ಇರುವೆ ಲೋಕ
ಕೆ ಆರ್ ಎಸ್ ಮೂರ್ತಿ
ಮರಿ ಇರುವೆಗೆ ಅದೇಕೋ ಬಲು ಚಿಂತೆ
ಮರಿ ಇರುವೆಗೆ ಹಿರಿದಾದ, ಕಿರು ದೇಹಕ್ಕೇ ಮೀರಿದ ಯೋಚನೆ
ಪರಿ, ಪರಿ ಅಲೋಚನೆ; ಸರಿ ಸತ್ಯ ದೊರಕದ ಚಿಂತೆ
ಊರು, ಊರೆಲ್ಲಾ ಸರಿದು, ನೂರು ಸಾರಿ ನೆನೆದರೂ
ಮನಕ್ಕೆ ಮೀರಿದ ಮರು ಪ್ರಶ್ನೆ
ಬಲು ಗೆಳೆಯರನ್ನು ಕೇಳಿ, ಕೇಳಿ ಅವರೆಲ್ಲಾ ನೇಗಾಡಿ,
"ನಿನಗೇತಕೋ ಈ ಪರಿ ಹುಚ್ಚು" ಎಂದೊಬ್ಬನಂದರೆ,
"ಮುದಿ ಇರುವೆ" ಎಂದು ಕೀಟಲೆಯಲ್ಲಿ ಕೂಗಿದರು ಎಲ್ಲರೂ.
ಸರಿ, ನನ್ನ ಪೊರೆದ ಅಮ್ಮನನ್ನೋ, ಅಪ್ಪನನ್ನೋ ಕೇಳೋಣವೇ
ಎಂದು ತನ್ನ ಗೂಡಿನ ಕಡೆಗೆ ತಿರುಗಿದ.
ಗೂಡೊಳಗೆ ತೂರಿ, ಅಮ್ಮನನು ಕಂಡು,
"ಈ ನಮ್ಮೆಲ್ಲರ ಲೋಕಕ್ಕೂ ಮೀರಿದ ಲೋಕವುಂಟೆ?" ಎಂದ.
ಅಮ್ಮ ಇರುವೆ, "ನನ್ನ ಮುದ್ದು ಮರಿಯೆ, ನಿನಗೀ ಥರದ ಯೋಚನೆಗಳೇಕೇ ಕಂದ,
ಸುಮ್ಮನೆ ಇತರ ಕಿರು ಇರುವೆ ಜೊತೆ ಆಡಿಕೋ ನನ್ನ ರನ್ನ"
ಎನ್ನುತ್ತಾ, ಸಕ್ಕರೆ ಚೂರನ್ನು ಉಣಿಸಿದಳು.
ಸಕ್ಕರೆಯು ಸವಿಯಾದರೂ, ಸತ್ಯ ದೂರವೇ ಎನ್ನಿಸಿತು.
"ಮತ್ಯಾರ ಕೇಳಲಿ, ಎನ್ನ ಪೊರೆದ ಅಪ್ಪ ಬಲು ಬಲವಂತ; ಬಲು ತಿಳಿದವನೇ ಇರಬಹುದು",
ಎಂದು ಹೆತ್ತಪ್ಪನ ಕಡೆಗೆ ಸರಿದು, ಮತ್ತೆ ಅದೇ ಮಾತು ಕೇಳಿದ.
ನಮ್ಮ ಮರಿ ಇರುವೆಯ ಅಪ್ಪ ಬಲು ದೊಡ್ದ ಬೆಲ್ಲದ ಚೂರನ್ನು ನೂಕುತಲಿದ್ದ.
ಮರಿ ಇರುವೆಯ ಸಂಶಯ ಕೇಳಿ,
"ಇಲ್ಲಿ ಕೇಳು ಮರಿ, ನನಗೆ ಬಲು ದೊಡ್ದ ಕೆಲಸ ಇನ್ನು ಮುಗಿದಿಲ್ಲ"
"ನಮ್ಮೂರಿನ ಬಲು ಹಿರಿಯ ಇರುವೆ, ಗೂಡಿನ ಹೊರಗೆ ಇರುವ"
"ಅವನಿಗೆಲ್ಲ ಗೊತ್ತು. ಅವನಿಗೆ ಗೊತ್ತಿರದಿದ್ದು ಊರಲ್ಲೇ ಇಲ್ಲ."
"ಅವನನ್ನು ಮೀರಿಸದವರಿಲ್ಲ.
ಹೋದರೆ ಮಾತ್ರ, ಬಲು ವಿನಯದಿ, ತಲೆ ಬಾಗಿ, ಅವನ ಕಾಲು ಮುಟ್ಟಿ ಕೇಳು"
ಎಂದು ತನ್ನ ಕೆಲಸಕ್ಕೆ ಕೈಗೊಟ್ಟ.
ಮರಿ ಇರುವೆ ಹಿರಿ ಇರುವೆಯ ಕಾಲ ಹಿಡಿದು,
"ಈ ನಮ್ಮ ಇರುವೆ ಲೋಕಕ್ಕೂ ದೂರದ ಊರು ಏನಿದೆ?
ನಾನು ಸತ್ತ ಮೇಲೆ ಬೇರೆಲ್ಲಿ ಹೋಗುವೆ?
ಇರುವೆಗಳಿಗೆ ದೇವರುಂಟೆ? ಇರುವೆ ದೇವರ ಇರುಹು ಎಲ್ಲಿ.
ಅವನ ಕುರುಹು ಕಾಣುವುದೆಂತು?
ಸರಿ ದಾರಿ ತೋರಿ, ಈ ಮರಿಯನ್ನು ಸಲಹಿ ಗುರು ಇರುವೆಯೇ"
ಎಂದು ಒದಲಿದ.
ಗುರು ಇರುವೆಯ ಗೊರಕೆ ಧ್ಯಾನಕ್ಕೆ ಮರಿ ಇರುವೆಯು ಅಡ್ಡಿ ಬಂದಂತೆ ಆಗಿ,
ತನ್ನ ಕಾಲು ಹಿಡಿದ ಮರಿ ಇರುವೆಯ ಕೈ ಹಿಡಿದು,
"ನನ್ನ ದೇವರು, ನಿನ್ನ ದೇವರು, ನಮ್ಮೆಲ್ಲರ ದೇವರು ಅತಿ ದೊಡ್ದ ಇರುವೆ.
ಅವನಿಗೆ ಸಾವಿರಾರು ತಲೆಗಳು, ಕೈಗಳು, ಕೊಂಡಿಗಳಿದ್ದು, ನಮ್ಮೆಲ್ಲರನ್ನೂ ಸಲಹುತ್ತಾನೆ.
ಸತ್ಯ ಪರಿಪಾಲಕ, ಕರುಣಾಸಾಗರ, ಭಕ್ತರನ್ನು ಸದಾ ಕಾಯುವ ಸ್ವಾಮಿ
ಆ ಪರಮ ಇರುವೆಯನ್ನು ಧ್ಯಾನ ಮಾಡು"
ಎನ್ನುತ್ತಾ ಗೊರಕೆಗೆ ಅಧೀನವಾಯಿತು ಗುರು ಇರುವೆ.
ಮರಿ ಇರುವೆಯ ಕಿರು ತಲೆಗೆ ಮಿಂಚು ಹೊಳೆದಂಥಾಗಿ,
ಇರುವೆ ದೇವರ ನಾಮ ಧ್ಯಾನ ಮಾಡತೋಡಗಿತು.
ಇತ್ತ ಪರಮಾತ್ಮನನ್ನು ತಮ್ಮ ಧ್ಯಾನದಲ್ಲಿ ಕಂಡ,
ಜದದ್ಗುರು, ಮಹಾಮಂಡಲಾಧೀಶ್ವರ,
ಕರುಣಾಮಯಾನಂದ ಸ್ವಾಮಿಗಳು ತಮ್ಮ ಧ್ಯಾನದಿಂದ ಎದ್ದು,
ಮಠದ ಬಾಗಿಲಿಂದಾಚೆಗೆ ಕಾಲಿಡುತ್ತ,
ನಮ್ಮ ಮರಿ ಇರುವೆ, ಗುರು ಇರುವೆ, ಅಮ್ಮ, ಅಪ್ಪ,
ಮತ್ತೆಲ್ಲ ಇರುವೆಗಳ ಗೂಡಿನ ಮೇಲೆ ಕಾಲಿಟ್ಟು
ಇರುವೆ ಲೋಕಕ್ಕೆ ಮುಕ್ತಿ ನೀಡಿದರು.
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ