ಗುರುವಾರ, ಜೂನ್ 10, 2010

ಎಲ್ಲ ಬಲ್ಲ ಗೂಗಲ್ಲ

ಎಲ್ಲ ಬಲ್ಲ ಗೂಗಲ್ಲ
ಕೆ. ಆರ್. ಎಸ್. ಮೂರ್ತಿ

ಗೂಗಲ್ಲ! ನೀನೆಲ್ಲ ಬಲ್ಲ, ಇನ್ನುಳಿದಿದೇನೂ ಇಲ್ಲ
ಎಲ್ಲರೂ ನಿನ್ನ ಬಲ್ಲವರು ಅಲ್ಲವೇನೋ ಗೂಗಲ್ಲ!

ಆಗಲ್ಲ, ಸಿಗಲಿಲ್ಲ, ಹುಡುಕುವುದಿಲ್ಲ, ಎಂದೆಲ್ಲಾ
ತಡ ಎನ್ನುತ್ತಾ, ಕಾಯಿಸಿ ನೋಯಿಸುವುದಿಲ್ಲ

ಇದ್ದವರಿಗೂ, ಇಲ್ಲದವರಿಗೂ, ಬಲ್ಲಿದರಿಗೂ,
ಮಣ್ಣು, ಕಲ್ಲು ತುಂಬಿರುವ ನನ್ನಂಥ ದಡ್ದರಿಗೂ

ಬರಡು ಬುರುಡೆಯ ಮಂಕುತಿಮ್ಮ ಆದರೂ ನಾನು
ಪ್ರಚಂಡ ಪ್ರಪಂಚ ಜ್ಞಾನ ಗರಡಿ ರಕ್ಷೆಯಾಗುವೆ ನೀನು

ಉತ್ತರಗಳನು ಅರಿಯದೆ ಅರಿಸುವವರು ಅಪಾರ
ಅವರಿಗೆಲ್ಲ ಆಗುವೆ ಆಧಾರ, ವಿಶೇಷ ಜ್ಞಾನ ಕುಬೇರ

ಸಾಕು ಒಂದೆರಡು ಅಕ್ಷರದ ಪದ ಹೇಳಿದರೆ
ಸಾವಿರಗಟ್ಟಲೆ ಉತ್ತರವ ಒದರಿ ಬಿಡುವ ಧೀರ

ತುಸು ಕಾಸಿಲ್ಲದೆ ಕೇಳಿದೆಲ್ಲವ ಸಲ್ಲಿಸುವ ಮಲ್ಲ
ಕಲ್ಪತರು, ಕಾಮಧೇನುವೂ ನೀನೆಮಗೆ ಎಲ್ಲ

ಗೂಗಲ್ಲ, ಗೂಗಲ್ಲ, ಗೂಗಲ್ಲ, ಗೂಗಲ್ಲ, ಗೂಗಲ್ಲ
ಎನ್ನುತ್ತ ಪ್ರತಿ ಕ್ಷಣವೂ ಭಜನೆ ಮಾಡುವವರು ಎಲ್ಲ

ಗೋಗೊಲ್ಲನನೂ ಭಜನೆ ಮಾಡುವವರಿಗಿಂತ
ನಿನ್ನ ಗೊಗರೆಯುವವರೇ ಅತಿ ಹೆಚ್ಚು ಭಕ್ತರಂತೆ

ಆಮತ, ಈಮತ, ಆಜಾತಿ, ಈಜಾತಿ, ಆದರೇನು
ಆ ಊರು, ಈ ಊರು, ದೇಶ ಯಾವುದಾದರೇನು

ಆವಸ್ತು, ಈವಸ್ತು, ಅವತ್ತು, ಇವತ್ತು, ಆಹೊತ್ತು
ಕೇಳಿ ಕೇಳಿದವರಿಗೆಲ್ಲ ಅಭಯ ಹಸ್ತದ ತಥಾಸ್ತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ