ಭಾನುವಾರ, ಮೇ 16, 2010

ಹೆಂಡತಿಯ ವಟ ವಟ ಅಷ್ಟೋತ್ತರ

ಹೆಂಡತಿಯ ವಟ ವಟ ಅಷ್ಟೋತ್ತರ
ಕೆ. ಆರ್. ಎಸ್. ಮೂರ್ತಿ

ಪಕ್ಕದ ಮನೆಯವಳು ರುಕ್ಕು ಫಕ್ಕನೆ ನಕ್ಕಾಗ ಬಿಂಕದಲಿ
ತನ್ನ ರವಿಕೆಯನು ಸರಿಪಡಿಸಿ ಸಡಲಿಸಿದರೆ ಚಕ್ಕಂದದಲಿ

ಮುಖವಿಕ್ಕಿ ರವಿಕೆಯ ಸಂದಿಯಲಿ, ಸೊಂಟ, ಹೊಕ್ಕಳಿನ ಕೆಳಗೂ
ಸೀರೆಯ ನೆರಿಗೆ ಮೇಲೆ ಕಣ್ಣು, ಚಕ್ಕನೆ ಹೊಕ್ಕುತ ಸೆರಗಿನ ಒಳಗೂ

ಹುಡುಕುವಿರಿ ಎಲ್ಲ ಕಡೆ ಸಕ್ಕರೆಯ ಅರಸುವ ಇರುವೆಯಂದದಲಿ
ತುಟಿಯನ್ನು ಕಚ್ಚಿ ಪೆಚ್ಚುಪೆಚ್ಚಾಗಿ ಕಣ್ಣಿಕ್ಕಿ ತದೇಕ ಚಿತ್ತದಲಿ

ಪದ್ದು ಬೀದಿಯಲಿ ಬಂದಳು ಎಂದರೆ ಒಡನೆ ಬಿದ್ದೂ, ಎದ್ದೂ,
ಹಾರಿ ಓಡುವಿರಿ ಪುಟ್ಟಾ ಬೆಕ್ಕಾಗಿ ಸದ್ದೂ ಮಾಡದೆ ಕದ್ದು, ಕದ್ದು

ಚಂಪಳ ಕೆಂಡ ಕೆಂಪಾದ ಅಧರವು ಬಿದ್ದೊಡನೆ ಕಣ್ಣಿಗೆ
ತಾರಾಡುವಿರಿ ಜೊಲ್ಲನು ಸುರಿಸಿ ಸುತ್ತು, ಸುತ್ತು ತಿರುಗಿ

ಮಧುವನು ಅರಸುವ ದುಂಬಿಯಂದದಿ ಝೊಂಯೆಂದು
ಹಾರಿ ಓಡುವಿರಿ ಬರಿಯ ಕಾಲಿನಲೇ, ಚಪ್ಪಲಿಯ ಬಿಟ್ಟು

ಸುಮಳ ಘಮ ಘಮ ವಾಸನೆಯು ಮೂಗಿಗೆ ಬಡಿದಾಗ
ಸಿಂಹಿಣಿಯ ಆಘ್ರಾಣವನು ಹಿಂಬಾಲಿಸುವ ಸಿಂಹವಾಗಿ

ಕಮಲಳ ಮುಖವನು ಕಂಡೊಡನೆ, ಹಲ್ಲನ್ನು ಗೀಚುವಿರಿ
ಬಾಲವಿಲ್ಲದ ಕೋತಿಯಂತಿರುವ ನಿಮ್ಮ ಮೂತಿಯು ಅರಳಿ

ವರ್ಷಳ ಆಸ್ತಿ ಬಲು ಜಾಸ್ತಿ, ಅಪಾರವಾದ ಆಕರ್ಷಣೆ
ಹರುಷ ಹೆಚ್ಚಾಗಿ, ಹಿಂಬಾಲಿಸುವಿರಿ ಅವಳ ಹಿಂದೆ, ಹಿಂದೆ

ವಸುಧಳ, ಅವಳ ತಂಗಿ ಸುಧಳ ಸುಮಧುರ ಕಂಠವು
ನಿಮ್ಮ ಕತ್ತೆ ಕಿವಿಯನು ಆನೆ ಕಿವಿಗಿಂತ ಮೀರಿಸುವುದು

ವೈದೇಹಿಯ ವೈಯ್ಯಾರ, ತಾರಳ ಥಳುಕು, ಸರಳಳ ಭಾಳ ತಳ
ಭಾಗ್ಯಳೇ ಭೋಗ್ಯ, ಭಾರತಿಯು ರತಿ, ತುಂಟಿ ರೀಟಳು ಬಹಳ

ಲಲಿತಳ ಲಲಿತ ಕಲೆ, ರಾಗಿಣಿಯ ಮುಂದೆ ನೀವು ಪುಟ್ಟ ಗಿಣಿ
ಅನುಪಮಳ ಅನುಪಮ ಅನುರಾಗ, ಪ್ರೇಮಳೇ ನಿಮ್ಮೆಲ್ಲ ಪ್ರೇರಣೆ

ಬಲಿಯಾಗಿ ಪ್ರತಿಭಳ ಅತಿಯುಕ್ತಿಗೂ, ವನಿತಳ ಅತಿವಿನಯಕ್ಕೂ
ಸೋಲುವಿರಿ ವಾಸಂತಿಯ ವಿನಂತಿಗೂ, ನಯನಳ ನಯವಂತಿಕೆಗೂ

ಸ್ಮಿತಳ ಹುಸಿ ಒಲವು ಆಕಸ್ಮಿತ, ಮಲ್ಲಿಕಳು ತಾತ್ಕಾಲಿಕ ಸಾಕಲ್ಲವೇ
ಗೀತ ಎತ್ತ ಪೋದರೂ ಅತ್ತಲೇ ಮೆತ್ತಗೆ ಹೊರಡುವಿರಿ ಮಾತಿಲ್ಲದೆಯೆ

ಕಾವೇರಿಯ ದರ್ಶನಕೆ ನಿಮ್ಮ ಮೈ ನಿಮಿಷದಲಿ ಬಿಸಿಯೇರುವುದು
ಗೋದಾವರಿಯು ಹಾದಿಯಲಿ ಬಂದರೆ ಸೆಟೆದು ನಿಮ್ಮ ಗರಿಗೆದರುವುದು

ಅಂಜನ, ರಂಜನ, ಮಂಜುಳ, ಕಾಂಚನ ಎಲ್ಲರೂ ಚತುರೆಯರೇ
ಅರ್ಚನ, ಪ್ರಾರ್ಥನ, ಕೀರ್ತನ, ಅರ್ಪಣರ ಭಜನೆ ಮಾಡುವುದೇ?

ಶ್ರಧ್ಧಳ ಮೈಮೇಲೆ ಅತಿ ಶ್ರಧ್ಧೆ, ವೀಣಳೇ ನಿಮ್ಮ ಕಾಜಾಣ
ಪ್ರೇರಣಳೇ ನಿಮ್ಮ ಜೀವನದ ಸಕಲ ತರಹದ ಆಶಾ ಪ್ರೇರಣೆ

ಸಾಲ ಕೇಳುವ ಮಾಲಳಿಗೆ ಕೊಡುವಿರಿ, ಮೋಸ ಮುಕ್ತಳ ಅತೀ ಭಕ್ತಿ
ಅಂಜುವು ಅಂಜದೆಯೇ ಕೇಳುವಳು ಕಾಂಚನ, ಆಟದ ನಳಿನಿ ಅಳುಮುಂಜಿ

ಕೀರ್ತಿಗೆ ತೀರ್ಥವನು ಕೊಡಿಸುವಿರಿ, ನಿರ್ಮಳದು ಮರ್ಮದ ಮಾತು
ವಿಮಲಳು ವಿಮೆಗೆ ಪೀಡಿಸುವಳು, ಶಾರದೆಯದು ಪರದೆ ತೂತು

ರಮಳು ಬಾರಮ್ಮ ಎಂದರೆ ಬರುವಳು, ಹೇಮಳದು ಅತಿ ಕಾಮ
ಲೀನಳು ಹೀನ ಮನದವಳು, ಮೋನಳದು ಬರಿ ಸುಳ್ಳು ಮೌನ

ಇವರೆಲ್ಲ ನಿಮಗೇಕೆ ಬೇಕು? ನಾನೊಬ್ಬಳಿದ್ದರೆ ಸಾಕಲ್ಲವೇ?
ಹೆಸರು ಗುಂಡಮ್ಮ ಆದರೇನಾಯಿತು? ನಾನು ಹೆಂಡತಿಯಲ್ಲವೇ?

ಚಂಡಿತನ, ಮೊಂಡುತನ, ಭಂಡತನ, ಸಕಲಕೂ ಖಂಡನ
ಚರಂಡಿಮನ, ಧಾಂಡಿಗತನ, ಮುಷಂಡಿತನ, ಜೀರುಂಡಿತನ

ಗೂಂಡಾಗಿರಿ ಮಾಡುವ, ಗುಂಡು ಪ್ರಿಯೆ ಗುಂಡೋದರಿ ನಾನಾದರೇನು?,
ಆಂಜನೇಯನ ತಂಗಿ ನಾನಾದರೇನು? ಆ ತರುಣಿಯರೆಲ್ಲ ಏಕೆ ಬೇಕು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ