ಶುಕ್ರವಾರ, ಜೂನ್ 18, 2010

ನಂಬಿ ಕೆಟ್ಟವರು ನೀವಲ್ಲವೇ?

ನಂಬಿ ಕೆಟ್ಟವರು ನೀವಲ್ಲವೇ?
ಕೆ. ಆರ್. ಎಸ್. ಮೂರ್ತಿ

ಎಕ್ಕಡವ ತನ್ನ ತಲೆಯ ಮೇಲಿಟ್ಟು
ಬಿಕ್ಕಿ, ಬಿಕ್ಕುತಲಿ ಅತ್ತು ಕಣ್ಣೀರಿಟ್ಟು

ಅಗ್ರಜನ ಆಶ್ರಮದಿಂದ ಬಂದ ಆಚೆ
ಹೊತ್ತು ನಡೆಸಿದ ರಾಜ್ಯ ಭಾರದ ಹೆಜ್ಜೆ

ಅಣ್ಣನ ಪಾದುಕೆಯು ತಮ್ಮನ ಮೇಲೋ?
ತಮ್ಮನ ಒಲವಿನ ಭಾರ ಅಣ್ಣನ ಮೇಲೋ?

ಹಣೆಯ ಬರಹವಿದೇನು ರಾಜ ಕುವರರಿಗೆ?
ಇತ್ತ ವಾಕ್ಯದ ಹೊಣೆಯು ಹೊತ್ತ ನಾಲ್ವರಿಗೆ.

ದಶರಥನ ರತಿಯು ಮತಿಕೆಟ್ಟ ಕೆಟ್ಟ ಕನ್ಯೆಯೋ?
ಭೂಪತಿ ಪತಿಯು ಶತ ಷಂಡ ಹುಚ್ಚು ಕುನ್ನಿಯೋ?

ರಾಜನ ಪ್ರಜೆಗಳಿಗೂ ಮಂಕು ಕವಿಸಿದ ಕೊಂಕನಾರು?
ಓದುಗರಿಗೆಲ್ಲಾ ಕಣ್ಣೀರ ನದಿಯನ್ನೇ ಸುರಿಸಿದವನಾರು?

ಕಾವ್ಯ ಕರ್ತ ಕವಿ ನಿಜವಾಗಿಯೂ ಹುಟ್ಟು ಬೇಡನೋ?
ತನ್ನ ಗೋತ್ರವನೇ ಬಚ್ಚಿಟ್ಟು ಬೇಡ ತಾಪಸಿಯಾದನೋ?

ಓದಿದೆಲ್ಲವ ಮೂಢತೆಯಲಿ ನಿಜವಿರಲೇ ಬೇಕೆಂದು ನಂಬಿ
ಕಥೆಯ ನಾಯಕನೇ ಸಾಕ್ಷಾತ್ ನಾರಾಯಣನೆಂದು ನಂಬಿ

ತನ್ನ ಪ್ರಜೆಗಳನು ಕೈಬಿಟ್ಟು ಮೂಢತನದಿ ಕಾಡಿಗೆ ಹೋದವನ
ಸತಿ ಸೀತೆಯನು ರಕ್ಕಸನಿಗೆ ಕಳೆದುಕೊಂಡಾಗ ಬಿಕ್ಕಿ ಅತ್ತವನ

ಹೆಂಡತಿಗೋಸ್ಕರವಾಗಿ ವೈರವನು ಕಟ್ಟಿ, ದಾನವ ರಾವಣನನು
ಗೆಲ್ಲುವ ಗುರಿ ಹೊತ್ತು, ವಾನರ ಸೈನ್ಯವ ಮೊರೆಹೋಗಿ ಹೋದವನು

ಯುಧ್ಧವನು ಗೆದ್ದವನು ರಾಮನಲ್ಲ, ಲಕ್ಷ್ಮಣನೂ ಅಲ್ಲ, ವಾನರರು
ಗೆದ್ದಾದಮೇಲೆ, ಸೀತೆಯನು ತೊರೆದು ತನ್ನನೇ ತಾನು ಸೋತವನು

ಬಸುರಿ ಹೆಂಡತಿಯನ್ನು ಊರು ಬಿಟ್ಟು ಮತ್ತೆ ಕಾಡಿಗೆ ಅಟ್ಟಿದವನು
ಅವಳಿ ಜವಳಿ ಲವ ಕುಶರ ಬಾಲ ಲೀಲೆಗಳನು ಕಾಣದ ಕುರುಡನು

ಕಂಡು, ಕಂಡೂ, ಬೇಡನ ಕಥೆಯನ್ನು ಓದಿ, ಕೇಳಿ, ಮಾನವನನು
ನಾರಾಯಣನೇ ಇರಬೇಕೆಂದು ನಂಬಿ ಕಟ್ಟಿದ್ದಾಯ್ತು ದೇಗುಲಗಳನು

ನಿಮಗೆಲ್ಲರಿಗೂ ಬರುವುದೇ ಬುಧ್ಧಿ? ತೆರೆಯುವುದೆಂದು ಕುರುಡು ಕಣ್ಣು?
ತಿಳಿಯುವುದೆಂದು ಕವಿ ಕಾವ್ಯ ಚಳಕದಿ ಕಣ್ಣಿಗೆ ಎರೆಚಿದನೆಂದು ಮಣ್ಣು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ