ಸೋಮವಾರ, ಮೇ 17, 2010

ಓಡೋ! ಬೇಸರಪಡದೆ ಓಡೋ!

ಓಡೋ! ಬೇಸರಪಡದೆ ಓಡೋ!
ಕೆ. ಆರ್. ಎಸ್. ಮೂರ್ತಿ

ಕಾಲು ಎರಡೇ. ನೀನೊಬ್ಬ ಓಡು.
ಹೆಜ್ಜೆ ಮುಂದೆ, ಮುಂದೆ.

ನಿನ್ನೆರಡು ಕಣ್ಣುಗಳು ಮುಂದೆ ಇವೆ.
ಹಿಂತಿರುಗಿ ನೋಡಿದರೆ ಅಭ್ಯಂತರವಿಲ್ಲ.
ಹಿಂದೆ ನಡೆಯಲು ಬಾರದು.

ಏದುಸಿರು ಬಂದರೆ ಬರಲಿ,
ಸುಮ್ಮನೆ ಕೂರಲೂ ಬಾರದು.

ಪಂದ್ಯದೋಟವು ಹೌದು.
ಪೈಪೋಟಿ ಕಟ್ಟಿಕೋ.
ಇತರರಲಿ ಪೈಪೋಟಿ,
ನಿನ್ನಲಿ ನೀನೆ ಪೈಪೋಟಿ,
ಪೈಪೋಟಿಯ ಕಾಟದ ತಂಟೆ,
ಎಷ್ಟು ಮಾಡಿದರೂ, ಹೇಗೆ ಮಾಡಿದರೂ,
ನೀ ಸೇರುವ ತಾಣವೇ ಬೇರೆ;
ಅವರಿವರ ಸೇರುವ ತಾಣಗಳ
ಕಾಣುವೆಯೋ, ಇಲ್ಲವೋ, ಇವೆಲ್ಲ
ನಿನಗೆ ನಿಶ್ಚಯದ ಹಕ್ಕಿಲ್ಲ.

ನಿನ್ನ ಮುಕ್ತಾಯ, ಅವರಿವರ ಮುಕ್ತಾಯ,
ಇಂದೋ, ಮುಂದೋ, ಎಂದೆಂದು ಯಾರಿಗೆ ಗೊತ್ತು!
ಈ ಕ್ಷಣ ಬಂದರೂ ಬಂದೀತು, ನಾಳೆಯೋ,
ಆರೇಳು ದಿನದಲ್ಲೋ, ದಿನದಲ್ಲೋ, ರಾತ್ರಿಯಲ್ಲೋ,
ತಿಂಗಳುಗಳು, ವರುಷಗಳು, ದಶಕಗಳು, ಕಳೆಯ ಬೇಕೋ!
ಈಗಲೇ ಬಂದು ಬಿಡಲಿ ಎನ್ನುವ ಹಕ್ಕಂತೂ ಇಲ್ಲವೇ ಇಲ್ಲ.

ದಾರಿಯಲ್ಲಿ ಊಟ, ಪಾನ, ಪಾಠ, ನಿದ್ದೆ ಎಲ್ಲಕೂ ಅನುಕೂಲವಿವೆ.
ಎಷ್ಟು, ಯಾವುದು ದಕ್ಕುವುದೋ, ದಕ್ಕಿಸಿಕೊ.
ಸಿಕ್ಕದಿದ್ದರೆ ಇವೆಯಲ್ಲ ಉಪವಾಸ, ಬಾಯಾರಿಕೆ, ಜಾಗರಣೆ!
ಹಾಸಿಗೆ ಹಿಡಿದಾಗ, ಹಸಿವೂ ಇಲ್ಲದಿರಬಹುದಲ್ಲ;
ಮೆತ್ತನೆಯ ಹಾಸಿಗೆಯಲಿ ಪವಡಿಸಿದರೂ,
ತೂಗುಯ್ಯಾಲೆಯ ಮೇಲೆ ತೂಗಿಸಿಕೊಂಡರೂ,
ನಿದ್ರಾದೇವಿಯು ಮುನಿಸಿಕೊಂಡು, ನಿನಗೆ ಮುದ್ದು ಮಾಡಿ,
ಕುಸುಮಾಲಿಂಗನವನ್ನು ಕೊಡದಿದ್ದರೆ, ನಿನ್ನ ಹಣೆ ಬರಹ.

ನಿನ್ನ ಹೃದಯದ ಪ್ರೇಮಿ ನೀನೇ.
ಅದನ್ನು ನಡೆಸುವ, ಓಡಿಸುವ, ಆರಿಸಿಬಿಡುವ,
ಕಾಲರಾಯನು ಎಂದು ಬಾಗಿಲು ತಟ್ಟಿ
ನಿಮ್ಮ ಕತ್ತಿಗೆಗೆ ಕಬ್ಬಿಣದ ಹಾರದ ಆಭರಣವನು ಹಾಕಿ,
ಎಮ್ಮೆಕೋಣನ ಮೇಲೆ ಸವಾರಿ ಮಾಡಿಸಿ,
ತಮಟೆ, ಓಲಗ, ಕುಣಿತಗಳಿಲ್ಲದೆಯೇ,
ಕನಿಕರದ ಸವಿ ಮಾತುಗಳಿಲ್ಲದೆಯೇ,
ಎಳೆದು ಪೋಗುವಾಗ, ಅಳಬೇಡ ಮರುಳೆ.

ಹುಸಿ ಸ್ವಪ್ರತಿಷ್ಠೆ ಹೆಂಡಕ್ಕೂ ಕೆಟ್ಟ ಅಮಲನ್ನು ತರಿಸಿ
ನಿನ್ನ ನಡೆಯನು ಕೊಂಕು ಮಾಡೀತು, ಮೂಗು, ಮೊಗ,
ಮಣ್ಣ ಮೊಕ್ಕೀತು, ಬಳಗ ಬಂಧುಗಳೂ, ಹಿತವಂತರೂ,
ಅಟ್ಟಹಾಸದಿ ನಕ್ಕು ನಲಿದಾಡಿ, ಊರೆಲ್ಲ ಡಂಗುರವ
ಹೊಡೆಸಿಯಾರು, ಕತ್ತಿ, ಚಾಕು, ವಿಷದ ಬಾಣಗಳ
ಅವರೆಲ್ಲ ಹೊಡೆದಾಗ, ನಿನ್ನ ಬೆನ್ನ ಹೊಕ್ಕುವ ಮುಂಚೆ,
ಕೈಯ ಚಮತ್ಕಾರದಿಂದ ಹಿಡಿದು, ಫಕ್ಕನೆ, ಪಟ್ಟನೆ,
ಮುರಿದು, ಬಿಸುಟು, ನಿನ್ನ ಮೊಂದೋಟವನು ನಿಲಿಸದೆ,
ಮುಂದುವರಿಸು ಮಂದಹಾಸದಿ ಮಿಕ್ಕೆಲ್ಲರನು ಗೆಲ್ಲು.

ಗೆದ್ದು ಜಯಲಕ್ಷ್ಮಿಯನು ಒಲಿಸಿ, ಹದದಲ್ಲಿ ಹೆಮ್ಮೆಯಯನು,
ವಿನಯದಿ ಬೆರೆಸಿ, ಹೇಮದ ಆಭರಣವ ಮಾಡಿಕೊ,
ಆಗ ಮಾತ್ರವೇ ಆಗುವೆ ನೀನು ನಿಜ ಮನುಜ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ