ಗುರುವಾರ, ಆಗಸ್ಟ್ 12, 2010

ಏನೆಲ್ಲಾ ಬೇಕು?

ಏನೆಲ್ಲಾ ಬೇಕು?
ಕೆ. ಆರ್. ಎಸ್. ಮೂರ್ತಿ

ಪೇಳು ತನುವೇ ನಿನಗೇನೆಲ್ಲ ಬೇಕು,
ನಾಚುವುದೇತಕೆ ಚಾಚು ನಾಲಗೆಯ,
ಅದಗಿಸಿಹ ನಿನ್ನ ಹಂಬಲಗಳನು.
ಹಸಿದ ಹೊಟ್ಟೆಯೋ?
ತುಪ್ಪದಲಿ ಅದ್ದಿದ ರೊಟ್ಟಿಯೋ?
ಹೊಟ್ಟೆಗೆ ಭಾರ ತರಿಸುವ ಭಾರಿ ಔತಣವೋ?

ಕೇಳು ಮನವೇ ಬೇಕಾದುದನೆ, ಸಾಕಷ್ಟು.
ಬಿಚ್ಚಿ ಪೊಗಳು, ಮುಚ್ಚಿಟ್ಟ ಇಷ್ಟಗಳೆಲ್ಲವನು.
ಚಿಂತನೆಯ ಮನೋಭಾವವೋ?
ಕಾಡುವ ಕಾರ್ಪಣ್ಯಗಳ ಹೊಣೆ ಭಾರವೋ?
ಸದಾ ಶಾಂತತೆಯ ವರವನ್ನೋ?
ಇತರರ ಬೈಯುವ ದೆವ್ವವಾಗುವುದೋ?

ಇದ ಕೊಡಿಸಬಲ್ಲೆ ನಿನಗೆ, ಒಮ್ಮೊಮ್ಮೆ ಮಾತ್ರ:
ಗೆಲುವಿನ ಬೆಲ್ಲದುಂಡೆ, ಜಯದ ಕಜ್ಜಾಯ, ಸಾಹಸದ ಪಾಯಸ
ವೀರ್ಯದ ಖೀರು, ಒಗ್ಗಟ್ಟಿನ ಒಬ್ಬಟ್ಟು, ಕಳಕಳಿಯ ಕಡಲೆ ಕಾಯಿ,
ದಾನವನು ಕೊಟ್ಟಾಗ ಹೃದಯಕ್ಕಾಗುವ ಪರಮಾನ್ನ,
ದಯವಿಟ್ಟಾಗ ದೊರೆಯುವ ಧಮ್ರೋಟು, ಚಿರೋಟಿ
ಕೈ ಕೆಸರಾದರೆ ಸಿಗುವ ಗಟ್ಟಿ ಕೆನೆ ಮೊಸರನ್ನ

ಬಲು ಜಾಣ! ಈಗ ನೀನೇ ಹೇಳು:
ಏನು ಮಾಡಿದರೆ, ಯಾವಾಗ ಇವೆಲ್ಲ ದೊರೆಯುತ್ತದೆ?
ಮೈಸೂರು ಪಾಕು, ಬಾದಾಮಿ ಹಲ್ವ, ಸಿಹಿ ಫೇಡ, ಲಾಡು ಉಂಡೆ?
ನಿನಗೆ ಖಾರದ ರುಚಿ ಹೆಚ್ಚಿದ್ದರೆ:
ಬಿಸಿ ಬೇಳೆ ಹುಳಿಯನ್ನ, ಎಳ್ಳು ಪುಡಿ ಚಿತ್ರಾನ್ನ,
ಚಟ್ನಿ ಪುಡಿ, ಉಪ್ಪಿನ ಕಾಯಿ, ಬಾಳಕದ ಮೆಣಸಿನ ಕಾಯಿ,
ವಡೆ, ಅಂಬೋಡೆ, ಬೋಂಡ, ಜೊತೆಗೆ ಬಹು ವಿಧದ ಚಟ್ನಿ
ಇದನರಿತವ ನಿನಗೆ ತನು ಕೇಳಿದ್ದು, ಮನ ಬೇಡಿದ್ದು ಖಂಡಿತ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ