ನೆವ ನಿಮ್ಮ ಗುಟ್ಟು
ಕೆ. ಆರ್. ಎಸ್. ಮೂರ್ತಿ
ನೆವ, ನೆವ, ನೆವ; ನನ್ನ, ನಿಮ್ಮ, ಎಮ್ಮ, ಅವರವರ ನೆವಗಳೇ ಬೇರೆ
ನಾವು, ನೀವು ಮಾಡಿದ ಯೋಚನೆ, ಹಾಕಿದ ಯೋಜನೆ ಮಾತ್ರ ಬೇರೆ
ನಾವು ಹೇಳಿದ ಭಾವ, ಅದಕ್ಕಂತೆಯೇ ಹೆಣೆದ ನೆವದ ಕಾವ್ಯವೇ ಒಂದು
ನೀವು ಹಾಡುವ ರಾಗ ಸರಾಗ, ತಟ್ಟಿದ ತಾಳಗಳೇ ಬೇರೆ ಇರಬಹುದು
ನಮ್ಮ ನಮ್ಮ ಗುಟ್ಟುಗಳು ನಮ್ಮೊಳಗೇ ಮಾಳಿಗೆಯಲಿ ಹೇಗೇ ಬಚ್ಚಿಟ್ಟಿರಲಿ
ತಂತಮ್ಮ ಗುಟ್ಟು ತಮ್ಮ ಅಟ್ಟದ ಮ್ಯಾಲೆ ಅಡಗಿದಲ್ಲೇ ಬೆಚ್ಚಗೆ ಮಲಗಿರಲಿ
ಅಲ್ಪ ಸ್ವಲ್ಪ ಮಾಡಿದರೆ ನೆವದ ಸಾಲ, ಅಂದಾನು ಜವ ಹೋಗಲಿ ಪರವಾಗಿಲ್ಲ
ಕಲ್ಪನೆಯನ್ನೇ ಮೀರಿ ನಮ್ಮ ನೆವದ ಹವ್ಯಾಸವು, ಅಭ್ಯಾಸವೇ ಆಗಿ ಹೋದಾಗೆಲ್ಲ
ನೆವದ ಗುಟ್ಟು ಮಾತ್ರ, ನಿಮಗೇ ಗೊತ್ತಿಲ್ಲದೆ, ಹಾರಿ ಬೆನ್ನು ಏರಿ ಕುಣಿವ ಬೇತಾಳ
ನಿಮ್ಮ ಬಾಗಿಲು ತಟ್ಟಿ, ಕುಟ್ಟಿ, ಜವರಾಯ ಒಂದಲ್ಲ, ಒಂದು ದಿನ ಹಾಕತಾನ ತಾಳ
ನೆವ ಆಗೊಂದು; ಈಗೊಂದು, ನೆವ ಬೇಕಾದಾಗ ಬೇಕೇ ಬೇಕೆಂದು ಮಾಡಿದ ಸಾಲ
ನೆವಕ್ಕೊಂದು ಕಾಲ; ಕಾಲರಾಯನಿಗೆ ಗೊತ್ತು ಬಂದೇ ಬರುವುದು ತನ್ನದೇ ಆದ ಕಾಲ
ನಿಮ್ಮ ಮನಸ್ಸಿನಲ್ಲಿ ಖರೆ, ಅವನು ನಿಮ್ಮನ್ನು ಮಾತ್ರವೇ ಎಳೆದು ಕೊಂಡು ಹೋಗ್ತಾನ
ಗೊತ್ತಿಲ್ಲ ಮಂಕು ನಿಮಗ ಅದಾವ ಮಾಯದಲ್ಲೋ ಬೇತಾಳ ಹಿಂದೆಯೇ ಸರಿದು ಬರ್ತಾನ
ನಿಮಗೆ ಗೊತ್ತಿರಲಿ, ನರಕದಾಗ ಇದೆ ಒಂದು ದೊಡ್ಡ ಕೋರ್ಟು; ಕೂತಿರ್ತಾರೆ ಮಂದಿ ಎಲ್ಲ
ಇದೂ ಗೊತ್ತಿರಲಿ, ನಿಮ್ಮ ಬೆನ್ನು ಹಿಡಿದ ಬೇತಾಳ ನೆಗೆದು ಕುಣಿದು ಹೇಳತಾನ ಗುಟ್ಟು ರಟ್ಟೆಲ್ಲ
ನಿಮ್ಮ ಮೈಮ್ಯಾಗಿಲ್ಲ, ಅಟ್ಟದಲ್ಲಿ ಬಚ್ಚಿಟ್ಟಿದ್ದ ಗುಟ್ಟಿನ ಕೋಟು; ಬ್ಯಾರೆ ಯಾವ ಹೊದುಕೆಯೂ ಇಲ್ಲ
ಬಾಯಿ ಬಡುಕನವ ಬೇತಾಳ, ಕಿಂಚಿತ್ತೂ ನಾಚಿಕೆಯೇ ಇಲ್ಲದವ, ಬಯಲು ಮಾಡ್ತಾನ ಬದುಕೆಲ್ಲ
ಕಟಕಟಿಯಲ್ಲಿ ನೀವು, ಬಡಿದಿದ್ದಾರೆ ಬಾಯಿಗೆ ಬೀಗ ದೊಡ್ಡದು, ಎಷ್ಟು ಕೂಗಿದರೂ ಉಸಿರೇ ಇಲ್ಲ
ನೀವು ಮಾತ್ರ ಬರೀ ಬೆತ್ತಲೆ; ನಿಮ್ಮದೆಲ್ಲಾ ಚೆನ್ನಾಗಿ ಕಾಣ್ತದ; ನೋಡಿ, ನೋಡಿ ನಗತದ ನರಕವೆಲ್ಲ
ಏನಂತೀರಿ? ನಿಮ್ಮ ಗುಟ್ಟಿನ ವಿಷಯ, ನಿಮ್ಮ ಅಟ್ಟದ ಗಂಟು ನಿಮ್ಮದೇ! ಅದೆಲ್ಲ ನಿಮಗೆ ಬಿಟ್ಟಿದ್ದು.
ಎಲ್ಲರ ಕಿಟಿಕಿ ಒಳಗೆ ಇಣುಕಿ, ಇಣುಕಿ ನೋಡಿ, ಅವರು ಮಾಡುವುದೆಲ್ಲಾ ಹಾಡುವ ಚಟ ನನಗೆ ಇಷ್ಟದ್ದು
ನಿಮ್ಮ ಮಾನದ ಚೆಂದವೆಲ್ಲಾ ನಾನು ದುರ್ಬೀನು ಹಾಕಿ ನೋಡಾಯಿತು, ನೋಡಿ, ನಕ್ಕು ಕುಣಿದಾಯಿತು
ಮತ್ತೆ, ಮತ್ತೆ, ನಾನು ಇಣುಕಿ ನೋಡಿದಾಗ, ಕತ್ತಲೆಯಲ್ಲೂ ನೀವು ಬೆತ್ತಲೆಯಲ್ಲೂ ಬೆಳಗುತ್ತಿದ್ದರೆ ಆಯಿತು!
ಅವರು: ಯಾರ್ರೀ ನೀವು? ನೋಡೋಕೆ ಒಳ್ಳೆ ಖದೀಮನ ಹಾಗೆ ಕಾಣ್ತೀರ? ನಾನು: ನಾನ್ಯಾರು ಅಂತ ನನಗೆ ಗೊತ್ತಿದ್ದರೆ ಖಂಡಿತ ಹೇಳ್ತಾಯಿದ್ದೆ. ಆದರೆ, ನನ್ನ ಬಗ್ಗೆ ನನಗೆ ಗೊತ್ತಿಲ್ಲವಲ್ಲ! ಖಾದಿ ಹಾಕಿಕೊಲ್ಲೋ ಖದೀಮರಿಗಿಂತ ನಾನು ಕೆಟ್ಟದಾಗಿ ಕಾಣ್ತೀನ? ಕದ್ದು, ಕದ್ದು ಕನ್ಯೆಯರನ್ನು ನೋಡುವ ಅಭ್ಯಾಸ ಮಾತ್ರ ಸ್ವಲ್ಪ ಜಾಸ್ತೀನೆ ಇದೆ ನನಗೆ. ಒಬ್ಬಳು ಹುಡುಗಿ ಹದಿಮೂರು ಮೈಲು ದೂರದಲ್ಲಿ ಬಂದರೂ, ನನ್ನ ಎದೆಗೆ, ಅದು ಹೇಗೆ ಗೊತ್ತಾಗಿ ಹೋಗತ್ತೋ, ಸೂಕ್ಷ್ಮ ತಿಳಿದು ಹೋಗುತ್ತೆ. ಆಗ ಪ್ರಾರಂಭವಾಗುತ್ತೆ ಡವ ಡವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ