ಗುರುವಾರ, ಆಗಸ್ಟ್ 26, 2010

ಪಾಪದ ಜನ ನೀವು; ಪಾಪಕರ್ಮದ ಫಲ

ಪಾಪದ ಜನ ನೀವು; ಪಾಪಕರ್ಮದ ಫಲ
ಕೆ. ಆರ್. ಎಸ್. ಮೂರ್ತಿ

ಸುಳ್ಳರೋ? ಕಳ್ಳರೋ? ಮಳ್ಳರೋ? ಜೊಳ್ಳರೋ; ಗೆದ್ದವರೋ? ಪೆದ್ದರೋ? ಕದ್ದವರೋ? ಮಂದ ಬುದ್ದಿಯವರೋ?
ಮೊಸಗಾರರೋ? ಹೇಸಿಗೆಯ ಮನದವರೋ? ಹಾಸಿಗೆಯ ವೀರರೋ? ಇತರರ ಕಾಸಿಗೆ ಕೈ ಚಾಚುವರೋ?

ಲಿಂಗ ವಿಕಲರೋ? ಮಂಗನ ಮನದವರೋ? ಅಂಗನೆಯರ ಆಸೆ ಬುರುಕರೋ? ಮೋಸದ ಬಲೆ ಎಸೆಯುವರೋ?
ಸಾಸಿವೆಯ ಕಾಳಿನ ಮೆದುಳಿನವರೋ? ಎಲ್ಲರ ತಲೆಗಳನು ಬೋಳಿಸುವರೋ? ಟೋಪಿಯ ಮಾರಾಟಗಾರರೋ?

ನೀವಲ್ಲತಾನೆ? ನಾನಂತೂ ಅಲ್ಲ, ನಿಮಗೆ ಗೊತ್ತೇ ಯಾರಾದರೂ? ಹಾಗೋ? ನನಗೂ ಗೊತ್ತಪ್ಪ ನೂರಾರು ಜನ.
ನೂರು ಜನರಲಿ ಅವರೇ ಹೆಚ್ಚು; ನರಿ, ಕುನ್ನಿ, ಹುಚ್ಚು ನಾಯಿಯ ಗೋತ್ರದವರು; ಅವರದಂತೂ ಬಲು ಗಿಲೀಟು ತನ

ನಿಮಗೆ ಗೊತ್ತಿಲ್ಲವೇನೋ, ನಿಮ್ಮ ಮುಖದ ಮೇಲೆ, ನೀವು ಪಾಪದ ಜನರೆಂದು ಬರೆದು ಕೊಂಡಿರಬಹುದು ಅಲ್ಲವೇ?
ಅವರಿಗೆ ಕಾಣಿಸಿಬಿಡುವುದು, ನೀವು ಆರು ಮೈಲು ದೂರದಲ್ಲಿ ಬರುವಾಗಲೇ; ಅವರೆಲ್ಲ ದೂರ ದೃಷ್ಟಿಯ ಓದುಗರಲ್ಲವೇ!

ಹಾವಿನ ನಾಲಿಗೆಯಲ್ಲಿ ಹೊರಡುವುದು ದೊಡ್ಡತನದ ಅಡ್ಡ ಹೆಸರುಗಳೇ, ಮೈ ಮೇಲೆಲ್ಲಾ ಬಿರುದು ಬಾವಲಿಗಳುಗಳ ಆಭರಣ
ನಿಮಗೆ ಮಾತ್ರ ಹುಟ್ಟು ಕುರುಡು; ಪರಮ ಸಾಧುಗಳಾರು, ಕೊರಮ ಖೈದಿಗಳಾರು ಒಬ್ಬರಿಂದೊಬ್ಬರನು ಹೇಳಿ ನೋಡೋಣ

ನೋಡಿದರೆ ಮಾತ್ರ ನಮ್ಮ, ನಿಮ್ಮ ಹಾಗೆಯೇ ಕಾಣುವರು; ಬಾಯಿ ಬಿಟ್ಟು ಹಾಡಿದರೆ ಆಗ ಚೆನ್ನಾಗಿ ಕೇಳುವುದು ಕರ್ಕಶ ನಾದ
ಬಲೆಗೆ ಬಿದ್ದವರ ಮುಖಕ್ಕೆ ಮಂಕು ವಿಭೂತಿ ಲೇಪನ; ಜೊತೆಗೆ ಏಳೆಯುವರು ದೊಡ್ಡ ಪಂಗನಾಮ; ನಿಮಗೆ ಆಗ ಅದೇ ಆನಂದ

ಕೈ ಬಿಚ್ಚಿ ಸ್ವಲ್ಪ; ನಿಮ್ಮ ಅಂಗೈ ಬರಹವನು ಬಿಡಿಸಿ ನೋಡುವೆನು. ನಿಮಗೆ ಈ ಜನ್ಮದಲ್ಲೇ ಸ್ವಲ್ಪವಾದರೂ ಬರಬಹುದೇ ಬುಧ್ಧಿ?
ಶನಿ, ರಾಹು, ಕೇತುಗಳು ಹಾಕಿರುವರು ಠಿಕಾಣಿ, ಟೆಂಟು, ಇನ್ನೂ ಎಂಟು ಜನಮಕೂ. ಬೇಗ ಗಂಗೆಯಲಿ ನಿಮ್ಮ ಮೈಯನ್ನು ಅದ್ದಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ