ಶುಕ್ರವಾರ, ಏಪ್ರಿಲ್ 30, 2010

ನಮ್ಮೆಲ್ಲರ ಆಸ್ತಿ

ನಮ್ಮೆಲ್ಲರ ಆಸ್ತಿ
ಕೆ. ಆರ್. ಎಸ್. ಮೂರ್ತಿ

ಅಪ್ಪನ ಅಪ್ಪನ ಅಪ್ಪನ ಅಪ್ಪನ ಅಪ್ಪನ,
ಅಮ್ಮನ ಅಮ್ಮನ ಅಮ್ಮನ ಅಮ್ಮನ ಅಮ್ಮನ,
ಅಪ್ಪನ ಅಮ್ಮನ ಅಪ್ಪನ ಅಮ್ಮನ ಅಪ್ಪನ,
ಅಮ್ಮನ ಅಪ್ಪನ ಅಮ್ಮನ ಅಪ್ಪನ ಅಮ್ಮನ
.......
.......
.......
ಅಮ್ಮನ ತಲೆಮಾರಿನ ಅಜ್ಜನ, ಅಜ್ಜಿಯ,
ಅಪ್ಪನ ತಲೆಮಾರಿನ ಅಜ್ಜಿಯ, ಅಜ್ಜನ,

ಕಣ್ಣು: ಬಣ್ಣ, ಕಣ್ಣಿನ ಬಣ್ಣ, ಕನ್ನಡಕ,
ಕೆನ್ನೆ: ತುಂಬುಗೆನ್ನೆ, ಕೆನ್ನೆಯ ಮೇಲಿನ ಮಚ್ಚೆ,
ಕಿವಿ: ಚುರುಕು ಕಿವಿ, ಕಿವುಡು, ಜಾಣ ಕುರುಡು ಕಿವಿ,
ಕೂದಲು: ದಟ್ಟಗೂದಲು, ಗುಂಗುರು, ಬೋಳತಲೆ,
ಮೂಗು: ಉದ್ದ ಮೂಗು, ಚೂಪು ಮೂಗು, ಸುಟ್ಟ ಮೂಗು,
ತುಟಿ: ದಪ್ಪ ತುಟಿ, ಸುಂದರ ತುಟಿ, ಕೆಂದುಟಿ,
ಬಾಯಿ: ದೊಡ್ಡ ಬಾಯಿ, ಬಚ್ಚಲು ಬಾಯಿ, ಮೂಗು ಬಾಯಿ,
ದೇಹ: ಕುಳ್ಳು, ನೀಳ, ಅಗಲ, ಬೊಜ್ಜು, ಕಟ್ಟು ಮುಟ್ಟು
ಮಿದುಳು: ಚುರುಕು, ನಿಧಾನ, ಆತುರ, ಚಾಣಕ್ಯತನ.

ಸಕಲ ಆಸ್ತಿ, ತಲೆಮಾರಿನ ಆಸ್ತಿ, ನಮ್ಮೆಲರಿಗೂ ಹಂಚಿಹೋಗಿದೆ;
ಒಬ್ಬೊಬ್ಬರಿಗೆ ಒಂದೋ, ಎರಡೋ, ಮೂರೋ, ನಾಲ್ಕೋ, ಎಷ್ಟು ಅನ್ನುವುದು
ನಾನು, ನನ್ನ ಅಕ್ಕಂದಿರು, ನನ್ನ ಅಣ್ಣಂದಿರು, ನನ್ನ ತಂಗಿಯರು, ನನ್ನ ತಮ್ಮಂದಿರು
ಎಲ್ಲರಿಗೂ ಭಾಗ, ಹುಟ್ಟಿನ ಭಾಗ್ಯ; ನಮ್ಮ ನಮ್ಮ ಭಾಗ್ಯಕ್ಕೆ ಅನುಸಾರ

ನಮ್ಮ ಭಾಗ್ಯ ಮಾತ್ರ ನಮ್ಮದು, ಸಿಕ್ಕಿದ್ದು ಲಾಭ, ಇಲ್ಲದ್ದು ನಮ್ಮದಲ್ಲ
ಬಂದದ್ದೆಲ್ಲಾ ಬರಲಿ, ದೊರಕಿದ್ದದ್ದೆಲ್ಲಾ ನಮ್ಮ ಬತ್ತಳಿಕೆಯಲಿ ಇರಲಿ

ನಮ್ಮ ತಲೆಮಾರಿನಲ್ಲಿ, ನಮ್ಮ ವಂಶದಲ್ಲೇ ಯಾರೂ ಸಾಯುವುದಿಲ್ಲ.
ಅವರೆಲ್ಲ ಅಮರರು, ನಾವೆಲ್ಲಾ ಅಮರರು, ಚಿರಂಜೀವಿಗಳು
ಸತ್ತದ್ದೆಲ್ಲಾ ನಾಟಕವಿರಬೇಕು; ಮತ್ತೆ ಹುಟ್ಟಿಬರುವ ನೆವ ಅಷ್ಟೆ!

ಅದಕ್ಕೆ ಹೆಸರು ಸಾವಿರಾರು: ಜೀನ್ಸು, ಜೀವ ಸಂಕೇತ, ಪುನರ್ಜನ್ಮ, ಜೀವ ಸಾಫ಼್ಟ್ ವೇರು.
ಜನ್ಮ ಜಾತಕವೆಂದರೆ ಏನು ಹೇಳಿ ನೋಡೋಣ?
ಯಾವಾಗ, ಯಾವ ಗಳಿಗೆಯಲ್ಲಿ ಹುಟ್ಟಿದ್ದು ಮುಖ್ಯವಲ್ಲ;
ಗ್ರಹ, ನಕ್ಷತ್ರಗಳು ಯಾವ ಲೆಕ್ಕಕ್ಕೂ ಪ್ರಯೋಜನವಿಲ್ಲ.
ಏನು ಆಸ್ತಿ ಪಡೆದುಕೊಂಡು ಹುಟ್ಟಿದ್ದು ನಾವು? ಯಾವ ಪೂರ್ವಿಕರ ಆಸ್ತಿ?
ಎಷ್ಟು, ಎಷ್ಟು? ಏನು, ಏನು? ಅದೇ ಹುಟ್ಟಿನ ಜಾತಕ ಫಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ