ಸೋಮವಾರ, ಜೂನ್ 14, 2010

ಅಕ್ಕ ಕೇಳವ್ವ

ಡಾ. ಕೆಆರ್ಎಸ್ ಮೂರ್ತಿ

ಅಕ್ಕ ಕೇಳವ್ವ,
ನೀನೊಂದು ಕನಸ ಕಂಡೆ
ನೀನಂದು ಕನಸ ಕಂಡೆ

ಅಕ್ಕ ಕೇಳವ್ವ,
ನಮ್ಮೂರ ನನಸನು
ಎನ್ನಾರೈ ಕನಸನು

ಅಕ್ಕ ಹೇಳವ್ವ,
ನೀನಂದು ಕಂಡ ಕನಸನು
ನಿನ್ನಮ್ಮನ ಹೊಕ್ಕಳ
ಒಕ್ಕಲಿಗರು ನಾವೆಂದು
ಹೊಕ್ಕಳ ಕುಡಿಯೆಲ್ಲ
ಬಳಸಿ ಸುತ್ತಿದರೂ
ನಿನ್ನ ಮಡಿಲವರೆಂದು
ಕನಸ ಕಂಡಿದ್ದು ನೆನಪು

ಅಕ್ಕ ಕೇಳವ್ವ, ನಮ್ಮೆಲ್ಲರ ಜಗಳವ
ಅಕ್ಕ ಕೇಳವ್ವ, ನಮ್ಮೆಲ್ಲರ ಕದನವ
ನನ್ನ ಎದೆಮೇಲೆ
ನಾ ಧರಿಸಿದ ದಾರ
ನಾ ಆರಾಧಿಸಿದ ಹರ
ನಿನ್ನ ಮುಂದೆಯೇ ಕಾದುವರು

ಅಕ್ಕ ಪೇಳವ್ವ
ನಿನ್ನ ಕೈ ಕಾಲ
ಅತ್ತಿತ್ತ ಎಳೆವರೇ
ಅದು ನನ್ನದು
ಇದು ನಿನ್ನದು
ಛಲದ ಕತ್ತಿಯನೆ
ಮಸೆದು ಕತ್ತರಿಸಿದರೆ
ನೂರು ಚೂರು
ಮಾಡಿಹರೆ ನಿನ್ನ
ನೀ ಮಡಿದರೆ
ಇನ್ನೇನು ಉಳಿದಿದೆ

ಅಕ್ಕ ಏಳವ್ವ
ನಮ್ಮೆಲ್ಲರ ಎಬ್ಬಿಸವ್ವ
ಇವರೆಲ್ಲ ನಿನ್ನ ಹೆಳವಿಯ
ಮಾಡುವ ಮುನ್ನವೇ
ನಮ್ಮೆಲ್ಲರ ಕಪಾಳಕ್ಕೆ
ಬಾರಿಸವ್ವ ಜೋರು ಮಾಡುತ್ತಾ
ನಮ್ಮೆಲ್ಲರ ತಲೆಗೆ
ಬುದ್ದಿಯ ಬರಸವ್ವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ