ಶನಿವಾರ, ಅಕ್ಟೋಬರ್ 30, 2010

ಕನ್ನಡ ಬರತ್ತಾ ನಿಂಗೆ?

ಕನ್ನಡ ಬರತ್ತಾ ನಿಂಗೆ?
ಕೆ. ಆರ್. ಎಸ್. ಮೂರ್ತಿ


ದ್ಯಾವ್ರಪ್ಪ! ನಾನ್ಯಾವತ್ತೂ ನಿಂಗೆ ಒಂದೂ ಕೂಡ ಪ್ರಸ್ನೇನೇ ಕೇಳಿಲ್ಲಾ
ಅದ್ಯಾಕೋ, ನನ್ ಪೆದ್ದು ತಲೆ ಒಳ್ಗೆ ಒಂದು ದೊಡ್ಡ ಅನುಮಾನ ಇದ್ಯಲ್ಲಾ

ನಿನಗೆ ಗೊತ್ತಲ್ವಾ, ನಾನ್ಯಾವತ್ತೂ ನಿನ್ನತ್ರ ಕನ್ನಡ್ ದಲ್ಲೇ ಮಾತಾಡ್ತೀನಲ್ವಾ?
ನನೀಗ್ ಬರೋದು ಒಂದೇ ಬಾಸೆ ಕಣಪ್ಪ, ಮುತ್ತಿನಂಥ ಭಾಸೆ ಅಲ್ವಾ?

ನಾನೊಬ್ನೇ ಅಲ್ಲ, ನಮ್ ಕನ್ನಡ್ ಜನಗೋಳ್ ಎಲ್ಲಾರೂ ನಿನ್ನ ಬೇಡಿ ಕೊಳ್ಳೋದು
ತಮಗೆ ಕೆಟ್ಟ ಸಮ್ಯ ಬನ್ದಾಗೆಲ್ಲಾ, ತಮ್ಮ ತಾಪತ್ರಯನೆಲ್ಲಾ ತೋಡಿಕೊಳ್ಳೋದು

ತಮ್ಗೆ ಸಾನೆ ಕುಸೀ ಅದಾಗೆಲ್ಲಾ ನಿನ್ಗೆ ಇಡೀ ತೆಂಗಿನ ಕಾಯಿ ಅಲ್ವಾ ಒಡೆಯೋದು
ತಮ್ಮ ಎಂಡಿರ್ಗೆ ಕೂಸು ಅದಾಗ ನಿನ್ನ ಎಸ್ರಲ್ಲೇ ಅಲ್ವಾ ಸಂತರ್ಪಣೆ ಮಾಡೊದು?

ನೋಡು ನಾನಾಗ್ಲೇ ವಟ ವಟಾಂತ ನಿನ್ನತ್ರ ಏನೇನೋ ಮಾತಾಡ್ತಾ ಇದ್ದೀನಿ ಆಗ್ಲೇ
ಆದ್ರೆ ನನ್ನ ಅನುಮಾನ ಮಾತ್ರ ಇನ್ನೂ ಐತೆ: ನಿನಗೆ ಕನ್ನಡ ಅರ್ತ ಆಗ್ತದಲ್ವೇ?

ಪುರಂದರ ದಾಸ್ರು, ಕನಕ ದಾಸ್ರೂ, ಆ ದಾಸ್ರೂ, ಈ ದಾಸ್ರೂ, ಆಡು ಬರದು ಆಡದ್ರಲ್ಲ
ನಮ್ಮ ಬಸವಣ್ಣ, ನಮ್ಮ ಅಕ್ಕ ಮಹಾದೇವಿ, ಸರಣರೂ, ಸಂತರೂ, ಸ್ವಾಮಿಗೋಳೆಲ್ಲ

ದಿನಾನೂ, ಮೂರೊತ್ತೂ, ನಿನ್ನ ಬಜನೆ ಮಾಡದ್ರಲ್ಲಾ! ನಿನಗೆ ಕನ್ನಡ ಬರತ್ತೋ?
ಕೋಟಿ, ಕೋಟಿ ಕನ್ನಡ್ ದೋರು ಬೆಳಿಗ್ಗೆ-ರಾತ್ರಿ ನಿನ್ನ ಕೂಗಿದ್ದು, ಕರೆದಿದ್ದೂ ಕೇಳಿಸ್ತೋ?

ಯಾವಗ್ಲೂ ನಾನೇ ಕಣಯ್ಯಾ ಮಾತಾಡೊದು, ನೀನು ಮಾತ್ರ ಮಾತೇ ಬರಲ್ವೋ ಅನ್ನೋ ಆಗೆ
ಸುಮ್ಕೇನೇ ಕೂತಿರ್ತಿಯಲ್ಲಾ, ನನ್ಗೆ ಅನುಮಾನಾ ಜಾಸ್ತಿ ಆಗೈತೇ, ನೀನು ಇಲ್ದೇನೇ ಇರೋ ಆಗೆ

ನಟಿಸ್ತಾ ಇದೆಯೋ? ನೀನಿರೋದೆಲ್ಲ ಸುಳ್ಳು ಆದ್ರೆ, ನಾನೊಬ್ನೆ ಅಲ್ಲಾ ಬೆಪ್ಪು ತಕ್ಕಡಿ ಕಣೊ
ಇದೆಲ್ಲಾ ನಮ್ಮ ಕಕಲಾತಿ, ಇಲ್ಲದೇ ಇರೋ ದ್ಯಾವ್ರನ್ನ ನಾವೇ ಉಟ್ಟಿಸಿ ಕೈತಟ್ಟಿತೀವಿ ಕಣೊ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ