ಶುಕ್ರವಾರ, ಮಾರ್ಚ್ 26, 2010

ಕೈಮುಗಿವೆನೋ ನಿನಗೆ

ಕೈಮುಗಿವೆನೋ ನಿನಗೆ
ಕೆ. ಆರ್. ಎಸ್. ಮೂರ್ತಿ

ಹೇ ನನ್ನ ಮಾನಸ ಪುತ್ರ:

ನಾನೇಕೆ ಹಿಡಿಯಲಿ ನಿನ್ನ ಅಡಿ
ಬಾಗಿಸುತ ಕೆಳಗೆ ಶಿರ ಮಾಡಿ

ಭಯಭಕ್ತಿಯಲಿ ಕೈಮುಗಿದು ಬೇಡಿ
ಸಕಲ ಅಂಗ ನಮಸ್ಕಾರವ ಮಾಡಿ

ಮರೆತು ಹೋಯಿತೇ ಎಲ್ಲ ಆಗಾತಾನೇ?
ಚಿತ್ತದಲಿ ಎಲ್ಲ ಪುಟ್ಟಿಸಿದವನು ನಾನೇ

ಬರಡು ಹೆಣ್ಣಾದ ಭೂಮಿಯ ಮೇಲೆ
ಹುಟ್ಟಿತು ಅಮೀಬ ಸಾಗರದ ಮೇಲೆ

ಕೋಟಿ ವರುಷಗಳು ಉರುಳಿದ ಹಾಗೆ
ಒಂದು ಜೀವಿ, ಎರಡು, ನಾಲ್ಕು ಆಗೆ,

ವಿವಿಧ ಜಂತುಗಳೆ ಉದ್ಭವವಾಯ್ತು
ಮೀನು ಮೊದಲಾದ ಜಲಚರ ಬಂತು

ಕಪ್ಪೆ ಹಾರಿ, ಜಿಗಿದು, ತೆವಳಿಯಾಯ್ತು
ನೀರಿನ ತಟ ಸೇರಿ, ಮರಳ ಸೇರಿತು

ಮತ್ತೆ ಸಾವಿರ ಕೋಟಿ ವರುಷಗಳೇ ಕಳೆದು
ಮೃತ್ತನೇ ಮನೆ ಮಾಡಿ ಪ್ರಾಣಿಕುಲ ಬೆಳೆದು

ಮಂಗವೆಂಬ ಮೃಗ ಕೊಂಬೆಯಿಂದ ಕೆಳೆಗಿಳಿದು
ನಾಲ್ಕು ಕಾಲೇಕೆ, ಎರಡೇ ಸಾಕೆಂದು ನಡೆದಂದು

ಓಡುವ, ಮುಂಗಾಲನು ತೋಳು, ಕೈಮಾಡಿ ನ್ಂತು
ಮಂಗ ಮಾನವನಾದ, ತಲೆಯ ಬೆಳೆಸಿದ್ದು ಆಯ್ತು

ಮಂಗತನ ಬಿಟ್ಟು, ನಾನ್ಯಾರು, ಹುಟ್ಟಿಸಿದವರಾರು?
ಆಗಸದ ತಾರೆಗಳು ಬಂತು ಅಷ್ಟೊಂದು ಸಾವಿರಾರು?

ಪ್ರಶ್ನೆಯ ಮೇಲೆ ಪ್ರಶ್ನೆ; ಎಲ್ಲಕೂ ಇರಲೇಬೆಕು ತಂದೆ
ತಂದೆಯ ಹುಟ್ಟಿಸಿಬಿಟ್ಟ ದಿಟ್ಟ ಮಗ; ಅವನೇ ದೇವರೆಂದೇ

ಸಾಧಿಸಿ ಬಿಟ್ಟ, ತಾ ಹುಟ್ಟಿಸಿದ ಕಂದನಿಗೇ ತಾನೆ ಕೈಮುಗಿದು
ತಂದೆ ಯಾರೋ! ಮಗನು ಯಾರೋ! ಇದೇ ಅಚ್ಚರಿಯು ಎಂದೂ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ