ಶುಕ್ರವಾರ, ಮಾರ್ಚ್ 26, 2010

ಎತ್ತ ಹೋದನೇ ವಸಂತ

ಎತ್ತ ಹೋದನೇ ವಸಂತ
ಕೆ. ಆರ್. ಎಸ್. ಮೂರ್ತಿ

ಅದೊಂದು ಕಾಲ, ಬೇರೊಂದು ಯುಗ, ಸಗ್ಗ ಇಳೆಗಿಳಿದಿರಲು
ರವಿಯು ಹುಟ್ಟುವ ಸಮಯ ಸಂಗೀತ ಸಂತರ್ಪಣೆ ಎಲ್ಲೆಲ್ಲೂ

ಕೋಗಿಲೆಯ ಹಾಡು ಸುಪ್ರಭಾತದ ತನನಾನವನು ಗುನುಗುತಿತ್ತು
ಹಕ್ಕಿಗಳ ಚಿಲಿಪಿಲಿಯೇ ಶೃತಿಯ ಸುನಾದವನು ಮೀಟುತಲಿತ್ತು

ಎಳೆಬಿಸಿಲು ನಿದ್ದೆಯ ಮಂಪರನು ಹಿತವಾಗಿ ಮರೆಮಾಡುತಿತ್ತು
ಹಿತ್ತಲಲಿ ಹಣ್ಣು ಹಂಪಲು ಸುವಾಸನೆಯ ಬೀರಿ ಕರೆಯುತಿತ್ತು

ಗಿಡ ತುಂಬ ರಂಗು ರಂಗಿನ ಕುಸುಮಗಳು ದುಂಬಿಗಳಿಗೆ ಉಣಿಸಿ
ಕೇಸರವ ಮೈಗೆ ಮೆತ್ತಿತ್ತು, ಜೇನಿನ ನವರಸದೌತಣವನೇ ನಡೆಸಿ

ನಮ್ಮೂರ ಹೊಲದಲ್ಲಿ ಬೆಳೆಗಳು ತಂತಾನೆ ಬೆಳೆದವೋ ಎಂಬಂತೆ
ಋತುವೆಲ್ಲ ಎತ್ತರೆತ್ತರಕೆ ಏರಿತ್ತು, ತುಂಬಿದ ಫಸಲು ಬರುವಂತೆ

ದಿನವೆಲ್ಲ ನೆತ್ತರ ಮೇಲೆ ಭರದಲ್ಲಿ ಪ್ರಜ್ವಲಿಸುವ ಭಾಸ್ಕರನು
ಸಂಜೆಯಲಿ ನಸುಗೆಂಪು ಚೆಲ್ಲಿ, ಆಗಸದಿ ಚಿತ್ತಿರವ ಬಿಡಿಸಿದನು

ಕನ್ನಡಿ ಚಂದಿರನು ರವಿಯ ಬೆಳಕನು ಹಿತಮಿತವಾಗಿ ಪ್ರತಿಫಲಿಸಿದನು
ತಿಂಗಳು ಬೆಳಗಿನ ಹಾಲು ಚೆಲ್ಲಿ, ಸುಂದರಿ ನಿನ್ನ ಮೊಗವ ಶೋಭವನು

ತಂಪು ರಾತ್ರಿಯಲಿ, ನಿನ್ನ ಬಿಸಿದೇಹವೇ ನನ್ನ ತನುವ, ಮನವ ತಣಿಸಿತ್ತು
ಇದುವೇ ಸ್ವರ್ಗವಾಗಿತ್ತು; ನೀನು ರಾಣಿ; ಇದುವೇ ನಮ್ಮ ಸಾಮ್ರಾಜ್ಯವಾಗಿತ್ತು

ನೀನು ದೂರವಾದ ದಿನವೇ, ಪ್ರತಿದಿನ, ರಾತ್ರಿ ಕತ್ತಲೆ ಕವಿದು ಕೊಂಡಾಗಿದೆ
ಎರಡೂವರೆ ಸಾವಿರ ಮೈಲು ದೂರದಲ್ಲಿ ರಾಣಿ ನೀನಿರುವಾಗ ನನಗಿನ್ನೇನಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ