ಗುರುವಾರ, ಆಗಸ್ಟ್ 26, 2010

ಆಗ

ಆಗ
ಕೆ, ಆರ್. ಎಸ್. ಮೂರ್ತಿ

ನಾನಿರಲಿಲ್ಲ, ನೀವೂ ಇರಲಿಲ್ಲ, ಅವರಿವರಲ್ಲದೆ, ಯಾರೂ ಇರಲೇ ಇಲ್ಲ;
ಅದಿರಲಿಲ್ಲ, ಇದಿರಲಿಲ್ಲ, ಈಗಿರುವುದಾವುದೂ, ಮತ್ಯಾವುದೂ ಇರಲಿಲ್ಲ;
'ಆಗ', 'ಈಗ', 'ಬೇಗ', 'ಯಾವಾಗ', 'ಗಳಿಗೆ' ಗಳಿಗೆ ಏನೂ ಅರ್ಥವೇ ಇರಲಿಲ್ಲ;

ಚುಕ್ಕೆ ಮಾತ್ರ, ಚಿಕ್ಕದಕ್ಕಿಂತ ಚಿಕ್ಕದು; ಅಕ್ಕ, ಪಕ್ಕ; ಎತ್ತರ, ವಿಸ್ತಾರ: ಆವುದಿರಲಿಲ್ಲ
ಉದ್ದ, ಅಗಲ, ಆಚೆ, ಈಚೆ, ಅಲ್ಲಿ, ಇಲ್ಲಿ, ಕಡೆಗಳೂ, ಖ, ಮೃ, ಭ ಗಳೂ ಇರಲೇ ಇಲ್ಲ.
ಬಿಂದುವೊಳಡಗಿತ್ತು ಅಜ ಬ್ರಹ್ಮ; ಆದರೂ, ಚಿಕ್ಕ ಚುಕ್ಕೆಯಾದರೂ ಇರಬೇಕಲ್ಲ!

ಕಾಲದ ಹಕ್ಕಿಗೆ ರೆಕ್ಕೆ, ಪುಕ್ಕ ಗಳು ಬೆಳೆದಿರಲಿಲ್ಲ; ಕಾಲವೆಂಬುದೇ ಇರಲಿಲ್ಲವಲ್ಲ!
ದಿಕ್ಕೇ ಇಲ್ಲದ ಹಕ್ಕಿಯಲ್ಲವೇ! ಕಾಲವು ಬಂಧನದಲ್ಲಿ ಚುಕ್ಕೆಗೆ ಅಧೀನವಾಗಿತ್ತಲ್ಲ!
ಹಾರಾಟವೆಂಬುದೇ ಗೊತ್ತಿಲ್ಲದಿದ್ದರೆ, ಚುಕ್ಕೆಯೊಳಗಿನದು ಎಂತಹ ಹಕ್ಕಿಯೂ ಅಲ್ಲವಲ್ಲ!

ಸೊನ್ನೆಯಿಂದ ಏನೂ ಬರುವ ಸಾಧ್ಯತೆ ಇಲ್ಲವಲ್ಲ! ಒಳಗೆ ಅನಂತ ಅಡಗುವುದು ಹೇಗೆ?
ಸೊನ್ನೆಯೊಳಗಿಂದ ಪೂರ್ಣತೆಯು ಹುಟ್ಟಿ, ಆಗಲೇ ಪೂರ್ಣವಾದುದು ಹಿಗ್ಗುವುದು ಹೇಗೆ?
ಏನಂತೀರಿ ನೀವೆಲ್ಲ? ಇಲ್ಲದ್ದರಿಂದ ಇರುವುದೆಲ್ಲ, ಬರುವುದೆಲ್ಲವೂ ಆಗುವುದು ಹೇಗೆ?

1 ಕಾಮೆಂಟ್‌:

  1. Dr. Murthy, This poem is a classic. I read it many times and enjoyed the power in the hidden meaning. It's coincidence that I was discussing this subject with my son. The topic was about electrons. Who asked these electrons to revolve around the nucleus? Who pushed them first and who decided the speed?

    ಪ್ರತ್ಯುತ್ತರಅಳಿಸಿ