ಶುಕ್ರವಾರ, ಜುಲೈ 30, 2010

ಜೀನು ಪುರಾಣ

ಜೀನು ಪುರಾಣ
ಕೆ. ಆರ್. ಎಸ್. ಮೂರ್ತಿ

ಜೀನು ಜೀನಿನ ಜಂಟಿಯಾಟ; ಜನಕ ಜನನಿ ಜೊನ್ನ ಜೇನು ಉಂಬುವ ಮಿಲನ
ಜಂಟಿ ಸಂಕೇತದ ನವ ಜೀನಿನ ಜನನ; ಜನ್ಯ ಜೀನಿನ ಪುನರಪಿ ಗುಣೀಕರಣ

ಸರಪಣಿಯ ಸಂಕೇತ ಒಂದು ಎರಡಾಗಿ, ಅವು ನಾಲ್ಕಾಗಿ, ಹಾಗೇ ಕೋಟಿ, ಕೋಟಿ
ಆಗುವ ಅಂಗ ಅಂಗಗಳು ಮಾತ್ರ ಬೇರೆ, ಬೇರೆ; ಜೀವ ವೈಚಿತ್ರ ಒಂದಕ್ಕೊಂದು ಸಾಟಿ

ಸಾವಿರಾರು ವರುಷಗಳಲಿ ಜೀನು ಫಕ್ಕನೆ ವಿಭಿನ್ನ: ವಿಚಿತ್ರವಿನ್ನೊಂದರ ಜನ್ಮವೀ ಜಂತು
ಈ ಜೀನು ಪರಿ ಪರಿ ಜೀವ ಜಂತುಗಳ ಕೂಟಕ್ಕೆ ಹೊಸದೊಂದು ಕೊಡುಗೆಯಾಗಿ ಬಂತು

ನೀರಿಂದ ನೆಲಕ್ಕೆ, ನೆಲದಿಂದ ನಭಕ್ಕೆ, ಮರದಿಂದ ಮರಕ್ಕೆ, ನೆಲೆಯಿಂದ ನೆಲೆಗೆ ವಲಸೆ
ವಸುಧೆ ಅಮ್ಮನ ಸಂಸಾರದ ಜಾತ್ರೆ ದಿಕ್ಕು ದಿಕ್ಕಿಗೆ, ತೆವಳಿ, ನಡೆದು, ಈಜಿ, ಹಾರುವ ಆಸೆ

ತೀರದ ಆಸೆ; ತೀರದಿಂದ ತೀರಕ್ಕೆ ಈಜಿ, ನೆಗೆದು, ತೇಲಿ, ಸಂಸಾರವೆಲ್ಲ ಮಹಾ ಯಾತ್ರೆ
ವೃಕ್ಷ, ಸಸ್ಯ, ಗಿಡ, ತೃಣ, ಪೊದೆಗಳದಂತೂ ಹಸಿರಿನ ದೀಕ್ಷೆ; ಇವಕೆ ಬೇಡವಿಂತಹಾ ಯಾತ್ರೆ

ಹುಟ್ಟಿದಲ್ಲೇ ನೆಲೆಸಿ, ವರುಣ ಸ್ನಾನವ ಮಾಡುತ, ವಸುಧೆಯ ಮೊಲೆಯ ಹೀರುತ ಬೆಳೆವುದು
ಸೂರ್ಯನ ಆವಾಹನೆ, ಗಾಳಿಯ ಉಸಿರಾಟ, ಬೀಸುವ ಮರುತನಿಗೆ ತಲೆ, ಮೈ ಓಲಾಡಿಸುವುದು

ಬೆಳೆಯ ಜೊತೆ, ಹೂವು, ಹಣ್ಣು, ಬೀಜ; ಪುಟ್ಟ ರೆಕ್ಕೆಯ ರಂಗು ರಂಗಿನ ಚಿಟ್ಟೆ, ಚೆಂದದ ದುಂಬಿ,
ಹಕ್ಕಿ ವೃಂದಕೆ ನಿತ್ಯ ಮಧು ಸಂತರ್ಪಣೆ: ಹೂವು, ಹಣ್ಣು, ಬೀಜ ಹಲವು ಹಲವು ಧರೆ ತುಂಬಿ

ಉಂಡ ಅತಿಥಿಗಳ ಮೈಮೇಲೆ ಗುಟ್ಟಾಗಿ ಗಂಟೊಂದು ಸಿಕ್ಕಿಸಿ ಬೀಜ ಪ್ರಸಾರ ಸಂಸಾರವನು ಬೆಳೆಸುವ ಪರಿ
ಮೈಗೆ ಅಂಟಿದ ಜೀನನು ಮತ್ತೆಲ್ಲಿಗೋ ಹಾರಿ, ಕೊಡವಿ ಮತ್ತೆ ನೆಲ ಊರಿ ಮೊಳಕೆ ಮಾಡಲು ಸಹಕಾರಿ


ಜೀನು ನನ್ನದು ಜಾಣತನದಲಿ ಎಲ್ಲಾದರಲ್ಲಿ, ಯಾರ ಜೀನಿನ ಜೊತೆ ಜಂಟಿ ಮಾಡಿಸಲಿ ಎನ್ನುವುದು ಪ್ರತಿ ಜೀನು
ತನ್ನ ಜೀನಿನ ಪ್ರವರ ಅಮರವಾಗಲಿ, ಎನ್ನುವುದೇ ಪ್ರತಿ ಜೀನಿನ ಎಡೆಬಿಡದ ಹಟ ಯೋಗ ಇದು ಸರಿಯಲ್ಲವೇನು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ