ಶುಕ್ರವಾರ, ಆಗಸ್ಟ್ 20, 2010

ಕನ್ನಡ ಅಕ್ಷರ ಮಾಲೆಯನ್ನು ಮತ್ತೆ ಪೋಣಿಸಬೇಕೆ?

ಕನ್ನಡ ಅಕ್ಷರ ಮಾಲೆಯನ್ನು ಮತ್ತೆ ಪೋಣಿಸಬೇಕೆ?
ಕೆ. ಆರ್. ಎಸ್. ಮೂರ್ತಿ

ಕನ್ನಡ ಅಕ್ಷರ ಮಾಲೆಯನ್ನು ಮತ್ತೆ ಪೋಣಿಸಬೇಕೆ? ಇದರ ಬಗ್ಗೆ ಬರೆಯುವಂತಹ ಉಧ್ಧಟತನ ನನ್ನಲ್ಲಿ ಏಕೆ ಈಗ ಬಂದಿದೆ? ಬಹಳ ದಶಕಗಳಿಂದ ನನ್ನ ಮನಸ್ಸನ್ನು ಕೊರೆಯುತ್ತಿರುವ ದೊಡ್ಡ ಹುಳು ನನ್ನ ತಲೆಗೆ ದಿನ ರಾತ್ರಿ ಕಿರುಕುಳ ಕೊಡುತ್ತಿದೆ. ಈಗ ಧೈರ್ಯ ಮಾಡಿ ಬರೆದು ನನ್ನ ಹೃದಯದ ಆತಂಕವನ್ನು ನಿಮ್ಮೆಲ್ಲರ ಎದುರು ತೋಡಿಕೊಳ್ಳದಿದ್ದರೆ ನನ್ನ ಕನ್ನಡ ಆತ್ಮಕ್ಕೆ ಪಾಪದ ಹೊರೆ ಹೊರಲಾರದಷ್ಟು ಆಗಿಬಿಟ್ಟೀತು!

ನಾವೆಲ್ಲಾ ಕನ್ನಡ ಅಕ್ಷರ ಮಾಲೆಯನ್ನು ಬಾಲ್ಯದಿಂದಲೇ ಕಲಿತವರಲ್ಲವೇ? ಆದರೆ, ಯಾರು, ಯಾರು, ಯಾವ, ಯಾವ ಕಾಲದಲ್ಲಿ ಕನ್ನಡ ಅಕ್ಷರಗಳ ರೂಪ, ಅಕ್ಷರಗಳನ್ನು ಬರೆಯುವ ವಿಧಾನವನ್ನು ರೂಪಿಸಿ, ಈಗ ಸರಿಯಾಗಿದೆ ಎಂದು ನಿರ್ಧರಿಸಿದರೋ ನನಗೆ ಗೊತ್ತಿಲ್ಲ. ಅದೆಲ್ಲ ತಿಳಿದರೂ ಸುಮ್ಮನೆ ಚಾರಿತ್ರಿಕ ಸಂಶೋಧನೆ ಅಷ್ಟೇ ಅಲ್ಲವೇ? ಆದ್ದರಿಂದ, ನನ್ನ ಈ ಲೇಖನದಲ್ಲಿ ಈಗಿರುವ ಕನ್ನಡ ಅಕ್ಷರಗಳ ಬರಹ ರೂಪದ ಕೊರತೆಗಳನ್ನು ಗುರುತಿಸುತ್ತೇನೆ. ಇನ್ನೊಂದು ಬರಹದಲ್ಲಿ ಹಸ್ತ ಪ್ರತಿಯನ್ನು ತಯಾರಿಸಿ ನನ್ನ ಸಲಹೆಗಳನ್ನು ಬರೆಯುತ್ತೇನೆ.


ಕನ್ನಡದ ಅಕ್ಷರ ಮಾಲೆಯ ಕೊರತೆಗಳು:
ಸ್ವರ ವಿಭಾಗ

೧ ಸ್ವರ ವಿಭಾಗದಲ್ಲಿ ಹ್ರಸ್ವಾಕ್ಷರ ಮತ್ತು ದೀರ್ಘಾಕ್ಷರಗಳು ಕೆಲವು ಮಾತ್ರ ಬರಹ ರೂಪದಲ್ಲಿ ಒಂದನ್ನೊಂದು ಅನುಸರಿಸುತ್ತವೆ.
ಅನುಸರಣಿಕೆಯ ಉದಾಹರಣೆಗಳು: ಅ ಮತ್ತು ಆ; ಉ ಮತ್ತು ಊ; ಋ ಮತ್ತು ಇದರ ದೀರ್ಘ ರೂಪ (ಬಳಕೆಯಲ್ಲಿ ಇಲ್ಲವೇ ಇಲ್ಲ!), ಎ ಮತ್ತು ಎ; ಒ ಮತ್ತು ಓ

೨. ಅನುಸರಣಿಕೆ ಇಲ್ಲದ ಉದಾಹರಣೆ: ಇ ಮತ್ತು ಈ
ಮೂರ್ತಿಯ ಸಲಹೆ: ದೀರ್ಘವಾದ ಈ ಹ್ರಸ್ವವಾದ ಇ ಅನ್ನು ಅನುಸರಿಸುವ ಹಾಗೆ ರೂಪಿಸ ಬೇಕು. ಇ ರೂಪಕ್ಕೆ ದೀರ್ಘವನ್ನು ಸೊನ್ನೆಯ ರೂಪಕ್ಕೆ ಅದರ ಹೊಟ್ಟೆಯಲ್ಲಿ ಅಡ್ಡ ಗೆರೆ ಹಾಕುವುದರ ಬದಲು ಇ ಬರಹ ರೂಪಕ್ಕೇ, ಅದರ ಹೊಟ್ಟೆಯನ್ನು ಸೀಳೋ, ತಲೆಯ ಮೇಲೋ ದೀರ್ಘ ರೂಪವನ್ನು ರೂಪಿಸಬಹುದು. ಹೊಟ್ಟೆಯಲ್ಲಿ ಅಡ್ಡ ಗೆರೆ ಬರೆದಾಗ ಆ ರೂಪಕ್ಕೆ ಜಠರ ಗೆರೆ ಅನ್ನೋಣ

ಅನುಸ್ವರ ಮತ್ತು ವಿಸರ್ಗಗಳು ಅ ಕಾರದ ರೂಪವನ್ನು ಅನುಸರಿಸಿವೆ. ಇದಕ್ಕೆ ನನ್ನ ಸಲಹೆಯೇನೂ ಇಲ್ಲ.

ವ್ಯಂಜನಗಳು

ಡ ಮತ್ತು ಢ; ದ ಮತ್ತು ಧ; ಪ ಮತ್ತು ಫ; ಬ ಮತ್ತು ಭ ವ್ಯಂಜನಾಕ್ಷರಗಳು ಒಂದನ್ನೊಂದನ್ನು ಅನುಸರಿಸುತ್ತವೆ. ಡ ಗೆ ಅದರ ಪೃಷ್ಠದ ಮಧ್ಯೆ ಒಂದು ಗೆರೆಯನ್ನು ಎಳೆದಾಗ ಢ ಆಗುತ್ತದೆ. ಇದನ್ನು ನಾವು ಪೃಷ್ಠ ಗೆರೆ ಅನ್ನೋಣ. ಇದೇ ರೀತಿಯಲ್ಲಿ ಇತರ ವ್ಯಂಜನಾಕ್ಷರಗಳು ಅನುಸರಿಸುವುದಿಲ್ಲ


೧. ಕ ಮತ್ತು ಅದರ ಮಹಾ ಪ್ರಾಣವಾದ ಖ ಒಂದನ್ನೊಂದು ಅನುಸರಿಸುವುದಿಲ್ಲ.
ಮೂರ್ತಿಯ ಸಲಹೆ: ಕ ಅಕ್ಷರ ರೂಪಕ್ಕೆ ಕೆಳಗಿನ ದೊಡ್ಡ ಸೊನ್ನೆಗೆ ಮೇಲಿಂದ ಕೆಳಗೆ ಒಂದು ಪೃಷ್ಠ ಗೆರೆಯನ್ನು ಹಾಕಬಹುದು. ಇನ್ನೊಂದು ಸಲಹೆ: ಖ ವ್ಯಂಜನಾಕ್ಷರವನ್ನೇ ಅಲ್ಪ ಪ್ರಾಣವಾಗಿ ಮಾಡಿ, ಅದ್ಕಕ್ಕೆ ಒಂದು ಪೃಷ್ಠ ಗೆರೆಯನ್ನು ಎಳೆದು ಮಹಾ ಪ್ರಾಣ ರೂಪವನ್ನು ಮಾಡಬಹುದು.

೨. ಗ ಮತ್ತು ಘ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ಗ ವ್ಯಂಜನಕ್ಕೆ ಪೃಷ್ಠ ಇಲ್ಲದಿರುವುದರಿಂದ, ಮಧ್ಯೆ ಮೇಲಿಂದ ಕೆಳಗೆ ಗೆರೆಯನ್ನು ಎಳೆದು ಮಹಾ ಪ್ರಾಣವನ್ನು ರೂಪಿಸಬಹುದು.
ಇನ್ನೊಂದು ಸಲಹೆ: ಮಹಾ ಪ್ರಾಣವಾದ ಘ ವ್ಯಂಜನವನ್ನೇ ಅಲ್ಪ ಪ್ರಾಣವಾಗಿ ಉಪಯೋಗಿಸಿ, ಅದಕ್ಕೆ ಪೃಷ್ಠ ಗೆರೆಯನ್ನು ಎಳೆದು ಅದರ ಮಹಾ ಪ್ರಾಣವನ್ನು ರೂಪಿಸಬಹುದು.

೩. ಚ ಮತ್ತು ಛ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ಚ ವ್ಯಂಜನಕ್ಕೆ ಪೃಷ್ಠ ಗೆರೆ ಹಾಕಿ ಮಹಾ ಪ್ರಾಣವನ್ನು ರೂಪಿಸಿದರೆ ಆಯಿತು.

೪. ಜ ಮತ್ತು ಝಾ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ಜ ವ್ಯಂಜನಕ್ಕೆ ಪೃಷ್ಠ ಗೆರೆ ಹಾಕಿ ಮಹಾ ಪ್ರಾಣವನ್ನು ರೂಪಿಸಿದರೆ ಆಯಿತು.

೫. ಟ ಮತ್ತು ಠ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ಟ ವ್ಯಂಜನಕ್ಕೆ ಪೃಷ್ಠ ಗೆರೆ ಹಾಕಿ ಮಹಾ ಪ್ರಾಣವನ್ನು ರೂಪಿಸಿದರೆ ಆಯಿತು.

೬. ತ ಮತ್ತು ಥ ಗಳೂ ಅನುಸರಣಿಕೆಯ ಕೊರತೆಯನ್ನು ಹೊಂದಿವೆ.
ಮೂರ್ತಿಯ ಸಲಹೆ: ತ ವ್ಯಂಜನಕ್ಕೆ ಪೃಷ್ಠ ಗೆರೆ (ಅಥವಾ ಹೊಟ್ಟೆಗೆ ಮೇಲಿಂದ ಕೆಳಗೊಂದು ಗೆರೆ) ಹಾಕಿ ಮಹಾ ಪ್ರಾಣವನ್ನು ರೂಪಿಸಿದರೆ ಆಯಿತು.

೭. ಕ, ಚ, ಟ, ತ, ಪ ಸರಣಿಯಲ್ಲಿನ ಐದನೇ ಅಕ್ಷರಗಳಲ್ಲಿ ಣ, ನ, ಮ ಗಳನ್ನು ಮಾತ್ರ ಈಗ ಕನ್ನಡದಲ್ಲಿ ಬಳಕೆಯಲ್ಲಿದೆ. ಚ ಸರಣಿಯ ಐದನೇ ಅಕ್ಷರವನ್ನು ಜ್ಞ ರೂಪದಲ್ಲಿ ಮಾತ್ರ ಬಳೆಸುತ್ತೇವೆ.
ಆದರೆ, ಕ ಸರಣಿಯ ಐದನೇ ಅಕ್ಷರವನ್ನು ನಾವು ಈಗ ಬಳಸುವುದೇ ಇಲ್ಲ. ಹಿಂದಿನ ಕಾಲದಲ್ಲಿ, ಮಂಗಳ ಎಂದು ಬರೆಯುವಾಗ ಸೊನ್ನೆಯ ಬದಲು ಉಪಯೋಗಿಸುತ್ತಿದ್ದರು.

ಇದಕ್ಕೆ, ನಿಮ್ಮ ಸಲಹೆ ಏನು?

೮. ಈಗ, ಅವರ್ಗೀಯ ವ್ಯಂಜನಗಳಿಗೆ ನನ್ನ ಸಲಹೆಗಳೇನೂ ಇಲ್ಲ. ಆದರೆ, ಹ ಅಕ್ಷರದ ಒಂದು ಕಿರು ರೂಪ ಅಥವಾ ವಿಶೇಷ ರೂಪವನ್ನು ನನ್ನ ಮುಂದಿನ ಲೇಖನದಲ್ಲಿ ಬರೆದು ವಿವರಿಸುತ್ತೇನೆ. ಸಲಹೆಯ ಸೂಕ್ಷ್ಮ ಗುಟ್ಟು ಹೀಗಿದೆ:

ಇಂಗ್ಲೀಷಿನಲ್ಲಿ h ಆಕ್ಷರವನ್ನು k, g, j, t, d, c, p, b ಅಕ್ಷರಗಳನ್ನು h ಬೆರೆಸಿ ಮಹಾಪ್ರಾಣದ ಧ್ವನಿ ಬರುವ ಹಾಗೆ, ಕನ್ನಡದಲ್ಲೂ, ಹ ಅಕ್ಷರದ ಇನ್ನೊಂದು ಕಿರು ರೂಪವನ್ನು ಉಪಯೋಗಿಸಿ, ಅಲ್ಪದಿಂದ ಮಹಾ ಪ್ರಾಣಗಳನ್ನು ಮಾಡಿ ಬಿಡಬಹುದು. ಈ ರೀತಿಯಲ್ಲಿ ಮಾಡಿದಾಗ, ಕನ್ನಡದಲ್ಲಿ ಹತ್ತು ಮಹಾ ಪ್ರಾಣ ವ್ಯಂಜನಗಳನ್ನು ಕಡಿಮೆ ಮಾಡಬಹುದು.


ನನ್ನ ಕೋರಿಕೆ: ನಾವೆಲ್ಲರೂ ನಮ್ಮ ಮಡಿವಂತಿಕೆಯನ್ನು ಸ್ವಲ್ಪ ಹದದಲ್ಲಿ ಇಟ್ಟುಕೊಂಡರೆ, ಕನ್ನಡ ಅಕ್ಷರ ಮಾಲೆಯು ನಮ್ಮ ಮುಂದಿನ ಪೀಳಿಗೆಗಳಿಗೆ ಬಹಳ ಸುಲಭವಾಗುತ್ತದೆ. ಕನ್ನಡ ಅಕ್ಷರ ಮಾಲೆಯು ಹಿಂದೆಯೂ ಬದಲಾವಣೆಯಾಗಿದೆ. ಈಗ ಸ್ವಲ್ಪ ಪರಿವರ್ತನೆ ಮಾಡುವುದರಲ್ಲಿ ತಪ್ಪಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ