ಸೋಮವಾರ, ಏಪ್ರಿಲ್ 5, 2010

ಸಾರ್, ಸಾರ್

ಸಾರ್, ಸಾರ್
ಕೆ. ಆರ್. ಎಸ್. ಮೂರ್ತಿ


ಸಾರ್, ಸಾರ್
ಬನ್ನಿ ಒಳ್ಗೆ ಸಾರ್

ಏನ್ರೀ ಇವತ್ತಿನ ಮೆನ್ಯು?

ಸಾರ್ ಸಾರ್

ಏನ್ರೀ, ಆಗ್ಲೆ ಹೇಳಿದ್ರಲ್ಲ ಸಾರ್, ಸಾರ್ ಅಂತ

ಇಲ್ಲ ಸಾರ್. ಇವತ್ತಿನ ಮೆನ್ಯು ಸಾರ್ ಸಾರ್

ಹಾಗಂದ್ರೆ ಏನ್ರೀ? ನೀವು ಹೇಳೋದು ಅರ್ಥ ಆಗ್ತಾ ಇಲ್ಲ!

ನಮ್ದು ಸಾರ್ ಹೋಟ್ಲು ಸಾರ್.
ನಾವು ಮಾಡೊದು ಬರೀ ಸಾರ್

ಬರೀ ಸಾರ್ ಒಂದೇ ಮಾಡಿದ್ರೆ, ಹೇಗ್ರೀ ಆಗತ್ತೆ?

ಇಲ್ಲ ಸಾರ್. ನಾವು ಎಲ್ಲಾ ತರಹ ಸಾರ್ ಮಾಡ್ತೀವಿ ಸಾರ್.

ಎಲ್ಲಾ ತರಹ ಅಂದ್ರೆ ಏನ್ರೀ? ಪ್ರಪಂಚದಲ್ಲಿ ಇರೋದು ಒಂದೇ ತರಹ ಸಾರ್ ಅಲ್ವೇನ್ರೀ?

ಅಲ್ಲ, ಅಲ್ಲ ಸಾರ್

ಹಾಗೆ ತುಂಬ ಸತಿ "ಅಲ್ಲ ಅಲ್ಲ" ಅನ್ನಬೇಡ್ರಿ. ನಾವು ಕಟ್ಟು ನಿಟ್ಟು ಹಿಂದುಗಳು
ನಿಮ್ಮನ್ನ ನೋಡಿದ್ರೆ ಮಾಧ್ವರ ತರಹ ಕಾಣ್ತೀರಿ, ಮುದ್ರೆ ಮೈಮೇಲೆಲ್ಲ ಹಾಕ್ಕೊಂಡು!
"ಅಲ್ಲ ಅಲ್ಲ" ಅನ್ನೋದು ನಿಲ್ಲಿಸ್ರಿ ಸಾಕು

ಆಯ್ತು ಮಾರಾಯ್ರೆ! ನಿಮ್ಮನ್ನ ನೋಡಿದ್ರೆ ನೀವು ಅಯ್ಯಂಗಾರ್ ತರಹ ಕಾಣಿಸ್ತೀರಿ
ನಿಮ್ಮ ನಾಮ ತುಂಬ ಚೆನ್ನಾಗಿದೆ, ಸಾರ್.

ನಿಮ್ಮ ಸಾರಿನ ಮೆನ್ಯು ಪೂರ್ತಿ ಹೇಳ್ರಿ

ಈ ಕಡೆ, ನಿಮ್ಮಂಥವ್ರಿಗೆ, ನಮ್ಮಂಥವ್ರಿಗೆ. ಅಂದ್ರೆ ನಾಮ, ಮುದ್ರೆ, ವಿಭೂತಿ ಹಾಕ್ಕೊಳೋರಿಗೆ

ಸರಿ ಅರ್ಥವಾಯ್ತು. ಮುಂದೆ ಹೇಳಿ.

ಇವತ್ತಿನ ಮೆನ್ಯು, ಯಾವತ್ತಿನ ಮೆನ್ಯು ಎಲ್ಲಾ ಒಂದೇ ಸಾರ್.
ಬೇರೆ ಬೇರೆ ತರಹ ಸಾರ್ ಸಾರ್.
ತಿಳಿ ಸಾರ್, ಮೈಸೂರ್ ಸಾರ್,
ಮದ್ರಾಸ್ ಸಾರ್, ಹೂರಣದ ಸಾರ್,
ತರಕಾರಿ ಸಾರ್, ಬೇರೆ ಬೇರೆ ತರಕಾರಿ ಸಾರ್
ಬರೀ ಟೊಮೋಟ ಸಾರ್
ಹುಣಿಸೇ ಸಾರ್, ಮೆಣಸಿನ ಸಾರ್, ಸಾರ್.

ನೀವು ತರ, ತರ ಸಾರ್ ಹೇಳೋದು ನೋಡಿದ್ರೆ,
ಬಾಯಲ್ಲಿ ನೀರೂರತ್ತೆ ಮಾರಾಯ್ರೆ!

ಇನ್ನೇನು ತರಹ ತರಕಾರಿ ಹಾಕಬಹುದು ಸಾರಿಗೆ?

ನಿಮ್ಗೇನು ತರಕಾರಿ ಬೇಕೋ ಕೇಳಿ ಸಾರಿನಲ್ಲಿ, ಸಾರ್
ನಿಮಗೆ ಸ್ಪೆಶಲ್ ಮಾಡಿ ಹಾಕ್ತೀನಿ

ಏನ್ರೀ, ಟೊಮೋಟ ಹಾಕದ್ರೆ ಪರವಾಗಿಲ್ಲ.
ಬೇರೆ ತರಕಾರಿ ಹಾಕಿದ್ರೆ ಹುಳಿ, ಸಾಂಬಾರುಗಳು ಆಗತ್ವೆ ಅಲ್ವೇನ್ರೀ?

ನೀವು ಹೇಳಿದ್ದು ಸರಿ ಸಾರ್. ಬೇರೆ ಅವರು, ಹುಳೀಗೂ, ಸಾಂಬಾರಿಗೂ "ಸಾರ್" ಅಂತಾನೇ ಅಂತಾರೆ ಸಾರ್.

ಈಗ ಗೊತ್ತಾಯ್ತು!

ಯಾರಿಗೂ ಬೇಜಾರು ಮಾಡಿಸಬಾರದು ಅಂತ ಎಲ್ಲದಕ್ಕೂ ನಾವುಗಳೂ "ಸಾರ್" ಅಂತನೇ ಅಂತೀವಿ

ಸರಿ. ಅಷ್ಟೇ ತಾನೇ ನಿಮ್ಮ ಮೆನ್ಯು?

ಇನ್ನೂ ಇದೆ ಸಾರ್. ಇವೆಲ್ಲ ನಮಗಾಯ್ತು, ನಿಮಗಾಯ್ತು
ನೀವು ಹಿಂದಗಡೆ ಬಾಗಿಲಿನಿಂದ ಬಂದರೆ, ಇನ್ನೊಂದು ಸೆಕ್ಷನ್ ಇದೆ, ಸಾರ್.

ಅದ್ಯಾವುದು ರೀ? ಬೇರೆ ಹೋಟಲ್ಲೇ?

ಅಲ್ಲ, ಸಾರ್. ಸಾರಿ ಸಾರ್: "ಅಲ್ಲ" ಅಂತ ಮರೆತು ಅಂದುಬಿಟ್ಟೆ ಸಾರ್, ಕ್ಷಮಿಸಿ ಸಾರ್.
ಇಲ್ಲೀ ಅಡಿಗೆ ನಮ್ಗೆ, ನಿಮ್ಗೆ ಆದ್ರೆ, ಅಲ್ಲಿ ಅಡಿಗೆ ಬೇರೇವ್ರಿಗೆ ಸಾರ್.

ಅರ್ಥ ಆಯ್ತು. ಆ ಹೋಟಲ್ಲಿನ ಸೆಕ್ಷನ್ನಲ್ಲಿ ಬೇರೆ ತರಹದ್ದು ಹಾಕತೀವಿ
ಅಲ್ಲಿ ಕೋಳಿ ಸಾರ್, ಮೀನ್ ಸಾರ್..... ಹಾಗೆ ಬೇರೆ ತರಹದ್ದೆಲ್ಲ ಹಾಕಿ ಸಾರ್ ಮಾಡ್ತೀವಿ ಸಾರ್.

ನೀವೇ ಮಾಡ್ತೀರೆನ್ರಿ ಅದೂ ಕೂಡ?

ಇಲ್ಲ ಸಾರ್. ಸುಮ್ಮನೆ ತಮಾಷೆ ಮಾಡಬೇಡಿ ಸಾರ್.
ಅದಕ್ಕೇ ಬೇರೆ ಅಡುಗೆ ಮನೆ ಇದೆ ಸಾರ್.
ಬೇರೆ ಅಡಿಗೆಯವ್ರೂ ಇದಾರೆ ಸಾರ್.

ಇನ್ನು ಮುಂದೆ ವರ್ಣನೆಯೆಲ್ಲಾ ಮಾಡಬೇಡಿ.
ಆಗಿರೋ ಹಸಿವೂ ಹೋಗಿ ಬಿಡತ್ತೆ.

ನನಗೆ ಮೈಸೂರ್ ಸಾರೇ ಸಾಕು
ಬೇಗ ತಂದು ಕೊಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ