ಬುಧವಾರ, ಮೇ 12, 2010

ಲಿಂಗಾರ್ಚನೆ

ಲಿಂಗಾರ್ಚನೆ
ಕೆ. ಆರ್. ಎಸ್. ಮೂರ್ತಿ

ಗುಡಿಯೊಳಗಿನ ಕರಿಯ ಗುಂಡುಕಲ್ಲು
ಒರಳಿನೊಳಗೆ ನೇರ ನೆಟ್ಟಿ, ಮೆಟ್ಟಿರಲು

ಜನಕೋಟಿ ಕಣ್ಮುಚ್ಚಿ, ಕೈಮುಗಿದಿಟ್ಟು
ಆಗಾಗ ಆಸೆಯಲಿ ಮಿಂಚಿನಲಿ ಕಣ್ಬಿಟ್ಟು

ಕೆಲವರು ಒರಳನ್ನು ನೆಟ್ಟ ದಿಟ್ಟಿಸುತಿರಲು
ಗುಂಡುಕಲ್ಲನು ಆಶಿಸುತಿಹರು ಮಿಕ್ಕೆಲರು

ಅರ್ಚಕನು ಅಭಿಷೇಕದಲಿ ತಲ್ಲೀನನು
ಸವರುತಲಿ ಕೈಲಾಸದಲ್ಲಿ ಇರುವವನು

ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನು
ಕೊಡಗಟ್ಟಲೆ; ದೊಡ್ಡ ರಸ ಬಾಳೆಯ ಹಣ್ಣು

ತದೇಕ ಚಿತ್ತದಲಿ ನೋಡುವ ಕಣ್ಣ್ಯಾರದೋ
ಪದೇ, ಪದೇ ಕೈಯಲ್ಲಿ ಕೈಲಾಸ ಯಾರದೋ

ಚರ್ಮವೇ ಅಂಬರವಾಗಿ ಲಿಂಗ ಪೂಜೆಯ ಆಸೆ
ತಾವೇ ಪಾರ್ವತಿ, ಪರಮೇಶ್ವರರಾಗುವ ಮಹದಾಶೆ

ಚರ್ಮಾಂಬರನು ಮೂರ್ತಿ ಬದಲಾಗಿ ಕರಿ ಕಲ್ಲು
ಅವನ ಬಿಟ್ಟಿರದ ಪ್ರೇಮಿ ಹರನ ಕೆಳಗೆ ಒರಳು

ರುದ್ರಾಭಿಷೇಕ ಮುಗಿದು ಪಂಚಾಮೃತವ ಮೆದ್ದು
ಬೇಗೋಡಿ ಮನೆಗೆ ತೆರಳಿ ರುದ್ರನಿಗೆ ಶಾಂತಿಗೆಂದು

ಭಕ್ತ ಜಂಗುಳಿ ಶಿವ ಪಾರ್ವತಿಯರು ಓ! ಪರಾರಿ
ಕೈಲಾಸವೇ ಧರೆಗಿಳಿದು ಬಂದಿರುವುದೋ ಪೂಜಾರಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ