ಮೂಢನ ವರಿಸು ಬಾರೇ
ಕೆ. ಆರ್. ಎಸ್. ಮೂರ್ತಿ
ಯಾರೇನ ಅಂದರೇನಂತೆ ನಾನು ನೀನೂ ಒಂದೇ
ಸಾರಿ ಸಾರಿ ಕೂಗಿಡಲೇ ನಾನು ನಿನ್ನವನು ಎಂದೆ
ಆಡುವರು ಪಾಮರರು ಕೆಟ್ಟ ಬಾಯಿಂದ ಜೋರಾಗ
ಕಾಡುವರು ನಾನು ನಿನ್ನ ಬಿಗಿದಪ್ಪಿ ಮುತ್ತಿಡುವಾಗ
ಗಟ್ಟಿ ಮನ ಮಾಡು, ಬಾಬೇಗ ಉಟ್ಟ ಬಟ್ಟೆಯೇ ಸಾಕು
ಮೆಟ್ಟಿ ಚಪ್ಪಲಿಯ ನಡೆಯೇ ಈಗಲೆ, ದಾಪುಗಾಲು ಹಾಕು
ದೊಡ್ಡ ಬಂಗಲೆಯಲ್ಲ, ರಾಜ ಬೀದಿಯೂ ಅಲ್ಲವೇ ಅಲ್ಲ
ಕೊಚ್ಚೆ ಗುಂಡಿಯ ದಾಟು, ಜೋಕೆ ಅಲ್ಲಿ ಬೇಳಕೇನೂ ಇಲ್ಲ
ತಿರುಗು ಬಲಗಡೆಗೆ ಕಾಣುವ ಮಾದಿಗರ ಕೇರಿಯ ಕಡೆಗೆ
ಕೊಳಕು ಬಲು ಜಾಸ್ತಿ ಕಾಣುವುವು ಹಂದಿಗಳು ಕೇರಿಯಾಗೆ
ಮುಂದೆ ಬಂದರೆ ತುತ್ತ ತುದಿಯಲಿಹುದು ಗುಡಿಸಲು ನನ್ನದು
ಹುಟ್ಟಿದಾಗಲೆ ಮಡಿದು ಹೋದರು ತಂದೆ ತಾಯಿಯರು ಅಂದು
ಯಾರ ಮನೆಯಲ್ಲೋ ಗುಟುಕು ಹಾಲನು ಕುಡಿದು ಬೆಳೆದವನು
ಹುಲ್ಲ ಹಾಸಿಗೆ ಮೆತ್ತೆ, ಹಂದಿ ಮಂದೆಗಳ ಜೊತೆಗಾಡಿ ಕಳೆದೆನು
ಓದು ಬರಹ ಗೊತ್ತಿಲ್ಲ, ಹಾಡುವುದು ಕುಣಿಯುವುದೂ ಇಲ್ಲ
ಕಡು ಬಡತನದ ಪಾಡು, ನನ್ನ ಆಸ್ತಿ ಅಂದರೆ ಏನೂ ಇಲ್ಲ
ಚಂದನದ ಲೇಪನವಿಲ್ಲ, ನನ್ನ ಸುಗಂಧ ಹಂದಿ ರಾಯರದು
ಮೈಮೇಲೆ ಹಾಕುವುದು ಒಂದು ದಟ್ಟಿ, ಯಾರೋ ಬಿಸುಟುದುದು
ಕೊಚ್ಚೆ ಕೊಳದಲ್ಲಿ ಮಿಂದು ನಿನ್ನೆಗೆ ಎರಡು ತಿಂಗಳೇ ಆಗಿಹೋಗಿದೆ
ಉಟ್ಟ ಬಟ್ಟೆಯಲೇ ಮುಳುಗಿ ಎದ್ದು ಹಂದಿ ಮಂದೆಯನೂ ತೊಳೆದಿದ್ದೆ
ಇದ್ದಲಿನ ಮೈ ಬಣ್ಣ ನನಗೆ, ಸೋಪು ಹಾಕಿದರೂ ಉಪಯೋಗವಿಲ್ಲ
ಇದು ಮಾತ್ರ ಸತ್ಯ, ಮನಸಿನಲಿ ಮಾತ್ರ ಕೊಂಚವೂ ಕೊಳೆಯಿಲ್ಲ
ರಾಜ ಕುವರಿ ಒಬ್ಬಳು, ಶತ ಪೆದ್ದ ಕಾಳಿದಾಸನ ವರಿಸಿದಳಂತೆ
ನನ್ನ ಜೊತೆ ಮಾಡಿ ಈ ಮೂಢನನೂ ಮಹಾಕವಿಯ ಮಾಡುವಿಯಂತೆ
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ