ನವಗ್ರಹ ಪ್ರದಕ್ಷಿಣೆ
ಕೆ. ಆರ್. ಎಸ್. ಮೂರ್ತಿ
ದೇಗುಲಕೆ ಹೋಗುವ ಬಾರೋ.
ಹೂವು, ಹಣ್ಣು, ತೆಂಗಿನ ಕಾಯಿ,
ಪೂಜಾ ಸಾಮಗ್ರಿ ಅಣಿ ಮಾಡೊ.
ಕುಂಕುಮ, ಅರಿಶಿನ, ಚಂದನ,
ಮಂತ್ರಾಕ್ಷತೆ, ಕರ್ಪೂರ, ಊದಿನ ಕಡ್ಡಿ
ಇಟ್ಟುಕೋ ಬೆಳ್ಳಿಯ ಬುಟ್ಟಿಯಲಿ
ಮರೆಯಬೇಡ ಸಕಲ ಧಾನ್ಯಗಳ
ಇಂದು ಮಾಡುವ ನವಗ್ರಹ ಪೂಜೆ
ನಿನ್ನಪ್ಪನಿಗೆ ಬರಲು ಹೇಳು ಬೇಗ
ಅವರು ಜನಿವಾರ, ಮೂಗು ಹಿಡಿದು
ಪ್ರಾರಂಭಿಸಿದರೆ ಗಾಯತ್ರಿ ಮಂತ್ರಕ್ಕೆ ಕೊನೆಯಿಲ್ಲ,
ನೂರೆಂಟು ಎಂದು, ಅದು ಸಾವಿರದ ಎಂಟೋ,
ಹತ್ತು ಸಾವಿರದ ಎಂಟೊ ಆಗಿಬಿಟ್ಟೀತು
ಭುಜವನಲ್ಲಾಡಿಸಿದರೂ ಆಗದು ಅವರಿಗೆ ಎಚ್ಚರ
ಗಂಟೆ, ಜಾಗಟೆಗಳನ್ನು ಬಾರಿಸಿದರೂ
ಏಳುವರಲ್ಲ, ನನ್ನ ಗಂಡ;
ಇವರ ಜಪಕ್ಕೆ ನಾಚಿಹೋದಾರು ಸಪ್ತ ಋಷಿಗಳು;
ವಿಶ್ವಾಮಿತ್ರನೂ ಸೋತುಹೋದ ಮೇನಕೆಯ ಕುಣಿತಕ್ಕೆ
ಸೇರಿದೆವು ನಾವೆಲ್ಲ ದೇಗುಲದೊಳಗೆ
ಮಿಕ್ಕ ದೇವರಿಗೆ ಆಯಿತು ಪೂಜೆ,
ಪುನಸ್ಕಾರ, ಪುನಃ ಪೂಜೆ, ನಮಸ್ಕಾರ
ಕಾಲು ನೋವುವವರೆಗೆ ಸುತ್ತಾಯಿತು
ಎಲ್ಲ ದೇವರ ಸುತ್ತ, ಮತ್ತೆ, ಮತ್ತೆ.
ನನಗಾಗಲೇ ಆಗಿತ್ತು ಬಹಳ ಹಸಿವು
ಇನ್ನೇನು ಮುಗಿಯಿತು ಹೊರಡೋಣ.
ಪ್ರಸಾದ ಒಂದು ಅಂಗೈ ಸಾಕೆ?
ಮನೆಯಲ್ಲಿನ ರುಚಿ, ರುಚಿ ಊಟದ ನೆನಪಾಯ್ತು
ನಾಲಿಗೆಗೆ ನೀರೂರಲು ನನ್ನ ಅಪ್ಪಣೆ ಬೇಕೆ!
ಅಮ್ಮ ಅಡಿಮಾಡಿದಳು ವಿವಿಧ ಧಾನ್ಯಗಳ
ನವಗ್ರಹಗಳ ಮುಂದೆ ಇಡುತ್ತ
ಅಪ್ಪನ ಹಿಂದೆ ಅಮ್ಮನ ಸುತ್ತು ನಮಸ್ಕಾರ
ನನ್ನ ಕಡೆ ನೋಡುತ್ತ ಹೇಳಿದಳು, ಅಮ್ಮ
"ಏಕೆ ಸುಮ್ಮನೆ ನಿಂತೆ? ನೀನೂ ಸುತ್ತು ಹಾಕು,
ಸಕಲ ಕಷ್ಟಗಳು ಪರಿಹಾರವಾದೀತು"
"ಅಮ್ಮ! ಈ ನವಗ್ರಹದ ಸುತ್ತು ಸುತ್ತುವುದೇಕೆ?
ಈಗಾಗಲೇ ನಾವೆಲ್ಲ ಸುತ್ತುತ್ತಿರುವುದು
ನವಗ್ರಹಾಧಿಪತಿ ಸೂರ್ಯನನ್ನಲ್ಲವೇ!
ನಮ್ಮ ಜೊತೆ ಎಲ್ಲ ಗ್ರಹಗಳೂ ಹಾಕುತ್ತಿವೆ
ಪ್ರದಕ್ಷಿಣೆ, ಕೋಟಿ ಕೋಟಿ ವರುಷಗಳಿಂದ."
"ಅದೇನು ಮಾತೋ ನಿನ್ನದು? ಅದು ಹೇಗೆ ಸಾಧ್ಯ?"
ಅಮ್ಮ ಹೇಳಿದಳು ಫಟ್ಟನೆ, ಇನ್ನೂ ಸುತ್ತುತ್ತ.
"ಇಲ್ಲಿ ಕೇಳಮ್ಮ, ಈ ಗ್ರಹಗಳು ಸೂರ್ಯನನ್ನು
ಸುತ್ತುವುದರಲ್ಲಿ ನಮ್ಮ ಭೂಮಿಯನ್ನೂ ಸುತ್ತುತ್ತಿದ್ದಾರೆ
ಭೂಮಿಯ ಸುತ್ತೆಂದರೆ ನಮ್ಮ ಸುತ್ತೂ ಆಯಿತಲ್ಲವೇ ಅಮ್ಮ"
"ನಾವು ಮಾಡಿದರೆ ನವಗ್ರಹ ಪ್ರದಕ್ಷಿಣೆ
ಸ್ವಲ್ಪವಾದರೂ ಪುಣ್ಯ ನಮಗಾಯ್ತು ಸರಿ;
ನಮ್ಮನ್ನೆಲ್ಲಾ ಸುತ್ತಿದರೆ ನವಗ್ರಹಕ್ಕೆ
ನಮ್ಮಿಂದ ಆ ದೇವರಿಗೆ ಪಾಪ ಪ್ರಾಪ್ತಿ ಅಲ್ಲವೇನೋ?"
"ಇನ್ನೂ ಕೇಳು ಅಮ್ಮ, ನಮ್ಮ ಸೂರ್ಯ ಕೂಡ
ಆಗಸದಲ್ಲಿರುವ ನಕ್ಷತ್ರಗಳಂತೆ ಒಂದು ತಾರೆ
ಅವನಂತಹ ಕೋಟಿ ಕೋಟಿ ಸೂರ್ಯಗಳು ಗುಂಪು ಗುಂಪಿನಲ್ಲಿ
ಹೊಡೆಯುತ್ತಿದ್ದಾರೆ ನಮಸ್ಕಾರ ಅನೇಕ ಕೋಟಿ ವರುಷಗಳಿಂದ
ನಮ್ಮ ಕ್ಷೀರಪಥ ಗ್ಯಾಲಾಕ್ಸಿ ದೇವಾಲಯದಲ್ಲಿ
ಅದರ ಮಧ್ಯದಲ್ಲಿ ಯಾವ ದೇವರಿದ್ದಾನೋ ಯಾರು ಬಲ್ಲ!"
"ಇದೇನೋ, ಇಷ್ಟೊಂದು ಸುತ್ತು ನಮಸ್ಕಾರದ ಕಥೆ ನಿನ್ನದು!
ನನಗೂ ಹಸಿವೆ ಆಗುತ್ತಿದೆ ನಿನ್ನ ಮಾತು ಕೇಳಿ"
"ಎಲ್ಲಿ ನೋಡಿದರೂ ಕಾಣುವುದು ಪ್ರದಕ್ಷಿಣೆ, ಅಮ್ಮ.
ಪರಮಾಣುವಿನ ಬಗ್ಗೆ ಹೇಳಿದ್ದೆ ನೆನಪಿದೆ ತಾನೆ?
ಋಣ ಪರಮಾಣುಗಳು ಹೊಡೆಯುತ್ತಿವೆ ಸುತ್ತು ನಮಸ್ಕಾರ
ಮಧ್ಯದಲ್ಲಿ ಇದೆ ಪ್ರೋಟಾನು, ನ್ಯೂಟ್ರಾನುಗಳು."
"ನಿನ್ನ ಮಾತು ಕೇಳಿದರೆ, ನನ್ನ ತಲೆಯೇ ಸುತ್ತುತ್ತದೆ
ಸಾಕುಮಾಡು ನಿನ್ನ ಮಾತು, ಏಳು ಬೇಗ ಮನೆಗೆ ಹೊರಡೋಣ
ಮಾಡಿರುವೆ ಬಿಸಿಬೇಳೆ ಹುಳಿಯನ್ನ, ಸಿಹಿ, ಸಿಹಿ ಹೂರಣ"
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ