ಶನಿವಾರ, ಏಪ್ರಿಲ್ 10, 2010

ಇಲ್ಲಿ-ಅಲ್ಲಿ ಒಂದೊಂದು ಕಾಲು

ಇಲ್ಲಿ-ಅಲ್ಲಿ ಒಂದೊಂದು ಕಾಲು
ಕೆ. ಆರ್. ಎಸ್. ಮೂರ್ತಿ

ಪ್ರಜಾ ಪೌರತ್ವದ ಹೆಮ್ಮೆ, ಒಂದಲ್ಲ, ಎರಡುಕ ದೇಶದ್ದು
ದೇಶ ಬಿಟ್ಟು, ಹಾರಿಬಂದು ಪರದೇಶ ತಲುಪಿದ್ದಾಯ್ತು
ನೆಲೆಸಿದ್ದೂ ಆಯ್ತು, ಮನೆ, ಮಠ ಕಟ್ಟೂ ಆಗಿಹೋಯ್ತು

ಮತ್ತೇನೋ ಕೊರತೆ:
ಆಲ್ಲಿ ಇಲ್ಲ, ಇಲ್ಲಿಯೇ ಎಲ್ಲ, ಇದೆಲ್ಲ ಸಲ್ಲದು.

ಇದೂ ಇರಲಿ, ಅದೂ ಇರಲಿ, ಒಂದೊಂದು ಕಾಲು ಅಲಿ, ಇಲ್ಲಿ.
ಇಲ್ಲಿದ್ದಾಗ ಅಲ್ಲಿ ಮನ, ಅಲ್ಲಿದ್ದಾಗ ಮನವೆಲ್ಲ ಇಲ್ಲಿ
ಕಟ್ಟಿಯೂ ಆಯ್ತು ಇಲ್ಲೊಂದು ಬಂಗಲೆ, ಅಲ್ಲೂ ಇರೆಲೆಂದು ಮನೆ
ಇಲ್ಲಿಂದ ಅಲ್ಲಿಗೆ ಹೋಗುವಾಗ, ಬೇಕು ತೆರೆದ ಬಾಗಿಲು
ಇಲ್ಲಿಗೆ ಮರಳಿ ಬಂದಾಗ ಕೂಡ, ತೆರೆದಿರಲಿ ಬಾಗಿಲು.

ಆಗ ಬಂದಾಗ ಅಪ್ಪ-ಅಮ್ಮ ಅಲ್ಲೇ; ಬಾಳು ಮಾತ್ರ ಇಲ್ಲೇ.
ಮಕ್ಕಳು ಇಲ್ಲೇ; ಮುದಿತನ ಬಂದಾಗ ಗಂಡ-ಹೆಂಡತಿ ಅಲ್ಲೇ.

ಇಲ್ಲೂ ಬೇಕು, ಅಲ್ಲೂ ಬೇಕು, ಬೆಲ್ಲದ ಬಾಳು ಅಲ್ಲಿ-ಇಲ್ಲಿರಬೇಕು
ಅಲ್ಲಿದ್ದಾಗ ಇಲ್ಲಿನ ಮಕ್ಕಳ ಚಿಂತೆ; ಮಕ್ಕಳು ನಿಮ್ಮ ಮರೆತಿರಬೇಕು!

ಕಾಲೆತ್ತುವ ಕಾಲಕ್ಕೆ, ಅಲ್ಲಿಗೆ ನಿಮ್ಮ ಎಳೆದೊಯ್ಯುವ ಕಾಲನೂ ಬಂದಾನು
ಇಂದಲ್ಲ, ನಾಳೆ; ತಳ್ಳಿದರೆ, ಮುಂದಿನ ವಾರ, ತಿಂಗಳು ಎಳೆವರು ನಿಮ್ಮನು

ವರುಷ-ವರುಷಕೂ ತಿಂಗಳುಗಳು ವಾರಗಳು, ವಾರಗಳು ದಿನಗಳು, ನಿಮಿಷಗಳು
ರೆಡಿಯಾಯಿತೇ ನಿಮ್ಮ ಸೂಟ್ಕೇಸು? ನಿಮಗೆ ಬೇಕಿಲ್ಲ ಟಿಕೆಟ್ಟು, ಎಲ್ಲ ಪುಕ್ಕಟ್ಟು!

ನಾಕವೋ, ನರಕವೋ ಸೇರುವುದು ಖಾತರಿ; ಎಲ್ಲಿಗೆ ಹೋಗುವಿರಿ ಯಾರಿಗೆ ಗೊತ್ತು!
ಹೊರಡಿ ಒಂದು ಕಾಲಿಲ್ಲಿ, ಇನ್ನೊಂದು ಕಾಲಲ್ಲಿ ಊರುವ ಹಂಬಲವನೆಲ್ಲ ಇಲ್ಲೇ ಬಿಟ್ಟು

ಇದು ಮಾತ್ರ ಒನ್ ವೇ ಟಿಕೆಟ್ಟು, ನಿಮಗೆಂದೇ ಬಿಟ್ಟಿ ಸ್ಪೆಷಲ್ ಚಾರ್ಟರ್ ಪ್ರಯಾಣ
ಮಾಡಿ ಸವಾರಿ, ಮುಖ ಹಿಂದಗೆ ಮಾಡಿ, ಕಣ್ಮುಚ್ಚಿ ಭಯಂಕರ ಎಮ್ಮೆ ಕೋಣನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ