ಶುಕ್ರವಾರ, ಜುಲೈ 9, 2010

ಕಟ್ಟು ಕತೆಗಳ ನಂಬುವರು ನೀವಲ್ಲವೇ?

ಕಟ್ಟು ಕತೆಗಳ ನಂಬುವರು ನೀವಲ್ಲವೇ?
ಕೆ. ಆರ್. ಎಸ್. ಮೂರ್ತಿ

ಕಟ್ಟು ಕಥೆಗಳ ಕೇಳಿ, ಅವನೆಲ್ಲ ನಂಬಿ ಮತಿಗೆಟ್ಟು, ಕಟ್ಟು ನಿಟ್ಟಾಗಿ ಗಟ್ಟಿ ಭಜಿಸಿದವರು ನೀವಲ್ಲವೇ?
ಬೆಟ್ಟಗಳ ಒಡೆದು, ಕಡೆದು, ಮಂದಿರಗಳ ಕಟ್ಟಿ, ಒಳಗೊಂದು ಪುಟ್ಟ ಗುಡಿ ಮಾಡಿದವರೂ ನೀವಲ್ಲವೇ

ಮಂಟಪಗಳ ಕಟ್ಟಿ, ಪುಟ್ಟ, ಪುಟ್ಟ ಗೊಂಬೆಗಳ ಇಟ್ಟು, ಅದನೆ ನಿಜವೆಂದು ನಟಿಸಿದವರು ನೀವಲ್ಲವೇ?
ಗಟ್ಟಿ ತೆಂಗಿನ ಕಾಯಿಯ ಒಡೆದು, ತಟ್ಟೆಯಲಿ ಗಟ್ಟಿ ತುಪ್ಪದ ದೀಪವ ಹಚ್ಚಿ ಆರತಿಯ ಗೈದವರಲ್ಲವೇ?

ಎಂಟು ಬಗೆ ಮೃಷ್ಟಾನ್ನ, ಗಟ್ಟಿ ಹಾಲಿನ ಪಾಯಸ, ಮುಂದೆ ಇಟ್ಟು, ಕೊನೆಗೆ ಭುಜಿಸಿದವರೂ ನೀವೇ ಅಲ್ಲವೇ?
ತೊಟ್ಟಿಲೊಳು ಪುಟ್ಟ ಕಿಟ್ಟನ ಇಟ್ಟು, ಈಟು, ಆಟು ತೂಗುತ, ಗಟ್ಟಿ ಗೊರಕೆಯ ಹೊಡೆದು ಮಲಗಿದರಲ್ಲವೇ?

ಸೊಟ್ಟ ಮೂತಿಯವನನೂ, ಬಂಟ ಕೋತಿಯನ್ನೂ, ಕೆಟ್ಟ ದಶಶಿರನ ಲಿಂಗವನು ಧರೆಗಿಟ್ಟ ದಿಟ್ಟ ಗಿಡ್ಡಪ್ಪನನೂ,
ಸುಟ್ಟ ಸುಡುಗಾಡಿನ ಬೆಟ್ಟದರಸಿಯ ಪತಿಯನೂ, ತುಂಟ ಕಿಟ್ಟಯ್ಯನನೂ, ಬಲಿಯ ಪುಟ್ಟಗಾಲಲಿ ಮೆಟ್ಟಿದವನನೂ,

ದಿಟವೆಂದು ಗಟ್ಟಿ ಮನಸಿನಲಿ ಅಷ್ಟೂ ಲೊಳಲೊಟ್ಟೆ, ಕಸಕಟ್ಟೆ ಕಾಯಿಯೆಂದು ಇಷ್ಟೂ ತಿಳಿಯದೆ ನಂಬುವುದೇತಕೆ?
ಬಿಟ್ಟು ಬಿಡಿ, ಮುಟ್ಟಿ, ತಟ್ಟಿ ನೋಡಿ ಒಮ್ಮೆ ಗಟ್ಟಿ ಕಲ್ಲನು, ಜೀವವಿಲ್ಲದ ಕಲ್ಲಿಗೆ ಸಿಟ್ಟುಬಾರದು, ಎಂದು ತಿಳಿದರೆ ಸಾಕೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ