ಶುಕ್ರವಾರ, ಆಗಸ್ಟ್ 13, 2010

ಮೊದಲ ದೇವರು

ಮೊದಲ ದೇವರು
ಕೆ. ಆರ್. ಎಸ್. ಮೂರ್ತಿ

ಎಮ್ಮೆಲ್ಲರ ಕನಸಿನಲಿ ಕಂಡೆ, ಗುಂಡಿಗೆಯಲಿ ಹೊಕ್ಕಿಸಿಕೊಂಡೆ

ಒಂದಲ್ಲ, ಎರಡಲ್ಲ ಒಂಬತ್ತು ತಿಂಗಳು ನಡೆದೆ ಹೊತ್ತುಕೊಂಡೇ


ಹಾಲು, ಪರಮಾನ್ನದ ಅಮೃತದ ಸಮಾರಾಧನೆ ಹೊತ್ತು, ಹೊತ್ತಿಗೆ

ತುಸು ನಿದ್ದೆ ಬಂದೊಡನೆಯೇ ಮಲಗಲು ಸದಾ ಸಿಧ್ಧ ಹಾಯಿ ಹಾಸಿಗೆ


ನಾವು ತುಸು ನಕ್ಕಾಗ ನಿನಗಾದ ಆನಂದಕ್ಕೆ ಕಿಂಚಿತ್ತೂ ಮಿತಿಯಿರಲಿಲ್ಲ

ಕನಿಕರದಿ ಕರಗುತಿತ್ತು ನಿನ್ನ ಗುಂಡಿಗೆ ನಾವು ಸ್ವಲ್ಪವೇ ಅತ್ತಾಗಲೆಲ್ಲ


ದೂರ ದೇಶಕ್ಕೆ ನಾನಂದು ಹೊರಟು ನಿಂತಾಗ ಬಹಳ ಸಂಭ್ರಮದಲ್ಲಿ

ನಿನಗೂ ಆನಂದವಾದರೂ, ಕಂಡೆ ಒಂದೆರಡು ಹನಿ ನಿನ್ನ ಕಣ್ಣಂಚಿನಲ್ಲಿ


ನೀನೀಗ ಹೊರಟು ಬಿಟ್ಟೆ ನಮ್ಮೆಲ್ಲರ ಹಿಂದೆಯೇ ಬಿಟ್ಟು, ಬಹು ದೂರ ದೂರ

ನೀನಿಲ್ಲದೀ ಊರೀಗ ಬಹಳ ಬೇರೆ, ಬೇರೆ; ದುಡುಕು ಮನ ನೊಂದಿದೆ ಅಪಾರ


ಎಮ್ಮ ಹೆತ್ತು, ಹೊತ್ತೆ, ಪೊತ್ತೆ; ನಿನ್ನ ನೆನಪಿನ ಹರಕೆ ಇರಲಿ ನಮಗೆಲ್ಲಾ

ನಿನ್ನ ಬಿಂಬವ ಕಾಣುವೆವು ತಾಯೇ ನಮ್ಮ ಮಕ್ಕಳ, ಮೊಮ್ಮಕ್ಕಳ ಕಣ್ಗಳಲೆಲ್ಲಾ


ನಾವೂ, ನಿನ್ನ ಮೊಮ್ಮಕ್ಕಳೂ ದಿನ ದಿನವೂ ನಡೆದಾ ಹಾದಿಯಲೆಲ್ಲ ಇರಲಿ ಸದಾ

ನಿನ್ನ ನಗೆಯೇ ನಮಗೆ ದಾರಿ ದೀಪ; ಕಾಯುವುದು ಅಭಯ ಹಸ್ತದ ಆಶೀರ್ವಾದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ