ಕಣ್ಮುಚ್ಚಿ ನೋಡೊ ಮೂಢ
ಕೆ. ಆರ್.ಎಸ್. ಮೂರ್ತಿ
ಕನ್ನಡಿಯೊಳಗೆ ಕಾಣೋ ನಿನ್ನ ದೇವರ
ಮನೆಯೊಳಗಿನ ಕನ್ನಡಿಯಲ್ಲ ಹೇ ಪೆಕರ
ಮನದೊಳಗಿದೆಯೋ ಬೆಪ್ಪ ತಕ್ಕಡಿ ಕಾಣೊ
ನೆನೆದಾಗ ಕಾಂಬ ಚಿತ್ರ ವಿನ್ಯಾಸವದು ಕಣೋ
ರೂಪಸಿಯರು ಮೋರೆ ನೋಡುವ ಕೈಗನ್ನಡಿಯಲ್ಲ
ಚಿಕ್ಕದು ದೊಡ್ಡದಾಗುವ ಭೂತಗನ್ನಡಿಯೂ ಅಲ್ಲ
ವಿಚಿತ್ರ ರೂಪವ ತೋರ್ಪ ವಕ್ರ ಕನ್ನಡಿಯಲ್ಲ
ಅಲ್ಪ ದೃಷ್ಟಿಯವರ ಆಭರಣ ಕನ್ನಡಕವಲ್ಲ
ಕೊಳಕು ಕನ್ನಡಿಯಲ್ಲಿ ಮಬ್ಬು ಕಾಣುವ ಹಾಗೆ
ಕೊಳಕು ಮನದೊಳಗೆ ತಿಳಿಯದಾಗದು ಮರುಳೆ
ಸರಿಯಾಗಿ ದಿಟ್ಟಿಸುತ ಕಣ್ಣೊಳಗೆ ಕಣ್ಣಿಟ್ಟು
ಪರಿಪರಿಯಾಗಿ ಮನವ ಬಿಗಿಯಾಗಿ ಹಿಡಿದಿಟ್ಟು
ಕಂಡ ರೂಪವನು ಬರೆದಿಡಲು, ಚಿತ್ರಿಸಲು
ಸಫಲವಾದ ಗಳಿಗೆ ಕಂಡಿದ್ದಿಲ್ಲ ಭ್ರಮೆ
ಸ್ವರ ವ್ಯಂಜನ ಪದಗಳು ಹಿಡಿದು ಹಾಕಿದರಾ ಸತ್ಯ
ಕನ್ನಡಿಯೊಡನೆ ಮಾಯವಾಗುವುದು; ಇದು ಮಾತ್ರ ಸತ್ಯ
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ