ಶನಿವಾರ, ಜುಲೈ 10, 2010

ನಿಮ್ಮ ಕಾಡುವ ಕಪಿಯಂಥ ಕವಿಯು ನಾನಲ್ಲ

ನಿಮ್ಮ ಕಾಡುವ ಕಪಿಯಂಥ ಕವಿಯು ನಾನಲ್ಲ
ಕೆ. ಆರ್. ಎಸ್. ಮೂರ್ತಿ

ನನ್ನ ಮೇಲೇಕೆ ಕೋಪ? ಬಯ್ಯುವಿರಿ ನನ್ನನ್ನು? ಕೆಟ್ಟವನು ನಾನಲ್ಲ.
ನಿಮ್ಮನು ಎಲ್ಲರೆದುರಿಗೆ ವಿಕಟ ಅಟ್ಟಹಾಸದಲಿ ಅಣುಕಿಸಲೇ ಇಲ್ಲ.

ವಿಕೃತ ರೂಪದ ನಿಮ್ಮ ದೆವ್ವದ ಮುಖವನು ಕಂಡು ನಕ್ಕವನೂ ಅಲ್ಲ
ಮೂಗು ಉದ್ದವಾದಾಗ ನಿಮ್ಮೆಡೆಗೆ ಬೆರಳು ತೋರಿಸಿದವ ಅಲ್ಲವೇ ಅಲ್ಲ

ನೂರು ಮುಖದ ಕವಿಯಂತೆ ಯಾರೋ ಮೈಮೇಲೆ ಒಮ್ಮೊಮ್ಮೆ ಬರುತ್ತಾನೆ
ಕೊರಮನವನು ವಿಚಿತ್ರ ಮುಖವಾಡಗಳ ದೊಡ್ಡ ಗಂಟೇ ಹೊತ್ತು ತರುತ್ತಾನೆ

ನನ್ನ ಮೈಮನವ ಸೂತ್ರ ದಾರದಿ ಕಟ್ಟಿ, ಬಣ್ಣ ಬಣ್ಣದ ಕೀಲುಗೊಂಬೆಯ ಆಟ
ಕವಿ ಭಾಷೆಯಾ ಮಂತ್ರ ಬೊಗಳಿ ಊರ ಮಂದಿಯ ಕೆಣಕಿ ಕುಣಿಸುವ ಚೆಲ್ಲಾಟ

ಮನಸಿಗೆ ಬಂದದ್ದೇ ರಾಗ, ಕಾಡು ನಾಯಿಗೂ ಅತಿ ದೊಡ್ಡ ಬಾಯಿಯವನಿಗೆ
ಎಲುಬು ಬುರುಡೆಗಳ ತಟ್ಟಿ ಹಾಕುವನು ರಣ ಮದ್ದಳೆಗಿಂತ ಕರ್ಕಶವು ಕಿವಿಗೆ

ಸಾಕಪ್ಪಾ ಸಾಕು ಮಹರಾಯ ಈ ಶೂರ್ಪನಖನ ತಮ್ಮ, ಹಿಡಂಬಿಯ ಅಣ್ಣ
ಕತ್ತಲೆಗೂ ಕಪ್ಪು ಮುಖದ, ಹುಳುಕು ಕೆನ್ನೆಯ, ಕ್ರೂರ ಕಣ್ಣಿನ ಗುಮ್ಮನಿವನಣ್ಣ

ಬೇವು ಮರದ ಕೊಂಬೆಯ ಚಾಟಿಯಲ್ಲಿ ಬಡಿದು ನನಗೆ ದೆವ್ವಗಳ ಬಿಡಿಸಿರಣ್ಣ
ಕಪ್ಪು ಹೊಗೆ ಬೀರುತ, ಭೂತ ಬಿಡಿಸುವ, ಮಾಂತ್ರಿಕನ ಶೀಘ್ರದಲಿ ಕರೆಯಿರಣ್ಣ

ಕಟ್ಟು ಕಹಿ ಸರ್ಪ ವಿಷದ ಬಟ್ಟಲು ಇವನ ಬಾಯಿ, ಗಂಟಲಿಗೆ ತುರುಕಿ, ತಳ್ಳಿ
ಈ ಭಯಾನಕ ಹುಚ್ಚು ಕವಿಯ ತಕ ತಕ ಕುದಿಯುವ ಎಣ್ಣೆಯ ಕೊಳದಲ್ಲಿ ತಳ್ಳಿ

ತೊಲಗಿದರೆ ಸಾಕು ಸಾಕಪ್ಪ ನಿಮ್ಮೆಲ್ಲರನು ಸುಮ್ಮನೆ ಕಾಡುವನು ಆ ಕಾಡು ಕುನ್ನಿ
ನನಗೂ, ನಿಮಗೆಲ್ಲರಿಗೂ, ನಮ್ಮ ನಿಮ್ಮಂತಹ ಸಜ್ಜನರಿಗೆಲ್ಲ ಆಗಲೇ ಹಾಯಿ ಎನ್ನಿ

1 ಕಾಮೆಂಟ್‌:

 1. ಮೂರ್ತಿ ಸರ್,
  ಈಗ ತಾನೇ ಗೆಳೆಯರೊಬ್ಬರ ಮೈಲ್ನಿಂದ ನಿಮ್ಮ ಬ್ಲಾಗ್ ಬಗ್ಗೆ ತಿಳಿಯಿತು, ಓದಿದೆ,
  ಒಂದಕ್ಕಿಂತಲೂ ಒಂದು ಚೆನ್ನಾಗಿರುವ ಕವನಗಳು. ತುಂಬಾ ಇಷ್ಟವಾದವು. ಆಗಾಗ ಓದುತ್ತಾ ಇರ್ತೇನೆ.

  ಸಮಯವಿದ್ದರೆ ನನ್ನ ಬ್ಲಾಗಿಗೆ ಒಮ್ಮೆ ಭೇಟಿ ಕೊಡಿ..........
  http://pravi-manadaaladinda.blogspot.com

  ಪ್ರತ್ಯುತ್ತರಅಳಿಸಿ