ಶುಕ್ರವಾರ, ಜೂನ್ 18, 2010

ಸೊಸೆಯ ಮೋಹಕ್ಕೆ, ಅತ್ತೆಯ ಶಾಪ

ಸೊಸೆಯ ಮೋಹಕ್ಕೆ, ಅತ್ತೆಯ ಶಾಪ
ಕೆ. ಆರ್. ಎಸ್. ಮೂರ್ತಿ

ಅತ್ತೆ ಸೊಸೆಯರ ಕಲಹ ನನಗೆ ಶಾಪ
ಒಬ್ಬಳು ದುಡ್ಡು ಹಿಡಿದಿಟ್ಟು ಕೈ ಬಿಗಿಯಪ್ಪ

ಮತ್ತೊಬ್ಬಳು ಅತಿ ಜಾಣೆ, ವೀಣಾ ಪ್ರವೀಣೆ
ಸೊಸೆ ಎಲ್ಲೇ ಇದ್ದಲ್ಲಿ ಅತ್ತೆಮ್ಮ ಮಾತ್ರ ಕಾಣೆ

ಅತ್ತೆಗೆ ಮುದಿಗೋಪ, ಸೊಸೆಗೆ ಅತಿ ಹೆಮ್ಮೆ
ನನಗೆ ಮಾತ್ರ ಆದೂ, ಇದೂ ಎರಡೂ ಕಮ್ಮಿ

ಲಕುಮಿಗೆ ಸೊಕ್ಕು, ನನ್ನ ಕಡೆಗೆ ಬರುವುದುಂಟೇ!
ಹುಟ್ಟು ಪೆದ್ದನಿಗೆ ಸರಸತಿಯು ದಕ್ಕುವುದು ಉಂಟೆ

ಸೊಸೆಯ ಕಾಲು ಹಿಡಿದು ಅತ್ತು ಬೇಡಿಯೂ ಆಯಿತು:
"ಒಂದೇ ರಾಗದ ವರ ಸಾಕು ನೀನು ಕೊಟ್ಟರಾಯಿತು"

"ಸರಿಯಾಗಿ ಸರಿಗಮ ಸರಾಗದಲಿ ಹಾಡುವ ಹಂಬಲು"
"ಕೊಡೆ ಒಮ್ಮೆ ವೀಣೆಯನು ನನ್ನ ಬೆರಳಿಂದ ಮೀಟಲು"

ಅದಕ್ಕೆ ಮಧುರ ವಾಗ್ದೇವಿಯ ವಾದ ಏನು ಗೊತ್ತಾ?
"ಒಡಕು ಕಿವಿ, ಕಾಗೆಯ ಕಂಠ, ನಿನಗೇಕೆ ಸಂಗೀತ?"

ಅಸಮಾನ ಸುಂದರಿಯ ಚೆಲ್ಲಾಟದಲಿ ಒಲಿಸುವೆನೆಂದು
ಗುಂಡು ಬುರುಡೆಯ ಮುಟ್ಟುವ ಆಸೆ ಉಲ್ಬಣವಾಯಿತೆಂದು

ಅವಳ ಮುದಿ ಗಂಡನು ಎಂಟೂ ಕಣ್ಣು ಮುಚ್ಚಿರುವಾಗ
ನನ್ನ ಕೈ ಬೆರಳಿಂದ ಅವಳ ವೀಣೆಯ ಮೀಟುತಿರುವಾಗ

ಬಂದಳಪ್ಪಾ ಬಂದಳು ಧನ ಲಕ್ಷ್ಮಿ ಕೆಂಡ ಕಣ್ಣಿನಲ್ಲಿ ಸುಟ್ಟಳು
"ನಿನಗೆಂದೂ ಬಿಡಿಗಾಸೂ ಬರದಿರಲೆಂದು" ಶಾಪವ ಕೊಟ್ಟಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ