ಶುಕ್ರವಾರ, ಮಾರ್ಚ್ 26, 2010

ಸಾಕಾಯಿತು ಈ ಊರು

ಸಾಕಾಯಿತು ಈ ಊರು
ಕೆ. ಅರ್. ಎಸ್. ಮೂರ್ತಿ

ಆರು, ಆರು ಆರಿಗೆ ಎಂದೂ ಎಲ್ಲೂ ಆಗದವರು
ಧರೆಗೆ ಬಿದ್ದು ಮೂಗು ಒರೆಸಿದಾಗ ನಗುವವರು

ಆಡಿಕೊಂಡು ದೊಡ್ಡ ಬಾಯಿ ತುಂಬ ಬೈಗುಳ ನೂರಾರು
ಹಸಿದವರು ಕೈಬೀಡಿ ಬೇಡಿದರೆ ಮೂಗು ಮುರಿಯುವರು

ಕೊಡಗಟ್ಟಲೆ ಕಲ್ಲಿಗೆ ಹಾಲು, ಮೊಸರು, ಸುರಿಯುವರು
ದೊಡ್ಡ ಬಟ್ಟಲಿನ ಬೆಣ್ಣೆ, ತುಪ್ಪ ಅಂಗೈ ತುಂಬ ಸವರುವರು

ಸವೆದ ನುಣ್ಣನೆಯ ಕರಿಯ ಕಲ್ಲೇ ಇವರಿಗೆ ದೇವರು
ಉಣಲು ಇಟ್ಟ ಅಟ್ಟನು ತಿನಲಾಗದವ ಇವರ ದೇವರು

ಹಣ್ಣು, ಹಂಪಲು ನಾಲಿಗೆಯೇ ಇಲ್ಲದವನಿಗೆ ಇಡುವರು
ಚಂದನದ, ಶ್ರೀಗಂಧದ ಧೂಪದಾರತಿ ಹಿಡಿಯುವರು

ಮೂಗಿನ ಹೊಳ್ಳೆಯಿಲ್ಲದ ಗುಂಡು ಕಲ್ಲಿಗೆ ತೊಡಿಸುವರು
ಬಣ್ಣಬಣ್ಣದ ಘಮ ಘಮಿಸುವ ಹೂಮಾಲೆ ಮುಡಿಸುವರು

ಸಾಕು ಸಾಕಪ್ಪ ಬಿಟ್ಟು ಓಡಿ ಹೋಗುವೆ ನನಗೇಕೆ ಇವರೂರು
ಮರಳುಗಾಡಿಗೋ, ಸುಡುಗಾಡಿಗೋ ಹೊರಟೆ ಇನ್ನಿಲ್ಲ ತಕರಾರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ