ಶುಕ್ರವಾರ, ಮಾರ್ಚ್ 26, 2010

ಅಲ್ಲ ಅಲ್ಲ

ಅಲ್ಲ ಅಲ್ಲ
ಕೆ. ಆರ್. ಎಸ್. ಮೂರ್ತಿ

೧ ಅಲ್ಲ ಅಲ್ಲ;
ಅಲ್ಲಮನಲ್ಲ, ಕಲ್ಲೇಶನಲ್ಲ;
ಏಸು ಈಸೂ ಜೈಸಲಿಲ್ಲ;
ಹರಿ ಸರಿಯಲ್ಲ;
ಹರನೂ ತರವಲ್ಲ;
ಜಿನನು ಜಿತನಲ್ಲ;
ಬುಧ್ಧನೇನೂ ಗೆದ್ದವನಲ್ಲ.

ಎಲ್ಲ ಬಲ್ಲವ ಗೊಲ್ಲನಿರಲೇ ಇಲ್ಲ;
ರಾಮ, ರಾವಣರು ಮಹಾ ಬೇಡ ಕವಿಯ ಕಾವ್ಯ ಪ್ರಲಾಪ;
ಹಿರಣ್ಯ ಕಶುಪುವು ಇರಲಿಲ್ಲ;
ಬಾಲಕನ ಕರೆಗೆ ಹರಿಯು ಸಿಂಹವಾಗಿ ಧರೆಗೆ ಇಳಿಯಲಿಲ್ಲ;
ಬಲಿಯು ಎಲ್ಲೂ ಇರಲಿಲ್ಲ;
ಕುಳ್ಳ ವಾಮನನು ಜಗವೆಲ್ಲ ಪಡೆಯಲಿಲ್ಲ.

ಗಡ್ಡದ ಗುರುಗಳು ಬರಿಗೊಡ್ಡು;
ನುಣ್ಣ ತಲೆಯ ಬಣ್ಣದ ಬಟ್ಟೆಯ ಬಾಲಕನ
ವೇದಾಂತದಲಿ ನಂಬಿಕೆಯಿಲ್ಲ;
ಬಣ್ಣ ಬಣ್ಣದ ಲೇಪನವ,
ಚಿತ್ರ, ವಿಚಿತ್ರ ನಾಮವನೂ,
ಹಾಕಿ, ಹಾಡಿ, ಬೇಡಿ
ಚಿಟಿಕೆ ಚಪ್ಪಾಳೆ, ತಾಳವ
ಹೊಡೆಯುತ, ಕುಣಿಯುತ
ಜನ ಜಂಗುಳಿಯ ಮರಳುಮಾಡಿ,
ಕೊನೆಗೆ ನನ್ನಂತೆ, ನಿಮ್ಮಂತೆ, ಮಿಕ್ಕೆಲ್ಲರಂತೆ,
ಕೊನೆಯ ಉಸಿರನು ಬಿಟ್ಟು,
ಧರೆಯ ಬಸುರಿಗೆ ತಿರುಗಿದವರೆಲ್ಲ,
ಏನೂ ತಿಳಿದಿರಲಿಲ್ಲ.

ಅಲ್ಲೂ ಇಲ್ಲ, ಇಲ್ಲೂ ಇಲ್ಲ, ಎಲ್ಲಿಯೂ ಇಲ್ಲ;
ಎಲ್ಲ ಬಲ್ಲವ ನಾನೊಬ್ಬನೆ ನಾಸ್ತಿಕ.

೨. ಇಲ್ಲಿ, ಅಲ್ಲಿ
ಒಳಗಡೆಯಲ್ಲಿ, ಹೊರಗಡೆಯಲ್ಲಿ,
ಎಲ್ಲ ಅಣುವಿನಲ್ಲಿ, ಕಣ್ಣಿಗೆ ಎಟುಕದ ತಾಣದಲ್ಲಿ,
ಇರುವ, ಪೊರೆವ, ಕರೆದರೆ ಬರುವ,
ಹಾಡಿದರೆ ಓಡಿ ಓಡಿ ಬಂದು ಬಿಡುವ,
ಕಾಲಡಿಯಲಿ ತಲೆಯಿಟ್ಟರೆ, ಕೈ ನೀಡಿ ಕೊಡುವ,
ಮನತುಂಬಿದ ಗಾನಕ್ಕೆ ತಲೆತೂಗಿಸಿ ನಲಿವ,
ನಂಬಿದರೆ ಇಲ್ಲೂ, ಅಲ್ಲೂ ತಪ್ಪದೆಯೆ ಪೊರೆವ,
ನಮ್ಮ ದೇವರ ನೆರೆ ನಂಬಿದವ ನಾನೇ ಆಸ್ತಿಕ.

೩. ಅದೂ ಅಲ್ಲ, ಇದೂ ಅಲ್ಲ, ಇನ್ನೊಂದೂ ಅಲ್ಲ
ಒಂದು, ಎರಡು, ಮೂರು....
ನೂರು, ಸಾವಿರ, ಲಕ್ಷ, ಕೋಟಿ, ಕೋಟಿ ಅನೇಕ;
ನೋಡಾಯ್ತು, ಕಂಡಾಯ್ತು, ಹುಡುಕಾಯ್ತು, ತಡಕಾಯ್ತು;
ಮಂಡಿಸಿದೆಲ್ಲವ ಖಂಡಿಸಿಯಾಯ್ತು;
ಮತ್ತೆ, ಮತ್ತೆ ಮನಬಿಚ್ಚಿ ಯೋಚಿಸಿಯಾಯ್ತು.

ಕೊನೆಗೆ ಅಲ್ಲ, ಅಲ್ಲ ನನ್ನ ಮಂತ್ರವಾಯ್ತು ನಾನಾರು?
ನಾನಾರು ಕೂಡ ಗೊತ್ತಿಲ್ಲವಾಯ್ತು.
ಅದೇನು? ಇದೇನು? ಎನಂದರೆ ಏನು?
ತಲೆಯನು ಕೆಡೆಸಿಕೊಳ್ಳುವ,
ಒಳ್ಳೆಯ ಕೆಲಸ ನನ್ನ ಬಲು ದೊಡ್ಡ ಆಸ್ತಿ.
ನಾನು ಆಸ್ತಿಕನಲ್ಲ; ನಾಸ್ತಿಕನಂತೂ ಅಲ್ಲವೇ ಅಲ್ಲ;
ಪ್ರಶ್ನಾಸ್ತಿಕನನ್ನಿ, ಅಗ್ನಾಸ್ತಿಕನನ್ನಿ.
ಸ್ಮಶಾನದಲ್ಲಿ ತಣ್ಣಗೆ, ಮಣ್ಣಾಗುವ ತನಕ,
ಹಣ್ಣಾಗದ, ಬಲು ಹೆಮ್ಮೆಯ, ಕಸಕಟ್ಟೆ ಕಾಯಿ ನಾನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ