುತಿಹರು ಜೊಲ್ಲು ನದಿಯ ಹರಿಸಿ.

ನನ್ನ ಉಳಿಯು ಬಗ್ಗದ, ಮೊಂಡಾಗದ, ಒಂದು ಅಡಿ ಚಿನ್ನ.
ನಿನ್ನಧರ, ಕೆನ್ನೆ, ಕಮಲ ಕಣ್ಣು,
ಗೌರ ಪಯೋಧರ ಕುಚ, ಕಟಿ, ತೊಡೆ,
ಕೈ, ಕಾಲು, ಬೆರಳು, ಪಾದಗಳ ಮೇಲೆ,
ನನ್ನ ಉಳಿಯು, ಕೈ ಬೆರಳುಗಳು ಬೆಳಿಗ್ಗೆ, ರಾತ್ರಿಯೆಲ್ಲಾ
ಥೈ, ತಕ ಥೈ ಕುಣಿದು ನಿನ್ನ ತಣಿಸಿದರೂ
ಮುಗಿಯದು ಎನ್ನ ಒಲವಿನ ಶಿಲ್ಪ ಕಲೆ.
ನಿನ್ನ ಸೌಂದರ್ಯ ಆರಾಧನೆಯೇ ನನ ಒಲವಿನ ಕಲೆ.

ನಾ ಕಡೆದ ಶಿಲ್ಪ ಮಿಕ್ಕ ಮಂದಿಗಳಿಗೆ ಹೋದರೂ,
ನಿಜ ಸಿಹಿಯ ನಿನ್ನ ಸಕ್ಕರೆ - ಜೇನು ನೀನು
ನನಗೆ ಮಾತ್ರ ಮುಡುಪಿರಲಿ.
ನಿನ್ನ ವಿಗ್ರಹ ದೇಹವು ನನ್ನ ಹೃದಯದಲ್ಲಿರಲಿ
ಇದಕೆ ನಿನ್ನ ಪ್ರೀತಿಯ ಆಣೆಯಿರಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ