ಮನೆ ದೇವರಿಗೆ ನೈವೇದ್ಯ
ಕೆ. ಆರ್. ಎಸ್. ಮೂರ್ತಿ
ಅಮ್ಮ ಬೆಳಿಗ್ಗೆ ಎದ್ದು, ಸ್ನಾನ ಮಾಡಿ, ಅಡಿಗೆಯೆಲ್ಲ ಮಾಡಿ ಮುಗಿಸಿ,
ಪೂಜೆ ಮಾಡಿ, ಸ್ತೋತ್ರ ಹೇಳಿ, ಹೂವು, ಮಂತ್ರಾಕ್ಷತೆ, ಊದಿನಕಡ್ಡಿ,
ಮಂಗಳಾರತಿ ಎಲ್ಲಾ ಮಾಡಿ ನೈವೇದ್ಯ ದೇವರಮುಂದೆ ಇಟ್ಟು,
ಎಲ್ಲಾ ಆದ ಮೇಲೆ, ಸಮಗೆಲ್ಲ ತೀರ್ಥ, ಪ್ರಸಾದ ಕೊಡ್ತಾ ಇದ್ಲು
ಬೇರೆ ದಿನ ಅನ್ನ, ಸಾರು, ಹುಳಿ, ಪಲ್ಯ ಮಾತ್ರ ಅವಳ ದೇವರಿಗೆ.
ಹಬ್ಬದ ದಿನ ಮಾತ್ರ ಅವಳ ದೇವರಿಗೆ ಅದೃಷ್ಟ: ವಿಶೇಷ ಊಟ.
ಗಸ ಗಸೆ ಪಾಯಸ, ಒಂದೊಂದು ಸಾರಿ, ಶಾವಿಗೆ ಪಾಯಸ,
ಒಬ್ಬಟ್ಟು ಒಂದು ಹಬ್ಬಕ್ಕಾದರೆ, ಗಣೇಶನಿಗೆ ಕಡುಬು ಪ್ರಿಯ ಅಲ್ಲವೇ!
ಚಿತ್ರಾನ ಮಾತ್ರ ಬೇರೆ ಬೇರೆ ರುಚಿ ಬೇರೆ ಬೇರೆ ಹಬ್ಬಕ್ಕೆ:
ಮಾವಿನ ಕಾಯಿ ಚಿತ್ರಾನ, ಕಾಯಿ ಸಾಸಿವೆ ಚಿತ್ರಾನ್ನ, ಪುಳಿಯೋಗರೆ.
ಸ್ಮಾರ್ತರ ಬಾಯಲ್ಲಿ ಪುಳಿಯೋಗರೆ ಎಳ್ಳು ಪುಡಿ ಚಿತ್ರಾನ ಅಲ್ಲವೇ!
ಕೋಸಂಬರಿ ಕೂಡ ಬೇರೆ ಬೇರೆ ರುಚಿ, ಬೇರೆ ಬೇರೆ ಬೇಳೆ;
ಒಗ್ಗರಣೆ ಮಾತ್ರ ಆದೇ ಪರಿಮಳ: ನಮ್ಮ ಮೂಗಿಗೆ ಸ್ವರ್ಗ!
ತುಪ್ಪದ ಅನ್ನದಲ್ಲಿ ಎಳೆಯ ತೆಂಗಿನ ತುರಿ, ಗೋಡಂಬಿ.
ಹೂರಣ ಕಟ್ಟಿನ ಸಾರು, ಅದಕ್ಕೆ ಒಂದು ಚಮಚೆ ತುಪ್ಪ ಇದ್ದರೆ
ನಳ, ಭೀಮರಿಗೆ ಕೂಡ ಎಟುಕದ ರುಚಿ ನಮಗೆಲ್ಲಾ!
ಅಕ್ಕ, ಭಾವ ಮನೆಗೆ ಬಂದರೆ, ಈ ದೇವತೆಗಳಿಗೆ ಮಾಡಿದ ಅಡಿಗೆ
ಅಮ್ಮನ ಕೈಚಳಕ ಇನ್ನೂ ಹೆಚ್ಚು; ಇದೆಲ್ಲ ತಿಂದವರಿಗೆ ಮಾತ್ರ ಗೊತ್ತು.
ಹೀರೆ ಕಾಯಿ ಹುಳಿತೊವ್ವೆಯಲ್ಲಿ ಎರಡು ಮೂರು ಸಲ ಅನ್ನಕಲೆಸಿ,
ಅಮ್ಮನ ವಿಶೇಷ ಮೊಸರು ಬಜ್ಜಿ ಜೊತೆಗೊಂದು ಸಲ,
ಎರಡೂ ಬೆರೆಸಿ ಇನ್ನೊಂದು ಸಲ, ಹೊಟ್ಟೆ ಬಿರಿಯುವವರೆಗೂ!
ಬಿಸಿ ಬೇಳೆ ಹುಳಿಯನ್ನ ಮಾಡಿದ ದಿನ ಮಾತ್ರ ಅಂದೇ ನಮಗೆಲ್ಲ ಹಬ್ಬ!
ಕೈಯಿಂದ ಬಾಯಿಗೆ ನೂರಾರು ಸಲ; ಹೊಟ್ಟೆ ತುಂಬಿದ ಮೇಲೂ ಮುಗಿಯದ್ದು.
ಖಾರವಾಗಿದ್ದಷ್ಟೂ ಸಂತ್ರುಪ್ತತೆಯ ಬೆವರು ಸುರಿದು ಹೋಗುತ್ತಿತ್ತು.
ಅಕ್ಕ, ಭಾವ, ಜೊತೆಗೆ ಅವರ ಪುಟ್ಟ ತುಂಟ ಮಗ ಬಂದದ್ದೇ ಹಬ್ಬ ಅಲ್ಲವೇ!
ಅಮ್ಮನ ಸಂಭ್ರಮ, ಮೊಮ್ಮಗನ ಮೇಲಿನ ಮುದ್ದು, ಮನೆ ದೇವರು ನಮ್ಮ ಭಾವ.
ನಾವೆಲ್ಲಾ ಅಮ್ಮನ್ನ ಸಂಭ್ರಮಕ್ಕೆ ಧ್ವನಿ ಕೂಡಿಸಿ ಬಿಟ್ಟಿದ್ದೆವು; ಓಡಾಡಿದ್ದೇ ಓಡಾಡಿದ್ದು.
ದೇವತೆಗಳಂತೆ ನಮ್ಮ ಕಾಲು ನೆಲ ಮುಟ್ಟುತ್ತಿರಲಿಲ್ಲ! ಬೆವರು, ಆಯಾಸ ನಮಗಿಲ್ಲ.
ಮೊಮ್ಮಗನನಂತೂ ನೆಲದ ಮೇಲೆ ಬಿಡುವವರಾರು; ನನ್ನ ಅಮ್ಮ, ಅಪ್ಪ ಅಲ್ಲದೆ,
ನನ್ನ ತಮ್ಮಂದಿರು, ತಂಗಿಯರು ಎತ್ತು ಮುದ್ದಾಡುವುದು ಮುಗಿಯದು; ಸರದಿಗೆ ಕಾದು
ಯಥಾ ಪ್ರಕಾರ ಪೂಜೆ, ಪುನಸ್ಕಾರ, ಹೂವು, ಹಣ್ಣು, ಧೂಪ, ಮಂಗಳಾರತಿ, ಮಂತ್ರಾಕ್ಷತೆ.
ನೈವೇದ್ಯವನ್ನೆಲ್ಲಾ ದೇವರಿಗೆ ಅರ್ಪಣೆ. ಧಿಡೀರನೆ ನನ್ನ ಕಣ್ಣಿಗೆ ಬಿತ್ತು ಒಂದು ದೊಡ್ಡ ಕ್ಯಾಂಡಿ!
ಇದೇನಿದು! ಆ ಕ್ಯಾಂಡಿ ಯಾಕೆ ದೇವರಿಗೆ ಇದ್ದಕ್ಕಿದ್ದಂತೆ ನೈವೇದ್ಯ ಆಗಿಬಿಟ್ಟಿತು! ಕಿಲಾಡಿ ದೇವರು!
"ಅಮ್ಮಾ! ಯಾರಮ್ಮ ದೇವರ ಮುಂದೆ ಕ್ಯಾಂಡಿ ಇಟ್ಟಿದ್ದು? ಇದ್ದಕ್ಕಿದ್ದ ಹಾಗೆ ನೀನು ಹೀಗೇಕೆ ಆಗಿಬಿಟ್ಟೆ?"
"ನಾನೇ ಇಟ್ಟೆ ಕಣೋ. ನೀವೆಲ್ಲಾ ಏಳುವ ಮುಂಚೆ ಮೊಮ್ಮಗು ನನ್ನ ಹತ್ತಿರ ಬಂದು ಕೇಳ್ತು ಕಣೋ.
'ಅಜ್ಜೀ! ನಿನ್ನ ದೇವರಿಗೆ ಕ್ಯಾಂಡಿ ಇಷ್ಟ ಇಲ್ಲವಾ? ಆ ಗಣೇಶಂಗೆ ಕಡುಬು ತಿಂದು ಸಾಕಾಗಿರಬೇಕು.
ನಾಳೆ ಒಂದು ಕ್ಯಾಂಡಿ ಇಟ್ಟು ನೋಡು ಅಜ್ಜಿ. ಅವನಿಗೆ ಸಿಹಿ ಇಷ್ಟ ಇದ್ದರೆ, ಕ್ಯಾಂಡಿ ಕೂಡ ಇಷ್ಟ ಆಗಿಬಿಡತ್ತೆ'
ಅಂತು ಕಣೋ. ಎಷ್ಟು ಬುದ್ದೀ ಇದೆ ನೋಡೋ ನನ್ನ ಮೊಮ್ಮಗೂಗೆ! ಅದಕ್ಕೆ ನಾನೇ ದೇವರ ಮುಂದೆ ಇಟ್ಟೆ"
"ಮನೆ ದೇವರು ಅಂದರೆ ಏನು ಗೊತ್ತೇನೋ? ಮನೆ ಮೊಕ್ಕಳು, ಮೊಮ್ಮಕ್ಕಳು ಅಲ್ದೆ, ಇನ್ಯಾರು ದೇವರಪ್ಪ!"
ಇದನ್ನೆಲ್ಲಾ ಪಿಳಿ, ಪಿಳಿ ಕಣ್ಣು ಬಿಟ್ಟು ಕೊಂಡು, ಕಿವಿ ನೆಟ್ಟಗೆ ಮಾಡಿಕೊಂಡು ಕೇಳ್ತಾ ಇದ್ದ, ನಮ್ಮೆಲ್ಲರ ಮನೆ ದೇವರು!
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ