ಮಂಜಿಗೂ ತಣ್ಣದೇ ಎನ್ನ ಎದೆ?
ಕೆ. ಆರ್. ಎಸ್. ಮೂರ್ತಿ
"ಮಂಜಿಗೂ ತಣ್ಣನೆಯ ಕೈ ನಿನ್ನದು" ಎಂದು ನೀನಂದಾಗ
ನಿನ್ನ ಬಲಗೈಗೆ ಹಸ್ತಲಾಘವ ನಾನಂದು ಕೊಡುವಾಗ
ಛಳಿಯು ಕೊರೆಯುತಿತ್ತು, ದಿನವೆಲ್ಲ ಮಂಜು ಸುರಿಯುತಿತ್ತು
ಹೊರಗಿನಿಂದ ಬಂದೆ, ಇರಬಹುದೇನೋ ಕೈ ಕೊರೆಯುತಿತ್ತು
ಮೈನೀಡಿದಾಗ, ನಾನು ನಿನ್ನ ಅತಿ ಬಿಗಿಯಾಗಿ ತಬ್ಬಿಕೊಂಡೆ
ತಟ್ಟನೆ ಸರಿಯೆ ದೂರ, ಮೈ ಕೂಡ ತಣ್ಣದೆಂದು ಕೊಂಡೆ
ಮನಸನು ಬಿಚ್ಚಿ ಉಲಿದೆ, "ಪ್ರಿಯೆ ನಾ ನಿನ್ನ ಪ್ರೇಮಿಸುವೆ"
ತುಟಿಗೆ ತುಟಿಯನ್ನು ಸವರಲು ಮುಂದುವರಿದೆ ಎಂದಿನಂತೆ
ರಪ್ಪನೆ ಬಿತ್ತು ನನ್ನ ಆಶೆಗೆ ದೊಡ್ಡ ಕೊಡ ಪೂರ್ತಿ ತಣ್ಣೀರು
ಮುಖವನ್ನು ಬೇರೆಡೆಗೆ ತಿರುವಿದ ಕಣ್ಣಲ್ಲಿ ಕಂಡೆ ಕಣ್ಣೀರು
"ಚೆಲುವೆ ಏಕೀ ಕಣ್ಣೀರು ತುಂಬಿದೆ ಎಂದೂ ಮಿಂಚುವ ಕಣ್ಣಲ್ಲಿ?"
ಮುದದಿ ಮುಟ್ಟಿದೆ ನಿನ್ನ ಕೆನ್ನೆಯ ಹನಿಯ ಒರೆಸಲು ಬೆರಳಲ್ಲಿ
"ಕೈ ಕೊರೆಯುತಿದೆ", ಫಟ್ಟನೆ ಮಾತಿನೇಟಿಗೆ ಬಲಿ ನನ್ನ ಕಪಾಳ,
"ತನು ತಣ್ಣಗಿದೆ, ನಿನ್ನ ಹೃದಯವಂತೂ ಹಿಮಾಲಯಕೂ ಶೀತಲ"
ಎದೆ ತುಂಬಿ ಬಂತು, ಗಂಟಲೆಲ್ಲ ಗದ್ಗದ, ಛಾಟಿ ಏಟಿನ ಬರೆ ಒರೆಸಿ
ಅಂದೆ, ಜೇಬಿಗೆ ಕೈಹಾಕಿ ತೆಗೆದು, "ನಿನಗೆಂದೇ ತಂದೆ ಉಂಗುರ, ಪ್ರೇಯಸಿ!"
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ