ಬುಧವಾರ, ಮೇ 12, 2010

ಕನ್ನಡ ಕವನ ಮತ್ತು ಇತರ ಸಾಹಿತ್ಯ ಪ್ರಕಾರ ಪ್ರಿಯರೆ ಹಾಗೂ ಬರಹಗಾರರೆ:

ಕನ್ನಡ ಕವನ ಮತ್ತು ಇತರ ಸಾಹಿತ್ಯ ಪ್ರಕಾರ ಪ್ರಿಯರೆ ಹಾಗೂ ಬರಹಗಾರರೆ:

ಈ ಕವನವನ್ನು ಓದಿ; ಮತ್ತೆ ಮತ್ತೆ ಓದಿ. ಇದು ಮುಗಿಸದ ಕವನ; ಮುಗಿಯಲಾರದ ಕವನ; ಕೊನೆ ಮೊದಲಿಲ್ಲದ ಕವನ; ಒಬ್ಬರೇ ಬರೆದು ಮುಗಿಸಲಾಗದ ಕವನ. ನಿಮ್ಮ ಲೇಖನಿಯನ್ನು ನಿಮ್ಮ ಹೃದಯದ ಇಂಕುದಾನಿಯಲ್ಲಿ ಆತುರದಲ್ಲಿ ಅದ್ದಿ; ಆತುರ ಪಡದೆ ಸಾವಕಾಶವಾಗಿ ಮುಂದುವರಿಸಿ; ಮುಂದೆ, ಹಿಂದೆ, ಮಧ್ಯೆ, ಮತ್ತೆಲ್ಲಾದರೂ ಸೇರಿಸಿ ನನಗೂ, ಮಿಕ್ಕೆಲ್ಲರಿಗೂ ಕಳಿಸಿ. ನಿಮ್ಮ ಪ್ರಿಯವಾದ ಸಾಹಿತ್ಯ ಪ್ರಕಾರದಲ್ಲಿ ಬರೆಯಿರಿ; ಯುಕ್ತ ಬೆರಕೆ ಇರಲಿ; ಸರಿಯಾವುದಿಲ್ಲ, ಇಲ್ಲವಾವುದಿಲ್ಲ. ನಿಮ್ಮೊಳಗಿನ ಚಿಂತಕ ಚಿಟ್ಟೆಯನ್ನು ಬಡಿದಿಡದೆ, ಹೊರಗೆ ಹಾರ ಬಿಡಿ.

ಇಂತು, ಈ ಮುಗಿಸದ ಕಾವ್ಯದ ಒಬ್ಬ ಕವಿ.
ಮೂರ್ತಿ

ನೀವೇ ಹೇಳಿ
ಕೆ. ಆರ್. ಎಸ್. ಮೂರ್ತಿ



ನಾನು:

ರುಂಡ, ಮುಂಡ, ಕೈಕಾಲು

ಅಂಗಿ, ಪ್ಯಾಂಟು,

ಸೂಟು, ಬೂಟು, ಹ್ಯಾಟು,

ಕಾಚ, ಬನಿಯನ್ನು, ಸಾಕ್ಸು

ಟೈಯಿ, ಕೈ ಕರ್ಚೀಫ಼್ಫ಼ು.



ಹೆಣ್ಣು ನಾನಾಗಿದ್ದರೆ:

ಬಣ್ಣ, ಬಣ್ಣದ ಸೀರೆ,

ಅನೇಕ ಡಿಸೈನುಗಳು,

ಚಿತ್ರ, ವಿಚಿತ್ರ ಬಾರ್ಡರ್ರುಗಳು,

ಕುಬುಸ, ಲೊ ಕಟ್ಟು, ತೋಳಿಲ್ಲ,

ಒಳಗಡೆ ಕುಚ ಕವಚ,

ಒಳಲಂಗ: ಇದು ಬೇಕೆ?

ಪ್ಯಾನ್ಟಿ, ಪ್ಯಾಂಟು

ಸ್ಕರ್ಟು, ಮಂಡಿಯ ಕೆಳಗೆ, ಮೇಲೆ?

ಸೆಲ್ವಾರು, ಕಮೀಸು,

ದುಪ್ಪಟ್ಟ, ದಟ್ಟ ಜಡೆ,

ಬಾಪು ಕಟ್ಟು...

ಇದು ಮುಗಿಯದ ಲಿಸ್ಟು!



ಮಗು, ಹುಡುಗ, ಹುಡುಗಿ,

ಇದೊಂದು ಬೇರೆ ಲಿಸ್ಟು.



ಮುದುಕರಾದರೆ:

ಇವೆಲ್ಲದರ ಜೊತೆಗೆ,

ಕನ್ನಡಕ, ಬೈ ಫ಼ೋಕಲ್ಲು,

ವಾಕಿಂಗ್ ಸ್ಟಿಕ್ಕು, ಗೂನು ಬೆನ್ನು,

ಸುರಿಯುತ್ತಿರುವ ಜೊಲ್ಲು, ಸಿಂಬಳ,

(ಮತ್ತೆ ಸಂಜೆ ವಯ್ಯಸಿನಲ್ಲಿ ಮಗು!)

ಮುದುಕ ಕಂದರಿಗೆ ಬೇಡವೆ ಡಯಪರ್ರು?



ಗ ಕೇತ್ವ (ಅಂದರೆ ತಿಳಿಯಿತೆ?):

ನನಗೆ ಗೊತ್ತಿಲ್ಲ.

ಸ್ಯಾನ್ ಫ಼್ರ್ಯಾನ್ಸಿಸ್ಕೋ ಗೇಪುರದಲ್ಲಿರುವ,

ಸುಕುಮಾರಿಯರ, ಬುಚ್ಚಣ್ಣ ಶಿಖಂಡಿಯರ

ಗುಟ್ಟಿನಲಿ ಕೇಳಿನೋಡಿ.

ಕೇಳುವಾಗ ಹೇಗೇಗೋ ಕೈಕುಣಿಸ ಬೇಡಿ,

ಬಿಚ್ಚಿ ತೋರಿಸಿಬಿಟ್ಟಾರು ಜೋಕೆ!



ಈಗ ಹೇಳಿ: "ನಾನು" ಯಾರು?

ರುಂಡವೋ, ಮುಂಡವೋ, ಕೈಕಾಲುಗಳೋ?



ಒಂದೋ, ಎರಡೂ ಕೈಯೋ, ಕಾಲೋ, ಬೆರಳೋ,

ಹೇಗೋ, ಏಂದೋ, ನಾಪತ್ತೆಯಾದರೆ?



ಒಂದೋ, ಎರಡೂ ಕಣ್ಣು, ಕಿವಿ,

ಇತ್ಯಾದಿ, ಹೋಗಿಬಿಟ್ಟರೆ?



ನಿಮ್ಮ ಗುಂಗುರು ಕೂದಲು

ದಿನೇ, ದಿನೇ ಉದುರಿ ಬಿಟ್ಟು,

ನೀವು ತಾಮ್ರದ ಚೊಂಬಾದರೆ?



ಕ್ಯಾನ್ಸರ್ರು ಕೆರಳಿ,

ಕುಚ ಕಚ್-ಕಚ್ ಅಂತ

ಚಾಕುವಿಗೆ ಬಲಿಬಿದ್ದು,

ಕಟ್-ಕಟ್ ಆಗಿಹೋದರೆ?



ಬೆಳಿಗ್ಗೆ ಬಲವಾಗಿದ್ದ ದೊಡ್ಡ

ಗಂಡುತನ, ಹೆಣ್ಣುತನ

ದಿನೇ, ದಿನೇ, ನಿಮ್ಮ ಕಣ್ಮುಂದೆಯೇ

ಜೀವನದಲ್ಲಿನ ಸಂಜೆಯ ಹೊತ್ತಿಗೆ,

ಚಿಕ್ಕದಾಗುತ್ತಾ ಮಾಯವಾದರೆ?



ಕಾಲ ಬಂದೀತು:

ನಾನು, ನನ್ನದು, ನನ್ನಿಂದ, ನನಗೆ,

ಇನ್ನು ಇಲ್ಲವಾದರೆ?



ನಾನಿಲ್ಲ, ನೀವಿಲ್ಲ, ಅವರಿಲ್ಲ,

ಯಾರೂ ಇಲ್ಲ, ಏನೂ ಇಲ್ಲ, ಎಲ್ಲೂ ಇಲ್ಲ,

ಹೇಗೂ ಇಲ್ಲ, ಇದ್ದಿರಲಿಲ್ಲ, ಹೋಗೂ ಇಲ್ಲ,

ಇಲ್ಲದ್ದು ಎಲ್ಲಿಗೆ ಹೇಗೆ ಹೋದೀತು?



ನನ್ನದಿಲ್ಲ, ನಿಮ್ಮದಿಲ್ಲ, ಅವರದು ಇಲ್ಲವೇ ಇಲ್ಲ.

ಯಾವುದೂ ಯಾರದೂ ಅಲ್ಲ, ಆಗಿರಲಿಲ್ಲ.



ಎಲ್ಲ ಎಲ್ಲೂ ಇಲ್ಲ, ಅಲ್ಲ.

ಇವೆಲ್ಲ ಬಲ್ಲವರಿಲ್ಲ, ಇರಲಿಲ್ಲ, ಬರುವುದಿಲ್ಲ.



ಇದನು ಮತ್ತೆ ಮತ್ತೆ ಕೇಳುವರಾರು?

ಇದಕ್ಕೆ ಪ್ರತಿಯುತ್ತರ ಹೇಳುವರಾರು?

ಇದೆಲ್ಲಕ್ಕೂ ಸರಿ, ಅಲ್ಲ ಬೊಗಳುವರಾರು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ