ಮಂಗಳವಾರ, ಆಗಸ್ಟ್ 24, 2010

ಜಾಣನಾರೇ?

ಜಾಣನಾರೇ?
ಕೆ. ಆರ್. ಎಸ್. ಮೂರ್ತಿ

ಆಗಸದ ಕಾಗಜದಲ್ಲೆಲ್ಲಾ ಅಂದದ ಚಿತ್ತಿರವ ಬಿಡಿಸಿಹ ಜಾಣನಾರೆ?
ಕೋಟಿ ಕೋಟಿ ಮಿನುಗುವ ಚುಕ್ಕೆಗಳನು ನಾನಂತೂ ಎಣಿಸಾಲಾರೆ

ದೂರ ದೃಷ್ಟಿಯಲಿ ವೀಕ್ಷಿಸಿದ ವಿಜ್ಞಾನಿ ವಿವರಿಸಿಹ ಚೆಂದವನು ನಮಗೆಲ್ಲಾ
ಸೂಕ್ಶ್ಮದಲಿ ಕಾಣಲು ಬಲ್ಲವರಿಗೆ ಗೊತ್ತೀ ಗುಟ್ಟು ಚುಕ್ಕೆ ಬರೀ ಚುಕ್ಕೆಯಲ್ಲ

ಹಲವು ತಾರಾ ಸಂಸಾರ, ಗ್ರಹ ಕೂಟದ ಆ ಸಂಸಾರದಲಿ ಯಾರಾರಿಹರೋ?
ಸಂಸಾರಿಗರು ನಮ್ಮ ಸೂರ್ಯನ ಕಂಡು ಅವನೊಂದು ತಾರೆಯೇ ಎನಿಪರೋ!

ನಮ್ಮ ಸೂರ್ಯನೂ ತಾರಾ ಗುಛ್ಛದಲಿ ಒಂದಾಗಿ ಓಟದ ಪಂದ್ಯದ ಪಟುವಂತೆ
ಸುತ್ತ, ಸುತ್ತ ಸುತ್ತಿ ಬೇಸತ್ತವರಲ್ಲ; ಯಾರ ಸುತ್ತು ಸುತ್ತುವರೋ ಗೊತ್ತಿಲ್ಲವಂತೆ

ತಾರಾ ಗುಛ್ಛಗಳ ವ್ಯೂಹ ರಚನೆಯ ವೈಖರಿ ಕೋಟಿ ಕೋಟಿ ಎಣಿಸಲಾಗದಂತೆ
ಅದೆಷ್ಟೋ ವ್ಯೂಹಗಳು ಬ್ರಹ್ಮನ ಮೊಟ್ಟೆಯಲಿ ಅಡಗಿಹವೋ ತಿಳಿಯಲಾಗದಂತೆ!

ವಸುಧೆಯೂ ಬೆಂಕಿಯ ಉಂಡೆಯಾಗಿ ಸಿಡಿದು ಸೂರ್ಯನ ಮೈಯಿಂದ ಬಂದಳಂತೆ
ಶಾಂತಳಾದವಳು ಕೊನೆಗೆ ನಮೆಲ್ಲರನೂ ಹಡೆದು ತನ್ನ ಕುಟುಂಬವನು ಪಡೆದಳಂತೆ

ಒಬ್ಬರನೊಬ್ಬರು ಸೊತ್ತಿಗೆ ಕಿತ್ತಾಡಿ, ನಾವೀಗ ಮತ್ತೆ, ಮತ್ತೆ, ಬದುಕಿ ಸತ್ತು ಸೋತವರಲ್ಲ
ವಿಷದ ಬೀಜಗಳ ಬಿತ್ತುವುದರ ವ್ಯರ್ಥದ ವ್ಯವಸಾಯದಲಿ ನಮಗಿಂತಲೂ ಪರಿಣಿತರಿಲ್ಲ

ವಿಷ ಅಮೃತಗಳು ಅವಳಿ ಜವಳಿಯಂತೆ; ಮಧುವ ಕರೆದರೆ ವಧು ವಿಷವೂ ಬರಬಹುದೇ!
ಅಮೃತವನ್ನು ನಮಗುಳಿಸಿ, ವಿಷವನು ಮಾತ್ರ ಹೀರಬಲ್ಲ ವೀರ ವಿಷಕಂಠನೆಲ್ಲಿ ಹೋದ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ