ಶುಕ್ರವಾರ, ಮಾರ್ಚ್ 26, 2010

ಹುಡುಕಿಯಾಯಿತೇ ನಿನ್ನ ಗುರುವ?

ಹುಡುಕಿಯಾಯಿತೇ ನಿನ್ನ ಗುರುವ?
ಕೆ. ಆರ್. ಎಸ್. ಮೂರ್ತಿ

ಹುಡುಕುತಿಹೆ ಎಲ್ಲೆಲ್ಲೂ ಮೂಢ ಹುಟ್ಟು ಕುರುಡನಂತೆ
ಗುರುವಿನ ಕಾಲಡಿಯಲ್ಲಿ ಸ್ವರ್ಗವಿದೆಯೋ ಏನೊ ಎಂಬಂತೆ

ಗುರುಗಳೆಲ್ಲರೂ ಕುರುಡರಾಗಿಯೇ ನಿನ್ನಂತೆಯೇ ಹುಟ್ಟಿದರಯ್ಯ
ಅವರು ಕೂಡ ಹುಡುಕಿದರು ಊರೂರು, ಗುರುವ ಅರಸಿದರಯ್ಯ

ಕಣ್ಮುಂದೆ ಬಂದು ನಿಂತು ತಮ್ಮ ಕಾಲ ನೀಡಿದರೆ ಹಿಡಿಯುವೆಯಾ?
ತಲೆ ಮೇಲೆ ಕೈಯಿಟ್ಟು ಅಭಯ ಹಸ್ತವ ನೀಡಿದರೆ ಬಾಗುವೆಯಾ?

ಸಿಕ್ಕ ಸಿಕ್ಕ ಗುರುಗಳ ನಂಬಿ ತಲೆ ಬಾಗಿ ಮೊರೆಹೋದೀಯೆ ಜೋಕೆ
ಗುರ್ರೆಂದು ಸಿಡಿದೇಳುವ ಗುರುಗಳಿಗೆ ಏನಾದರೂ ಕಾರಣ ಬೇಕೆ?

ಹಲವು ಗುರುಗಳಿಗೆ ಬೇಕು ಶಿಶ್ಯೋತ್ತಮರು, ಹಣ ಕೊಡ್ತಾಯಿದ್ದರೆ
ಚೆಲುವಿನ ತರುಣಿಯರಾದರೆ ಅಂತರಂಗದ ಮರ್ಮ ಕೊಟ್ಟು ಬಿಡ್ತಾರೆ

ಪಾರಣ ಮಾಡಿಯಾರು ಜಾವ, ಜಾವಕ್ಕೆ ಹೂರಣ ಹೋಳಿಗೆ ಇದ್ದರೆ
ತರುಣಿಯರ ವೃಂದವೇ ಕೈಯಿಂದ ತಿನ್ನಿಸಿ, ಕಾಲು ಒತ್ತುತ್ತಿದ್ದರೆ

ಕೊರಮ ಗುರುಗಳಿಗೆ ಬಕರನಾಗುವ ತಕರಾರು ನಿನಗೇಕೆ ಬೇಕು?
ಮರ್ಮವಿದು ಮನದಟ್ಟಿರಲಿ: ನಿಷ್ಟೆಯಲಿ ನಡೆದುಕೊಂಡರೆ ಸಾಕು

ನಿನ್ನೊಳಗೆ ಇಹುದು ಗುರುತ್ವ; ಕ್ರೋಢೀಕರಿಸು ಕೇಂದ್ರದ ಕಡೆಗೆ
ಅನುಭವಿಸುವೆ ಭವದ ಕೇಂದ್ರವನು; ಕಾಂಬೆ ಗುರುತ್ವವ ಒಳಗೆ

ಬಿಂದುವಿನಲ್ಲಿ ಅಡಗಿಹುದು ಭವವೆಲ್ಲ ನಿನ್ನ ಸೆಳೆಯುವ ಗುರುತ್ವ
ಇಂದು, ಹಿಂದು, ಮುಂದಿನ ಚರಾಚರ ಲೋಕಕ್ಕೆ ಅದರದೇ ಗುರುತ್ವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ