ಬುಧವಾರ, ಮೇ 12, 2010

ಹೆಮ್ಮೆಯ ನಮ್ಮ ಮನೆ

ಹೆಮ್ಮೆಯ ನಮ್ಮ ಮನೆ

ಕೆ. ಆರ್. ಎಸ್. ಮೂರ್ತಿ

ನನ್ನ ಮನೆತನದ, ಜಾಣರ, ಸಜ್ಜನರ ತಾಣದ
ಹೆಮ್ಮೆಯನು ಕಹಳೆ, ಕೊಂಬುಗಳನೇ ಊದಿಸಿ
ಇಳೆಯ ದಿಕ್ಕು, ದಿಕ್ಕುಗಳಲಿ ಡಂಗುರದೊಡನೆ
ಬೀಗುವುದಕೆ ನಸು ನಾಚಿಕೆ ನನಗೇಕೆ?

ದೊಡ್ಡಕ್ಕ ಮಹಾದೇವಿಯು ನನಗೆ;
ನನ್ನಣ್ಣ ಬಸವನು ಮಹಾ ಸಾಹುಕಾರ
ಭಕ್ತಿ ಭಂಡಾರಿ.

ಇಹದ ಕ್ಷಣಿಕವ ತ್ಯಜಿಸಿ
ವಿರಕ್ತಿಯಾವೇಶದಲಿ ವರಿಸಿದಳು
ಕೈಲಾಸ ಪತಿ ಚೆನ್ನ ಮಲ್ಲಿಕಾರ್ಜುನನ
ನಮ್ಮಕ್ಕನ ಗಾನ ಸುಧೆಯ ಕೇಳಿದರೆ
ನಿಮಗೆಲ್ಲರಿಗೂ ಲಭ್ಯ ಖಚಿತ
ಪರದ ಪಟ್ಟ; ಕೈಲಾಸ ವಾಸ.

ದಲಿತರು ನಾವಲ್ಲ, ಬಡವರು ಯಾರಿಲ್ಲ
ಬಸವಣ್ಣನ ಮನೆಗೆ ಓಡಿ ಬನ್ನಿರೋ
ಧಿಢೀರನೆ ಬಿಸುಟು ಬೇಧದ ಮನವ
ಅಣ್ಣನ ಮನೆಗೆ ಬಾಗಿಲಿಲ್ಲ,
ಬೀಗವಂತೂ ಇಲ್ಲವೇ ಇಲ್ಲ;
ಅವನ ಮನ ಅತಿ ವಿಶಾಲ
ಬಂದವರಿಗೆಲ್ಲಾ ಭಕ್ತಿಯ ರಸದೂಟ.

ದಾಸವರೇಣ್ಯ ಪುರಂದರ, ಕನಕಾದಿಗಳು
ನಮ್ಮ ಆತ್ಮೀಯ ಬಂಧುಗಳು
ನವಕೋಟಿ ಹೊನ್ನು, ರತ್ನ, ವೈಢೂರ್ಯಗಳ
ಬಿಸುಟು, ಕೈ ನೀಡಿದರು
ದಿನ, ದಿನವೂ ಜೋಳಿಗೆಯ ಹೊತ್ತು;
ಒಂದು ಹೊತ್ತಿಗೆ ಬೇಕೆಂದು ಭಿಕ್ಷೆ ಬೇಡುವ
ನಾಟಕವನಾಡಿ, ಕಪಟನಾಟಕ ಶ್ರೇಷ್ಠನ
ಪಾಡಿ ಪೊಗಳಿದರು ವಿಠಲನ ನಾಮವನು;
ಕಲ್ಲು ಸಕ್ಕರೆ ಹಂಚಿದರು ನಮಗೆಲ್ಲ;
ತೋರಿದರು ವೈಕುಂಠಕೆ ದಾರಿಯನು.

ಮಹಾವೀರನು ನನ್ನ ಗುರು
ಆಕಾಶದೆತ್ತರ ನಿಂತಿರುವ
ಗೊಮ್ಮಟೇಶ್ವರ ಕಲ್ಲಿನಲಿ ಜೀವತುಂದಿಹ
ಜಿನ ಶ್ರೇಷ್ಠ ಮಹಾನುಭಾವ.

ನಮ್ಮಮ್ಮ ಚಾಮುಂಡಿ, ಬಲು ಘಟವಾಣಿ
ಬಡಿದು ಇಕ್ಕಿದಳು ರಕ್ಕಸ ಸೇನೆಯನೆ;
ಮೆಟ್ಟಿ ಸಂಹರಿಸಿದಳು ದುಷ್ಟ ಮಹಿಷನನು

ಇಳೆಯಲ್ಲೇ ಹುಡುಕಿದರೂ ಸಿಗುವುದುಂಟೇ
ಇಂತಹ ಶಾಂತ ಸುಂದರಿ.
ಸೂಸುವುದು ಸುವಾಸನೆಯ ಘಮವನು
ಅವಳು ಮುಡಿದ ಅರಳು ಮಲ್ಲಿಗೆಯಿಂದ

ಕೆಂಪು ತುಟಿಯವಳು ತುಂಟಿ ಚಾಮುಂಡಿ
ಚಿಗುರು ವೀಳ್ಯದ ಎಲೆ ಬಾಯಲ್ಲಿ.
ಬೇಕೆ ನಿಮಗೂ ಸ್ವಲ್ಪ ಬನ್ನಿ ಕೊಳ್ಳಿ
ನಗರದ ಮಾರುಕಟ್ಟೆಯ ರಸ್ತೆಯಲಿ.

ಬನ್ನಿ ನೋಡುವ ಬರುತಿಹುದು
ರಾಜ ಠೀವಿಯ ಹೆಜ್ಜೆ ಇಡುತ್ತ
ಹದಿನೈದು ಅಡಿ ಎತ್ತರದ
ಕಾಣುತಿದೆಯೇ ಆನೆಯ ಹಿಂಡು?

ನೋಡಿ ಆನಂದಿಸಿ ನಾಟ್ಯ ಸುಂದರಿಯ
ಭಾವ, ಭಂಗಿಗಳ, ಬಳುಕುವ ಸಿಂಹ ಕಟಿ
ಅದರ ಮೇಲೆ ತುಂಬಿ ಕುಣಿಯುವ ಕುಚ ದ್ವಯ
ಇದು ಸುಂದರವೋ, ಅದು ಸುಂದರವೋ
ವಿಷ್ಣುವರ್ಧನನೇ ಕೇಳಿ ನೋಡಿ

ಶಾಂತಲೆಯ ನಾಟ್ಯದಲಿ ಮನಸೋತು
ಮುಳುಗಿಹಿರಿ ಸೌಂದರ್ಯಾರಾಧಕರೆ
ನಿಮ್ಮ ಎದೆಯು ಮೋಹದಿ ಕಂಪಿಸುತಿದೆ

ಆ ಸಿಂಹಕಟಿಯ ನಾಟ್ಯದ ಹಿಂದೆ
ಬರುತಿಹುದು ಜೋಕೆ ಭಯಂಕರ ಸುಂದರ ಸಿಂಹ

ಕೇಳುತಿಹುದೆ ಎದೆಯ ನಡಗಿಸುವ ಘರ್ಜನೆಯು?
ಚಾಮುಂಡಿ ಏರಿ ಬರುತಿಹಳು ನೋಡಿ
ಮೈ ಬಾಗಿ ಮಣಿಯಿರಿ, ಬಹಳ ಗೌರವದಿಂದ
ನಮ್ಮ ಭೂಲೋಕದ ಸಾರ್ವ ಭೌಮಿಗೆ
ಕಾವೇರಿಯು ತಾಹರಿವ ದಿಕ್ಕ ಮರೆತು
ಧಾವಿಸಿ ಬರುತಿಹಳು ದೇವಿಯ ಕಾಲ ತೊಳೆಯಲು.

ವಾಯು ದೇವನು ಹೊತ್ತು ತಂದಿಹ
ಸಿರಿಗಂಧದ ಕಾಡಿನ ಸುಗಂಧವನು
ತಾಯಿಗೆ ಚಾಮರವ ಬೀಸುತಿಹನು.

ಬನ್ನಿ ಮನೆಯೊಳಗೆ ನಿಮ್ಮ ಸಮ್ಸಾರದ ಜೊತೆಗೆ
ಕೂಡಿ ವಿಶ್ರಮಿಸಿ ತೇಗದ ಮಣೆಯ ಅಲಂಕರಿಸಿ
ಕುಡಿಯಿರಿ ಕೊಡಗಿನ ಅಮೃತದ ಪಾನ
ಚೊಂಬಿಗಿಂತಲೂ ದೊಡ್ಡ ಬೆಳ್ಳಿಯ ಲೋಟ
ಸುಡುತಿಹುದು ಕಾಫಿ ನಾಲಿಗೆ ತುಟಿಗಳು ಜೋಕೆ
ಕಾವಲಿಯ ಮೇಲೆ ಹಿಟ್ಟು ಹಾಕುವೆನು
ಒಂದೆರಡು ಮೈಸೂರು ಮಸಾಲೆ ದೊಸೆ
ಭಾಂಡಲೆಯಲ್ಲಿ ತಟ್ಟುವೆನು
ದೊಡ್ಡ ರಾಗಿಯ ರೊಟ್ಟಿ
ಅದಕೆ ಹದ ಖಾರದ ತೆಂಗಿನ ಚಟ್ನಿ
ಜೊತೆಗೆ ಮದ್ದೂರಿನ ವಡೆ, ಚಕ್ಕುಲಿ, ಕೋಡುಬಳೆ

ನಮ್ಮೂರ ಊಟವನು ಚಪ್ಪರಿಸಿ ತಿನ್ನಿ
ಹಿತ್ತಲಲಿ ಬೆಳೆಯುವುದು ಎಳೆಯ ಬದನೇಕಾಯಿ,
ಅದಕೆ ಬ್ಯಾಡಗಿ ಮೆಣಸಿನ ಕಾಯಿ
ಅರೆದು ಮಾಡಿದಾ ನಳಪಾಕ ಎಣ್ಣೆಗಾಯಿ
ಕಾವಲಿಯಿಂದ ಬೀಳುವುದು
ನಿಮ್ಮ ಅಗ್ರದ ಬಾಳೆಯ ಮೇಲೆ
ಹದನಾದ ಜೋಳದ ರೊಟ್ಟಿ

ಬಿಸಿ, ಬಿಸಿ ಬೇಳೆ ಹುಳಿಯನ್ನ
ತಿನ್ನಿರಿ ಕಂಠ ಪೂರ್ತಿ
ಹೊಟ್ಟೆ ಭಾರ, ಮೇಲಕ್ಕೇಳುವ
ಆತುರವೇಕೆ, ಮರೆತು ಬಿಟ್ಟಿರಾ
ಘಮ, ಘಮ ತಿಳಿ ಸಾರು
ಮೈಸೂರಿನ ಸಾರೆಂದರೆ ಮಾತ್ರ ನಿಜದ ಸಾರು
ಮಿಕ್ಕವರ ರಸಂ ಬರಿಯ ಬಿಸಿನೀರು
ನಮ್ಮ ಮೈಸೂರು ಸಣ್ಣ ಅಕ್ಕಿ
ಮಲ್ಲಿಗೆಗಿಂತ ಬಹಳ ಅರಳು
ಕುಸುಬಲಕ್ಕಿ ಬೇಕೆ ಮಹರಾಯರೆ?

ಗಸಗಸೆಯ ಪಾಯಸ ಕುಡಿದರೆ
ನಿಮಗೆ ಸಾಕಷ್ಟು ಘಾಢನಿದ್ರೆ;
ಭಕ್ಷ್ಯ ಬೇಕೆಂದಿರಾ ಈಗಲೇ ತಯಾರು;
ನಮ್ಮ ಮನೆಯ ಮೈಸೂರು ಪಾಕ;
ತೆಗೆದುಕೊಳ್ಳಿ ಇನ್ನೂ ನಾಲ್ಕೈದು ಬಿಲ್ಲೆ;
ಧಾರವಾಡವೆಂಬ ಸ್ವರ್ಗದ ಫೇಢ
ಹಾಕುವೆನು ಎಲೆಯ ಮಧ್ಯಕ್ಕೇ

ಒಂದೆರಡು ದಿನ, ವಾರ, ತಿಂಗಳು ಸಾಲದು
ನಿಮ್ಮ ಮನೆ ಮಕ್ಕಳೆಲ್ಲಾ
ಇಲ್ಲೇ ಉಳಿದುಕೊಳ್ಳಿ,
ನಮ್ಮೂರ ಚೆನ್ದ್ದ ನೋಟವನು
ನಮ್ಮೂಟದ ಪಾಕದ ರುಚಿಯನ್ನು
ನಮ್ಮೆಲ್ಲರ ಆತ್ಮೀಯ ಆದರವನು
ಅನುಭವಿಸಿ, ಆನಂದಿಸಿದರೆ
ನಿಮ್ಮೂರನೇ ಮರೆಯುವುದು ಅನುಮಾನವೇ ಇಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ