ಸೋಮವಾರ, ಏಪ್ರಿಲ್ 5, 2010

ಅಕ್ಷರ ಕೈಚಳಕ

ಅಕ್ಷರ ಕೈಚಳಕ
ಕೆ. ಆರ್. ಎಸ್. ಮೂರ್ತಿ

ಅಂಗೈಯಲ್ಲಿರುವುದು ಐವತ್ತೆರಡು
ಅಂದ, ಅಂದ ಹಾಗೇ,
ನಿಮ್ಮ ಕಣ್ಣ ಮುಂದೆಯೇ,
ಮಾಡುವೆನು ಕೈಚಳಕ

ಮಿಂಚಿನ ವೇಗದ ಕೈಚಳಕ
ತನು, ಮನಕೆಲ್ಲ ಮಾಡಿಸುವೆ ಜಳಕ
ನೀರು, ಸೋಪಿಲ್ಲದ ಸೊಗಸಿನ ಜಳಕ
ತಲೆಯೊಳಗೆ, ಮೈಯೊಳಗೆ,
ಮೇಲೆ, ಕೆಳಗೆ, ತಳದ ಒಳಗೆಲ್ಲ
ಆವಾಹನೆ, ನಿಮಗೆಲ್ಲ ಪರಿ, ಪರಿ ಪುಳಕ

ನೆತ್ತಿಗೆ ಏರಿಸುವೆ, ಮೆತ್ತಗೆ ಮೈನರೆಸುವೆ,
ಎತ್ತರ, ಎತ್ತರಕೆ ಹಾರಿಸುವೆ,
ಮತ್ತೆ, ಮತ್ತೆ ಮೈಮರೆಸುವೆ,
ಮನದ ಮೈಲಿಗೆ ಕಳೆಸುವೆ.

ಚಳಕ ನನ್ನದು ಬೆಳಕಿನ ವೇಗ
ಬೇಕಾಗಿದ್ದಾರೆ ಲೇಖನಿಗಾರರು ಇಂದೇ
ಬೆರಳಚ್ಚುಗಾರ ಪ್ರವೀಣೆಯರು.

ಆನೆ ತಲೆಯಿದ್ದವರು ಅರ್ಜಿ ಹಾಕುವ ಅವಶ್ಯಕತೆ ಇಲ್ಲ,
ಗುಂಡೂರಾಯನು ಬಲು ನಿಧಾನಿ.
ನನಗೆ ಬೇಕು ಸರಸತಿ, ಪರಸತಿ
ಬಾಬೇಗ ವಾಗ್ದೇವಿ,
ಬಿಡುಬೇಗ ಮುದುಕ ಬೊಮ್ಮನ
ಉಟ್ಟ ಬಟ್ಟೆಯಲೇ ಬಂದರೂ ಸಾಕು
ಹುಟ್ಟ ಬಟ್ಟೆಯಲೇ ನಿಂದರೆ ಬೇಕು
ಬಾಬೇಗ ಮೀಟು ನನ್ನ ವೀಣೆಯ
ಕೊಡುವೆನು ಕೈಚಳಕದ ಆಣೆಯ
ಕೈಕುಣಿತದ ಕೈಚಳಕವು
ದಣಿವಿಲ್ಲದೆ ತಣಿಸುವುದು
ನಿನ್ನ ಮೇಲೆ, ಒಳಗೆ, ಕೆಳಗೆ ಎಲ್ಲೆಲ್ಲೂ.
ಕೇಸರಿಯ ಕೆನ್ನೆ ನಿನ್ನದು ಕೆಂಪೇರಿ
ಸೂಕ್ಷ್ಮಾಂಗಿ ಮೃದಂಗಗಳು ಕಂಪಿಸಿ
ನಾಟ್ಯ ಕಟಿಯು ಚಿಮ್ಮುತಲಿರಲು
ಹೊಮ್ಮುವುದು ಅತಿ ಆನಂದದ ಕೇಕೆಯು
ಮಧುರ ವಾಣಿಯಲ್ಲವೇ ನೀನು
ನಾನಾಗ ನಿನ್ನ ಅಕ್ಷರ ಬ್ರಹ್ಮ.

ಅಕ್ಷರದ ಭಕ್ಷ್ಯದ ಮೃಷ್ಟಾನ್ನ,
ರಸಿಕರಿಗೆ ನವರಸದ ರಸದೌತಣ,
ಸಹೃದಯಿಗಳಿಗೆ ಸಿಹಿ ಕ್ಷೀರದ ಪಾಯಸ,
ಉಂಡಷ್ಟೂ ಉಣಬೇಕು ಇನ್ನೊಮ್ಮೆ, ಮತ್ತೊಮ್ಮೆ,
ಓದುಗರಿಗೆ ಔತಣವ ಬಡಿಸುವೆನು
ನನ್ನ ತುಟಿಯಿಂದ ನಿಮ್ಮ ತುಟಿಗೆ
ಮುದ್ದು ಮಾಡಿ, ಮುತ್ತು ಕೊಟ್ಟು
ತಿನ್ನಿಸುವೆ ಬನ್ನಿ ತೊಡೆಯ ಮೇಲೆ
ಆಗಸದಲಿ ಅಕ್ಷರದ ತಾರಾ ನಕ್ಷೆ,
ಪಕ್ಷ ಪಾತವೇ ಇಲ್ಲದೆ ವೀಕ್ಷಿಸಿರಿ
ಅಂತರಂಗದ ಅಕ್ಷಿಯಲಿ ಸಾಕ್ಷಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ