ಸೋಮವಾರ, ಆಗಸ್ಟ್ 16, 2010

ಇದೆಂತಹ ಆಟ!

ಇದೆಂತಹ ಆಟ!
ಕೆ. ಆರ್. ಎಸ್. ಮೂರ್ತಿ

ಕಣ್ಣು ಮುಚ್ಚಾಲೆಯ ಗುಟ್ಟಿನ ಆಟವಿದ್ಯಾಕೋ
ಬಚ್ಚಿ ಕೊಂಡವನ ಹುಡುಕುವುದಿನ್ನು ಸಾಕೋ

ಆಡುವ ಮಕ್ಕಳು ನಮಗಂತೂ ಗೊತ್ತೇ ಇಲ್ಲ
ಅಜ್ಜಿಗಂತೂ ಕಿಂಚಿತ್ತೂ ಕಣ್ಣು ಕಾಣುವುದಿಲ್ಲ

ಬಚ್ಚಿ ಕಗ್ಗತ್ತಲೆಯಲ್ಲಿ ಎಲ್ಲೆಲ್ಲಿ ಅಡಗುವೆಯೋ
ಹೆಜ್ಜೆ ಗುರುತನ್ನೂ ಅಳಿಸಿ ಹೇಗೆ ಓಡಿದೆಯೋ

ಅತ್ತಿತ್ತ, ಮತ್ತೆ ಮತ್ತೆ ತಡಕಿ ಸಾಕಾಗಿದೆಯೋ
ಅತ್ತು, ಅತ್ತು, ಬಿಕ್ಕರಿಸಿ ಕೂಗಿಯಾಗಿದೆಯೋ

ನಾನೊಬ್ಬನೇನಲ್ಲ, ಎಲ್ಲರೂ ಹುಡುಕಿಯಾಯಿತು
ಕೋಟಿ ಕೋಟಿ ಜನ ಕಾಣದೇ ತೆರಳಿದುದಾಯಿತು

ಎಂತು ಹುಡುಕಿದರೂ ಸಿಗದೇ ಇದ್ದರೆಂತಹ ಆಟ
ನ್ಯಾಯವೆಲ್ಲವೂ ಮರೆತಿರುವ ಅಜ್ಜಿಗೆಂತಹ ಕಾಟ

ಬಾಬೇಗಲೇ! ಕಣ್ಣಲ್ಲಿ ಕಣ್ಣಿಟ್ಟು ಬಿಡುವ ಒಮ್ಮೆಯಾದರೂ
ನೀನು ನಿಜವೋ ನಿನ್ನಾಟ ಸರಿಯೋ ಕಡೆಗೆ ಇಂದಾದರೂ

ನಿನಗೇ ಬೇಕಿದ್ದರೆ ಬಾ; ನೀನೇ ಹುಡುಕಿ ಬಾ ಆತಂಕದಲಿ
ಮರೆಸಿ ಮಾಚಿ ಓಡಿ ಅಡಗುವೆ ಈಗಲೇ ಗುಟ್ಟಿನ ತಾಣದಲಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ