ಶುಕ್ರವಾರ, ಮಾರ್ಚ್ 26, 2010

ಉಗಾದಿಯ ಕಿರು ಆಸೆ

ಉಗಾದಿಯ ಕಿರು ಆಸೆ
ಕೆ. ಆರ್. ಎಸ್. ಮೂರ್ತಿ

ಏನು ಬೇಕೆ ಮನವೇ, ಹೊಸದೇನು ಬೇಕು ತನುವೇ ಹೇಳು ಈಗಲೇ
ಹೊಸ ವರುಷವು ಬಂತು, ಆಗೇ ಹೋಯ್ತು ವರುಷ ಒಂದು ಆಗಲೇ

ಇನ್ನೊಂದು ವರುಷ ಓಡಿ ಬಂದಾಯ್ತು, ಅಲ್ಲವೇ ಕಣ್ಮಿಟುಕಿಸಿದಾಗಲೇ!
ಕೊಡುಗೆ ಹೊಸದು, ಕೊಡುವೆ ಹರಸಿ, ಕೇಳುಬೇಗ ಹೊಸದ ಈಗಲೇ

ಬೇವು ಬೇಕೆ, ಬೆಲ್ಲ ಬೇಕೆ, ನನ್ನಜ್ಜಿಯಂತೆ ಎರಡನ್ನೂ ಜಜ್ಜುವೆನು
ತಿನಲು ಸಾಕೆ ಒಂದೆ, ಒಂದು ಎಸೆದು, ಮೆಲ್ಲಬಹುದೇ ಬೇಕಾದುದನು

ಬೇವಿನಂಥ ಹೆಣ್ಣು ಒಂದ ವರುಷವೆಲ್ಲ ಜಗಿದು ಜಗಿದು ಆಯಿತು
ಮಾತಿಗೊಂದು ಮಾತು ಚಂಡಿ, ಕರ್ಕಷವಾಗಿ ಜಗಳ ತೆಗೆದಾಯ್ತು

ರಾತ್ರಿಯೆಲ್ಲ ಏನೂ ಇಲ್ಲ, ಬೆಲ್ಲದ ಕನಸೂ ಇಲ್ಲ, ಅವಳೂ ಇಲ್ಲ
ಮೆತ್ತನೆಯ ದಿಂಬೂ ಇಲ್ಲ, ಹೊಟ್ಟೆಗೂ ಉಣಿಸಲಿಲ್ಲ, ಸಾಕು ಇದೆಲ್ಲ

ಹೊರಳಿ, ಹೊರಳಿ ಬೆಳಗ ಕಂಡೆ, ನರಳಿ, ನರಳಿ ನೋವನ್ನು ಉಂಡೆ
ಮರಳಿ, ಮರಳಿ, ದಿನ, ವಾರ, ತಿಂಗಳಾಯ್ತು; ಬಿಸಿಯಾಯ್ತು ಮಂಡೆ

ಕೈಯ ಮುಗಿದು, ಕಾಲ ಹಿಡಿದು ಬೇಡಿ ಕೊಂಬೆ ಯುಗ ಪುರುಷ ದೇವರೇ
ನನಗೆ ಬೇಕು ಬೆಲ್ಲವೊಂದೆ; ಜೇನಿಗಿಂತ ಸಿಹಿಯು ಇರಲಿ, ಸಾಲದು ಮಣ

ಬೆಲ್ಲದರಮನೆ, ಬೆಲ್ಲದ ಬೊಂಬೆ, ಇಳೆಯಲ್ಲೇ ಇಂದಿರನ ರಂಭೆ ಬೇಕು
ಕೇಳಿದಾಗ ಕಾಮಧೇನು, ಕುಂತು ನಿಂತಾಗ ಬೇಕು, ಬೇಕು ಅನುತಿರಬೇಕು

ಬಾಯಿತುಂಬ ಹಾಲು ಜೇನು, ಕಣ್ಣು ತುಂಬ ತುಂಬಿದ ದೇಹ ಇರಲೇ ಬೇಕು
ದಿನ, ರಾತ್ರಿ, ಮಟ, ಮಟ ಮಧ್ಯಾನ್ಹವೂ, ನನಗೆ ಮೇಲೋಗರವೇ ಬೇಕು

ಎಲ್ಲಿ ಹೋದರಲ್ಲಿ ನನ್ನ ಹಿಂದೆಯೆ ಬರುತಿರಬೇಕು, ನಗುತಲೇ ಇರಬೇಕು
ಕಣ್ಣ ಸನ್ನೆಯಲ್ಲೇ ನನ್ನ ಮನವ ಅರಿತು ಬಿಡಬೇಕು, ಓಗೊಡುತಿರಲು ಬೇಕು

ಒಂದೇ, ಒಂದು ವರುಷ ಸಾಕು, ನನ್ನ ನೋಡಿ ಇಂದ್ರನೇ ಅಳುತಿರ ಬೇಕು
ಮುಂದಿನ ಉಗಾದಿಯ ಕೊಡುಗೆಗೆ ಬೇವಿನ ಚಟ್ಟವನೇರಿಸಿದರೂ ಸಾಕು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ