ಬುಧವಾರ, ಮೇ 26, 2010

ತಿರುಗು ಬಾಣ

ಸಾಹಿತ್ಯ ಪ್ರಕಾರದ ಹೊಸ ಪ್ರಯೋಗ:

ಕನ್ನಡ ಸಾಹಿತ್ಯದಲ್ಲಿ, ಭಾರತದ ಸೋದರ ಭಾಷೆಗಳಲ್ಲಿ, ಪ್ರಪಂಚದ ಮಿಕ್ಕೆಲ್ಲ ಬಾಷೆಗಳಲ್ಲಿಕೂಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಒಂದು ದಿಕ್ಕಿನಲ್ಲಿ ಮಾತ್ರ ಸಾಹಿತ್ಯ ನದಿಯು ಹರಿಯುತ್ತಿದೆ. ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ, ಲೇಖಕನು ಓದುಗರೊಂದಿಗೆ ತನ್ನ ಸೃಷ್ಠಿಯ ಪಾತ್ರಗಳ ಮೂಲಕವೂ, ಸನ್ನಿವೇಶಗಳ ಮೂಲಕವೂ, ಕೆಲವು ಸಾರಿ ನೇರವಾಗಿಯೂ ಮಾತನಾಡುತ್ತಾನೆ. ಕವನ, ಕಾವ್ಯ, ಸಣ್ಣ ಕಥೆ, ಕಾದಂಬರಿ, ನಾಟಕ ಮೊದಲಾದ ವಿವಿಧ ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಸಾಹಿತ್ಯನದಿಯ ದಿಕ್ಕನ್ನು ಓದುಗರ ಕಡೆಯಿಂದ ಲೇಖಕನ ದಿಕ್ಕಿಗೆ ಹರಿಸುವ ಪ್ರಯೋಗವಿದು:

‘ಲೇಖಕನಿಗೇ ತಿರುವಾದ ಸಾಹಿತ್ಯ ಪ್ರಕಾರವು ಪ್ರಪಂಚದಲ್ಲೇ ‘ದಿಕ್‌ ಪರಿವರ್ತಕ’ (Paradigm Shift); ಧೀಮಂತ ವಿಶ್ವಾಮಿತ್ರ ಸೃಷ್ಟಿ.

ಇದನ್ನು ಈಗಿರುವ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಉಪಯೋಗಿಸಬಹುದು. ಕವನ, ಸಣ್ಣಕಥೆ, ಕಾದಂಬರಿ, ನಾಟಕ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲೂ ಪರಿಣಾಮಕಾರಿಯಾಗಿ ಪ್ರಯೋಗಿಸಬಹುದು.

ಈ ಕಾರ್ಯಕ್ರಮದ ಕೇಂದ್ರ ಪಾತ್ರ: ಕರ್ಣ

ಕರ್ಣ - ವ್ಯಾಸ ಕಾರ್ಯಕ್ರಮ ಧಾಟಿ

ಮುನ್ನುಡಿ - ಕಾರ್ಯಕ್ರಮ ಪರಿಚಯ

೧. "ತಿರುಗು ಬಾಣ" ಸಾಹಿತ್ಯ ಪ್ರಕಾರದ ಕಿರುಪರಿಚಯ

೨ ಕರ್ಣ - ವ್ಯಾಸ ಕಾರ್ಯಕ್ರಮದ ಕೇಂದ್ರ ವಸ್ತುವಿನ ಪರಿಚಯ

೩ ಆದಿನದ ಕಾರ್ಯಕ್ರಮದ ಪರಿಮಿತಿಯ ಮಂಡನೆ

೪ ಪಾತ್ರಗಳ, ಪಾತ್ರಧಾರಿಗಳ ಹೆಸರುಗಳು

೫ ಪಾತ್ರಗಳ, ರಂಗವಿನ್ಯಾಸದ ಸೂಚನೆ

೬ ಧಿಡೀರ್ ಪಾತ್ರಧಾರಣೆಯ ಅಪೇಕ್ಷೆ ಇರುವ ಪ್ರೇಕ್ಷಕರಿಗೆ ಸೂಚನೆಗಳು

೭. ಪರದೆ ಕಳಚಿದಂತೆ ರಂಗದ ಮೇಲಿನ ಸನ್ನಿವೇಷದ ಕಿರುಪರಿಚಯ

ಮೊದಲ ಹಂತ:

ರಂಗದ ಮೇಲೆ: ಅರ್ಜುನ, ಕೃಷ್ಣ, ಕರ್ಣ

(ಕರ್ಣನು ರಣರಂಗದಲ್ಲಿ ರಕ್ತದ ಹೊಳೆಯ ಕೆಸರಿನಲ್ಲಿ ಹೂತು ಹೋಗಿರುವ ತನ್ನ ರಥವನ್ನು ಮೇಲೆತ್ತಲು, ತನ್ನ ಬಿಲ್ಲು, ಬತ್ತಳಿಕೆಗಳನ್ನು ಕೆಳಗಿಟ್ಟು, ರಥದ ಚಕ್ರಕ್ಕೆ ಕೈಯಿಟ್ಟು, ಭುಜವಿಕ್ಕಿ ಸೆಣೆದಾಡುತ್ತಿದ್ದಾನೆ.)



Krishna tells Arjuna to shoot the arrow and kill Karna, even though Karna is repairing the wheels of the chariot.



ಕೃಷ್ಣ: ಅರ್ಜುನ! ಇದೇ ಸದವಕಾಶ, ಹೂಡು ನಿನ್ನ ಬಾಣವನ್ನು. ಕರ್ಣನಿಗೆ ಗುರಿಯಿಟ್ಟು ನೇರವಾಗಿ ಹೊಡೆ ಬೇಗ.



Arjuna hesitates to follow Krishna's instructions.



ಅರ್ಜುನ: ಕೃಷ್ಣಾ! ಹೇ ಭಗವನ್! ನ್ಯಾಯವನ್ನು ನಮ್ಮಂಥ ಹುಲುಮಾನವರಿಗೆ ತಿಳಿಯ ಹೇಳಬೇಕಾದವನು ನೀನು. ಅದುಹೇಗೆ ನಾನು ರಥವನ್ನು ಬಿಟ್ಟು, ಸಾರಥಿಯ ಸಹಾಯವೂ ಇಲ್ಲದೆ, ತಾನೊಬ್ಬನೇ ಕೆಸರಿನಲ್ಲಿ ತೋಳು-ಭುಜಗಳನ್ನು ಕೊಟ್ಟು ಮಂಡಿಯೂರಿರುವ ಕರ್ಣನ ಕಡೆಗೆ, ಸೂತ ಪುತ್ರನಾದವನ ಕಡೆಗೆ, ಮಹಾಕ್ಷತ್ರಿಯನಾದ, ಅಸಮಾನ ಬಿಲ್ಲುಗಾರನಾದ ನಾನು ಬಾಣವನ್ನು ಬೀರುವುದು ಅದು ಹೇಗೆ ಸಾಧ್ಯ, ಅದಾವ ನ್ಯಾಯ, ಅದಾವ ಶೌರ್ಯ?



Krishna persuades Arjuna to shoot saying that it is an opportune time and to exploit it.



ಕೃಷ್ಣ: ಹೇ ನರೋತ್ತಮ! ಕರ್ಣನು ಜಗತ್ತಿನಲ್ಲೇ ಮಹಾಶೂರ, ಮಹಾಬಿಲ್ಲುಗಾರ. ಆದರೆ, ಅವನು ನಿನಗೂ, ದ್ರೌಪದಿಗೂ, ಪಾಂಡವರೆಲ್ಲರಿಗೂ ಮಾಡಿರುವ ಅನ್ಯಾಯಗಳನ್ನು ನೀನೇ ಯೋಚಿಸಿನೋಡು. ಇವನನ್ನು ಕೊಲ್ಲಲು ಈ ಕ್ಷಣಕ್ಕಿಂತ ಮುಂದೆ ಇನ್ನಾವ ಸಮಯವೂ ಸರಿಯಲ್ಲ. ಇದೇ ಮಹೂರ್ತ. ಬಿಡು ಬಾಣವನ್ನು. ತಡಮಾಡಬೇಡ!



Arjuna shoots the arrow to Karna.



ಅರ್ಜುನ: ನಿನ್ನ ಮಾತನ್ನು ಕೇಳಿ ನಾನು ಈ ಬಾಣವನ್ನು ಬಿಡುತ್ತಿದ್ದೇನೆ.



Karna collapses and starts his dialogue complaining and blaming Krishna and Arjuna for their illegal tactics.



ಕರ್ಣ: ಹಾ! ಇದೇನು ಆರ್ಜುನ, ಬಿಲ್ಲುಬಾಣವನ್ನು ಕೆಳಗಿಟ್ಟು, ಕೈಗಳನ್ನು ರಣರಂಗದಲ್ಲಿ ಸುರಿಯುತ್ತಿರುವ ರಕ್ತದ ಕೆಸರಿನಿಂದ ನನ್ನ ರಥವನ್ನು ಮೇಲೆತ್ತುವ ಸಮಯದಲ್ಲಿ ಹೇಡಿಯಂತೆ, ಕ್ಷತ್ರಿಯ ಧರ್ಮವನ್ನು ಮರೆತು, ಬಾಣಹೂಡಿ ಕೊಂದೆಯಲ್ಲೋ ನರಾಧಮ!

ಹೇ ಕೃಷ್ಣ! ಜೀವನ ಪೂರ್ತಿ ದುರಾದೃಷ್ಟ ಕಾಡಿದ ನನಗೆ ಮರಣ ಸಮಯದಲ್ಲೂ ಬಹಳ ಮೋಸವಾಗಿಹೊಯಿತಲ್ಲಾ. ಏಲ್ಲವನ್ನೂ ತಿಳಿದವನಂತೆ ನಾಟಕವಾಡುವ ನೀನು ಅರ್ಜುನನಿಗೆ ಅನ್ಯಾಯದ ಪಾಠಹೇಳಿ ನನ್ನನ್ನು ಕೊಲ್ಲಿಸಿದೆಯಲ್ಲಾ.



Arjuna responds by mentioning Karna's numerous mistakes through out Mahabharatha.



ಅರ್ಜುನ: ಕರ್ಣ! ನ್ಯಾಯದ ಭಾಷಣ ಕೊಡುವುದನ್ನು ಯಾವಾಗ ಕಲಿತೆ? ದ್ರೌಪದಿಯ ವಸ್ತ್ರಾಪಹರಣಕ್ಕೆ ಕಾರಣನಾದ ನೀನೂ, ದುರ್ಯೋಧನನೂ, ದುಶ್ಯಾಸನನೂ, ಸಜ್ಜನತೆ, ಪರಸ್ತ್ರೀ ಗೌರವಗಳನ್ನು ಕಸದಬುಟ್ಟಿಗೆ ಎಸೆದು, ದ್ರೌಪದಿಯನ್ನು ನಿನ್ನ ತೊಡೆಯಮೇಲೆ ಕೂರಿಸಿಕೊಳ್ಳಲು ನೀಚ ಮನೋಭಾವದಿಂದ ಮೆರೆದ ನಿನಗೆ ಇದೇನು ಸಾಯುವಕಾಲದಲ್ಲಿ ನ್ಯಾಯ ನೀತಿಗಳ ಅರಿವು ಆಗುತ್ತಿದೆಯೇನು ?



Krishna responds with similar statements and blames his 'blind' support to Duryodhana.



ಕೃಷ್ಣ: ಹುಟ್ಟಿನಿಂದ ಸೂತಪುತ್ರನೆಂದು ಕೊರಗುತ್ತಿದ್ದವನು, ಒಂದು ಸಣ್ಣ ರಾಜ್ಯದ ಲಂಚ ಕೊಟ್ಟ ಮಾತ್ರಕ್ಕೆ, ದುರ್ಯೋಧನನನ್ನು ಪ್ರಶಂಸೆ ಮಾಡುತ್ತಾ, ವಿವೇಚನೆಯನ್ನು ಕೂಡ ಮಾಡದೆ, ಅವನಿಗೆ ಸಾಸಿವೆ ಕಾಳಿನಷ್ಟೂ ಬುಧ್ಧಿ ಮಾತು ಹೇಳದೆ, ಕುರುಡನಂತೆ ಜೀವನವನ್ನೆಲ್ಲಾ ಕಳೆದ ನೀನು ನ್ಯಾಯ ವಾದಿಯಂತೆ ನಾಟಕ ಮಾಡುತ್ತಿರುವುದು ನೋಡಿದರೆ ನನಗೆ ನಗೆಯು ಬರುತ್ತಿದೆ.



Karna defends his master Duryodhana and defends his actions.



ಕರ್ಣ: ನನ್ನ ಆತ್ಮಗೌರವಕ್ಕೇ ಕುಂದು ಬಂದಹಾಗೆ ಮಾಡಿಬಿಟ್ಟ ನೀನೂ, ದ್ರೋಣರೂ, ಆ ಮುದುಕ ಭೀಷ್ಮರೂ ನನ್ನ ಶಕ್ತಿ ಸಾಮರ್ಥ್ಯಗಳಿಗೆ ಬೆಲೆಕೊಡದೆ, ಸೂತ ಪುತ್ರನೆಂದು ಹೀಯಾಳಿಸಿಕೊಳ್ಳುತ್ತಿರುವಾಗ, ವಿಶಾಲ ಮನೋಭಾವದ ನಿಜವಾದ ಗುಣವನ್ನು ಕಂಡ, ನನ್ನ ಆಪ್ತ ಸ್ನೇಹಿತ ದುರ್ಯೋಧನನ ಬಗ್ಗೆ ನಿನಗೇನು ಗೊತ್ತು? ಕಷ್ಟದಲ್ಲಿ ಒದಗುವನೇ ನಿಜವಾದ ಸ್ನೇಹಿತ. ನನ್ನ ಆಪ್ತಮಿತ್ರನ ಬಗ್ಗೆ ಇಂಥಾ ಮಾತುಗಳನ್ನಾಡಿದ್ದಕ್ಕೆ, ಇದೀಗಲೆ ಎದ್ದು ಬಂದು ನಿನ್ನ ಕತ್ತು ಹಿಚುಕಿಬಿಟ್ಟೇನು, ಎಚ್ಚರಿಕೆ!

ಪ್ರವೇಶ: ದುರ್ಯೋಧನ



Duryodhana blames Krishna and cries for Karna's collapse.



ದುರ್ಯೋಧನ: ಕರ್ಣಾ! ಜಗತ್ತಿನಲ್ಲೇ ಅದ್ವಿತೀಯ ಬಿಲ್ಲುಗಾರನಾದ ನಿನ್ನಂತಹಾ ಮಹಾವೀರನಿಗೆ ಇದೆಂಥಾ ಅನ್ಯಾಯವಾಯಿತು! ಯುಧ್ಧದಲ್ಲಿ ನಿನ್ನನ್ನು ಅಸ್ತ್ರವಿದ್ಯೆಯಲ್ಲಿ, ಧರ್ಮ ಯುಧ್ಧದಲ್ಲಿ ಕೊಲ್ಲಲು ಅಸಾಧ್ಯವೆಂದು, ಈ ಕುತಂತ್ರಿ ಕೃಷ್ಣನೂ, ಹೆಂಗೆಳೆಯರೊಡನೆ ಸೀರೆ ಒಡವೆಗಳನ್ನು ತೊಟ್ಟು ಭರತನಾಟ್ಯವನ್ನು ಮಾಡುವುದನ್ನು ಬಿಟ್ಟು, ರಣರಂಗದ ನಿಯಮಗಳನ್ನು ಅರಿಯದೆ ಅರ್ಜುನನು ಕಳ್ಳ ಕೃಷ್ಣನ ಹಿಂದೆ ಅಡಗಿಕೊಂಡು ಬಾಣವನ್ನು ನಿಸ್ಸಹಾಯಕನಾದ ನಿನ್ನೆಡೆಗೆ ಬಿಟ್ಟು ಕೊಂದಿರುವುದು ಪಾಂಡವ ವಂಶಕ್ಕೇ ಅವಮಾನದ ಸಂಗತಿ.



Krishna trickily mentions Vyaasa as the real architect of the roles in Mahabharatha.



ಕೃಷ್ಣ: ದುರ್ಯೋಧನ! ಸಿಕ್ಕಸಿಕ್ಕವರನ್ನೆಲ್ಲಾ ಸುಮ್ಮಸುಮ್ಮನೆ ಬೈಯುವುದು ತರವಲ್ಲ. ಈ ಮಹಾಭಾರತದ ಕವಿಯ ಸೃಷ್ಟಿಯಲ್ಲವೇ ನಾವೆಲ್ಲರೂ? ನೀನೂ, ಕರ್ಣನೂ ಪ್ರಲಾಪಿಸುತ್ತಿರುವ ವಿಷಯಗಳನ್ನು ನೇರವಾಗಿ ವೇದವ್ಯಾಸರಿಗೇ ನೀನು ಏಕೆ ಕೇಳಬಾರದು?



Duryodhana summons Vyaasa with uncontrollable anger.



ದುರ್ಯೋಧನ: ಕೃಷ್ಣ! ನಿನ್ನನ್ನು ನಾನು ಯಾವಾಗಲೂ ಗೌರವಿಸಿದ್ದೇ ಇಲ್ಲ! ಈ ನಿನ್ನ ಮಾತಿಗೊಂದು ಸಲ ಬೆಲೆ ಕೊಟ್ಟು ನೋಡುವೆ. ಯಾರಲ್ಲಿ! ಈದೀಗಲೇ ಕಾಡಿನಲ್ಲಿ ಕಣ್ಮುಚ್ಚಿ ಯಾವಾಗಲೂ ತಪಸ್ಸುಮಾಡುವ ಅ ವ್ಯಾಸರನ್ನೇ ಹಿಡಿದು ಎಳೆದು ತನ್ನಿ. ತಡಮಾಡಬೇಡಿ. ನನ್ನ ಜೀವವೇ ಎನ್ನುವಹಾಗಿದ್ದ ಮಹಾವೀರ ಕರ್ಣನಿಗೆ ಆದ ಅನ್ಯಾಯಗಳೆಲ್ಲವನ್ನೂ ಆ ವ್ಯಾಸರಿಗೇ ಹೇಳೊಣವಂತೆ. ಹೊರಡಿ ವಾಯುವೇಗದಲ್ಲಿ!

ಎರಡನೆಯ ಹಂತ

ಪ್ರವೇಶ: ವ್ಯಾಸರನ್ನು ಇಬ್ಬರು ಸೈನಿಕರು ಕರೆದುಕೊಂಡು ಬರುತ್ತಾರೆ



Vyaasa realizes what is happening: He is being questioned, interrogated and challenged by the characters he created.



ವ್ಯಾಸ: ಇದೇನಿದು! ತಪಸ್ಸುಮಾಡುತ್ತಿದ್ದ ನನ್ನನ್ನು ಬಲವಂತದಿಂದ ಎಳೆದು ಇಲ್ಲಿಗೇಕೆ ಕರೆದುಕೊಂಡುಬಂದಿರಿ? ಇದು ರಣರಂಗದಂತಿದೆ; ನಾನು ಬರೆದು ವಿಸ್ತರಿಸಿದ ಮಹಾಭಾರತದಂತೆಯೇ ಕಾಣುತ್ತಿದೆಯಲ್ಲಾ. ಜೊತೆಗೇ, ನಾನು ಸೃಷ್ಟಿಸಿದ ಪಾತ್ರಗಳೇ ನನ್ನ ಮುಂದೆ ನಿಂತು, ನನ್ನನ್ನೇ ಎದುರಿಸಿ ಮಾತನಾಡುತ್ತಿವೆಯಲ್ಲಾ! ಇದು ಜಗತ್ತಿನಲ್ಲೇ ಸರ್ವಕಾಲಕ್ಕೂ ಅತಿಶ್ರೇಷ್ಠ ಸೃಷ್ಟಿಶೀಲ ಕವಿಯೂ, ದಿವ್ಯಜ್ಞಾನಿಯೂ ಆಗಿರುವ ನನಗೇ ಅಚ್ಚರಿಯಾಗುತ್ತಿದೆಯೆಂದರೆ ಉತ್ಪ್ರೇಕ್ಷೆಯಾಗುವುದಿಲ್ಲ!

ನಾನು ಕಲ್ಪಿಸಿದ ಪಾತ್ರಗಳೇ ನನ್ನನ್ನು ತಿರು ಪ್ರಶ್ನೆ ಕೇಳುತ್ತಿರುವ ಹಾಗೆ ಮಾಡಿದ ಆ ಹುಲುಮಾನವ, ಆ ಕುತಮ್ತ್ರಿ, ಆ ಅತಿ ಉಧ್ಧಟದ ಅಹಂಕಾರಿ ಯಾರು ಇರಬಹುದು ? ! :-)



Duryodhana sums up the complaints and blames Vyaasa.



ದುರ್ಯೋಧನ: ವ್ಯಾಸರೇ! ಕಳ್ಳರ ಮಾತನ್ನು ಚಕ್ರವರ್ತಿಯಾದ ನಾನು ಕೇಳುವುದು ಎಂದರೇ ಅತಿಶಯವಾಗಿಯೂ ಅಸಾಧ್ಯ! ಆದರೆ, ಮಹಾಭಾರತದಲ್ಲಿ ನಡೆದ ಎಲ್ಲಕ್ಕೂ ನೀವೇ ಕಾರಣರು ಎನ್ನುತ್ತಾನೆ ಈ ಕಪಟಿ ಕೃಷ್ಣ.

ರಣರಂಗದಲ್ಲಿ ಅಸಮಾನ ಅಸ್ತ್ರಮೇಧಾವಿಯಾಗಿದ್ದ ನನ್ನ ಜೀವದ ಜೀವದಂತಿದ್ದ ಕರ್ಣನನ್ನು ಈ ರೀತಿ, ಕರ್ಣನ ಸಮಕ್ಕೆ ಹೋಲಿಸಲೂ ಅಯ್ಯೋಗ್ಯನಾದ ಅರ್ಜುನನಿಂದ ಏಕೆ, ಯಾವ ಮನಸ್ಸಿನಿಂದ ವಧೆಯನ್ನು ಅನೀತಿರೀತಿಯಲ್ಲಿ ಮಾಡಿಸಿದಿರಿ?

ನೀವು ನಿಜವಾಗಿಯೂ ಮಹಾಕವಿಯೂ, ಮಹಾಜ್ಞಾನಿಗಳೂ ಆಗಿದ್ದರೆ, ಇದ್ದಕ್ಕೆ ಉತ್ತರ ಹೇಳಿ.

(He starts responding to one question at a time.

Vyaasa responds…)

ವ್ಯಾಸ: ದುರ್ಯೋಧನ! ನಿನ್ನ ಪ್ರಶ್ನೆಗೆ ಒಂದೆರಡು ಮಾತುಗಳಲ್ಲಿ ಉತ್ತರ ಹೇಳುವುದು ಸುಲಭವಲ್ಲ. ಯಾವುದೇ ಪ್ರಶ್ನೆಗೂ ಒಂದೇ ಒಂದು ಉತ್ತರವಿರುವುದಿಲ್ಲ; ಯಾವುದೇ ಪ್ರಶ್ನೆಗಾಗಲಿ ನೋಡುವ ದೃಷ್ಟಿಗೆ ತಕ್ಕ ಉತ್ತರ ಸಿಕ್ಕುತ್ತದೆ. ನಾನು ಕರ್ಣನಿಗೆ ಈ ರೀತಿಯ ಸಾವು ಬರುವ ಹಾಗೆ ಬರೆದಿರುವುದಕ್ಕೆ ಕೆಲವು ಕಾರಣಗಳಿವೆ. ಎಲ್ಲ ದೃಷ್ಟಿಗಳಿಂದಲೂ ನೋಡಿ, ಸಮಗ್ರ ರೀತಿಯಲ್ಲಿ ತಿಳಿದುಕೊಂಡರೆ ಮಾತ್ರ ಸತ್ಯವು ಸ್ವಲ್ಪ, ಸ್ವಲ್ಪವಾಗಿ ಕಂಡುಬರುತ್ತಾ ಹೋಗುತ್ತದೆ. ಕರ್ಣನ ಜೀವನವನ್ನು ಮೊದಲಿನಿಂದ ಕೊನೆಯವರೆಗೂ ಅರ್ಥ ಮಾಡಿಕೊಳ್ಳಬೇಕು. ಯಾವ ಯಾವ ಸಂದರ್ಭದಲ್ಲಿ ನಾನು ಯಾವ ಕಾರಣಕ್ಕಾಗಿ ಏನೇನು ಬರೆದೆ ಎನ್ನುವುದನ್ನು ಒಂದೊಂದಾಗಿ ಹೇಳುತ್ತೇನೆ. ಎಲ್ಲವನ್ನೂ ಸಾವಧಾನವಾಗಿ ಕೇಳಿ, ಮಧ್ಯದಲ್ಲೇ ಯಾವ ನಿರ್ಧಾರಕ್ಕೂ ಬರಲು ಆತುರ ಪಡದೆ ಕೇಳುತ್ತಾ ಹೋದರೆ ನನ್ನ ಕವಿಮನವನ್ನು ನಿನಗೆ ತಿಳಿಸಬಲ್ಲೆ; ಆಗ ಮಾತ್ರ, ಕವಿಯಾಗಿ ನಾನು ಯಾವ ಕಾರಣದಿಂದಾಗಿ ಮಹಾಭಾರತದ ಕಥೆಯನ್ನು ಹೇಗೆ ಬೆಳೆಸಿಕೊಂಡು ಹೋದೆ ಎನ್ನುವುದು ನಿನಗೆ ತಿಳಿಯುತ್ತದೆ.
ಕರ್ಣನು ಮಹಾಶೂರ ಮತ್ತು ಅಜೇಯ. ಅವನನ್ನು ಅರ್ಜುನನು ಯುದ್ಧದಲ್ಲಿ ಗೆಲ್ಲಲು ಸಾಧ್ಯವಿರಲಿಲ್ಲ. ಒಬ್ಬ ಮಹಾ ಪರಾಕ್ರಮಿಯು ಯುಧ್ಧದಲ್ಲಿ ಸತ್ತರೂ ಅದಕ್ಕೆ ಮುಂಚೆ ಅವನು ಸೋಲಬೇಕಾಗಿಲ್ಲ; ಸತ್ತವನು ಸೋಲದಿರಬಹುದು; ಕೊಂದವನು ಗೆಲ್ಲದೇ ಇರಬಹುದು. ಧರ್ಮಯುದ್ಧದ ಕಹಳೆ ಊದುವವರೂ ಕೆಲವು ಸಮಯಗಳಲ್ಲಿ ಧರ್ಮದ ದಾರಿಯಿಂದ ಕವಲು ದಾರಿ ಹಿಡಿಯಬಹುದು. ಅಂತೆಯೇ, ಎಲ್ಲರ ಕಣ್ಣಿಗೆ ದುಷ್ಟ, ದುರಾತ್ಮನಾಗಿ ಕಂಡುಬರುವ ಕೆಟ್ಟ ಸ್ವಭಾವದವನೂ ಕೆಲವು ಸಾರಿ ಜನೋಪಕಾರಿಯಾಗಬಹುದು. ಈ ದ್ವಂದ್ವವು ಉಪ್ಪುಖಾರಗಳನ್ನು ತಿಂದ, ರಕ್ತ ಮಾಂಸದ ಎಲ್ಲ ಮಾನವನಿಗೂ ನೆರಳಂತೆ ಹಿಂಬಾಲಿಸಿಕೊಂಡು ಬರುತ್ತದೆ. ಮನುಷ್ಯ ದೇಹವನ್ನು ತೆಗೆದುಕೊಂಡ ಶ್ರೀ ಕೃಷ್ಣನನ್ನೂ ಕಾಡದೇ ಬಿಡುವುದಿಲ್ಲ ಎಂದು ತೋರಿಸುವುದಕ್ಕೆ ಶ್ರೀ ಕೃಷ್ಣನೇ ದುರ್ಬುದ್ಧಿಯನ್ನೂ, ದುರ್ಮಾರ್ಗವನ್ನೂ ಅರ್ಜುನನಿಗೆ ಹೇಳಿಕೊಡುವ ಸಂದರ್ಭವನ್ನು ಕರ್ಣನ ಸಾವಿನ ಘಟನೆಯಲ್ಲಿ ಅಳವಡಿಸಿಕೊಂಡೆ.
ಕರ್ಣನ ಸಾವಿಗೆ ಒಂದೊಂದೇ ಹಂತದಲ್ಲಿ ಸಿದ್ಧತೆಗಳಾಗುತ್ತಿದ್ದವು; ಒಂದು ದೃಷ್ಟಿಯಲ್ಲಿ ನೋಡಿದರೆ ಈ ಸಿದ್ಧತೆಗಳಲ್ಲೆಲ್ಲಾ ಕರ್ಣನೂ ದಾನಶೂರನಾಗಿಯಾದರೂ ಪಾತ್ರ ವಹಿಸಿದ.

(Karna cries and complains about his birth with Kunti as the mother, and that she and Krishna hid the facts throughout his life.)

ಕರ್ಣ: ಹುಟ್ಟಿನ ಸಮಯದಿಂದಲೇ ನನಗೆ ಮೋಸವಾಗಿಹೋಗಿದೆ. ನಾನು ನನ್ನ ಅಮ್ಮನ ತೊಡೆಯಮೇಲೆ ಹಾಯಾಗಿ ನಿದ್ರಿಸುವ, ತಾಯಿಯ ಪ್ರೀತಿಯ ಉಣಿಸಿನ ಸೌಭಾಗ್ಯವಿಲ್ಲದೆಯೆ, ಸೂತ ಪುತ್ರನೆಂದು ಬೆಳೆಯುವ ಹಣೆಬರಹ ನನ್ನ ಪಾಲಾಯಿತಲ್ಲಾ :-(

ಪ್ರವೇಶ: ಕುಂತಿ



(Kunti responds to Karna about the birth out of wedlock, as a simple curiosity of a young teenager, yet defends herself as a good mother with examples of Pandavas.)


ಕುಮ್ತಿ: "ಅಮ್ಮಾ" ಎಂದು ನೀನು ಬೋಧಿಸಿ ಕರೆದದ್ದನ್ನು ಕೇಳಿ ಬಂದೆ ನನ್ನ ಕಂದ. ನಾನು ಹರೆಯಕ್ಕೆ ಬಂದಾಗ ಋಷಿವರ್ಯರು ಕೊಟ್ಟಿದ್ದ ಅಮೂಲ್ಯ ವರಗಳನ್ನು ಸುಮ್ಮನೇ ನಂಬಲಾಗದೆ, ಹೇರಳ ಕಾಂತಿಯಿಂದ ಪ್ರಜ್ವಲಿಸುವ ಸೂರ್ಯನನ್ನು ಒಂದು ದಿನ ಪ್ರಾತಃ ಕಾಲ ನೋಡಿ ನನಗೆ ವರವಾಗಿ ಕೊಟ್ಟಿದ್ದ ಮಂತ್ರವನ್ನು ಉಛ್ಛರಿಸಿಕೊಂಡು ಅವನನ್ನು ಅರಾಧಿಸಿದೆ.

ಇದು ನನ್ನ ಹುಡುಗುತನದ ಕುತೂಹಲವೆಂದಾದರೂ ತಿಳಿದುಕೊ; ಮುಂದಿನ ಪರಿಣಾಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಬೇಜವಾಬ್ದಾರಿ ಹೆಂಗಸಿನ ಚೆಲ್ಲಾಟವೆಂದಾದರೂ ಅವಹೇಳನ ಮಾಡು. ವಿವಾಹಕ್ಕೆ ಮುಂಚೆಯೇ ಪಡೆದ ಕೂಸನ್ನು ಅರಮನೆಯಲ್ಲಿ ಸಾಕಿದರೆ, ಯಾವ ರಾಜಕುಮಾರನೂ ನನ್ನನ್ನು ವರಿಸುವುದಿಲ್ಲ ಎಂದು ಸ್ವಾರ್ಥಿಯಾಗಿ, ಭಯಪಟ್ಟು ನಿನ್ನನ್ನು ನೀರಿನಮೇಲೆ ತೇಲಿಬಿಡಬೇಕಾಯಿತು. ಅಂದು ನನಗಾದ ದುಖವನ್ನು ಯಾರೂ ಅರ್ಥಮಾಡಿಕೊಳ್ಳರು ಕಂದಾ! :-( :-(

ನನಗೆ ಈ ನನ್ನ ಪಾಪಕ್ಕೆ ಜೀವನದಲ್ಲಿ ಸಾಕಷ್ಟು ಶಾಸ್ತಿಯಾಗಿದೆ. ರ‍ೋಗಿಷ್ಟನಾದ ಗಂಡನನ್ನು ಪಡೆದದ್ದು, ನನ್ನ ಇನ್ನಿತರ ಮಕ್ಕಳೂ, ಅಂದರೆ ಪಾಂಡವರು, ಜೀವನ ಪೂರ್ತಿ ವನವಾಸ, ಅಜ್ಞಾತವಾಸ ಇತ್ಯಾದಿ ಕಷ್ಟಗಳನ್ನು ಅನುಭವಿಸುವುದನ್ನು ನನ್ನ ಕಣ್ಣಾರೆ ನೋಡಿ ಕಣ್ಣೀರು ಸುರಿಸಿದ್ದನ್ನು ವರ್ಣಿಸಲಸಾಧ್ಯ. ಜೊತೆಗೆ, ನೀನು ನಿನ್ನ ತಮ್ಮಂದಿರನ್ನು ಎದುರುಹಾಕಿಕೊಂಡ ಕೌರವರನ್ನು ಆಶ್ರಯಿಸಿ ಜೀವನಮಾಡಿದ್ದನ್ನು ಕಂಡು ನನಗಾದ ಶೋಕ ಮತ್ಯಾರಿಗೂ ಬೇಡ :-( :-(



Karna blames Kunti again for the special boon she begged from Karna of 'Not using the same arrow twice'.

Karna blames Kunti again of it as an excuse to save Arjuna's life.



ಕರ್ಣ: ನಿನ್ನ ದುಹ್ಖದ ಜೀವನವನ್ನು ಕೇಳಲಾರೆನಮ್ಮಾ :-( ಆದರೆ, ನೀನು ನನ್ನಿಂದ "ತೊಟ್ಟ ಬಾಣವನ್ನು ಮತ್ತೆ ತೊಡಬೇಡ ಕಂದ" ಎಂದು ಕೇಳುವಾಗ ನಿನ್ನ ಮಾತೃ ವಾತ್ಸಲ್ಯ ಎಲ್ಲಿ ಹೋಗಿತ್ತು?! ನಿನ್ನ ಪ್ರೀತಿಯ ಮಗ ಅರ್ಜುನನನ್ನು ಉಳಿಸಿಕೊಳ್ಳಲು, ನೀನು ನನ್ನ ಭವಿಷ್ಯವನ್ನು ಮೂಲೆಗೊತ್ತಿ, ಮಾತೃ ವಾತ್ಸಲ್ಯಕ್ಕೆ ತರ್ಪಣ ಬಿಟ್ಟೆಯಲ್ಲಾ! ನನ್ನ ಕೆಟ್ಟ ಹಣೇಬರಹಕ್ಕೆ ಮೊದಲಿಲ್ಲ, ಕೊನೆಯಿಲ್ಲ; ಒಬ್ಬರು ಉಳಿಯಲು ಇನ್ನೊಬ್ಬರು ತಮ್ಮ ಜೀವವನ್ನೇ ತ್ಯಾಗ ಮಾಡಬೇಕಲ್ಲವೆ! :-( :-(



Kunti repeats the fact of her request for Karna to join the Pandavas in the war. She says that would have saved Karna's collapse.



ಕುಂತಿ: ಕರ್ಣ! ನಾನು ನಿನ್ನಿಂದ ವರವನ್ನು ಕೇಳುವ ಮೊದಲೇ, ನಿನ್ನನ್ನು ಪಾಂಡವರ ಪಕ್ಷಕ್ಕೆ ಕರೆದೆನೆನ್ನುವುದನ್ನು ಮರೆಯಬೇಡ. ಆದರೆ, ನಿನ್ನ ಹಟ ನೀನು ಬಿಡಲಿಲ್ಲ; ದುಷ್ಟ ದುರ್ಯೋಧನನ ಸಹವಾಸ ತೊರೆಯಲಿಲ್ಲ; ತಮ್ಮಂದಿರ ಮೋಹಕ್ಕಿಂತ, ತಾಯಿಯ ಬುಧ್ಧಿಮಾತಿಗಿಂತ, ದುರ್ಜನರ ಸಂಗವೇ ಇಂಪಾದ ಸಂಗೀತ ವಾಯಿತು ನಿನ್ನ ಕುರುಡು ಅಹಂಕಾರದ, ಅಪ್ರಯೋಜಕ ಸ್ವಾಮಿ ನಿಷ್ಟೆಯ ಧರ್ಮಕ್ಕೆ!



Krishna reminds the characters that it was all a plot scripted by Vyaasa.



ಕೃಷ್ಣ: ಕರ್ಣ! ಕುಂತಿ! ಇದೆಲ್ಲಕ್ಕೂ ಕಾರಣ ಆ ವೇದ ವ್ಯಾಸರಲ್ಲವೆ! :-) ವ್ಯಾಸರು ನಿಮ್ಮ ಜೀವನವನ್ನು ಈ ರೀತಿಯಲ್ಲೇ ರೂಪಿಸಿರುವುದರಿಂದ ಅವರನ್ನೇ ಕೇಳಿನೋಡೋಣ :-) :-)


(Vyaasa responds …

ವ್ಯಾಸ: ಮಗು ಕುಂತಿ ! ಚಿನ್ನವು ಪುಟಕ್ಕೆ ಹಾಕಿದಮೇಲೆ ತಾನೆ ತನ್ನ ಹೊಳಪನ್ನು ತೋರಿಸುತ್ತದೆ. ವಜ್ರವು ಅಪಾರ ಒತ್ತಡದಿಂದಾಗಿಯಲ್ಲವೆ ಅಬೇಧ್ಯವಾಗುವುದು. ಅದಕ್ಕೆ ಬಹಳ ಶ್ರಮವನ್ನು ಹಾಕಿ, ಕುಶಲತೆಯಿಂದ ಅದರ ಬಹುರ್ಮುಖಗಳನ್ನು ಮೂಡಿಸಿದಾಗ ಮಾತ್ರವಲ್ಲವೆ ಆ ವಜ್ರವು ಹೊಳೆಯುವುದು ! ಹಾಗೆಯೇ, ನೀನೂ, ನಿನ್ನ ಮಕ್ಕಳೆಲ್ಲರೂ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಗೆದ್ದು ವಿಜಯಿಗಳಾಗಿದ್ದು?
ವ್ಯಾಸ: ಕರ್ಣ! ಸಾಹಿತ್ಯದ ಎಲ್ಲಾ ಪ್ರಕಾರಗಳ ಉದ್ದೇಶ ಹಾಗೂ ಗುರಿ ಸಮಾಜದ ವಿವಿಧ ಮುಖಗಳನ್ನು ಚಿತ್ರೀಕರಿಸುವುದು; ಆದರೆ, ಸಾಹಿತ್ಯವು ಸುಮ್ಮನೆ ಸಮಾಜಕ್ಕೆ ಕನ್ನಡಿಯನ್ನು ಹಿಡಿಯಬೇಕಾಗಿಲ್ಲ ; ಓದುಗನಿಗೆ ಹೇಳಬೇಕೆಂದುಕೊಂಡಿರುವ ವಸ್ತು ವನ್ನು ಬಣ್ಣೀಕರಿಸುವುದು, ಸ್ವಾರಸ್ಯಕರವಾಗಿ ಮಾಡುವುದು ಸಾಹಿತ್ಯದ ವೈಶಿಷ್ಟ್ಯ. ಸುಮ್ಮನೆ ಕನ್ನಡಿಹಿಡಿದು ತೋರಿಸುವುದಷ್ಟೇ ಆಗಿದ್ದಿದ್ದರೆ, ಸಾಹಿತ್ಯವು ಆಕರ್ಷಕವಾದ ಮಾಧ್ಯಮವಾಗಿರುತ್ತಿರಲಿಲ್ಲ ; ಸೃಷ್ಟಿಶೀಲತೆಗೆ ತವರುಮನೆಯಾಗಿ, ಲೇಖಕರ ಕಲ್ಪನಾ ಮನೋಭಾವವನ್ನು ಉತ್ತೇಜಿಸಿ, ಬರೆಯುವಾಗ ಲೇಖಕನಿಗೂ, ಓದುವಾಗ ಓದುಗರಿಗೂ ಮನರಂಜನೆ ನೀಡುವ ಮಹಾ ಮಾತೆಯಾಗಿ ಸಾಹಿತ್ಯವು ನಮ್ಮೆಲ್ಲರ ಮನಕ್ಕೆ ರಸದೌತಣವನ್ನು ನೀಡುತ್ತದೆ.

ಕರ್ಣ: ಹಾಗಾದರೆ, ನನ್ನ ಕಥೆ, ನಮ್ಮೆಲ್ಲರ ಕಥೆ ನಿಜವಾಗಿಯೂ ನಡೆದದ್ದಲ್ಲವೇ?
ವ್ಯಾಸ: ನಾನು ಮಹಾಭಾರತವನ್ನು ರಚಿಸಿದಾಗ, ನನ್ನ ಮುಂದೆ ಕಂಡ, ನನ್ನ ಗಮನಕ್ಕೆ ಬಂದ ಪಾತ್ರಗಳನ್ನೂ, ಸನ್ನಿವೇಶಗಳನ್ನೂ, ನಡೆದದನ್ನು ನಡೆದ ಹಾಗೆಯೇ ದಾಖಲೆ ಮಾಡಲಿಲ್ಲ ; ಕಾರಣ, ಚಾರಿತ್ರಿಕ ದಾಖಲೆಯು ಸೃಷ್ಟಿ ಶೀಲ ಸಾಹಿತ್ಯವಾಗಲಾರದು. ಆದರೆ, ಕೆಲವು ಸಾರಿ ನಡೆದ, ಗಮನಕ್ಕೆ ಬಂದ ಘಟನೆಗಳನ್ನೂ, ನಿಜ ಜೀವನದ ಪಾತ್ರಗಳನ್ನೂ ಕಥೆಯಲ್ಲಿ ಸ್ವಾರಸ್ಯಕರವಾಗಿ ಹೆಣೆದಿದ್ದೇನೆ. ಇದರ ಜೊತೆಗೆ, ನನ್ನ ಕಲ್ಪನಾ ಲೋಕದಲ್ಲಿ ಹುಟ್ಟಿಬಂದ ಕಥೆಗಳನ್ನು ಸೂಕ್ತವಾಗಿ ಬೆರೆಸಿದ್ದೇನೆ. ಸಮಾಜದ ಸಂಪ್ರದಾಯಗಳನ್ನು ವಿಮರ್ಶಿಸಬೇಕೆನಿಸಿದಾಗ, ಅವಕ್ಕೆ ಪಾತ್ರಗಳ ರೂಪ ಕೊಟ್ಟು, ಸನ್ನಿವೇಶಕ್ಕೆ ಹೊಂದುವಂತೆ ಕಥೆಯನ್ನು ಹೇಳಿದ್ದೇನೆ. ಉದಾಹರಣೆಗೆ, ನಮ್ಮ ಕಾಲದಲ್ಲಿ ಇದ್ದ ವೀರ್ಯದಾನದ ನಿಯೋಗ ಪದ್ಧತಿಯನ್ನು ಬೇರೆ ಬೇರೆ ಸನ್ನಿವೇಶಗಳಲ್ಲಿ ನನ್ನ ಕಲ್ಪನೆಯ ಕಣ್ಣು ಕಂಡಹಾಗೆ ಅಳವಡಿಸಿಕೊಂಡಿದ್ದೇನೆ. ಚಿತ್ರ ವೀರ್ಯ, ವಿಚಿತ್ರವೀರ್ಯರಿಗೆ ಮಕ್ಕಳಾಗದ ಸಮಯದಲ್ಲಿ ಋಷಿಗಳನ್ನು ಉಪಯೋಗಿಸಿಕೊಂಡಿದ್ದೇನೆ. ನನ್ನ ಕಥೆಯು ಮುಂದುವರಿದ ಹಾಗೆ ಕುಂತಿಯ ಪಾತ್ರಕ್ಕೆ ಋಷಿಗಳಿಂದ ನೇರವಾಗಿ ನಿಯೋಗ ತೋರಿಸಿದರೆ ಕಥೆಯು ರಸವತ್ತಾಗುವುದಿಲ್ಲವೆಂದು ಅನೇಕ ರೂಪಗಳನ್ನು ಕೊಟ್ಟಿದ್ದೇನೆ. ಸೂರ್ಯ, ಯಮ ಧರ್ಮರಾಯ, ವಾಯು, ಇಂದ್ರ ಮತ್ತು ಅಶ್ವಿನಿ ದೇವತೆಗಳನ್ನು ಉಪಯೋಗಿಸಿಕೊಂಡಿದ್ದೇನೆ. ದೇವತೆಗಳ ವರಪ್ರಸಾದದಿಂದ ಹುಟ್ಟಿದವರೆಂದರೆ ಹುಟ್ಟಿದ ಕುಂತಿಯ ಮಕ್ಕಳಿಗೆ ಮಹಾ ಶಕ್ತಿಗಳನ್ನು ತೋರ್ಪಡಿಸಬಹುದೆನ್ನುವ ಉದ್ದೇಶದಿಂದ ಕುಂತಿಯ ಪಾತ್ರದಲ್ಲಿ ಮಹಾ ಋಷಿಗಳ ಸೇವೆಯನ್ನು ಮಾಡಿ ವರಗಳನ್ನು ಪಡೆಯುವ ಕಥೆ ಕಟ್ಟಿದೆ. ಐದು ವರಗಳನ್ನು, ಪಂಚಪಾಂಡವರಿಗೆಂದು ಲೆಕ್ಕಹಾಕಿ ಕಥೆ ಬರೆದೆ. ಇನ್ನೂ ಕನ್ಯೆಯಾದ ಸುಂದರ ಕುಂತಿಗೆ ಮದುವೆಗೆ ಮುಂಚೆಯೇ ಈ ವರದಾನದಿಂದ ಮಗುವಾದರೆ ಹೇಗಿರುತ್ತದೆಂದು ನನ್ನ ಕುತೂಹಲ ಕಾಡಿಬಿಟ್ಟಿತು. ನನ್ನ ಕುತೂಹಲವನ್ನು ಕುಂತಿಯ ಪಾತ್ರಕ್ಕೆ ಧಾರೆಯೆರೆದೆ. ಅಂತೆಯೇ, ಕುಂತಿಯು ಇನ್ನೂ ಕನ್ಯೆಯಾಗಿರುವಾಗಲೇ ತಾಯಿಯಾಗಿಬಿಟ್ಟಳು. ಸೂರ್ಯನ ವರದಿಂದ ಹುಟ್ಟಿ ಪ್ರಜ್ವಲಮಯಿಯಾದ ಮಗುವಿಗೆ ಏಕಾಂಗಿಯಾಗಿ, ತಾಯಿಯಿಂದ ಅಗಲುವುದು ಒಂದೇ ದಾರಿಯಾಗಿ ಉಳಿಯಿತು. ಬರೆದ ಕಥೆಯನ್ನು ಅಳಿಸಿ ಕಥೆ ಬದಲಿಸುವ ಅಭ್ಯಾಸ ನನಗಿರಲಿಲ್ಲ. ಇದಕ್ಕೆ ಮುಂಚೆಯೇ ಕಥೆಯಲ್ಲಿ ನಿಪುಣತನದಿಂದ ವ್ಯಾಸನಾದ ನಾನು ಹೇಳಿದ ಕಥೆಯನ್ನು ಸಾಕ್ಷಾತ್‌ ಗಣೇಶನೇ ಲೇಖನಿಯನ್ನು ಹಿಡಿದು ಬರದಂತೆ ಬರೆದರೆ ಓದುಗರೆಲ್ಲರೂ ನಿಷ್ಠೆಯಿಂದ ಓದುತ್ತಾರೆ, ನನ್ನ ಕಥೆಯು ಜನಪ್ರಿಯವಾಗುತ್ತದೆ ಎಂಬ ಕಾರಣದಿಂದ ಆ ರೀತಿಯಲ್ಲಿ ಕಥೆಯನ್ನು ಬರೆದಾಗಿತ್ತು. ಅಲ್ಲದೆ, ನಾನು ಪ್ರತಿದಿನ ಬ್ರಾಹ್ಮೀ ಮಹೂರ್ತದಲ್ಲಿ ಪ್ರಾರಂಭಿಸುವಾಗ ವಿಘ್ನೕಶ್ವರನು ನನ್ನ ಮುಂದೆಯೇ ಕುಳಿತು ನನ್ನ ಕೈಯಲ್ಲಿ ಬರೆಸುತ್ತಿದ್ದಾನೆ ಎಂಬ ದೈವಿಕ ಕಲ್ಪನೆ ನಡೆದಿತ್ತು. ಹಾಗಾಗಿ ನನ್ನ ಕಲ್ಪನೆಯ ಗಣೇಶನು ಬರೆದದ್ದನ್ನು ಅಳಿಸಿಬರೆಯುವ ಮೊಂಡನಾಗಬಾರದು ಎನ್ನುವ ಮನೋಭಂಗಿಯಲ್ಲಿ ಕಥೆಯನ್ನು ಮುಂದುವರಿಸಿಬಿಟ್ಟೆ.

ದುರ್ಯೋಧನ: ಹಾಗಾದರೆ, ಭೀಷ್ಮರೇಕೆ ಪಾಂಡವರ ಕಡೆಗೇ ಯಾವಾಗಲೂ ಮಾತನಾಡುತ್ತಿದ್ದರು. ಮೊದಲಿನಿಂದಲೂ ಅವರ ಒಲವು ಕುಂತಿಯ ಮಕ್ಕಳ ಮೇಲೆಯೇ ಬೀರಿತ್ತು.
ಭೀಷ್ಮ : ದುರ್ಯೋಧನ! ‘ಪಾಂಡವರಿಗೆ ಸಲ್ಲ ಬೇಕಾಗಿದ್ದ ರಾಜ್ಯವನ್ನು ಕೊಟ್ಟುಬಿಡು; ಪಾಂಡವರು ನಿನಗೆ ಏನೂ ದ್ರೋಹ ಮಾಡಿಲ್ಲ’ ಎಂದು ಕೊನೆಯವರೆಗೂ ನಿನಗೆ ಬುಧ್ಧಿವಾದವನ್ನು ಹೇಳಿದೆ. ನಿನ್ನ ಕುತ್ಸಿತ ಬುಧ್ಧಿಗೆ ನನ್ನ ಬುಧ್ಧಿವಾದವೂ, ಮಿಕ್ಕೆಲ್ಲ ಹಿರಿಯವರ ಮಾತುಗಳೂ ತಟ್ಟಲಿಲ್ಲ. ಹಿರಿಯವನಾದ ಯುಧಿಷ್ಠಿರನು ವಯಸ್ಸಿನಲ್ಲಿ ಚಿಕ್ಕವಯಸ್ಸಿನಿಂದಲೇ ಧರ್ಮಯುಕ್ತವಾದ ಅಲೋಚನೆ, ನಡತೆ, ಸಂಯಮಗಳನ್ನು ಪ್ರದರ್ಶಿಸಿದ್ದರಿಂದ ನಮಗೆಲ್ಲರಿಗೂ ಅವನ ಮೇಲೆ ವಾತ್ಸಲ್ಯ, ಅಭಿಮಾನ, ಪ್ರೀತಿಗಳಿದ್ದಿದ್ದು ಸಹಜವಲ್ಲವೇ?
ಧೃತರಾಷ್ಟ್ರನು ಕುರುಡನಾಗಿದ್ದು, ಪಾಂಡುವು ರೋಗಿಷ್ಟನಾಗಿದ್ದುದಲ್ಲದೆ ಚಿಕ್ಕವಯಸ್ಸಿನಲ್ಲೇ ತೀರಿಕೊಂಡ. ನನ್ನ ಬಲತಮ್ಮಂದಿರಾದ ಚಿತ್ರವೀರ್ಯ, ವಿಚಿತ್ರವೀರ್ಯರುಗಳಿಗೆ ಬಲಗೈಯಾಗಿ ರಾಜ್ಯಭಾರ ಮಾಡಲು ಸಹಾಯಕನಾದ ನನಗೆ, ಅವರ ಮಕ್ಕಳ ಮತ್ತು ಮೊಮ್ಮಕ್ಕಳ ರಾಜ್ಯಗಳನ್ನೂ ನಿಭಾಯಿಸಬೇಕಾದ ವಿಧಿ ನನ್ನದಾಯಿತು. ಆಜನ್ಮ ಬ್ರಹ್ಮಚಾರಿಯಾದ ನನಗೆ ನಮ್ಮ ವಂಶದ ರಾಜ್ಯಭಾರದ ಹೊಣೆಯನ್ನು ವಿಧಿ ಹೇರಿಸಿಬಿಟ್ಟಿತು. ಆದ್ದರಿಂದಲೇ, ನಾನು ಪಾಂಡವರು ಮತ್ತು ಕೌರವರ ಮಧ್ಯೆ ಸಹಕಾರದ ವಾತಾವರಣವನ್ನು ಬೆಳೆಸಿ ರಾಜ್ಯಭಾರದ ಹೊಣೆಯನ್ನು ಕಳೆದುಕೊಳ್ಳುವ ಶತಪ್ರಯತ್ನಗಳನ್ನು ಮಾಡಿದೆ. ದುರ್ಯೋಧನ! ಆದರೆ ನೋಡು: ಮಹಾಭಾರತದ ಕುರುಕ್ಷೇತ್ರ ಮಹಾಯುದ್ಧದ ಕೊನೆಯವರೆಗೂ ನನ್ನ ಮುದಿವಯಸ್ಸಿನಲ್ಲೂ ಬಿಲ್ಲು ಬಾಣಹಿಡಿದು ನನ್ನ ಪ್ರೀತಿಯ ಬಂಧುಗಳ ಮಧ್ಯೆ ಯುದ್ಧವನ್ನು ಮಾಡುತ್ತಾ ಶರಮಂಚದ ಮೇಲೆ ಸಾಯಲು ಕಾಯುವ ಗತಿ ನನಗೆ ಬಂತು.
ವ್ಯಾಸ: ಭೀಷ್ಮ ! ಜೀವನದಲ್ಲಿ ವಿಧಿಯು ನಾವು ಕನಸು ಕಾಣದ, ಆಸೆ ಆಸ್ಥೆಗಳಿಂದ ಬಯಸದ ಪಥಕ್ಕೆ ಎಲ್ಲರನ್ನೂ ತೆಗೆದುಕೊಂಡು ಹೋಗುತ್ತದೆ. ನೀವು ಆಜನ್ಮ ಬ್ರಹ್ಮಚಾರಿಯಾಗಿರುತ್ತೇನೆಂದು ಸತ್ಯವತಿಗೆ ಮಾತುಕೊಟ್ಟಾಗ ನಿಮಗೂ ಮತ್ತು ಸತ್ಯವತಿಗೂ ಭವಿಷ್ಯದ ಅರಿವಿರುವುದಕ್ಕೆ ಸಾಧ್ಯತೆಯಿರಲಿಲ್ಲ. ವಿಧಿಯನ್ನು ಯಾರುತಾನೆ ಬಲ್ಲರು! ಸತ್ಯವತಿಯ ಮತ್ತು ಅವಳ ತಂದೆಯ ಸ್ವಾರ್ಥಕ್ಕೆ ಮಾರುಗೊಟ್ಟು ನೀವು ಅಸಮಾನ್ಯ ಶಪಥವನ್ನು ತೆಗೆದುಕೊಂಡು ಬಿಟ್ಟಿರಿ.
ಭೀಷ್ಮ: ಪೂಜ್ಯ ವೇದವ್ಯಾಸರೆ! ನೀವು ನಿಮ್ಮ ಮಾತೆಯಾದ ಸತ್ಯವತಿಯ ಬಗ್ಗೆ ಹೀಗೆ ಹೇಳುತ್ತಿರುವುದನ್ನು ಕೇಳಿಯೂ ನನ್ನ ಕಿವಿಯು ನಂಬಲಾಗುತ್ತಿಲ್ಲ.
ವ್ಯಾಸ: ಭೀಷ್ಮರೇ! ಕವಿಯ ದೃಷ್ಟಿಯಲ್ಲಿ ಅವನು ರಚಿಸಿದ ಪಾತ್ರಗಳೆಲ್ಲ ಅವನ ಕಲ್ಪನಾ ಲೋಕದಲ್ಲಿ ಹುಟ್ಟಿ ಬೆಳೆದ ಮಕ್ಕಳಲ್ಲವೇ! ಪಾತ್ರಗಳನ್ನು ರೂಪಿಸಿ, ಅವುಗಳಿಗೆ ಜೀವವನ್ನು ತುಂಬಿ ಓದುಗರಿಗೆ ನಂಬುವ ಹಾಗೆ ಮಾಡುವ ನಿಜವಾದ ಸೂತ್ರಧಾರಿ ಕವಿಯಲ್ಲವೇ! (ಕೃಷ್ಣನ ಶೈಲಿಯಲ್ಲೇ, ಭಾವ ಭಂಗಿಗಳಲ್ಲೇ ನಗುನಗುತ್ತಾ) ಕೃಷ್ಣ! ನೀನು ನಾಟಕದ ಪಾತ್ರದಲ್ಲಿ ಕೃಷ್ಣನಾಗಿ ಸೂತ್ರಧಾರನೆನಿಸಿಕೊಂಡೆಯಲ್ಲವೇ?
ಕೃಷ್ಣ: (ಇವನು ವ್ಯಾಸರ ಭಂಗಿ ಭಾವಗಳಲ್ಲಿ) ಸಕಲವನ್ನೂ ತಿಳಿದ ದಿವ್ಯ ಜ್ಞಾನಿಗಳಾದ ನಿಮ್ಮ ಸತ್ಯದ ಮಾತುಗಳಿಗೆ ಉತ್ತರ ಹೇಳಲು ನನಗೆ ಸಾಧ್ಯವೇ! ನಿಮ್ಮ ಕಥೆಯಲ್ಲಿಯೇ ನಿಮ್ಮ ಪಾತ್ರವನ್ನೂ ಸೇರಿಸಿ, ನಿಮ್ಮ ಕಾವ್ಯವನ್ನು ನಿಮ್ಮ ಮುಂದೆಯೇ ಪ್ರತಿದಿನವೂ ಕುಳಿತು ಬರೆದ ಹಾಗೆ ಗಣೇಶನನ್ನೂ ನಿಮ್ಮ ಕಥೆಯಲ್ಲಿ ಸೇರಿಸಿಕೊಂಡಿರಿ. ನಿಮ್ಮ ಮತ್ತು ಗಣೇಶನ ಒಪ್ಪಿಗೆಯ ಪ್ರಕಾರ, ಮೊದಲಿನಿಂದ ಕೊನೆಯವರೆಗೂ ವಿರಾಮವಿಲ್ಲದೆ ಮಹಾಭಾರತದ ಸಂಪೂರ್ಣ ಕಾವ್ಯವನ್ನು ರಚಿಸಿದಂತೆ ಮಾಡಿ, ಓದುಗರ ಮನಸ್ಸಿಗೆ ಮಾಯಾಜಾಲವನ್ನು ಹಾಕಿಬಿಟ್ಟಿರಿ. ನನ್ನನ್ನು ಮಾಯಾವಿ, ಕಪಟಿ, ಪಾಂಡವರ ಪಕ್ಷಪಾತಿ ಎಂದೆಲ್ಲಾ ಬಣ್ಣಿಸಿದಿರಿ. ನಿಮ್ಮ ಮಾಯಾಜಾಲದ ವಿಚಿತ್ರಕ್ಕೆ ದೇವರೆನಿಸಿಕೊಂಡ ನಾನೇ ತಲೆ ಬಾಗುತ್ತೇನೆ. (ಕೃಷ್ಣನು ವ್ಯಾಸರಿಗೆ ಕೈಮುಗಿಯುತ್ತಾನೆ)

Krishna mentions the name of Draupadi who was ill-treated by Karna and Duryodhana during the 'vastraapaharaNa'.)



ಕೃಷ್ಣ: ನೀವೆಲ್ಲರೂ ಈ ರೀತಿ ಪ್ರಲಾಪಿಸುವುದನ್ನು ನೋಡಿದರೆ ಏನು ಹೇಳಲಿ ಎಂದು ಗೊತ್ತಾಗುತ್ತಿಲ್ಲ. ಸಾಧ್ವಿ ಶಿರೋಮಣಿ, ಪತಿವ್ರತೆ, ಸುಂದರಿಯಾದರೂ ಸಾವಧಾನದಿಂದ ನಿಮ್ಮೆಲ್ಲರಿಗಿಂತಲೂ ಹೆಚ್ಚು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದವಳೆಂದರೆ ನನ್ನ ತಂಗಿ ಕೃಷ್ಣೆಯಾದ ದ್ರೌಪದಿ.

ಪ್ರವೇಶ: ದ್ರೌಪದಿ



Draupadi cries out and vents her anger towards Karna and Duryodhana.



ದ್ರೌಪದಿ: ಕರ್ಣ! ನೀನು ರಣರಂಗಕ್ಕೆ ಧೀರನಂತೆ ಬಂದು ಹೋರಾಡಿದರೂ, ಇದೀಗ ಸಾಯುವಕಾಲದಲ್ಲಿ ನಿನ್ನ ಜೀವನವನ್ನೆಲ್ಲಾ ಮರುಕಳಿಸಿ ನೆನಪಿಸಿಕೊಂಡು, ಅಳುತ್ತಿದ್ದೀಯಲ್ಲಾ. ನನಗೆ ಬಂದ ಕಷ್ಟಗಳು ನಿನ್ನ ದುಷ್ಟ ಮನಸ್ಸಿಗೆ ಏನು ತಿಳಿಯುವುದು! ಅಬಲೆಯಾದ ನನ್ನ ವಸ್ತ್ರಾಪಹರಣ ಮಾಡುವುದಕ್ಕೆ ನಾನೇನು ತಪ್ಪು ಮಾಡಿದ್ದೆ? ದುರುಳರಾದ ದುರ್ಯೋಧನ - ದುಶ್ಯಾಸನರ ಪರವಾಗಿ ನಿಂತು ಪರಸ್ತ್ರೀಯಾದ ನನ್ನನ್ನು ಅವಮಾನಿಸಿ, ಛೇಡಿಸಿ, ಕಾಮುಕ ಕೋತಿಮನದ ಹುಚ್ಚನಂತೆ ಆಟವಾಡಿದ್ದು ನೆನಪಿದೆಯೇ ಈಗ ಯುಧ್ಧದಲ್ಲಿ ಸೋತು ಉರುಳಿ ಬಿದ್ದುಕೊಂಡಿರುವ ಕೀಳು ಮನಸ್ಸಿಗೆ? ಅಧಮನಾದ ನಿನಗೆ ಆದಂತೆ ನಿನ್ನ ’ಸ್ವಾಮಿ’ ಆ ಖಳನಿಗೂ ಸಧ್ಯದಲ್ಲಿಯೇ ಸಾವು ಬರಲಿದೆ.


( Kunti blames Vyaasa for scripting the 'VastraapaharaNa event, as a cheap 'masaala' in his literary masterpiece.)


ಕುಂತಿ: ದ್ರೌಪದಿ! ನಿನ್ನ ದುಖ, ಸಿಟ್ಟು, ಸೇಡು ಎಲ್ಲವೂ ಹೆಂಗಸಾದ ನನಗೆ ಅರ್ಥವಾಗುತ್ತದೆ, ಮಗಳೇ. ಆದರೆ, ನಿನ್ನ ಅಣ್ಣ, ಪಾಂಡವರ ಪಕ್ಷಪಾತಿ ಶ್ರೀ ಕೃಷ್ಣನು ಮೊದಲೇ ಹೇಳಿದ ಹಾಗೆ, ಇದಕ್ಕೆಲ್ಲಾ ವ್ಯಾಸರೇ ಕಾರಣರಲ್ಲವೆ?

(Vyaasa responds)
ವ್ಯಾಸ: ದ್ರೌಪದಿ! ನಿನಗೆ ವಸ್ತ್ರಾಪಹರಣ ಮಾಡುವ ದುರ್ಮನಸ್ಸನ್ನು ಕೌರವರು ಪ್ರದರ್ಶಿಸಿದರೂ ನಿನಗೆ ನಿಜವಾಗಿಯೂ ವಸ್ತ್ರಾಪಹರಣವಾಗಲಿಲ್ಲ. ಈ ಘಟನೆಗಳಲ್ಲಿ ನಾನು ಓದುಗರಿಗೆ ಸಮಾಜದ ಹುಳುಕುಗಳನ್ನೂ, ಮನುಷ್ಯನ ಮನಸ್ಸಿನ ದುರ್ಬಲ ಶಕ್ತಿಗಳನ್ನೂ, ಕ್ಲಿಷ್ಟವಾದರೂ ಸನ್ನಿವೇಶಗಳ ಉಪಯೋಗಿಸಿ ಹೇಳುವ ಪ್ರಯತ್ನ ಮಾಡಿದ್ದೇನೆ. ಯಾವಾಗಲೂ, ಎಲ್ಲ ರೀತಿಯಲ್ಲೂ ಸಹನೆಯುಳ್ಳವನೂ, ಧರ್ಮವನ್ನು ಪಾಲಿಸುವ ಧರ್ಮರಾಯನೂ ಜೂಜಾಡುವ ಚಂಚಲತೆಗೆ ದಾಸನಾದುದರಿಂದ ತನ್ನದೆಲ್ಲವನ್ನೂ, ತಮ್ಮಂದಿರದೆಲ್ಲವನ್ನೂ, ಕೊನೆಗೆ ಹೆಂಡತಿಯನ್ನೂ ಪಣಕ್ಕಿಟ್ಟು ಕಳೆದುಕೊಳ್ಳುವ ಸ್ಥಿತಿಗೆ ಬಂದುಬಿಡುತ್ತಾನೆ. ಹೊರನೋಟಕ್ಕೆ ಸಣ್ಣ ತಪ್ಪೆಂದು ಕಂಡರೂ ಮನುಷ್ಯನ ಯಾವ ದುರ್ಬಲತೆಯಾದರೂ ಅದರಿಂದ ಬಹಳ ದೊಡ್ಡ ಹಾನಿಯಾಗಬಹುದೆಂಬುದನ್ನು ತೋರಿಸುವ ಘಟನೆ ಇದು. ಉಪ್ಪು ತಿಂದ ಮನೆಯನ್ನು ಎದುರುಹಾಕಿಕೊಳ್ಳಲು ದ್ರೋಣ, ಭೀಷ್ಮಾದಿಗಳೂ ಹೆದರಿ ಸ್ವಲ್ಪ, ಸ್ವಲ್ಪ ಮಾತ್ರ ಪ್ರತಿಭಟಿಸಿದರು. ಗೌರವಿತ ಆಚಾರ್ಯನಾಗಲೀ, ವಯಸ್ಸಿನಲ್ಲಿ ಹಿರಿಯವರಾಗಲೀ ಸಮಾಜವನ್ನು ಸಂಪೂರ್ಣವಾಗಿ ಪ್ರತಿಭಟಿಸುವುದು ಕಡಿಮೆ. ಇಂತಹವರು ಎಲ್ಲ ಸಮಾಜದಲ್ಲೂ ಇರುತ್ತಾರೆ. ದುಷ್ಟ ಶಕ್ತಿಗಳನ್ನು ಮುಖಾಮುಖಿ ಎದುರಿಸುವುದಕ್ಕೆ ಸಜ್ಜನರೂ, ಶಕ್ತಿಶಾಲಿಗಳೂ ಮೀನ-ಮೇಷ ಎಣಿಸುತ್ತಾರೆ.
ದ್ರೌಪದಿ! ನನ್ನ ಕಥೆಯನ್ನು ಈ ಸಮಯದಲ್ಲಿ ಮುಂದುವರಿಸುವ ದಾರಿ ಕಾಣಲಿಲ್ಲ. ಜೊತೆಗೆ ನಿನ್ನನ್ನು ನಗ್ನಳಾಗಿ ಮಾಡಿಬಿಡುವುದನ್ನು ನಿಲ್ಲಿಸಲು ಶ್ರೀ ಕೃಷ್ಣನ ಮಾಯೆಯನ್ನು ಇಲ್ಲಿ ಉಪಯೋಗಿಸಿಕೊಂಡೆ.

ದ್ರೌಪದಿ: ನನ್ನ ಮಹಾವೀರ ಪತಿಗಳಿಂದ ಕೌರವರೆಲ್ಲರಿಗೂ ನರಕದ ಬಾಗಿಲು ತೆಗೆದುಕೊಂಡು ಕಾದಿದೆ!

(Duryodhana ridicules the gutless attitude of Bheema during the 'vastraapaharaNa')


ದುರ್ಯೋಧನ: ದ್ರೌಪದಿ! ನೀನೇಕೆ ವ್ಯಥಾ ಕನಸನ್ನು ಈ ಹಗಲಿನಲ್ಲಿ, ರಣರಂಗದಲ್ಲಿ ಕಾಣುತ್ತಿದ್ದೀಯೆ? ನಿನ್ನ ವಸ್ತ್ರಾಪಹರಣದ ಮನೋರಂಜನೆಯನ್ನು ನೋಡುತ್ತಿದ್ದ ನಾವು, ಮೀಸೆಯ ಮೇಲೆ ಕೈಹಾಕಿ ಅಟ್ಟಹಾಸದಿಂದ ನಿನ್ನ ಆ ಸೌಂದರ್ಯದ ಬೆಡಗನ್ನು ಮನತಣಿಸಿಕೊಳ್ಳುತ್ತಾ ನೋಡುತ್ತಿರುವಾಗ, ಆ ನಿನ್ನ ಗಂಡಂದಿರು ಏನೂ ಮಾಡಲಾಗದ ಹೇಡಿಗಳಂತೆ ಬಾಲಗಳನ್ನು ಮುದುರಿಕೊಂಡು ಸುಮ್ಮನೆ ಮಿಕ - ಮಿಕ ನೋಡುತ್ತಿದ್ದರಲ್ಲವೆ! ಆ ಅಡುಗೆ ಭಟ್ಟನ ಮಾತನ್ನೇಕೆ ತಂದು ನಿನ್ನ ನಾಲಿಗೆಯನ್ನು ನೋಯಿಸಿಕೊಳುತ್ತಿದ್ದೀಯೆ ದಿಗಂಬರ ಸುಂದರಿ? (ದೊಡ್ಡ ಅಟ್ಟಹಾಸ ಹಾಕುತ್ತಾನೆ :-))

ಪ್ರವೇಶ: ಭೀಮ



Bheema rages and vows to kill Duryodhana, and moves to attack him. Krishna trickily restrains both Bheema and Duryodhana.



ಭೀಮ: ಎಲವೋ ಅಧಮಾಧಮ! ನಾನು ಅಡುಗೆ ಭಟ್ಟನಾಗಿದ್ದಾಗ, ನನ್ನ ಪ್ರೀತಿಯ ಹೆಂಡತಿಯಾದ ದ್ರೌಪದಿಯನ್ನು ಛೇಡಿಸಿ, ಕೆರಳಿಸಿ ಕಾಮಾಂಧನಾಗಿ ಅರಮನೆಯಲ್ಲೆಲ್ಲಾ ಹಿಂಬಾಲಿಸುತ್ತಿದ್ದ ಆ ಕೀಚಕನನ್ನು ಹೇಗೆ ಕೊಂದೆ ಎನ್ನುವುದು ನಿನಗೆ ಗೊತ್ತೋ! ದುರ್ಯೋಧನ! ನೀನು ಧೈರ್ಯವಂತನಾದರೆ ಇದೀಗಲೇ ಬಾ! ನಿನ್ನನ್ನು ಜೆಟ್ಟಿ ಕಾಳಗದಲ್ಲಿ, ಪಲ್ಟಿಹಾಕಿಸಿ, ಕೆಳಗುರುಳಿಸಿ, ಜಗತ್ಪ್ರಸಿಧ್ಧವಾದ ನನ್ನ ಪಟ್ಟಿನಲ್ಲಿ ನೇಣುಹಾಕಿ ಒಂದೂ ಉಸಿರು ದಕ್ಕದಂತೆ ಮಾಡಿಬಿಡುತ್ತೇನೆ.

ನನ್ನ ಪ್ರೀತಿಯ ಪುತ್ರ ಘಟೋತ್ಕಚನನ್ನು ಸಾಯಿಸಿದ ಆ ಕರ್ಣನನ್ನು ಈ ಕಾಲಭೈರವನ ತುಳಿತದಲ್ಲಿ ಮೆಟ್ಟಿ ಕುಣಿದು ನಾಟ್ಯವಾಡುತ್ತೇನೆ.



Krishna mentions Vyaasa as the writer to decide what may really happen.


ಕೃಷ್ಣ: ಜಗತ್ ಜೆಟ್ಟಿ ಭೀಮ! ಸಾವಧಾನ. ಮುಂದೆ ಆಗುವ ಭಾರತ ಯುಧ್ಧವನ್ನು ಈಗಲೇ ಮುಗಿಸಿ ಬಿಡಲು ಸಾಧ್ಯವೇ! ಇದರ ಸೃಷ್ಟಿ ಕರ್ತ, ದಿವ್ಯ ಜ್ಞಾನಿಯಾದ ವೇದ ವ್ಯಾಸರು ನಡೆಸಿದಂತೆ ಮಹಾಭಾರತ ವೆಲ್ಲವೂ ಸಾಗಬೇಕಲ್ಲವೆ! :-) :-)


Vyaasa responds …

ವ್ಯಾಸ: (ಕೃಷ್ಣನು ನಗುವ ಧಾಟಿಯಲ್ಲೇ ನಕ್ಕು) ಕೃಷ್ಣ ! ನೀನು ಬೇರೆಯಲ್ಲ ನಾನು ಬೇರೆಯಲ್ಲ; ಸಮಯಕ್ಕೆ ಒಂದು ಉಪಾಯವನ್ನು ಹೂಡುವೆಯಲ್ಲಾ !

Karna complains to Vyaasa that he was unjustly made to believe that he was born to a servant's ancestry - Sootha Putra. He claims to have deserved a royal treatment by everyone. Karna complains about Drona and Bheeshma as begets, who refused an opportunity to be trained along with Kauravas and Pandavas.


ಕರ್ಣ: ಮಹಾವೀರನಾದ ನನ್ನ ಹಣೆಬರಹದ ಪ್ರಕಾರ ನಾನು ಸೂತ ಪುತ್ರನಾಗಿ ಜೀವನಪೂರ್ತಿ ಅವಹೇಳನ ಮಾಡಿಸಿಕೊಳ್ಳಬೇಕಾಯಿತಲ್ಲಾ :-) ನನ್ನ ದುಃಖ ಯಾರಿಗೂ ಅರ್ಥವಾಗಲಾರದು. :-(

ಪ್ರವೇಶ: ಏಕಲವ್ಯ



Ekalavya confers with a similar complaint to Drona, Bheeshma, Krishna and also Arjuna.



ಏಕಲವ್ಯ: ನಿನ್ನ ದುಃಖ ನನಗೆ ಬಹಳ ಚೆನ್ನಾಗಿ ಅರ್ಥವಾಗುತ್ತದೆ ಕರ್ಣ. ಬೇಡರವನಾದ ನನಗೆ ಬಿಲ್ಲುವಿದ್ಯೆ, ಶಸ್ತ್ರ ಪಾಠಗಳನ್ನು ಹೇಳಿಕೊಡುವುದಿಲ್ಲ ಎಂದು ನನ್ನನ್ನು ಕನಿಕರವಿಲ್ಲದೆ ಹಿಂತಿರುಗಿಸಿ ಕಳಿಸಿಬಿಟ್ಟ ದ್ರೋಣರ ಬಗ್ಗೆ ನನಗೂ ಬಹಳ ಬೇಸರವಾಯಿತಲ್ಲವೆ. ಹುಟ್ಟಿನಿಂದ ಬೇಡನಾದ ನನಗೆ ಬಿಲ್ಲುವಿದ್ಯೆಯನ್ನು ನೈಜವಾಗಿ ಕಲಿಯಬಲ್ಲ ಸೌಭಾಗ್ಯ - ಸಂಪ್ರದಾಯಗಳು ರಕ್ತಗತವಾಗಿ ಬಂದದ್ದು ಎನ್ನುವುದನ್ನು ತೋರಿಸಿಕೊಡಲು ಗುರುವಿನ ಪ್ರತಿಮೆಯೇ ಸಾಕ್ಷಿಯಾಯಿತು. ಕರ್ಣ! ಆದರೆ, ಬಿಲ್ಲುವಿದ್ಯಕ್ಕೇ ಅತಿ ಅವಶ್ಯಕವಾದ ನನ್ನ ಹೆಬ್ಬೆರಳನ್ನು ಗುರು ಕಾಣಿಕೆಯಾಗಿ ಕೊಡಲು, ನನ್ನ ಕಣ್ಣಿನ ರೆಪ್ಪೆಯನ್ನು ಕೂಡ ಮಿಟುಕಿಸದೆ ಒಂದೇ ಹೊಡೆತದಲ್ಲಿ ಕತ್ತರಿಸಿ ಗುರುಗಳ ಪಾದದಲ್ಲಿಟ್ಟಾಗ, ಪ್ರಪಂಚದ ಧನಸ್-ಶಾಸ್ತ್ರ ಪಾರಂಗತರನ್ನೆಲ್ಲಾ ಮಿಂಚಿ ಗೆದ್ದ ಸಮ್ತಸದ ಅನುಭವವಾಯ್ತು.

ಕರ್ಣ! ನಿನ್ನ ಪರಿಸ್ತಿತಿ ನನಗೆ ಅರ್ಥವಾಗುವಷ್ಟು ಇನ್ಯಾರಿಗೂ ತಿಳಿಯಲಾರದು.


(Vyaasa responds.)

ವ್ಯಾಸ: ಕರ್ಣನು ಸೂತಪುತ್ರನೆಂದೂ, ಪಾಂಡವರು ಮತ್ತು ಕೌರವರುಗಳು ರಾಜ ಪುತ್ರರೆಂದೂ ನಂಬಿ ದ್ರೋಣ ಮೊದಲಾದ ಶಸ್ತ್ರಾಚಾರ್ಯರುಗಳು ನನ್ನ ಕಥೆಯಲ್ಲಿ ಕರ್ಣನನ್ನು ಅಲ್ಲಗಳೆದರು. ಇದನ್ನು ಸ್ವಲ್ಪ ಯೋಚಿಸಿನೋಡು ಕರ್ಣ. ಈ ಆಚಾರ್ಯರುಗಳು ಮೊದಲಿಗೆ ಬ್ರಾಹ್ಮಣರು; ರಾಜಾಶ್ರಯವಿಲ್ಲದೆ ಅವರ ವಿದ್ಯೆಯನ್ನು ಇನ್ಯಾರಿಗಾದರೂ ಹೇಳಿಕೊಟ್ಟರೆ ಅವರ ಹೆಚ್ಚುಗಾರಿಕೆ ಸಫಲವಾದೀತೇ? ತಮಗೆ ಅವಕಾಶವನ್ನು ಕೊಟ್ಟ ರಾಜನ ಪುತ್ರರಿಗೆ ಅವರ ಜೀವನ, ಅವರ ಉದ್ಯೋಗ ಮೀಸಲಾಗಿಟ್ಟಿದ್ದರು. ಆದ ಕಾರಣವೇ, ಅವರು ತಮ್ಮ ಆಶ್ರಯದಾತರಿಗೆ ಮುಡುಪಾಗಿಟ್ಟುಕೊಂಡಿದ್ದ ನಿಷ್ಠೆಯನ್ನು ಇತರರಿಗೆ ಹಂಚುವುದಕ್ಕೆ ಹಿಂಜರಿದರು. ನಮ್ಮ ಕಾಲದಲ್ಲಿ ಕೂಡ ಉದ್ಯೋಗಗಳು ಹುಟ್ಟಿದ ಜಾತಿಯನ್ನೇ ಅನುಸರಿಸುತ್ತಿದ್ದವು; ಹಾಗಂದ ಮಾತ್ರಕ್ಕೆ, ಈ ಸಂಪ್ರದಾಯದಿಂದ - ಕುರುಡೆನ್ನೀ, ಸಮಾಜದ ಕುಂದುಕೊರತೆ ಹಾಗೂ ಅನ್ಯಾಯವೆನ್ನೀ - ರಾಜರಿಗೆ, ಕ್ಷತ್ರಿಯ ಕುಲದವರಿಗೆ ಮೀಸಲಾಗಿದ್ದ ಉದ್ಯೋಗವೆಂದು ಸನ್ನಿವೇಶಗಳಮೂಲಕ ಅವಹೇಳನ ಮಾಡುವ ಕಾರಣದಿಂದ ಕಥೆಯಲ್ಲಿ ಬರೆದೆ. ಇಲ್ಲಿನ ತಮಾಷೆ ಏನೆಂದರೆ, ಓದುಗರಿಗೆಲ್ಲಾ ಕರ್ಣನು ಸೂತನಲ್ಲ ಎಂದು ಗೊತ್ತಿದೆ; ಪಾತ್ರಗಳಿಗೆ ಮಾತ್ರ ಗೊತ್ತಿಲ್ಲ!
ಏಕಲವ್ಯನ ಕಥೆಯಲ್ಲಿಯೂ ಅಷ್ಟೆ: ಕ್ಷತ್ರಿಯ ಯುವಕನಾಗಿ, ದ್ರೋಣರಂತಹ ಅದ್ವಿತೀಯ ಆಚಾರ್ಯರಿಂದ ಕಲಿತ, ಇವನಿಗೆ ಸಮಾನರಾದ ಬಿಲ್ಲುಗಾರರು ಎಲ್ಲಿಯೂ ಇಲ್ಲ ಎಂದು ಅಹಂಕಾರದಲ್ಲಿ ಮುಳುಗಿದ್ದ ಅರ್ಜುನನಿಗೆ ಕಣ್ಣು ತೆರೆಸಲು ಅಳವಡಿಸಿದ ಕಥೆ; ವಿದ್ಯೆಯು ಮನಸನ್ನು ಕೇಂದ್ರೀಕರಿಸಿದ ಎಲ್ಲರಿಗೂ ಪ್ರಾಪ್ತವೆನ್ನುವ ದೃಷ್ಟಾಂತವನ್ನು ಏಕಲವ್ಯನನ್ನು ಕೇಂದ್ರೀಕರಿಸಿ ಓದುಗರಿಗೆ ತಿಳಿಸಿ ಹೇಳಿದ ಕಥೆ.
ಈ ದೃಷ್ಟಾಂತ ಧ್ಯೇಯದ ಕಥೆಯಲ್ಲಿ ದ್ರೋಣರು ಏಕಲವ್ಯನನ್ನು ಗುರುದಕ್ಷಿಣೆ ಕೇಳಿದಾಗ ಅವರ ಸ್ವಾರ್ಥದ ಹುಳುಕು ಪ್ರಪಂಚಕ್ಕೇ ಕಂಡುಬರುತ್ತದೆ. ಈ ಕಥೆಯಲ್ಲಿ ಮೊದಲಿನಿಂದ ಕೊನೆಯವರೆಗೂ ನಿರ್ಮಲ ಮನಸ್ಸನ್ನು ಉಳಿಸಿಕೊಳ್ಳುವವನು ಏಕಮಾತ್ರ ಪಾತ್ರದ ಏಕಲವ್ಯ; ಇಂತಹ ಅದ್ವಿತೀಯ ಬಿಲ್ಲುಗಾರನ ಮುಂದೆ, ಅರ್ಜುನನೂ ದ್ವಿತೀಯನಾಗಿಬಿಡುತ್ತಾನೆ; ಆಚಾರ್ಯರೂ ಕೂಡ ಅಲ್ಪರಾಗಿಬಿಡುತ್ತಾರೆ.
ಏಕಲವ್ಯನು ಹುಟ್ಟಿನಿಂದ ಬೇಡ. ಬೇಡನ ವೃತ್ತಿ ಬೇಟೆಯಾಡುವುದು; ಇದು ಇವನಿಗೂ, ಇವನ ಸಂಸಾರ ಪಾಲನೆಗೂ ಅತ್ಯವಶ್ಯಕ. ಆದರೆ, ಬೇಡನು ತನ್ನ ಕೆಲಸಕ್ಕೆ ಸಾಕಷ್ಟು ಬಿಲ್ಲುವಿದ್ಯೆಯನ್ನು ಕಲಿತಿದ್ದರೆ ಸಾಕು. ಪ್ರಪಂಚದಲ್ಲಿ ಎಲ್ಲರನ್ನೂ ಮೀರಿಸಿ ಬಿಲ್ಲುಗಾರ ನಾಗಬೇಕಾಗಿಲ್ಲ. ಇವನಿಗೆ ಯಾವ ಗುರುವೂ ಬೇಕಾಗಿಲ್ಲ. ಇವನಲ್ಲಿ ರಕ್ತಗತವಾಗಿ ಬಂದ ಪ್ರವೃತ್ತಿಯಾದ ಬಿಲ್ಲುಗಾರಿಕೆ ತನಗೆ ತಾನೇ ವ್ಯಕ್ತವಾಗುತ್ತದೆ. ಇವನಿಗೆ ಮನಸ್ಸನ್ನು ಕೇಂದ್ರೀಕರಿಸಲು ದ್ರೋಣರ ಪ್ರತಿಮೆ ಒಂದು ನೆಪವಾದ ಧ್ಯೇಯ ಮೂರ್ತಿ. ಜನ್ಮ ಸಹಜವಾದ ಬಿಲ್ಲುಗಾರ ಏಕಲವ್ಯ. ಇವನ ಮುಂದೆ ಎಲ್ಲರೂ ಸಾಮಾನ್ಯರು.

karNa complains of the tricks played by Krishna, Kunti, Indra and also Soorya.


ಕರ್ಣ: ನನಗೆ ಕಪಟಿ ಕೃಷ್ಣ, ತಾಯಿ ಕುಂತಿ, ಇಂದ್ರ ಇವರುಗಳು ಅನ್ಯಾಯ ಮಾಡುತ್ತಿರುವಾಗ, ನನ್ನ ತಂದೆಯಾದ ಸೂರ್ಯ ದೇವನು ನನ್ನ ಪತನಕ್ಕೆ ಪ್ರೀತಿಯಿಂದ ಅಡ್ಡಬಂದು ನನ್ನನ್ನು ಉಳಿಸಿಕೊಳ್ಳಬಹುದಾಗಿತ್ತಲ್ಲವೆ?

ಪ್ರವೇಶ: ಸೂರ್ಯ

ಸೂರ್ಯ: ಅಳಬೇಡ, ಕಣ್ಣೀರಿಡಬೇಡ ಕರ್ಣ!



Karna cries as an unfortunate child with Soorya not taking any practical steps to stop him from his 'noble 'giveaway' acts before the war.



ಕರ್ಣ: ಇಂದ್ರನು ತನ್ನ ನೆಚ್ಚಿನ ಮಗನಾದ ಅರ್ಜುನನ ಜಯಕ್ಕೋಸ್ಕರ ನನ್ನಿಂದ ವರದ ನೆವದಲ್ಲಿ ಸಾಯುವ ಮುಂಚೆಯೇ ನನ್ನ ಜೀವವನ್ನೇ ಕಿತ್ತುಕೊಂಡು ಹೋಗಿಬಿಟ್ಟ. ನೀನೇಕೆ ಅಂತಹ ಪುತ್ರವಾತ್ಸಲ್ಯವನ್ನು ನನಗೆ ತೋರಲಿಲ್ಲ? ನೀನು ಏಕೆ ಇಂದ್ರನನ್ನು ತಡೆಯಲಿಲ್ಲ? ನಿನಗೆ ನಿಜವಾದ ಪುತ್ರವಾತ್ಸಲ್ಯವಿದ್ದಿದ್ದರೆ, ಆ ಇಂದ್ರನನ್ನು ಕ್ಷಣಮಾತ್ರದಲ್ಲಿ ಸುಡಬಹುದಾಗಿತ್ತಲ್ಲವೇ?



Soorya responds reminding Karna about his attempts to warn his son Karna, where as Karna ignored him.



ಸೂರ್ಯ: ಪುತ್ರಾ! ನೀನು ದಾನಶೂರನೆಂಬ ಹೆಸರಿಗೆ ತಕ್ಕಂತೆ ಕೇಳಿದ್ದನ್ನು, ಕೊಂಚವೂ ಹಿಂಜರಿಯದೆ, ಒಂದು ಮಿಂಚು ಹೊಳೆಯುವ ಕ್ಷಣಮಾತ್ರವೂ ಹಾರಿಹೋಗದಂತೆ, ನಿಂತಲ್ಲೇ ತರ್ಪಣವನ್ನು ಬಿಟ್ಟು ಕೊಡಲು ಹೋದಾಗ, ನಾನು ಬೇಡಿ, ಬೇಡಿ ’ಬೇಡ ಮಗು’, ’ದುಡುಕಬೇಡ ಕಂದ’, ನಿನ್ನ ಪ್ರಾಣವನ್ನೇ ತರ್ಪಣ ಕೊಡಬೇಡ’ ಎಂದೆಲ್ಲಾ ಹೇಳಿ, ಕೂಗಿ, ಅಗ್ನಿಹೃದಯದ ನಾನೂ ಒಂದು ಹನಿ ಕಣ್ಣೀರು ಬಿಟ್ಟಿದ್ದನ್ನು ಕಂಡೂ, ನೀನು ನಿನ್ನ ದಾನವನ್ನು ಪೂರ್ತಿ ಮಾಡಿದೆಯಲ್ಲವೇ? ಅದು ನೆನೆಪಿದೆ ತಾನೆ?

(Vyaasa responds…)

ವ್ಯಾಸ: ಕರ್ಣ! ನೀನು ಮಾಡಿದ ದಾನಗಳಬಗ್ಗೆ ಬೇಸರಪಡುವ ಕಾರಣವಿಲ್ಲ; ಕುಂತಿ! ನೀನು ಕೂಡ ನಿನ್ನ ಪುತ್ರನ ದಾನಗಳಿಗೆ ನೊಂದುಕೊಳ್ಳಬೇಕಾಗಿಲ್ಲ. ಕರ್ಣನು ಅತಿಪರಾಕ್ರಮಿ. ಬಿಲ್ಲುವಿದ್ಯೆಯಲ್ಲಿ ಅರ್ಜುನನ ಸಮಾನವಾಗಿಯೂ ಯುಧ್ಧ ಮಾಡಬಲ್ಲವನು. ಅದಕ್ಕಿಂತ ಹೆಚ್ಚಾಗಿ, ಸಾರಥಿಯಾದ ಶಲ್ಯನು ಅವನನ್ನು ತ್ಯಜಿಸಿದರೂ, ರಥವನ್ನು ತಾನೆ ನಡೆಸಿಕೊಂಡು, ಯುದ್ಧವನ್ನು ಮುಂದುವರಿಸಿದ ಅಸಮಾನ ವೀರ. ಗಾಂಢೀವಿಯೆಂದು ಹೆಸರಾದ ಅರ್ಜುನನೂ ಕೂಡ ಕರ್ಣನನ್ನು ಸೋಲಿಸಲಾಗಲೇ ಇಲ್ಲ. ತನ್ನ ಕರ್ಣಕುಂಡಲಗಳನ್ನೂ, ವಜ್ರಕವಚವನ್ನೂ ಒಂದು ಕಣ್ಣೂ ಮಿಟುಕಿಸದೆ ದಾನಮಾಡಿದರೂ ಅವನಿಗೆ ಸೋಲುಬರಲಿಲ್ಲ. ಕರ್ಣನನ್ನು ನ್ಯಾಯದಲ್ಲಿ ಸೋಲಿಸುವ, ಕೊಲ್ಲುವ ಸಾಧ್ಯತೆಯಿಲ್ಲವೆಂದಲೇ, ಕೃಷ್ಣನು ಅರ್ಜುನನಿಗೆ ಅಶಸ್ತ್ರನಾಗಿ, ರಥವನ್ನು ಮೇಲೆತ್ತಲು ಎರಡು ಕೈ-ಭುಜಗಳನ್ನೂ, ತನ್ನ ಪೂರ್ತಿ ದೇಹವನ್ನೂ ಕೊಟ್ಟಿರುವಾಗ ಮಾತ್ರ ಕೊಲ್ಲುವ ಅವಕಾಶವಿದೆಯೆಂದು ಸ್ಪಷ್ಟವಾಗಿ ಹೇಳುತ್ತಾನೆ. ಕವಿಯಾದ ನಾನು ಕರ್ಣನ ಮಹತ್ವಗಳನ್ನು ನಿರ್ದೇಶಿಸಲು ಇಷ್ಟೆಲ್ಲವನ್ನು ಕಥೆಯಲ್ಲಿ ಅಳವಡಿಸಬೇಕಾಯ್ತು.
ಕರ್ಣ! ನಿನಗೆ ಈಗ ಒಂದು ಗುಟ್ಟನ್ನು ಹೇಳುತ್ತೇನೆ ಕೇಳು. (ಗುಟ್ಟು ಹೇಳುವವರ ಧಾಟಿಯಲ್ಲಿ ಕರ್ಣನ ಕಿವಿಯೋಳಗೆ ಹೇಳಿದರೂ, ಸಭೆಯ ಎಲ್ಲರಿಗೂ ಚೆನ್ನಾಗಿ ಕೇಳುವಂತೆ ಗುಸು ಗುಸು ಧ್ವನಿಯಲ್ಲಿ ಹೇಳುತ್ತಾನೆ) ನಿನ್ನ ತಂದೆ ಸೂರ್ಯನಲ್ಲ; ನಿನ್ನ ತಾಯಿ ಕುಂತಿಯೂ ಅಲ್ಲ; ನಿನ್ನ ತಂದೆ, ತಾಯಿ ಎರಡೂ ನಾನೆ. ನನ್ನ ಕಲ್ಪನಾ ಲೋಕದಲ್ಲಿ ಜನಿಸಿದ ನಿನ್ನನ್ನು ಕಥೆಯು ನಡೆದ ಹಾಗೂ ಪೋಷಿಸಿ ಬೆಳೆಸಿದ ಮಾತಾ ಪಿತೃವೂ ನಾನೆ. ನಿನಗೊಬ್ಬನಿಗೇ ಅಲ್ಲ; ಮಹಾಭಾರತದ ಕಥೆಯ ಎಲ್ಲ ಪಾತ್ರಗಳನ್ನೂ, ಕಥೆಯಲ್ಲಿ ನನ್ನ ಅನುಕೂಲಕ್ಕಾಗಿ ದೇವರುಗಳೆನಿಸಿ ಕೊಂಡ ಗಣೇಶ, ಕೃಷ್ಣ, ಹನುಮಂತ ಮೊದಲಾದವರನ್ನೂ ಸೇರಿಸಿಬಿಟ್ಟಿದ್ದೇನೆ. ಎಲ್ಲಕ್ಕೂ ಹೆಚ್ಚಾಗಿ, ನನ್ನ ಪಾತ್ರವನ್ನೇ ನನ್ನ ಕಥೆಯಲ್ಲಿ ಹುಟ್ಟಿಸಿ, ನನಗೆ ನಾನೇ ‘ಜನ್ಮ ದಾತ’ ನಾಗಿದ್ದೇನೆ! ಈ ಕಾರಣದಿಂದಲೇ ಮಹಾಭಾರತವನ್ನು ಮೊದಲಿನಿಂದ ಕೊನೆಯವರೆಗೂ ಓದುಗರು ನಂಬಿಕೊಂಡಿದ್ದಾರೆ. ನಿನ್ನ ಪಾತ್ರವೂ, ನನ್ನ ಕಥೆಯ ಎಲ್ಲ ಪಾತ್ರಗಳೂ, ಸನ್ನಿವೇಶಗಳೂ ಸಮಾಜದಲ್ಲಿ ಅಜರಾಮರವಾಗಿ ಉಳಿದಿರುವುದು ಆಕಾರಣದಿಂದಲೇ.
‘ಒಂದು ಊರಿನಲ್ಲಿ ರಾಜ, ರಾಣಿಯರಿದ್ದರು, ಅವರಿಗೆ ಸಮಯಕ್ಕೆ ಸರಿಯಾಗಿ ಲಕ್ಷಣವಾದ ಮಕ್ಕಳು ಹುಟ್ಟಿ, ಎಲ್ಲರೂ ಒಳ್ಳೆಯವರಾಗಿ ಬೆಳೆದು, ಯಾರೂ, ಯಾರ ಜೊತೆಯೂ ಜಗಳವನ್ನಾಡದೆ ಸದಾ ಸುಖವಾಗಿದ್ದರು. ರಾಜ್ಯದಲ್ಲಿ ಯಾವಾಗಲೂ ಎಲ್ಲರೂ ನಗುನಗುತ್ತಾ, ಮಾದರಿ ಸಮಾಜವಾಗಿ ಬಾಳುತ್ತಿದ್ದರು’ (ಈ ಸಮಯಕ್ಕೆ ಪಾತ್ರಧಾರಿಗಳೆಲ್ಲರೂ ತೂಕಡಿಸಿ ಗೊರಕೆ ಹೊಡಯಲಾರಂಭಿಸಿರುತ್ತಾರೆ!) ಎಂದು ನಾನು ಕಥೆ ಬರೆದಿದ್ದರೆ ಓದುಗರಿರಲಿ, ಸಭಿಕರಿರಲಿ, ನನ್ನ ಪಾತ್ರಗಳೇ ನನ್ನ ಕಥೆಯನ್ನು ಕೇಳಲಾಗದೆ ನನ್ನ ಮುಂದೆಯೇ ತೂಕಡಿಸಿ ಗೊರಕೆ ಹೊಡೆದು ಬಿಡುತ್ತಿದ್ದರು. (ಈಗ ಎಲ್ಲ ಪಾತ್ರಧಾರಿಗಳೂ ಬೇಕಂತಲೇ ನಿದ್ದೆಬಂದವರ ಹಾಗೆ ನಟಿಸುತ್ತಿದ್ದರೋ ಎಂಬಂತೆ, ಎದ್ದು ಯಥಾ ಸ್ಥಿತಿಗೆ ಬರುತ್ತಾರೆ.)
(Last opportunity for spectator participation)


(ಇಲ್ಲಿ ಸಭಿಕರು ತಮ್ಮ ಪ್ರಶ್ನೆಗಳನ್ನು ನೇರವಾಗಿಯೂ, ಯಾವುದಾದರೂ ಪಾತ್ರದ ಪರವಾಗಿಯಾದರೂ ಕೇಳಬಹುದು.)
ವ್ಯಾಸ: (ಪಾತ್ರಗಳ ಕಡೆಗೆಲ್ಲಾ ಒಂದು ಸಾರಿ ನೋಡಿ, ನಂತರ ಸಭಿಕರ ಕಡೆಗೆಲ್ಲಾ ನೋಡಿ) ಕರ್ಣ! ಒಟ್ಟಿನಲ್ಲಿ ಯೋಚನೆ ಮಾಡಿನೋಡು: ಕರ್ಣನು ಸಾವನ್ನಪ್ಪಿದರೂ, ಸೋಲಲಿಲ್ಲ; ಅವನು ದಾನ ಮಾಡಿದ್ದು ಕರ್ಣಕುಂಡಲಗಳನ್ನಲ್ಲ, ವಜ್ರ ಕವಚವನ್ನಲ್ಲ, ತೊಟ್ಟ ಬಾಣವನ್ನು ಮತ್ತೆ ತೊಡದ ಮಾತಲ್ಲ; ಹೆತ್ತ ತಾಯಿಗೇ ತನ್ನ ಜೀವವನ್ನು ವಾಪಸ್ಸು ಕೊಟ್ಟ ಅಪೂರ್ವ ಕುಮಾರ. ತನ್ನ ಪ್ರಾಣವನ್ನೇ ದಾನ ಮಾಡಿ, ತನ್ನ ತಮ್ಮನ ಕೈಯಲ್ಲೇ ಸಾಯಲು ಸಿಧ್ಧನಾದ ಅಜರಾಮರ. ಕರ್ಣಾ! ನೀನು ಸಾಯಲೇ ಇಲ್ಲ; ನನ್ನ ಕಲ್ಪನಾ ಲೋಕದಲ್ಲಿ ಹುಟ್ಟಿ ಬೆಳೆದ ನೀನು ಈಗಲೂ, ಸಾವಿರಾರು ವರ್ಷಗಳಿಂದ ಓದುಗರ ಮನದಲ್ಲಿ ರಾರಾಜಿಸುತ್ತಿರುವ, ಸಾಹಿತ್ಯದ ಚರಿತ್ರೆಯಲ್ಲಿಯೇ ಸೂರ್ಯ ದೇವನಂತೆ ಪ್ರತಿಕ್ಷಣವೂ ಪ್ರಜ್ವಲಿಸುತ್ತಿರುವ ಏಕಮಾತ್ರ ವಿಭಿನ್ನ ಪಾತ್ರ.
ಯಾವುದೇ ಸಾಹಿತ್ಯದಲ್ಲಾಗಲೀ ಪಾತ್ರಗಳು ಪ್ರತಿದಿನವೂ ಓದುಗನೊಂದಿಗೆ ಮಾತನಾಡುತ್ತವೆ; ಘಟನೆಗಳೂ ಕೂಡ ಪ್ರತಿ ಓದುಗನ ಮನಸ್ಸಿನ ಕಣ್ಮುಂದೆ ಕುಣಿದು ನಡೆಯುತ್ತಿರುತ್ತವೆ. ಈ ರೀತಿಯಲ್ಲಿ ಸಾಹಿತಿಯೂ ತನ್ನ ಮನಸ್ಸಿಲ್ಲಿ, ಕಲ್ಪನೆಯ ಅಲೆಯಲ್ಲಿ ತೇಲಿಬಂದ ದೃಶ್ಯಗಳ ಉತ್ಸವವನ್ನು ಚೊಕ್ಕವಾಗಿ ಹಿಡಿದು ಕುಶಲತೆಯ ಬರಹದಿಂದ ಕಥೆ ಹೇಳಿ ಊಹೆಯ ಪ್ರಪಂಚವನ್ನು ನಿಜವೆನಿಸುವ ಕಥಾರಂಗದಲ್ಲಿ ಪ್ರತಿಷ್ಠಾಪನೆ ಮಾಡುತ್ತಾನೆ.
ಕರ್ಣ! ಸಾಹಿತ್ಯದ ಎಲ್ಲಾ ಪ್ರಕಾರಗಳ ಉದ್ದೇಶ ಹಾಗೂ ಗುರಿ ಸಮಾಜದ ವಿವಿಧ ಮುಖಗಳನ್ನು ಚಿತ್ರೀಕರಿಸುವುದು; ಆದರೆ, ಸಾಹಿತ್ಯವು ಸುಮ್ಮನೆ ಸಮಾಜಕ್ಕೆ ಕನ್ನಡಿಯನ್ನು ಹಿಡಿಯಬೇಕಾಗಿಲ್ಲ; ಓದುಗನಿಗೆ ಹೇಳಬೇಕೆಂದುಕೊಂಡಿರುವ ವಸ್ತುವನ್ನು ಬಣ್ಣೀಕರಿಸುವುದು, ಸ್ವಾರಸ್ಯಕರವಾಗಿ ಮಾಡುವುದು ಸಾಹಿತ್ಯದ ವೈಶಿಷ್ಟ್ಯ. ಸುಮ್ಮನೆ ಕನ್ನಡಿಯನ್ನು ಹಿಡಿದು ತೋರಿಸುವುದಷ್ಟೇ ಆಗಿದ್ದಿದ್ದರೆ, ಸಾಹಿತ್ಯವು ಆಕರ್ಷಕವಾದ ಮಾಧ್ಯಮವಾಗಿರುತ್ತಿರಲಿಲ್ಲ; ಸೃಷ್ಟಿಶೀಲತೆಗೆ ತವರುಮನೆಯಾಗಿ, ಲೇಖಕರ ಕಲ್ಪನಾ ಮನೋಭಾವವನ್ನು ಉತ್ತೇಜಿಸಿ, ಬರೆಯುವ ಸಮಯದಲ್ಲಿ ಲೇಖಕನಿಗೂ, ಓದುವ ಸಮಯದಲ್ಲಿ ಓದುಗರಿಗೂ ಮನರಂಜನೆಯನ್ನು ನೀಡುವ ಮಹಾ ಮಾತೆಯಾಗಿ ಸಾಹಿತ್ಯವು ನಮ್ಮೆಲ್ಲರ ಮನಕ್ಕೆ ರಸದೌತಣವನ್ನು ನೀಡುತ್ತದೆ.


(ಅಂತ್ಯ ಪರದೆ ನಿಧಾನವಾಗಿ ಮುಚ್ಚುತ್ತದೆ.)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ