ಶುಕ್ರವಾರ, ಮೇ 14, 2010

ನಾನೊಬ್ಬ ಕವಿ ಮಾತ್ರ

ನಾನೊಬ್ಬ ಕವಿ ಮಾತ್ರ

ಕೆ. ಆರ್. ಎಸ್. ಮೂರ್ತಿ

ನಾನೊಬ್ಬ ಕವಿ ಮಾತ್ರ;
ದಿನ, ರಾತ್ರಿ ಕನಸು ಕಾಣುವ
ಹಣೆ ಬರಹವ ಹೊತ್ತು ಮೆರೆವವನು.

ಹುಟ್ಟಿನಿಂದಲೇ ಪ್ರತಿ ನಿಮಿಷಕೆ
ಪರಿಪರಿಯ ಭಾವುಕತೆಯ ಅವತಾರ ಎತ್ತುವುದು
ಕೋಟಿ ರಂಗಿನ ಕವಿಯ ದಿನ ನಿತ್ಯದ ಕರ್ಮ.

ಸಾಸಿರ ತಲೆ, ಸಾಸಿರ ಬಲೆ, ಸಾಸಿರ ಕಲೆ,
ನೂರೆಂಟು ಬಣ್ಣದ ಮುಖವಾಡದ ಆಟ.

ಉಸಿರು, ಉಸಿರಿಗೂ ಸಾವಿರ ಪರಿಯೆನ್ನದು;
ಭಾವುಕತೆಯ ಬಸಿರು ಹೊರುತ, ಮೆರೆಯುತ
ಮನಸ್ಸಿನ ರಾಣಿ, ವೀಣಾಪಾಣಿ, ಕಮಲಜೆ
ಕಾವ್ಯ ಕಲ್ಪನ ಅರಸಿ, ಸರಸತಿಯ ವೀರ್ಯವ ಪೊತ್ತು,
ಗಜಗರ್ಭ, ನಿಜಗರ್ಭದ, ಅಜಗರ್ಭಿ ನಾನು
ಕಾಗಜದ ಮೇಲೆ ಚಿತ್ತಿರವ ಬಿಡಿಸುವುದು
ನನ್ನ ಹೆಚ್ಚು ಮೆಚ್ಚಿನ ಆನಂದ.

ಇಳೆಯಲ್ಲಿನ ನೂರಾರು ಅಲೆಗಳನು
ಏರಿಳಿಯುವ ಚಟವೆನ್ನದು, ಹಟವೆನ್ನದು.

ಸಾವಿರಾರು ಅವತಾರಗಳು ಎತ್ತಿದರೂ,
ಕವಿಯ ನೆಪ ಮಾತ್ರವಷ್ಟೇ;
ವ್ಯಕ್ತಿ ನಾಮಾತ್ರ ಬಲು ಬೇರೆ.

ರಸಿಕರು ನೀವು, ಆಲಿಪರೂ ನೀವೇ.
ನನ್ನ ಬರಹವ ಓದಿ, ಇತರಿಂದ ಕೇಳಿ
ಏನಾದರೂ ಅನ್ನುವುದು, ಅನ್ನಿಕೊಳ್ಳುವುದು
ನಿಮ್ಮ ವೈಯಕ್ತಿಕ ಮರ್ಮ;
ಪೊಗಳುವುದು, ಬೊಗಳುವುದು,
ಅತಿ ಕೋಪದಿಂ ಕಲ್ಲು ಎಸೆಯುವುದೂ
ನಿಮ್ಮ ಶಕ್ತ್ಯಾನುಸಾರದಿ ಜರುಗಲಿ.

ಒಪ್ಪದಿ ನನ್ನ ಒಪ್ಪುವುದು ನಿಮಗೆ ಬಿಟ್ಟಿದ್ದು.
ಬೆಪ್ಪು ಕವಿಯೆಂದು, ತಪ್ಪು ಹುಡುಕುತ
ಕಪ್ಪು ರಂಗನು ರಪ್ಪೆಂದು ನನ್ನ ಮೊಗಕೆ
ಎರಚಿ ಬಳಿದು, ಅಪವಾದದ ಸೆರೆಮನೆಗೆ ಅಟ್ಟಿ,
ಗುಟ್ಟಾಗಿ ವಿಜ್ರಂಬಿಸುವುದೂ ಒಪ್ಪಿಗೆ ನನಗೆ;
ನನ್ನ ಕಿರು ಬರಹದಿಂದ ನಿಮ್ಮ ಮನಕೆ
ತಾಟುವುದೇ ನನ್ನ ಹುಟ್ಟು ಬುಧ್ಧಿಯ ಹಠ!

ನನ್ನ ಕವನದ ಪರಿಣಾಮದಿಂದ
ನೀವೇನು ಎಣಿಸಿ, ಎಣೆಸಿ, ಸೆಣೆಸಿ,
ಕುಪ್ಪಳಿಸಿ ಕುಣಿದರೂ, ತಾಳ ನನ್ನದಲ್ಲವೇ!

1 ಕಾಮೆಂಟ್‌:

  1. ಚೆನ್ನಾಗಿದೆ ಸ್ವಾಮಿ ಚೆನ್ನಾಗಿದೆ

    ವಿಮರ್ಶೆ ಗಿಮರ್ಶೆ ಎಲ್ಲ ಯಾಕೆ
    ನೀವು ಕವಿ ಮಾತ್ರ ಅಲ್ವೆ
    ಹಾಗೇ ನಾನು ಬರೇ ಓದುಗ ಮಾತ್ರ
    ಒದಿ ನಕ್ಕೋ ಬಿಕ್ಕೋ ಓಡಿಬಿಡುವವ
    ನನ್ನಂತವರು ಸುಮಾರಿದ್ದಾರೆ ಬಿಡಿ

    ಅವರವರ ಜಗತ್ತಿನಲ್ಲಿ ... ಹುಂ. ತಿಳಿಯಿತೇ
    ನಮಸ್ಕಾರ
    ಗಣಪತಿ

    ಪ್ರತ್ಯುತ್ತರಅಳಿಸಿ