ಶುಕ್ರವಾರ, ಮಾರ್ಚ್ 26, 2010

ನಿನ್ನನು ನೀನೇ ಗೆಲುತಿರಬೇಕು

ನಿನ್ನನು ನೀನೇ ಗೆಲುತಿರಬೇಕು
ಕೆ. ಆರ್. ಎಸ್. ಮೂರ್ತಿ

ನಿರ್ಧಾರ:

ನಿನ್ನ ನೀನೇ ಕಟ್ಟಿಕೋ ಪೈಪೋಟಿ
ನಿನಗೆ ನೀನೇ ಹಾಕಿನೋಡು ಪಟ್ಟಿ

ನಿನ್ನನು ಎದುರಿಸುವಂತೆ ನೀನೇ
ನಿನ್ನನು ಹೆದರಿಸುವಂತೆ ನೀನೇ

ನಿನ್ನನು ನೀನೇ ಗೆದ್ದುಬಿಡುವ ಛಲ
ನಿನ್ನ ನೀನೇ ಗೆದ್ದು ಬಿಟ್ಟಾಗ ಫಲ

ನಿನಗಿಂತ ನೀನೇ ಆಗುವೆ ಮೇಲು
ನಿನ್ನ ಗೆದ್ದಾಗಲೇ ಫಲಕವ ಕೇಳು

ತಂತ್ರ:

ನಿನ್ನೆಯ ನಿನ್ನನು ನಾಳೆಯ ನೀನು ಗೆಲಬೇಕು
ಮೊನ್ನೆಯ ಭಾರವ ಇಂದೇ ಬಿಸುಟು ಹಾಕಬೇಕು

ನಿನ್ನೆಯ ನಿನಗಿಂತ ನಾಳೆಯ ನೀ ಮೇಲೇರಬೇಕು
ನಿನ್ನನೇ ಮೆಟ್ಟಿ ನೀ ಹತ್ತಿ ಎತ್ತರ ಹಾರಬೇಕು

ನೀ ಮಲಗುವ ಮುನ್ನ ನಾಳೆಯ ಕನಸೇ ಉಪಾಯ
ಇನ್ನಿನ ಕನಸು ನಾಳೆಯ ನನಸಿಗೆ ಸರಿ ಅಡಿಪಾಯ

ಕಣ್ಬಿಟ್ಟು ರವಿಯ ಕಾಣುವ ಮುನ್ನವೇ ಹೊಸ ಜೀವ
ಮಿಂದು ಬಟ್ಟೆಯನು ತೊಟ್ಟಾಗ ಇರಲಿ ಹೊಸ ಭಾವ

ತಿನ್ನು ನಾಷ್ಟವನು ಸವಿಯುತ್ತ ಹೊಸ ನಾಲಿಗೆಯಲಿ
ಅನ್ನು ತನನಾನನಾನ ರಾಗಾಲಾಪವ ಹೊಸ ರಾಗದಲಿ

ಹೊರಗೆ ಹೊರಟರೆ ಕಾಣು ಕಣ್ಮುಂದೆ ಹೊಸತಾದ ಇಳೆಯ
ಊರೊಳಗೆ ಹೊಸ ಜನರು ಬೀರುವರು ಪ್ರೀತಿಯ ನಗೆಯ

ಹೊಲದಲ್ಲಿ ಕಂಡೆಯಾ ಹಸಿರು ಹುಲ್ಲಿನ ಹೊಸ ಚಿಗುರು
ವನದಲ್ಲಿ ಚೆಂಡು ಮಲ್ಲಿಗೆ ಮೊಗ್ಗು ಅರಳುತಿದೆ ನವಿರು

ಹೊಸ ಸೌಂದರ್ಯವನೇ ಬೆಳಕು ಚೆಲ್ಲಿದಲ್ಲೆಲ್ಲಾ ಕಾಣು
ಕಲ್ಪವೃಕ್ಷವು ಅಂಗೈಲಿರೆ ನವ ರಸದ ಹಣ್ಣನು ಉಣ್ಣು

ಇನ್ನಿನ ನವ ರಾಗದಲಿ ತನನಾನ ಗಾನದ ಮೇಳವು ಸೇರೆ
ನಿನ್ನ ನೀನೆ ಗೆಲಿಸಲು ಇರುವುದಯ್ಯಾ ನಾಳೆಯ ಇಳೆಯೇ ಬೇರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ